ಬುಧವಾರ, ಜನವರಿ 20, 2021
15 °C
ಆರ್ಥಿಕ ಸುಧಾರಣೆಗೆ 25

ರೇಷ್ಮೆ ಬೆಳೆಗಾರರಿಗೆ ಮಾರಕವಾದ ಉದಾರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೇಷ್ಮೆ ಬೆಳೆಗಾರರಿಗೆ ಮಾರಕವಾದ ಉದಾರೀಕರಣ

ರೇಷ್ಮೆ ಬಟ್ಟೆ ನೋಡಲು ಬಲು ನುಣುಪು.  ತೊಟ್ಟರೆ ಅಂದ ಚೆಂದವೂ ಹೆಚ್ಚುತ್ತದೆ. ರೇಷ್ಮೆ ವಸ್ತ್ರಧರಿಸಿ ಬೀಗುವವರೇ ಹೆಚ್ಚು. ಹಾಗಾಗಿ ರೇಷ್ಮೆ ಬಟ್ಟೆಯ ಬೆಲೆಯೂ ದುಬಾರಿ. ಆದರೆ ರೇಷ್ಮೆ ಬೆಳೆಯುವ ರೈತರ ಸ್ಥಿತಿ ಮಾತ್ರ ನುಣುಪಾಗಿಲ್ಲ; ರೇಷ್ಮೆ ಹುಳುಗಳನ್ನು ಸಾಕಿ, ಸಲಹಿ, ಬೆಳೆಸುವ ರೈತ ತನಗೆ ಮತ್ತು ತನ್ನ ಕುಟುಂಬದ ಸದಸ್ಯರಿಗೆ ರೇಷ್ಮೆ ಬಟ್ಟೆ ಖರೀದಿಸುವಷ್ಟು ಶಕ್ತನಾಗಿಲ್ಲ.ಹೆಚ್ಚಾಗಿ ಬಡ, ಸಣ್ಣ ಮತ್ತು ಅತಿ ಸಣ್ಣ ರೈತರೇ ರೇಷ್ಮೆ ಕೃಷಿಯ ಅವಲಂಬಿತರು. ಆದರೆ ಅವರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ, ಖರೀದಿ ಸಾಮರ್ಥ್ಯವನ್ನು ವೃದ್ಧಿಸುವ ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಕಾರ್ಯ ಅಷ್ಟಾಗಿ ನಡೆದಿಲ್ಲ.ಕೇಂದ್ರ, ರಾಜ್ಯ ಸರ್ಕಾರಗಳ ಧೋರಣೆ, ಆಮದು ನೀತಿ, ನೇಕಾರರು ಮತ್ತು ಜವಳಿ ಉದ್ಯಮವಲಯದ ಮಾಫಿಯಾ,  ಹವಾಮಾನ ವೈಪರೀತ್ಯಗಳಿಂದ ರೇಷ್ಮೆ ರೈತನ ಸ್ಥಿತಿ ಚಿಂತಾಜನಕವಾಗಿದೆ. ತಮ್ಮದಲ್ಲದ ತಪ್ಪಿಗೆ ಈ ರೈತರು ಶಿಕ್ಷೆ ಎದುರಿಸಬೇಕಾಗಿದೆ. ಅಲ್ಲದೆ ನಾಲ್ಕು ದಶಕದಿಂದ ನಂಬಿ, ನಡೆಸಿಕೊಂಡು ಬಂದಿದ್ದ ರೇಷ್ಮೆ ಬೇಸಾಯದಿಂದಲೇ ಅವರು ವಿಮುಖರಾಗುತ್ತಿದ್ದಾರೆ.