ಶುಕ್ರವಾರ, ಮೇ 7, 2021
20 °C

ರಾಹುಲ್- ಬಿಲಾವಲ್ ಭೇಟಿ ಮಹತ್ವದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್): ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಜರ್ದಾರಿ ಭುಟ್ಟೊ ಅವರು ಭವಿಷ್ಯದಲ್ಲಿ ತಮ್ಮ ದೇಶಗಳನ್ನು ಮುನ್ನಡೆಸಬಲ್ಲ ನಾಯಕರಾಗಿದ್ದು, ಇವರಿಬ್ಬರ ನಡುವೆ ಸಂಪರ್ಕ ಏರ್ಪಡುವುದು ಬಹಳ ಮಹತ್ವದ ಸಂಗತಿ ಎಂದು ಇಲ್ಲಿನ ಪ್ರಮುಖ ಪತ್ರಿಕೆಯೊಂದು ಬಣ್ಣಿಸಿದೆ.ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಈಚೆಗೆ ಭಾರತಕ್ಕೆ ಆಗಮಿಸಿದ್ದ ವೇಳೆ 40 ವರ್ಷದ ರಾಹುಲ್ ಮತ್ತು 23ರ ಹರೆಯದ ಬಿಲಾವಲ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಪಾಕಿಸ್ತಾನಕ್ಕೆ ಆಗಮಿಸುವಂತೆ ಬಿಲಾವಲ್ ನೀಡಿದ ಆಹ್ವಾನವನ್ನು ರಾಹುಲ್ ಸ್ವೀಕರಿಸಿದ್ದಾರೆ.`ಈ ಇಬ್ಬರೂ ನಾಯಕರ ನಡುವಿನ ಮೈತ್ರಿಯಿಂದ ಭವಿಷ್ಯದಲ್ಲಿ ಆಶಾಕಿರಣ ಮೂಡುವಂತಾಗಿದೆ~ ಎಂದು `ನ್ಯೂಸ್ ಇಂಟರ್‌ನ್ಯಾಷನಲ್~ ಮಂಗಳವಾರ ಸಂಪಾದಕೀಯದಲ್ಲಿ ಬರೆದಿದೆ.`ಈ ಯುವ ನೇತಾರರು ತಮ್ಮ ಭೇಟಿ ವೇಳೆ ಸಮಾನ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಬ್ಬರ ಕೌಟುಂಬಿಕ ಇತಿಹಾಸದಲ್ಲೂ ಸಾಮ್ಯ ಇದೆ. ಇವರು ಭವಿಷ್ಯದಲ್ಲಿ ತಮ್ಮ ದೇಶವನ್ನು ಮುನ್ನಡೆಸಬಲ್ಲ ಸಾಧ್ಯತೆ ಇದ್ದು, ಸೂಕ್ತವಾದ ನೀತಿಗಳನ್ನು ರೂಪಿಸಬಲ್ಲರು~ ಎಂದು ಪತ್ರಿಕೆ ವಿವರಿಸಿದೆ.`ಖಾಸಗಿ ಅಥವಾ ಇನ್ಯಾವುದೇ ಬಗೆಯದ್ದಾಗಿರಲಿ, ಪಾಕಿಸ್ತಾನ ಮತ್ತು ಭಾರತದ ನಡುವೆ ಸಂಪರ್ಕ ಏರ್ಪಡುವುದು ಬಹಳ ಮುಖ್ಯ. ಭೋಜನಕ್ಕೂ ಮುನ್ನ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ಜರ್ದಾರಿ ಕೆಲ ಸೂಕ್ಷ್ಮ, ಆದರೆ ಅಷ್ಟೇ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ~ ಎಂದು ತಿಳಿಸಿದೆ.`ಮನಮೋಹನ್ ಸಿಂಗ್ ಒಬ್ಬ ರಾಜಕೀಯ ಮುತ್ಸದ್ದಿ~ ಎಂದು ಬಣ್ಣಿಸಿರುವ ಪತ್ರಿಕೆ, ಭಾರತದ ಪ್ರಧಾನಿ ಹಳೆಯ ವಿಷಯಗಳಿಗೆ ಅಂಟಿಕೊಳ್ಳದೆ ಜರ್ದಾರಿ ಅವರ ಭೇಟಿಯನ್ನು ಸಮಯೋಚಿತವಾಗಿ ಬಳಸಿಕೊಂಡು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು ಎಂದಿದೆ.ಎರಡು ರಾಷ್ಟ್ರಗಳ ಮುಖ್ಯಸ್ಥರ ಭೇಟಿಯಿಂದಾಗಿ ಮೈತ್ರಿಗೆ ಒತ್ತು ನೀಡಿದಂತಾಗಿದೆ. ಭವಿಷ್ಯದಲ್ಲಿ ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಇದೇ ವೇಳೆ, ತೆರಿಗೆದಾರರ ಹಣದಲ್ಲಿ ಜರ್ದಾರಿ ಅವರು ಅಜ್ಮೇರ್‌ಗೆ ಭೇಟಿ ನೀಡಿ ವಿವಾದಕ್ಕೂ ಕಾರಣರಾಗಿದ್ದಾರೆ ಎಂದು ಟೀಕಿಸಿದೆ.

ಅಮೆರಿಕ ಸಂತಸ

ವಾಷಿಂಗ್ಟನ್ (ಪಿಟಿಐ):
ಜರ್ದಾರಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲು ಒಪ್ಪಿಕೊಂಡಿರುವುದು ಸಂತಸದ ವಿಷಯ ಎಂದಿರುವ ಅಮೆರಿಕ, ಎರಡು ರಾಷ್ಟ್ರಗಳ ಮಧ್ಯೆ ಸಂಬಂಧ ಸುಧಾರಿಸುವುದರಿಂದ ನೆರೆಯ ದೇಶಗಳು ಮತ್ತು ಸಂಪೂರ್ಣ ಪ್ರಾಂತ್ಯಕ್ಕೆ ಸಹಾಯವಾಗಲಿದೆ ಎಂದು ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.