ಬುಧವಾರ, ಮೇ 18, 2022
25 °C

ರೇಷ್ಮೆಗೂಡು ಮಾರುಕಟ್ಟೆಗೆ ಬೀಗ ಜಡಿದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೇಷ್ಮೆ ವಿರೋಧಿ ಅನುಸರಿಸುತ್ತಿವೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸದಸ್ಯರು ಮಂಗಳವಾರ ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.ರೇಷ್ಮೆ ಉದ್ಯಮ ತೀವ್ರ ನಷ್ಟ ಅನುಭವಿಸುತ್ತಿದ್ದರೂ ಸಮಸ್ಯೆ ಪರಿಹಾರಕ್ಕೆ ಎರಡೂ ಸರ್ಕಾರಗಳು ಮುಂದಾಗಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ‘ರೇಷ್ಮೆ ಕೃಷಿಕರಿಗೆ ಸರ್ಕಾರ ನೆರವು ನೀಡುವವರೆಗೆ ಹೋರಾಟ ಮುಂದುವರೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಮುಖಂಡ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ರೇಷ್ಮೆಗೂಡಿನ ಬೆಲೆ ದಿಢೀರ್‌ನೆ ಕುಸಿದಿದ್ದು, ರೇಷ್ಮೆಕೃಷಿಕರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. 350 ರೂಪಾಯಿಯಿಂದ 400 ರೂಪಾಯಿಯವರೆಗೆ ಇದ್ದ ಒಂದು ಕೆಜಿ ರೇಷ್ಮೆಗೂಡಿನ ಬೆಲೆ ಈಗ 150 ರಿಂದ 200 ರೂಪಾಯಿಗೆ ಕುಸಿದಿದೆ. ರೇಷ್ಮೆಕೃಷಿಕರು ದಿಕ್ಕು ತೋಚದ ಸ್ಥಿತಿಗೆ ತಲುಪಿದ್ದಾರೆ’ ಎಂದರು.ವಿದೇಶದಿಂದ 2,500 ಟನ್‌ಗಳಷ್ಟು ಸುಂಕರಹಿತ ರೇಷ್ಮೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದರಿಂದ ರೇಷ್ಮೆ ಕೃಷಿಕರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ದೇಶದಲ್ಲೇ ಸಾಕಷ್ಟು ಪ್ರಮಾಣದಲ್ಲಿ ರೇಷ್ಮೆಯನ್ನು ಉತ್ಪನ್ನ ಮಾಡುವ ಸಾಮರ್ಥ್ಯವಿದ್ದರೂ ಸರ್ಕಾರ ಅದರತ್ತ ನಿರಾಸಕ್ತಿ ತೋರುತ್ತಿದೆ ಎಂದು ಅವರು ಆರೋಪಿಸಿದರು.ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕಿ ಮಧುಲತಾ ಮಾತನಾಡಿ, ‘ರಾಜ್ಯದಲ್ಲಿ ಅತಿ ಹೆಚ್ಚು ರೇಷ್ಮೆಯನ್ನು ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಉತ್ಪನ್ನ ಮಾಡಲಾಗುತ್ತಿದ್ದು, ಲಕ್ಷಾಂತರ ಮಂದಿ ರೈತರು ಮತ್ತು ರೀಲರುಗಳು ರೇಷ್ಮೆ ಉದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ರೇಷ್ಮೆ ಆಮದಿಗೆ ಸಂಬಂದಿಸಿದಂತೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಣಯ ಮಾರಕವಾಗಿದ್ದು, ರೇಷ್ಮೆ ಕೃಷಿಕರು ದಿಕ್ಕು ತೋಚದ ಸ್ಥಿತಿಗೆ ತಲುಪಲಿದ್ದಾರೆ’ ಎಂದರು.ಸಂಘಟನೆಗಳ ಮುಖಂಡರಾದ ಮುನೇಗೌಡ, ಭಾಸ್ಕರರೆಡ್ಡಿ, ಅಣಕನೂರು ಮಣಿ, ಪಟ್ರೇನಹಳ್ಳಿ ಮುನಿರಾಜು, ಬೈರಾರೆಡ್ಡಿ, ಡಿ.ಎಂ.ಮಂಜುನಾಥ್, ಸಾದೀಕ್ ಪಾಷಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.