ಶುಕ್ರವಾರ, ಮೇ 27, 2022
30 °C

ರಿಯಾಲಿಟಿ ಹೊಸ ಆಟ ಥಾಯ್ಲೆಂಡ್‌ನಲ್ಲಿ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಯಾಲಿಟಿ ಹೊಸ ಆಟ ಥಾಯ್ಲೆಂಡ್‌ನಲ್ಲಿ ಪರದಾಟ

ಕನ್ನಡ ಕಿರುತೆರೆ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ಚಿತ್ರಿಸಿರುವ ವಿನೂತನ ರಿಯಾಲಿಟಿ ಶೋ ‘ಪರದೇಶದಲ್ಲಿ ಪರದಾಟ’. ಫೆ.16ರಿಂದ ಪ್ರಾರಂಭವಾಗಿರುವ ಈ ಕಾರ್ಯಕ್ರಮವು ಬುಧವಾರದಿಂದ ಶುಕ್ರವಾರ ರಾತ್ರಿ 9 ಗಂಟೆಗೆ ‘ಝೀ’ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.ವಾಹಿನಿಯ ದಕ್ಷಿಣ ವಿಭಾಗದ ಮುಖ್ಯಸ್ಥ ಡಾ.ಗೌತಮ್ ಮಾಚಯ್ಯ ಹೇಳಿಕೊಳ್ಳುವಂತೆ- ‘ಕನ್ನಡದ ರಿಯಾಲಿಟಿ ಶೋಗಳಿಗೆ ಸಂಬಂಧಿಸಿದಂತೆ ಇಡೀ ಕಾರ್ಯಕ್ರಮವನ್ನು ಸಂಪೂರ್ಣವಾಗಿ ವಿದೇಶದಲ್ಲಿ ಚಿತ್ರಿಸಿದ ಹೆಗ್ಗಳಿಕೆಗೆ ‘ಪರದೇಶದಲ್ಲಿ ಪರದಾಟ’ ಕಾರ್ಯಕ್ರಮದ್ದು. ರಿಯಾಲಿಟಿ ಶೋಗಳಲ್ಲಿ ಪೂರ್ಣ ವೈವಿಧ್ಯ ಹುಟ್ಟುಹಾಕಿದ ತಮ್ಮ ವಾಹಿನಿ ಮನರಂಜನೆಗೆ ಹೊಸ ಅರ್ಥ ನೀಡಿದೆ. ಇದೀಗ ಈ ಕಾರ್ಯಕ್ರಮದ ಮೂಲಕವೂ ಹೊಸ ಅಲೆಯೊಂದನ್ನು ಸೃಷ್ಟಿಸಲಿದೆ’.ಕನ್ನಡ ನಾಡಿನ ಆಯ್ದ ಯುವಕ, ಯುವತಿಯರನ್ನು ತಾವೆಂದೂ ಕಂಡಿರದ ವಿದೇಶವೊಂದಕ್ಕೆ ಕರೆದೊಯ್ದು ಯಾವುದೇ ಸಹಾಯ ಸಲಹೆಯನ್ನು ನೀಡದೆ, ಕೆಲವೊಂದು ಗುರಿಗಳನ್ನು ನೀಡಲಾಗುತ್ತದೆ. ನಿಯಮಿತ ಸೌಲಭ್ಯಗಳನ್ನು ಬಳಸಿಕೊಂಡಷ್ಟೇ ಅವರು ತಮಗೆ ನೀಡಿದ ಗುರಿಯನ್ನು ನಿಗದಿತ ಅವಧಿಯಲ್ಲಿ ಮುಟ್ಟಬೇಕು. ಭಾಷೆ, ಸಂಸ್ಕೃತಿ, ಸಮಾಜ ಹಾಗೂ ಜೀವನ ಶೈಲಿ ಭಿನ್ನವಾಗಿರುವ ವಿದೇಶಗಳ ವ್ಯವಸ್ಥೆಗೆ ಒಗ್ಗಿಕೊಂಡು ಯಾರು ತಮ್ಮ ಗುರಿ ಮುಟ್ಟುತ್ತಾರೋ ಅವರನ್ನು ಈ ಶೋನಲ್ಲಿ ವಿಜೇತರೆಂದು ಪರಿಗಣಿಸಲಾಗುತ್ತದೆ.ಥಾಯ್ಲೆಂಡನ್ನು ಈ ರಿಯಾಲಿಟಿ ಶೋ ಚಿತ್ರೀಕರಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಭಾಷೆ, ಸಂಸ್ಕೃತಿ, ಆಹಾರ ಹಾಗೂ ಜೀವನ ಶೈಲಿಗೆ ಸಂಬಂಧಿಸಿದಂತೆ ಭಾರತಕ್ಕಿಂತಲೂ ಸಂಪೂರ್ಣ ವಿಭಿನ್ನವಾಗಿರುವುದೇ ಆ ದೇಶವನ್ನು ಚಿತ್ರೀಕರಣಕ್ಕೆ ಆರಿಸಿಕೊಳ್ಳಲು ಮಾನದಂಡವಾಗಿತ್ತು.ಈ ರಿಯಾಲಿಟಿ ಶೋಗೆ ರಾಜ್ಯದಾದ್ಯಂತ ಆಯ್ಕೆ ಪ್ರಕ್ರಿಯೆ ನಡೆಸಿ, 14 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆಯ್ಕೆಯಾದವರನ್ನು ವಾಹಿನಿಯು ತನ್ನ ತಂಡದೊಂದಿಗೆ ಥಾಯ್ಲೆಂಡ್‌ಗೆ ಕರೆದೊಯ್ದಿತ್ತು. ಆಯ್ಕೆಯಾದವರಲ್ಲಿ ಐಟಿ-ಬಿಟಿ ನೌಕರ, ವಿದ್ಯಾರ್ಥಿ, ಜೆರಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡುವವರು ಹೀಗೆ ಭಿನ್ನ ನೆಲೆಯ ಯುವಕರಿದ್ದಾರೆ. ಇದುವರೆಗೂ 20 ಸಂಚಿಕೆಗಳ ಚಿತ್ರೀಕರಣ ಮುಗಿದಿದೆ. 33 ಸಂಚಿಕೆಗಳಲ್ಲಿ ರಿಯಾಲಿಟಿ ಶೋ ಪೂರ್ಣಗೊಳ್ಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.