ಶನಿವಾರ, ಜೂನ್ 6, 2020
27 °C

ರೇಷ್ಮೆ ಉತ್ಸವ: ಶೇ 20 ರಿಯಾಯ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೇಷ್ಮೆ ಉತ್ಸವ: ಶೇ 20 ರಿಯಾಯ್ತಿ

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಏಳು ದಿನಗಳ `ರೇಷ್ಮೆ ಉತ್ಸವ~ಕ್ಕೆ ಬುಧವಾರ ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಚಾಲನೆ ನೀಡಿದರು. ರಾಜ್ಯ ಸರ್ಕಾರ ಹಾಗೂ ಮೈಸೂರು ಸಿಲ್ಕ್, ಕೈಮಗ್ಗಮತ್ತು ಜವಳಿ ಇಲಾಖೆ ಸಹಯೋಗದೊಂದಿಗೆ ಉತ್ಸವ ನಡೆಯುತ್ತಿದೆ.ಈ ಸಂದರ್ಭದಲ್ಲಿ ಮಾತನಾಡಿದ ಅವರು `ಚೀನಾ ರೇಷ್ಮೆ ಆಮದು ಹಾಗೂ ಮಹಿಳೆಯರ ಉಡುಗೆ ಅಭಿರುಚಿ ಬದಲಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ರೇಷ್ಮೆ ಉದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ. ಮಾರಾಟ ಮಳಿಗೆಗಳನ್ನು ಹೆಚ್ಚಾಗಿ ಸ್ಥಾಪಿಸುವ ಮೂಲಕ ರೇಷ್ಮೆಗೆ ಉತ್ತೇಜನ ನೀಡಬೇಕಿದೆ~ ಎಂದು ತಿಳಿಸಿದರು.`ಎರಡನೇ ವರ್ಷ ಉತ್ಸವ ಆಯೋಜಿಸುತ್ತಿದ್ದು ರಾಜ್ಯ ಮಾತ್ರವಲ್ಲದೆ ಗುಜರಾತ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಡ, ಪಶ್ಚಿಮ ಬಂಗಾಳ ಮತ್ತಿತರ ಪ್ರದೇಶಗಳ ರೇಷ್ಮೆ ಉಡುಪುಗಳಿಗೆ ಆದ್ಯತೆ ನೀಡಲಾಗಿದೆ. 50ರಿಂದ 60 ವರ್ಷದಷ್ಟು ಹಳೆಯದಾದ ರೇಷ್ಮೆ ಸೀರೆಗಳನ್ನು ಪ್ರದರ್ಶನಕ್ಕಿಡಲಾಗಿದ್ದು ಪ್ರದರ್ಶಕರಿಗೆ ಬಹುಮಾನ ನೀಡಲಾಗುತ್ತಿದೆ. ಶೇ 20ರವರೆಗೆ ರಿಯಾಯ್ತಿ ದರದ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ~ ಎಂದರು.`ರಾಜ್ಯವನ್ನು ವಿಶ್ವದ ರೇಷ್ಮೆ ರಾಜಧಾನಿ ಎಂದರೆ ಅತಿಶಯೋಕ್ತಿ ಅಲ್ಲ. ಉಳಿದ ಪ್ರದೇಶಗಳಿಗೆ ಹೋಲಿಸಿದರೆ ರಾಜ್ಯದ ರೇಷ್ಮೆ  ಉತ್ಕೃಷ್ಟ ಗುಣಮಟ್ಟದ್ದಾಗಿದೆ. ದೇಶದಲ್ಲಿ ಒಟ್ಟು 16 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗುತ್ತಿದ್ದು ಚೀನಾದಿಂದ 30 ಸಾವಿರ ಮೆಟ್ರಿಕ್ ಟನ್ ರೇಷ್ಮೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದ ಉತ್ಪಾದನೆಯಲ್ಲಿ ಶೇ 50ರಷ್ಟು ಪಾಲು ರಾಜ್ಯದ್ದೇ ಆಗಿದೆ. ಹೊಸ ಹೊಸ ವಿನ್ಯಾಸ, ಅನ್ವೇಷಣೆಗಳು ರಾಜ್ಯದ ರೇಷ್ಮೆ ಉದ್ಯಮದಲ್ಲಿ ನಡೆಯುತ್ತಿವೆ.~ ಎಂದು ವಿವರಿಸಿದರು.