ಜಗತ್ತಿನ ರೇಷ್ಮೆಯಲ್ಲಿ ಶೇ 95ರಷ್ಟು ಪಾಲು ಏಷ್ಯಾದ್ದಾಗಿದೆ. ಒಟ್ಟಾರೆ 40 ದೇಶಗಳು ರೇಷ್ಮೆಯನ್ನು ಬೆಳೆಯುತ್ತವೆ. ಅದರಲ್ಲಿ ಚೀನಾ ಮೊದಲ ಸ್ಥಾನ ಮತ್ತು ಭಾರತ ಎರಡನೇ ಸ್ಥಾನ ಹೊಂದಿದೆ. ಜಪಾನ್‌, ಬ್ರೆಜಿಲ್‌, ಕೊರಿಯಾ ನಂತರದ ಸ್ಥಾನಗಳಲ್ಲಿ ಬರಲಿವೆ.1980ರ ವೇಳೆಯಲ್ಲಿ ದೇಶದಲ್ಲಿ ಸುಮಾರು 10,500 ಮೆಟ್ರಿಕ್‌ ಟನ್‌ ರೇಷ್ಮೆ ನೂಲು ಉತ್ಪಾದನೆ ಆಗುತ್ತಿತ್ತು. ಸುಧಾರಿತ ತಂತ್ರಜ್ಞಾನ ಮತ್ತು ವಿಧಾನದ ಫಲವಾಗಿ 2015–16ನೇ ಸಾಲಿನಲ್ಲಿ ಇದು 28,472 ಮೆಟ್ರಿಕ್‌ ಟನ್‌ಗೆ ಏರಿದೆ. ದೇಶದ ರೇಷ್ಮೆಗೆ ಕರ್ನಾಟಕದ ಪಾಲು ಶೇ 70. ರಾಜ್ಯವೇ ಅಲ್ಲದೆ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರದ ಕೆಲವೆಡೆ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಕೆಲ ರಾಜ್ಯಗಳಲ್ಲಿ ರೇಷ್ಮೆ ಬೇಸಾಯ ನಡೆಯುತ್ತಿದೆ.ಪ್ರಸ್ತುತ ದೇಶದಲ್ಲಿ ರೇಷ್ಮೆಯನ್ನು ನೇರ ಮತ್ತು ಪರೋಕ್ಷವಾಗಿ 60 ಲಕ್ಷ ಜನರು ಅವಲಂಬಿಸಿದ್ದಾರೆ. ರೇಷ್ಮೆ ಮೊಟ್ಟೆ ಉತ್ಪಾದಕರು, ಚಾಕಿ ಸಾಕುವವರು, ರೈತರು, ಕೂಲಿಕಾರರು, ನೂಲು ಬಿಚ್ಚಾಣಿಕೆದಾರರು (ರೀಲರ್‌ಗಳು), ನೂಲು ಮಾರಾಟಗಾರರು, ನೇಕಾರರು, ಕೈಮಗ್ಗ, ಪವರ್‌ ಲೂಮ್‌ಗಳಲ್ಲಿ ದುಡಿಯುವ ಕಾರ್ಮಿಕ ವರ್ಗ, ಬಣ್ಣ ಹಾಕುವವರು, ರೇಷ್ಮೆ ಬಟ್ಟೆ ಮಾರಾಟಗಾರರು ಸೇರಿದಂತೆ ಹಲವರು ರೇಷ್ಮೆಯನ್ನೇ ಅವಲಂಬಿಸಿದ್ದಾರೆ.ದೇಶದಲ್ಲಿ ಎರಡು ಶತಮಾನಗಳಿಂದ ಬೆಳೆದು ಬಂದ ರೇಷ್ಮೆ ಕೃಷಿಯು ಸಾಕಷ್ಟು ಸುಧಾರಣೆ ಆಗಿದೆ. ತಾಂತ್ರಿಕತೆಯ ಅಳವಡಿಕೆ ಮತ್ತು ಆಧುನಿಕ ಸುಧಾರಿತ ವಿಧಾನಗಳ ಬಳಕೆಯಿಂದ ಉತ್ಪಾದನೆಯಲ್ಲಿ ಹೆಚ್ಚಳವೇನೋ ಆಗಿದೆ. ಆದರೆ ಅದರ ಫಲ ಮಾತ್ರ ರೈತರಿಗೆ ಸಿಗುತ್ತಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಮತ್ತು ಮಾರುಕಟ್ಟೆ ಭದ್ರತೆ ದೊರೆತಿಲ್ಲ. ಇದರಿಂದಾಗಿ ಸೂಕ್ತ ಧಾರಣೆ ದೊರೆಯದೆ ರೈತ ಕಂಗಾಲಾಗಿದ್ದಾನೆ.