ಮಂಗಳವಾರ, ಮೇ 11, 2021
26 °C
6 ತಿಂಗಳ ನಂತರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ

ರೂ 333 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ನಗರ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳ ನೀತಿ ಸಂಹಿತೆಯಿಂದಾಗಿ ಆರು ತಿಂಗಳ ನಂತರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ರೂ.333.65 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಯೋಜನೆ ಹಾಗೂ ಯೋಜನೇತರ ವೆಚ್ಚಕ್ಕಾಗಿ ಅಡಿಯಲ್ಲಿ ಜಿಲ್ಲಾ ಪಂಚಾಯಿತಿಯ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲು ಒಟ್ಟು ರೂ. 333.65 ಕೋಟಿ ನಿಗದಿಪಡಿಸಲಾಯಿತು.ಯೋಜನೆಯ ಅಡಿಯಲ್ಲಿ ರೂ. 104.75 ಕೋಟಿ ಹಾಗೂ ಯೋಜನೇತರ ವೆಚ್ಚಕ್ಕಾಗಿ ರೂ. 228.90 ಕೋಟಿ ಅನುದಾನ ನಿಗದಿಪಡಿಸಲಾಯಿತು. ಇದರಲ್ಲಿ ಜಿಲ್ಲಾ ಪಂಚಾಯಿತಿಗೆ ರೂ. 96.89 ಕೋಟಿ, ತಾಲ್ಲೂಕು ಪಂಚಾಯಿತಿಗಳಿಗೆ ರೂ. 225.04 ಕೋಟಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ರೂ. 11.72 ಕೋಟಿ ಅನುದಾನ ನಿಗದಿಪಡಿಸಲಾಯಿತು.ನಂತರ ನಡೆದ ಚರ್ಚೆಯಲ್ಲಿ ಪ್ರಮುಖವಾಗಿ ಕುಡಿಯುವ ನೀರು, ಕೃಷಿ, ಶಿಕ್ಷಣ, ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.ಜಿಲ್ಲೆ ವಿವಿಧ ಗ್ರಾಮಗಳಲ್ಲಿ ನೆನೆಗುದಿಗೆ ಬಿದ್ದಿರುವ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎ. ಜಿಲಾನಿ ತಾಕೀತು ಮಾಡಿದರು.ಈಗಾಗಲೇ ಕುಡಿಯುವ ನೀರಿಗಾಗಿ ಕೊರೆಸಲಾದ ಕೊಳವೆಬಾವಿಗಳ ಮೂಲಕ ನೀರು ಪೂರೈಕೆಗೆ ಅವಶ್ಯಕತೆ ಇರುವ ವಿದ್ಯುತ್ ಸಂಪರ್ಕ ಕಲ್ಪಿಸಲು ಜೆಸ್ಕಾಂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ವಡಗೇರಾ, ನಂದಿಹಳ್ಳಿ, ಅಬ್ಬೆತುಮಕೂರ, ಯಂಪಾಡ್, ಗಾಜರಕೋಟ್ ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ತಕ್ಷಣ ಇಂತಹ ನೀರಾವರಿ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಸುಟ್ಟಿರುವ ಟಿಸಿಗಳ ದುರಸ್ತಿಗೆ ತಕ್ಷಣ ಕ್ರಮಕೈಗೊಳ್ಳಬೇಕು.ಸದ್ಯದಲ್ಲಿಯೇ ವಿದ್ಯುತ್‌ಗೆ ಸಂಬಂಧಪಟ್ಟಂತೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಜೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಇಂತಹ ಸಮಸ್ಯೆಗಳ ಬಗ್ಗೆ ಮಾಹಿತಿ ಸಹ ಒದಗಿಸುವಂತೆ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಕೋರಿದ ಸಿಇಒ ಎಸ್.