ಮಂಗಳವಾರ, ಏಪ್ರಿಲ್ 13, 2021
28 °C

ರೇಷ್ಮೆ ಉದ್ಯಮದ ತಳಮಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ರೇಷ್ಮೆ ಗೂಡು ಮಾರಾಟ ಕೇಂದ್ರಗಳಲ್ಲಿ ಭಾನುವಾರದಿಂದ ರೇಷ್ಮೆಗೂಡಿನ ದರ ದಿಢೀರನೆ ಕುಸಿದಿದೆ. ಎರಡು ತಿಂಗಳಿಂದ ಕೆ.ಜಿ ರೇಷ್ಮೆಗೂಡಿನ ಬೆಲೆ 350 ರೂಪಾಯಿ ದಾಟಿತ್ತು. ಅದೀಗ 150 ರೂಪಾಯಿಗೆ ಕುಸಿದಿರುವುದರಿಂದ ನಿರೀಕ್ಷೆಯಂತೆ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ.ಸಾಮಾನ್ಯವಾಗಿ ಚಳಿಗಾಲದಲ್ಲಿ ರೇಷ್ಮೆ ಗೂಡು ಉತ್ಪನ್ನ ಕಡಿಮೆ ಆಗುವುದರಿಂದ ಹಿಂದಿನ ಎರಡು ತಿಂಗಳಲ್ಲಿ ರೇಷ್ಮೆಗೂಡಿನ ದರ ಹೆಚ್ಚಾಗಲು ಕಾರಣ ಎನ್ನುವ ವಾದವೂ ಇದೆ. ವಾಸ್ತವವಾಗಿ ರೇಷ್ಮೆ  ಆಮದು ಸುಂಕವನ್ನು ಬರುವ ಏಪ್ರಿಲ್‌ನಿಂದ ಶೇಕಡಾ 30ರಿಂದ 5ಕ್ಕೆ ಇಳಿಸಲು ಕೇಂದ್ರ ಸರ್ಕಾರ ತನ್ನ ಬಜೆಟ್ಟಿನಲ್ಲಿ ಪ್ರಕಟಿಸಿದ ತೀರ್ಮಾನವೇ ಕಾರಣ ಎನ್ನುವುದು ಸುಳ್ಳಲ್ಲ.ಆದರೆ ಈ ಸುದ್ದಿ ಬಜೆಟ್‌ಗೂ ಮುನ್ನ ರಾಜ್ಯದ ರೇಷ್ಮೆ ವಲಯದಲ್ಲಿ ಹಬ್ಬುತ್ತಿದ್ದಂತೆ ಭಾನುವಾರದಿಂದಲೇ ರೇಷ್ಮೆ ಬೆಳೆಗಾರರು ಚಳವಳಿಗೆ ಇಳಿಯಬೇಕಾದ ಪರಿಸ್ಥಿತಿ ಉಂಟಾದುದು ವಿಚಿತ್ರ. ಈ ಬೆಳವಣಿಗೆಯಿಂದಾಗಿ ಮಾರುಕಟ್ಟೆಗಳಲ್ಲಿ ರೇಷ್ಮೆಗೂಡು ರೂ. 150ಕ್ಕೆ ಕುಸಿಯಿತು.ಇದರಿಂದ ಆತಂಕಕ್ಕೆ ಒಳಗಾಗಿರುವ ರೇಷ್ಮೆ ಬೆಳೆಗಾರರು, ರಾಮನಗರ, ಮಳವಳ್ಳಿ, ಕನಕಪುರ, ಶಿಡ್ಲಘಟ್ಟ, ಕೋಲಾರ ಮುಂತಾದ ಕಡೆಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಯತ್ನ ನಡೆಸಿದ್ದಾರೆ. ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿರುವ ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿಯು ಕೆ.