ರಾಜ್ಯದ ಚಿತ್ರಣ: ರಾಜ್ಯದಲ್ಲಿ 1989–90ರ ಅವಧಿಯಲ್ಲಿ ಒಟ್ಟು 1,46,285 ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆ ಕೃಷಿ ವ್ಯಾಪಿಸಿತ್ತು. 2006–07ರಲ್ಲಿ 97,647 ಹೆಕ್ಟೇರ್‌ಗೆ ಕುಸಿದಿತ್ತು. 2016ರ ಮಾರ್ಚ್‌ ಅಂತ್ಯದವೇಳೆಗೆ ಅದು 87,497 ಹೆಕ್ಟೇರ್‌ಗೆ ಕುಸಿತ ಕಂಡಿದೆ. ಅಂದರೆ ಎರಡೂವರೆ ದಶಕದಲ್ಲಿ 58,788 ಹೆಕ್ಟೇರ್‌ ರೇಷ್ಮೆ ಪ್ರದೇಶವು ರೇಷ್ಮೆ ಚಟುವಟಿಕೆಯಿಂದ ಹೊರಬಂದಿದೆ.2014–15ರಲ್ಲಿ ರಾಜ್ಯದಲ್ಲಿ 1.32,205 ಕುಟುಂಬಗಳು ರೇಷ್ಮೆ ಕೃಷಿಯಲ್ಲಿ ತೊಡಗಿದ್ದವು. 2016ರ ಮಾರ್ಚ್‌ ಅಂತ್ಯದವೇಳೆಗೆ ರೇಷ್ಮೆ ಕೃಷಿ ಅವಲಂಬಿತ ಕುಟುಂಬಗಳ ಸಂಖ್ಯೆ 1,23,442 ಕುಸಿದಿದೆ.ದೇಶದಲ್ಲಿ ಮೂರು, ನಾಲ್ಕು ದಶಕದಲ್ಲಿ ಬಹುತೇಕ ಪದಾರ್ಥಗಳ, ಆಹಾರಧಾನ್ಯಗಳ, ವಾಣಿಜ್ಯ ಬೆಳೆಗಳ ಬೆಲೆ ಹೆಚ್ಚಾಗಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆಯೂ 30, 40 ಪಟ್ಟು ಹೆಚ್ಚಾಗಿದೆ. ಶಿಕ್ಷಣವೂ ದುಬಾರಿಯಾಗಿದೆ.

ಆರೋಗ್ಯದ ಖರ್ಚು ಹೆಚ್ಚಾಗಿದ್ದು, ಔಷಧಿಗಳ ಬೆಲೆ ಗಗನಕ್ಕೇರಿದೆ. ಅಗತ್ಯವಸ್ತುಗಳ ಬೆಲೆ ದುಬಾರಿಯಾಗಿದೆ. ಅಧಿಕಾರಿ ವರ್ಗ, ಸರ್ಕಾರಿ ನೌಕರ ವರ್ಗ, ಜನಪ್ರತಿನಿಧಿಗಳ ವೇತನ ಹಲವು ಪಟ್ಟು ಹೆಚ್ಚಳವಾಗಿವೆ. ಆದರೆ ರೇಷ್ಮೆ ಧಾರಣೆಲ್ಲಿ ಮಾತ್ರ ಈ ಪ್ರಮಾಣದ ಏರಿಕೆ ದಾಖಲಾಗಿಲ್ಲ.ಆರ್ಥಿಕ ಸುಧಾರಣೆಯ ಪರಿಣಾಮ: 1991ರಲ್ಲಿ ಮಿಶ್ರತಳಿ (ಸಿಬಿ) ರೇಷ್ಮೆ ಗೂಡಿನ ಬೆಲೆಯು ಸರಾಸರಿ ಕೆ.ಜಿಗೆ  ₹ 126 ಇತ್ತು.  ಅದು 2006–07ರಲ್ಲಿ ₹ 123 ಮತ್ತು 2007–08ರಲ್ಲಿ ₹ 114ಕ್ಕೆ ಇಳಿದಿತ್ತು.  2015ರಲ್ಲಿ ಅದು ₹ 204ಕ್ಕೆ ಏರಿತ್ತು. ಅಂದರೆ 25 ವರ್ಷದಲ್ಲಿ ರೇಷ್ಮೆ ಗೂಡಿನ ಧಾರಣೆಯಲ್ಲಿ ಹೆಚ್ಚಾಗಿ ಇಳಿಕೆಯೇ ದಾಖಲಾಗಿದೆ.  