ಮಂಗಳವಾರ, ಮೇ 24, 2022
27 °C

ರೂ 20 ಲಕ್ಷ ಮೌಲ್ಯದ ಚಿನ್ನ ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಿರವಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ರಿವಾಲ್ವರ್‌ನಿಂದ ಮಾಲೀಕನನ್ನು ಬೆದರಿಸಿ ಚಾಕುವಿನಿಂದ ಹಲ್ಲೆ ನಡೆಸಿ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ ಘಟನೆ ಆಸ್ಟಿನ್‌ಟೌನ್‌ನ ವೈ.ಜಿ.ಪಾಳ್ಯದಲ್ಲಿ ಸೋಮವಾರ ಹಾಡಹಗಲೇ ನಡೆದಿದೆ. ಎಂ.ಬಿ.ಜ್ಯುವೆಲರ್ಸ್‌ ಅಂಗಡಿ ಮಾಲೀಕ ಸುಭಾಷ್‌ಚಂದ್ ಓಸ್ವಾಲ್ ಅವರು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಅಂಗಡಿಯಲ್ಲಿ ಕುಳಿತಿದ್ದ ವೇಳೆ ನಾಲ್ಕು ಮಂದಿ ದುಷ್ಕರ್ಮಿಗಳು ಎರಡು ಬೈಕ್‌ಗಳಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ.ಓಸ್ವಾಲ್ ಅವರ ಅಂಗಡಿ ಮತ್ತು ಮನೆ ಒಂದೇ ಕಟ್ಟಡದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.‘ನಾಲ್ಕು ಮಂದಿಯಲ್ಲಿ ಒಬ್ಬ ಹೊರಗೆ ನಿಂತಿದ್ದ. ಅಂಗಡಿಯೊಳಗೆ ನುಗ್ಗಿದ ಮೂರು ಮಂದಿ ಬಾಗಿಲನ್ನು ಮುಚ್ಚಿದರು.ರಿವಾಲ್ವರ್ ಮತ್ತು ಚಾಕುವಿನಿಂದ ಬೆದರಿಸಿದ ಅವರು ಹಣ ನೀಡುವಂತೆ ಕೇಳಿದರು. ಹಣ ಇಲ್ಲ ಎಂದೊಡನೆ ಅಲ್ಮೆರಾದಲ್ಲಿರುವ ಆಭರಣ ಕೊಡು ಎಂದು ಬೆದರಿಸಿದರು’ ಎಂದು ಓಸ್ವಾಲ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.‘ಅಲ್ಮೆರಾ ತೆರೆದೊಡನೆ ಅದರೊಳಗಿದ್ದ ಆಭರಣ ತುಂಬಿದ್ದ ಏಳು ಸಣ್ಣ ಚೀಲಗಳನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದರು. ಅವರನ್ನು ಬೆನ್ನಟ್ಟಿದಾಗ ಚಾಕುವಿನಿಂದ ಹಲ್ಲೆ ನಡೆಸಿದರು. ಇದನ್ನು ಗಮನಿಸಿದ ಮಗಳು ಸ್ವಾತಿ ಸಹ ಆರೋಪಿಗಳ ಹಿಂದೆ ಓಡಿದಳು. ಆದರೆ ಅವರು ಪರಾರಿಯಾದರು’ ಎಂದು ಓಸ್ವಾಲ್ ಘಟನೆಯನ್ನು ವಿವರಿಸಿದರು.‘ಅಲ್ಮೆರಾದಲ್ಲಿ ಚಿನ್ನ ತುಂಬಿದ್ದ ಒಟ್ಟು ಹನ್ನೊಂದು ಸಣ್ಣ ಚೀಲಗಳಿದ್ದವು. ಆತುರದಲ್ಲಿ ಅವರು ಆರು ಚೀಲಗಳನ್ನು ಮಾತ್ರ ತೆಗೆದುಕೊಂಡು ಹೋದರು. ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಅವರು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅವರಲ್ಲಿ ಒಬ್ಬ ಮುಖವನ್ನು ಮುಚ್ಚಿಕೊಂಡಿದ್ದ’ ಎಂದು ಓಸ್ವಾಲ್ ತಿಳಿಸಿದರು.ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ‘ಅಂಗಡಿಯಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿರಲಿಲ್ಲ. ಅಳವಡಿಸಿದ್ದರೆ ಆರೋಪಿಗಳ ಚಹರೆ ತಿಳಿಯುತ್ತಿತ್ತು. ಓಸ್ವಾಲ್ ಅವರ ವಹಿವಾಟಿನ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಅಂಗಡಿ ಎದುರು ಜಮಾಯಿಸಿದರು. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.