`ರೇಷ್ಮೆ ಉತ್ಪಾದನೆಗೆ 300 ವರ್ಷಗಳ ಇತಿಹಾಸ ಇದೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ಆರಂಭವಾದ ಉದ್ಯಮ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಬೆಳವಣಿಗೆ ಕಂಡಿತು. ಬರುವ ವರ್ಷಕ್ಕೆ ಕೆಎಸ್‌ಐಸಿಗೆ 100 ವರ್ಷ ತುಂಬಲಿದ್ದು ಶತಮಾನೋತ್ಸವ ಆಚರಿಸಲಾಗುವುದು~ ಎಂದು ತಿಳಿಸಿದರು.`ನಗರದಲ್ಲಿ ಒಂದು ಕೋಟಿಗೂ ಹೆಚ್ಚು ಜನ ವಾಸಿಸುತ್ತಿರುವುದರಿಂದ ಉತ್ಸವವನ್ನು ಇಲ್ಲಿಯೇ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. 2010ರಲ್ಲಿ 25 ಸಾವಿರ ಮಂದಿ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ರೇಷ್ಮೆ ಉದ್ಯಮ ಕುಂಠಿತಗೊಳ್ಳಲು ಮಹಿಳೆಯರ ಅಭಿರುಚಿ ಬದಲಾಗಿರುವುದು ಕಾರಣ ಇರಬಹುದು. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ರೇಷ್ಮೆ ಉಡುಪುಗಳನ್ನು ಒದಗಿಸುವ ಚಿಂತನೆ ನಡೆದಿದೆ~ ಎಂದು ಹೇಳಿದರು.ಚಿತ್ರನಟಿ ಭಾರತಿ ವಿಷ್ಣುವರ್ಧನ್, `ಹಳೆಯ ಕಲಾತ್ಮಕತೆಯನ್ನು ಉಳಿಸಿ ಆಧುನಿಕ ಶೈಲಿಗೆ ತಕ್ಕ ಹಾಗೆ ರೇಷ್ಮೆ ವಿನ್ಯಾಸ ನಡೆಯಬೇಕಿದೆ. ವಿನ್ಯಾಸಗಳನ್ನು ಬದಲಿಸಲು ಕೆಎಸ್‌ಐಸಿ  ಮುಂದಾಗಿರುವುದು ಸಂತಸದ ವಿಚಾರ. ರೇಷ್ಮೆ ಎಲ್ಲ ವಯೋಮಾನದವರೂ ಉಡಬಹುದಾದ ವಸ್ತ್ರವಾಗಿದೆ. ರೇಷ್ಮೆ ಉಡುಗೆಗಳನ್ನು ಬಳಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕಿದೆ~ ಎಂದು ತಿಳಿಸಿದರು.ಕೆಎಸ್‌ಐಸಿ ಅಧ್ಯಕ್ಷ ಬಿ.ವಿಜಯಕುಮಾರ್, `ಉತ್ಸವ ಹೆಣ್ಣುಮಕ್ಕಳಿಗೆ ಹಬ್ಬದ ವಾತಾವರಣ ಸೃಷ್ಟಿಸಲಿದೆ. ಮಹಿಳೆಯರು ಹೆಚ್ಚಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಶತಮಾನೋತ್ಸವ ಆಚರಿಸುತ್ತಿರುವ ಕೆಎಸ್‌ಐಸಿ ರಾಜ್ಯದ ಮೊದಲ ಕಾರ್ಖಾನೆ ಕೂಡ ಆಗಿದೆ~ ಎಂದು ಹೇಳಿದರು.ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್, ಕೆಎಸ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಜಿ.ರಾಮಚಂದ್ರ, ಕೇಂದ್ರ ರೇಷ್ಮೆ ಮಂಡಳಿಯ ಮಾಜಿ ನಿರ್ದೇಶಕ ಡಾ. ಟಿ.ಎಚ್.ಸೋಮಶೇಖರ್, ಜವಳಿ ಅಭಿವೃದ್ಧಿ ಆಯುಕ್ತ ಡಿ.ಎ.ವೆಂಕಟೇಶ್ ಮತ್ತಿತರರು ಇದ್ದರು.ಪಟ್ಟಾಭಿಷೇಕದ ಕಥೆ ಹೇಳುವ ಸೀರೆ...

