ಬುಧವಾರ, ಜನವರಿ 29, 2020
28 °C

ರೂ 3,035 ಕೋಟಿ ಸಾಲ ಯೋಜನೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ನಬಾರ್ಡ್‌ನಿಂದ ತಯಾರಿಸಲ್ಪಟ್ಟಿರುವ 2014-15ನೇ ಸಾಲಿಗೆ ಕೊಡಗು ಜಿಲ್ಲೆಗೆ ರೂ.3035 ಕೋಟಿಯ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯನ್ನು  ಬಿಡುಗಡೆ ಮಾಡಲಾಯಿತು.ನಗರದ ಕಾರ್ಪೋರೇಷನ್‌ ಬ್ಯಾಂಕಿನ ಸಭಾಂಗಣದಲ್ಲಿ ಗುರುವಾರ ನಡೆದ ಸಾಮರ್ಥ್ಯ ಆಧಾರಿತ ಸಾಲ ಯೋಜನೆ ಬಿಡುಗಡೆ ಸಮಾರಂಭದಲ್ಲಿ ಆರ್‌ಬಿಐ ಲೀಡ್‌ ಡಿಸ್ಟಿಕ್‌ ಆಫೀಸರ್‌ ಆನಂದ ಬಾಬು ಅವರು ಈ ಯೋಜನೆಯ ಸಾಲ ಪತ್ರವನ್ನು ಬಿಡುಗಡೆ ಗೊಳಿಸಿದರು.ನಂತರ ಮಾತನಾಡಿದ ಅವರು, ನಬಾರ್ಡ್ ರೂಪಿಸಿರುವ  ಸಾಲ ಯೋಜನೆಯು ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಅಭಿವೃದ್ಧಿಗೊಳ್ಳಲು ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಅಗತ್ಯವಾಗಿ ಬೇಕಿರುವ ಕೃಷಿ, ಪಶುಪಾಲನೆ, ಕೈಗಾರಿಕೆ, ಮೀನುಗಾರಿಕೆ ಮತ್ತಿತರ ಕೃಷಿ ಆಧಾರಿತ ಅಂಶಗಳನ್ನು ಒಳಗೊಂಡ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಇದು ಮಹತ್ತರವಾಗಿದೆ ಎಂದರು.ನಬಾರ್ಡ್‌ನ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ನಾಣಯ್ಯ ಮಾತನಾಡಿ, ಸಂಭಾವ್ಯ ಸಾಲ ಯೋಜನೆ ಪತ್ರವನ್ನು ಮಾನದಂಡವಾಗಿ ಇಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಇದೊಂದು ಕೌಶಲ್ಯ ಆಧಾರಿತ, ದೂರ ದೃಷ್ಟಿಯ ಸಾಲ ಯೋಜನೆಯಾಗಿದೆ. ಬ್ಯಾಂಕ್ ವ್ಯವಸ್ಥಾಪಕರು, ಅಧಿಕಾರಿಗಳು ಇದರ ಪ್ರಯೋಜನವನ್ನು ರೈತರಿಗೆ ತಲುಪಿಸುವಂತೆ ಸಲಹೆ ಮಾಡಿದರು.ಕಾರ್ಪೋರೇಷನ್ ಬ್ಯಾಂಕಿನ ಮೈಸೂರು ವಲಯದ ಚೀಫ್‌ ಮ್ಯಾನೇಜರ್‌ ರಾಘವೇಂದ್ರ ಮಾತನಾಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಅರುಣಾಚಲ ಶರ್ಮ ಮಾತನಾಡಿ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿರುವ ಕಡಿಮೆ ಬಡ್ಡಿ ಲಾಭವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಬ್ಯಾಂಕ್‌ಗಳ ವ್ಯವಸ್ಥಾಪಕರು ಆದ್ಯತಾ ವಲಯದ ಗುರಿಯನ್ನು ತಲುಪಬೇಕಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಶ್ರಮಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.2013ರ ಏಪ್ರಿಲ್‌ನಿಂದ ಸೆಪ್ಟೆಂಬರ್ ಅಂತ್ಯದೊಳಗೆ ಸಾಲ ಯೋಜನೆಯ ಪ್ರಗತಿ ಬಗ್ಗೆ ಅರುಣಾಚಲಶರ್ಮ ಅವರು ಮಾಹಿತಿ ನೀಡಿದರು. ಅದರ ವಿವರ ಇಂತಿದೆ.  ಜಿಲ್ಲೆಯಲ್ಲಿ ಕೃಷಿ ವಲಯಕ್ಕೆ ರೂ.1,69,159 ಲಕ್ಷ  ಸಾಲದಲ್ಲಿ ರೂ.75,235 ಲಕ್ಷ  ಸಾಲ ವಿತರಣೆ ಮಾಡಿ ಶೇ.44 ರಷ್ಟು ಪ್ರಗತಿ ಸಾಧಿಸಲಾಗಿದೆ.ಅಲ್ಪಾವಧಿ ಸಾಲದಲ್ಲಿ ರೂ.1,89,582 ಲಕ್ಷಗಳ ಸಾಲ ಯೋಜನೆಯಡಿ ರೂ.95,984 ಲಕ್ಷ ಸಾಲ ವಿತರಣೆ ಮಾಡಿ ಶೇ.51 ರಷ್ಟು ಸಾಧನೆ ಮಾಡಲಾಗಿದೆ. ಇತರ ಆದ್ಯತಾ ವಲಯದಲ್ಲಿ ರೂ.2,11,949 ಲಕ್ಷಗಳ ಸಾಲದಲ್ಲಿ ರೂ.1,17,000 ಲಕ್ಷ ಸಾಲ ವಿತರಣೆ ಮಾಡಿ ಶೇ. 55ರಷ್ಟು ಸಾಧನೆ ಮಾಡಲಾಗಿದೆ.ತಾಲ್ಲೂಕುವಾರು ಮಾಹಿತಿ: ಮಡಿಕೇರಿ ತಾಲ್ಲೂಕಿನಲ್ಲಿ ಕೃಷಿ, ಕೈಗಾರಿಕೆ ಇತರ ಆದ್ಯತಾ ವಲಯ ಸೇರಿದಂತೆ ಒಟ್ಟು 74,139 ಗುರಿಯಲ್ಲಿ, ರೂ.50,527 ಲಕ್ಷ ಸಾಲ ವಿತರಣೆ ಮಾಡಿ ಶೇ.68ರಷ್ಟು ಪ್ರಗತಿ.ವಿರಾಜಪೇಟೆ ತಾಲ್ಲೂಕಿನಲ್ಲಿ ರೂ. 76,829 ಲಕ್ಷ  ಗುರಿಯಲ್ಲಿ ರೂ.34,407 ಲಕ್ಷ  ಸಾಲ ವಿತರಣೆ ಮಾಡಿ ಶೇ.45ರಷ್ಟು ಪ್ರಗತಿ. ಸೋಮವಾರಪೇಟೆ ತಾಲ್ಲೂಕಿನಲ್ಲಿ 54,914 ಗುರಿಯಲ್ಲಿ ರೂ.32,065 ಲಕ್ಷ ಸಾಲ ವಿತರಣೆ ಮಾಡಿ ಶೇ.58ರಷ್ಟು ಸಾಧನೆ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ.55ರಷ್ಟು ಪ್ರಗತಿ ಸಾಧಿಸಲಾಗಿದೆ.

ಪ್ರತಿಕ್ರಿಯಿಸಿ (+)