ಜಿ ರೇಷ್ಮೆ ಗೂಡಿಗೆ 225 ರೂಪಾಯಿಯಂತೆ ಖರೀದಿಸಲು ಮುಂದಾಗಿರುವುದು ಸ್ವಾಗತಾರ್ಹ.ಆದರೆ ಇದು ಎಲ್ಲಿಯವರೆಗೆ ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಆದ್ದರಿಂದ ರೇಷ್ಮೆಗೂಡಿನ ಬೆಲೆಯ ಸ್ಥಿರೀಕರಣದ ಬಗೆಗೆ ಕೇಂದ್ರ ಸರ್ಕಾರ ಗಂಭೀರವಾಗಿ ಯೋಚಿಸಬೇಕಿದೆ. ದೇಶದ ಒಟ್ಟು ರೇಷ್ಮೆಯಲ್ಲಿ ಶೇ 70ಕ್ಕೂ ಹೆಚ್ಚು ಉತ್ಪಾದನೆ ಆಗುವುದು ಕರ್ನಾಟಕದಲ್ಲಿ. ಹಾಗಾಗಿ ರೇಷ್ಮೆಗೂಡಿಗೆ ನ್ಯಾಯವಾದ ಬೆಲೆ ಸಿಗದಿದ್ದರೆ, ಹೆಚ್ಚಿನ ಹೊಡೆತ ಬೀಳುವುದು ರಾಜ್ಯದ ರೇಷ್ಮೆ ಬೆಳೆಗಾರರಿಗೆ. ಚೀನಾದ ರೇಷ್ಮೆಯ ಗುಣಮಟ್ಟ ಉತ್ತಮವಾಗಿರುವುದರಲ್ಲಿ ಎರಡು ಮಾತಿಲ್ಲ.ಆದ್ದರಿಂದಲೇ ಚೀನಾದ ರೇಷ್ಮೆ ಸರಕು ಭಾರತಕ್ಕೆ ಕಳ್ಳ ಮಾರ್ಗದಿಂದ ರಾಶಿ ರಾಶಿ ಬಂದು ಬೀಳುತ್ತಿರುವುದು ಗುಟ್ಟಿನ ವ್ಯವಹಾರವೇನಲ್ಲ. ಇದರಿಂದ ನಮ್ಮ ಸ್ಥಳೀಯ ರೇಷ್ಮೆ ಕೃಷಿ ಮತ್ತು ಜವಳಿ ಉದ್ಯಮದ ಮೇಲೆ ದುಷ್ಪರಿಣಾಮ ಬೀರುವುದನ್ನು ಸರ್ಕಾರ ನಿರ್ಲಕ್ಷಿಸಬಾರದು. ಅವಶ್ಯವೆನ್ನಿಸಿದರೆ ಸುರಿ ವಿರೋಧಿ ತೆರಿಗೆಯನ್ನು ಜಾರಿಗೆ ತರುವ ಮೂಲಕ  ರೇಷ್ಮೆ ಕೃಷಿ ಮತ್ತು ಉದ್ಯಮಕ್ಕೆ ಎದುರಾಗಿರುವ ಅಪಾಯವನ್ನು ತಡೆಯಬೇಕು. ರೇಷ್ಮೆ ಸಿದ್ಧ ಉಡುಪುಗಳ ತಯಾರಕರು ಮತ್ತು ರಫ್ತುದಾರರು, ಚೀನಾ ರೇಷ್ಮೆ ಬಗೆಗೆ ಹೆಚ್ಚಿನ ಒಲವು ಹೊಂದಿರುವುದು ಈಗಿನ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಇವರ ಒತ್ತಡಕ್ಕೆ ಮಣಿದಿದೆ ಎನ್ನಲಾದ ಕೇಂದ್ರ ಸರ್ಕಾರ ಇಳಿಸಿರುವ ಆಮದು ಸುಂಕವನ್ನು ಹಿಂತೆಗೆದುಕೊಳ್ಳುವ ಮೂಲಕ ಸ್ಥಳೀಯ ರೇಷ್ಮೆ ಕೃಷಿ ಮತ್ತು ಉದ್ಯಮವನ್ನು ರಕ್ಷಿಸಬೇಕಿದೆ. ಈ ದಿಶೆಯಲ್ಲಿ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಮುಂದಾಗಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.