ಆಗೊಮ್ಮೆ, ಈಗೊಮ್ಮೆ ಎನ್ನುವಂತೆ ಕೆಲ ವರ್ಷಗಳಲ್ಲಿ ₹ 200ರ ಗಡಿದಾಟಿರುವುದೂ ಉಂಟು.ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಆರ್ಥಿಕ ಸುಧಾರಣೆ ಹೆಸರಿನಲ್ಲಿ 1991ರಲ್ಲಿ ದೇಶಕ್ಕೆ ಕೊಟ್ಟ ಉದಾರೀಕರಣ, ಮುಕ್ತ ಆರ್ಥಿಕ ನೀತಿ, ಮುಕ್ತ ವ್ಯಾಪಾರ ಮತ್ತು ವಾಣಿಜ್ಯ ನೀತಿ ಹಾಗೂ ಮುಕ್ತ ಆಮದು ನೀತಿಗಳು ರೇಷ್ಮೆ ಗೂಡಿನ ಧಾರಣೆಯ ಗಣನೀಯ ಕುಸಿತಕ್ಕೆ ಪ್ರಮುಖ ಕಾರಣಗಳು.ಇತರ ಕೃಷಿಗಿಂತ ಈ ನೀತಿಗಳಿಂದ ರೇಷ್ಮೆಗೆ ಭಾರಿ ಹೊಡೆತ ಬಿದ್ದಿದೆ. ಅದು ಚೇತರಿಸಿಕೊಳ್ಳಲಾಗದೇ ಈಗಲೂ ತೆವಳುತ್ತಲೇ ಸಾಗುವಂತಾಗಿದೆ. ಹೇಗೆ ರೇಷ್ಮೆ ಹುಳು ತನ್ನ ಸುತ್ತ ತಾನೇ ನೂಲು ನೇಯ್ದುಕೊಂಡು ಸಾವಿನ ಅಂಚು ತಲುಪುತ್ತದೆಯೋ ಹಾಗೆಯೇ ರೇಷ್ಮೆಯನ್ನು ನಂಬಿದ ಕೃಷಿಕನ ಸ್ಥಿತಿಯೂ ಆಗಿದೆ.ಸಾಮಾನ್ಯವಾಗಿ ಸಣ್ಣ, ಅತಿ ಸಣ್ಣ ಭೂ ಹಿಡುವಳಿದಾರರೇ ಈ ಕೃಷಿಯಲ್ಲಿದ್ದಾರೆ. ವರ್ಷಕ್ಕೆ 5ರಿಂದ 6 ಬೆಳೆ ತೆಗೆಯ ಬಹುದಾದ್ದರಿಂದ ಸರಾಸರಿ 2 ತಿಂಗಳಿಗೊಮ್ಮೆ ಕನಿಷ್ಠ ಹಣವನ್ನಾದರೂ ನೋಡಬಹುದು ಎಂಬ ಕಾರಣದಿಂದ ಹಾಗೂ ಯಾವುದಾದರೂ ಒಂದೆರಡು ಬೆಳೆಯಲ್ಲಿಯಾದರೂ ಉತ್ತಮ ಬೆಲೆ ದೊರೆಯಬಹುದು ಎಂಬ ಆಶಾಕಿರಣದಿಂದ ಕೆಲ ಕೃಷಿಕರು ಇನ್ನೂ ರೇಷ್ಮೆಯನ್ನು ಮುಂದುವರೆಸಿದ್ದಾರೆ.  ಆದರೆ ಮನೆ ಮಂದಿಯೆಲ್ಲಾ ಸೇರಿ ಮಾಡುವ ಈ ಕೃಷಿಗೆ ಉತ್ಪಾದನಾ ವೆಚ್ಚಕ್ಕೆ ತಗಲುವಷ್ಟು ಗೂಡಿಗೆ ಬೆಲೆ ದೊರೆಯುತ್ತಿಲ್ಲ ಎಂಬ ನೋವು ಇದೆ.ಉತ್ಪಾದನಾ ವೆಚ್ಚ: ಸರ್ಕಾರವೇ ವಿವಿಧ ಸಂದರ್ಭದಲ್ಲಿ ನಡೆಸಿರುವ  ಅಧ್ಯಯನಗಳ ಪ್ರಕಾರ ಒಂದು ಕೆ.ಜಿ ರೇಷ್ಮೆ ಗೂಡು ಉತ್ಪಾದನೆಗೆ  ₹ 300 ವೆಚ್ಚವಾಗುತ್ತದೆ (ರೈತರ ಪ್ರಕಾರ ಅದು ₹ 350ರಿಂದ 400). ಆದರೆ ಮಾರುಕಟ್ಟೆಯಲ್ಲಿ ಕೆ.