ಎ. ಜಿಲಾನಿ, ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಜಿಲ್ಲೆಯಲ್ಲಿ ವಿವಿಧ ಶಾಲೆಗಳಿಗೆ ಅವಶ್ಯಕತೆ ಇರುವ ಕೊಠಡಿಗಳ ಮತ್ತು ಕಟ್ಟಡದ ಬಗ್ಗೆ ವರದಿ ನೀಡಬೇಕು. ಹತ್ತಿಕುಣಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಹೆಚ್ಚಿದ್ದರೂ ಸಮರ್ಪಕ ಕೋಣೆಗಳಿಲ್ಲ. ಮುಂಡರಗಿಯಲ್ಲಿ ಬೋಧನೆ ಸರಿಯಿಲ್ಲದಿರುವ ಬಗ್ಗೆ ಮತ್ತು ಶಾಲಾ ಶಿಕ್ಷಕರ ವಿರುದ್ಧ ದೂರುಗಳು ಇವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಲೆಗಳಿಗೆ ಭೇಟಿ ನೀಡಿ ವಿವಿಧ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಕಡಿಮೆ ಹಾಜರಾತಿ, ಶಿಕ್ಷಣ ಗುಣಮಟ್ಟ ಸುಧಾರಣೆ, ಶಾಲಾ ಕೋಣೆಗಳ ಕೊರತೆ, ಪಠ್ಯಪುಸ್ತಕ ವಿತರಣೆ, ಬೋಧನಾ ವ್ಯವಸ್ಥೆ ಸುಧಾರಣೆ ಕುರಿತಂತೆ ವರದಿ ನೀಡುವಂತೆ ಡಿಡಿಪಿಐ ರಾಮಾಂಜನೇಯ ಅವರಿಗೆ ಸಿಇಒ ಜಿಲಾನಿ ಸೂಚಿಸಿದರು.ಜಿಲ್ಲೆಯಲ್ಲಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಮರ್ಪಕ ರಸಗೊಬ್ಬರ ಮತ್ತು ಬೀಜ ವಿತರಣೆಗೆ ಕ್ರಮ ಕೈಗೊಳ್ಳಬೇಕು. ನಕಲಿ ರಸಗೊಬ್ಬರ ಮಾರಾಟದ ಬಗ್ಗೆ ನಿಗಾ ಇಟ್ಟು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮರೆಮ್ಮ ಶಾಣ್ಯಾನೋರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ, ಜಿಲ್ಲಾ  ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಬಸವರಾಜ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.ಜೆಸ್ಕಾಂ ಅಧಿಕಾರಿಗಳಿಗೆ ದೇವರಾಜ ಶಾಕ್!

ಯಾದಗಿರಿ: ಸಭೆ ಆರಂಭವಾದರೂ ಜೆಸ್ಕಾಂ ಅಧಿಕಾರಿಗಳು ನಾಪತ್ತೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜೆಸ್ಕಾಂನಿಂದಲೇ ವಿಳಂಬವಾಗುತ್ತಿದೆ ಎಂಬ ದೂರುಗಳು ಬಂದಾಗಲೇ, ಜೆಸ್ಕಾಂನಿಂದ ಯಾವುದೇ ಅಧಿಕಾರಿಗಳು ಸಭೆಗೆ ಬರದೇ ಇರುವುದು ತಿಳಿಯಿತು.ಕೂಡಲೇ ಜೆಸ್ಕಾಂ ಅಧಿಕಾರಿಗಳನ್ನು ಸಭೆಗೆ ಕರೆಸಲಾಯಿತು. ಅಧಿಕಾರಿಗಳು ಸಭೆಗೆ ಆಗಮಿಸುತ್ತಿದ್ದಂತೆಯೇ ಜಿಲ್ಲಾ ಪಂಚಾಯಿತಿ ಸದಸ್ಯ ದೇವರಾಜ ನಾಯಕ ತೀವ್ರ ತರಾಟೆ ಆರಂಭಿಸಿದರು.ಜೆಸ್ಕಾಂ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಬಗ್ಗೆ ಗೌರವವಿಲ್ಲ. ಯಾವುದೇ ಅಧಿಕಾರಿಗಳಾಗಲಿ, ಸೆಕ್ಷನ್ ಆಫೀಸರ್‌ಗಳಾಗಲಿ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ಕೂಡಲೇ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.