ರೇಷ್ಮೆ ಉತ್ಸವದ 80ನೇ ಮಳಿಗೆಯಲ್ಲಿ ಇಡಲಾದ ರೇಷ್ಮೆ ಸೀರೆಯಲ್ಲಿ ರಾಮ ಪಟ್ಟಾಭಿಷೇಕದ ಚಿತ್ರಗಳಿವೆ. ರಾಮ, ಲಕ್ಷ್ಮಣ, ಹನುಮಂತರ ಚಿತ್ರಗಳನ್ನು ತೊಗಲುಗೊಂಬೆಯ ಚಿತ್ರಗಳ ಮಾದರಿಯಲ್ಲಿ ರಚಿಸಲಾಗಿದೆ.

 ಕಲಂಕಾರಿ ಸೀರೆ ಎಂದೇ ಪ್ರಸಿದ್ಧವಾದ ಇದರ ತಯಾರಿಕೆಗೆ 45 ದಿನ ಹಿಡಿಯುತ್ತದೆ. ಆಂಧ್ರಪ್ರದೇಶದ ಕಾಳಹಸ್ತಿಯಲ್ಲಿ ತಯಾರಾಗುವ ಸೀರೆಗೆ ಬಣ್ಣ ನೀಡಿದ ನಂತರ ಹಾಲಿನಲ್ಲಿ ಅದ್ದಲಾಗುತ್ತದೆ. ಬೆಲೆ ರೂ. 8800.ಹಾಡುವ ಸೀರೆ: ಗಂಧದ ಎಳೆಗಳಿಂದ ತಯಾರಿಸಲಾದ ಹಾಡು ಹೇಳುವ ರೇಷ್ಮೆ ಸೀರೆ ಪ್ರದರ್ಶನದ ಮತ್ತೊಂದು ಆಕರ್ಷಣೆ. ಸುವಾಸನೆ ಭರಿತ ಈ ಸೀರೆಯ ಸೆರಗಿನಲ್ಲಿ ಐಪಾಡ್ ಮಾದರಿಯ ಸಾಧನವನ್ನು ಅಳವಡಿಸಲಾಗಿದ್ದು ಇದರಿಂದ ಸಂಗೀತ ಹೊರಹೊಮ್ಮುತ್ತದೆ. ಕಾಂಚಿವರಂ, ಬನಾರಸ್, ಮುರ್ಷಿದಾಬಾದ್, ಚಂದೇರಿ, ಹಾಗೂ ಒಡಿಶಾದಲ್ಲಿ ತಯಾರಾದ ಸೀರೆಗಳು ಉತ್ಸವದಲ್ಲಿವೆ.ಯಲಹಂಕ, ಆನೆಕಲ್, ಕಲ್ಲೂರು, ದೊಮ್ಮಸಂದ್ರ, ಚಿಂತಾಮಣಿ ನೇಕಾರರಿಂದ ತಯಾರಿಸಲಾದ ರೇಷ್ಮೆ ಉಡುಪುಗಳನ್ನು ಪ್ರದರ್ಶನದಲ್ಲಿಡಲಾಗಿದೆ. ರೇಷ್ಮೆ ಉಡುಪಿಗೆ ಒಪ್ಪುವ ಸರ, ಓಲೆ ಬಳೆ ಮುಂತಾದ ಆಭರಣಗಳನ್ನು ಮಾರಾಟಕ್ಕಿಡಲಾಗಿದೆ. ರೇಷ್ಮೆ ಗೂಡಿನ ಅಲಂಕಾರಿಕ ವಸ್ತುಗಳು ನೇಕಾರಿಕೆಯ ವಿಧಾನಗಳನ್ನು ಪ್ರದರ್ಶಿಸಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.