ಜೆಸ್ಕಾಂ ಅಧಿಕಾರಿಗಳಿಗೆ ಮಾತ್ರೆ, ಇಂಜೆಕ್ಷನ್‌ನಿಂದ ಪರಿಣಾಮ ಆಗುವುದಿಲ್ಲ. ಮೇಜರ್ ಸರ್ಜರಿ ಆಗಬೇಕಿದೆ ಎಂದು ಹೇಳಿದರು.ಇದಕ್ಕೆ ಸ್ಪಂದಿಸಿದ ಸಿಇಒ ಎಸ್.ಎ. ಜಿಲಾನಿ, ಜನಪ್ರತಿನಿಧಿಗಳ ದೂರವಾಣಿ ಕರೆ ಸ್ವೀಕರಿಸದೇ ಅಲಕ್ಷ್ಯ ಮಾಡುವ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಕುಡಿದು ಪಾಠ ಮಾಡ್ತಾರಲ್ರಿ...?

ಯಾದಗಿರಿ: ಶಾಲೆಗಳಲ್ಲಿ ಶಿಕ್ಷಕರು ಕುಡಿದು ಬಂದು ಪಾಠ ಮಾಡ್ತಾರೆ. ಇದು ನಿಮಗೆ ಗೊತ್ತಿದೆಯೇ? ನಾನೇ ಸ್ವತಃ ಇದನ್ನು ನೋಡಿದ್ದೇನೆ. ಮಕ್ಕಳಿಂದಲೂ ಸಾಕಷ್ಟು ದೂರುಗಳು ಬರುತ್ತಿವೆ.ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸ್ವತಃ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎ. ಜಿಲಾನಿ ಅವರೇ ಹೇಳಿದ ಮಾತಿದು.ಮುಂಡರಗಿ ಗ್ರಾಮದಲ್ಲಿ ಇಬ್ಬರು ಶಿಕ್ಷಕರು ಕುಡಿದು ಪಾಠ ಮಾಡುತ್ತಾರೆ. ಅಲ್ಲಿ 450 ಮಕ್ಕಳು ಇದ್ದು, 200 ಕ್ಕೂ ಹೆಚ್ಚು ಮಕ್ಕಳು ಕೋಣೆಗಳ ಕೊರತೆಯಿಂದ ಶಾಲಾ ಆವರಣದಲ್ಲಿ ಪಾಠ ಕೇಳುತ್ತಾರೆ. ಒಮ್ಮೆ ಭೇಟಿ ನೀಡಿ ಅವರ ಮೇಲೆ ಕ್ರಮ ಜರುಗಿಸಿ ಎಂದು ಸೂಚಿಸಿದರು. ಇದಕ್ಕೆ ಧ್ವನಿಗೂಡಿಸಿದ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾಯ ಕಂದಕೂರು, ಕಂದಕೂರಿನಲ್ಲಿ ಸಹ ಶಿಕ್ಷಕರು ಕುಡಿದು ಪಾಠ ಮಾಡುತ್ತಾರೆ ಎಂದು ದೂರಿದರು.ಅಂತಹ ಶಿಕ್ಷಕರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಉತ್ತರಿಸಿದರು. ಕೂಡಲೇ ಮುಂಡರಗಿ ವಲಯದ ವಿಷಯ ಪರಿವೀಕ್ಷಕರನ್ನು ಅಮಾನತು ಮಾಡುವಂತೆ ಸಿಇಒ ಜಿಲಾನಿ, ಡಿಡಿಪಿಐ ರಾಮಾಂಜನೇಯ ಅವರಿಗೆ ಸೂಚನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.