ಜಿ ಗೂಡಿಗೆ ₹ 120ರಿಂದ 200ಕ್ಕೆ ಹರಾಜು ಕೂಗಿದರೆ ರೈತರ ಸ್ಥಿತಿ ಏನಾಗಬಹುದು? ದೈನಂದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಮಕ್ಕಳ ಶಿಕ್ಷಣ, ಸಹೋದರಿಯರ ವಿವಾಹ, ಕುಟುಂಬದವರ ಆರೋಗ್ಯ ಸಮಸ್ಯೆಗಳಿಗೆ ಈ ರೈತ ಎಲ್ಲಿಂದ ಹಣ ಹೊಂದಿಸುತ್ತಾನೆ ಎಂಬ ಕನಿಷ್ಠ ವಿವೇಚನೆಯೂ ಸರ್ಕಾರಕ್ಕೆ ಇಲ್ಲವೇ?ವಿಶ್ವ ವ್ಯಾಪಾರ ಒಪ್ಪಂದದ (1991) ಅಡಿ ಮುಕ್ತ ಆಮದು ನೀತಿ ಜಾರಿ ಆಗಿದೆ. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದರೂ ಕೆಲವು ಆಹಾರ ಮತ್ತು ವಾಣಿಜ್ಯ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಈ ಒಪ್ಪಂದ ಸೃಷ್ಟಿಸಿದೆ.

ಇದನ್ನು ವಿರೋಧಿಸಿ ದೇಶದಾದ್ಯಂತ ರೈತರು ಚಳವಳಿ ನಡೆಸಿದರು. ರೈತ ಮುಖಂಡ ಮಹೇಂದ್ರ ಸಿಂಗ್‌ ಟಿಕಾಯತ್‌ ಅವರ ನೇತೃತ್ವದಲ್ಲಿ ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ಚಳವಳಿ ನಡೆಸಿತು.

ರಾಜ್ಯದಲ್ಲಿ ರೈತ ನಾಯಕ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ಹೋರಾಟದ ಮುಂಚೂಣಿಯಲ್ಲಿದ್ದರು. ಡಂಕೆಲ್‌ ಪ್ರಸ್ತಾವನೆ, ಗ್ಯಾಟ್‌ ಒಪ್ಪಂದ, ಡಬ್ಲ್ಯುಟಿಒ ಒಪ್ಪಂದವನ್ನು ರೈತ ಸಮುದಾಯ ಬಲವಾಗಿ ವಿರೋಧಿಸಿದರೂ ಸರ್ಕಾರ ಅದನ್ನು ದೇಶದ ರೈತರ ಮೇಲೆ ಹೇರಿತು.

ಈ ಒಪ್ಪಂದದಿಂದ ಭಾರತದ ಮೇಲೆ ಬಂಡವಾಳಶಾಹಿ ರಾಷ್ಟ್ರಗಳ ಹಿಡಿತ ಹೆಚ್ಚಾಯಿತು. ದೇಶವು ವಿಶ್ವ ಬ್ಯಾಂಕ್‌ ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಕಪಿಮುಷ್ಟಿಗೆ ಸಿಲುಕುವಂತಾಯಿತು.ಚೀನಾ ರೇಷ್ಮೆಗೆ ರತ್ನಗಂಬಳಿಯ ಸ್ವಾಗತ: ಜಾಗತಿಕ ಸ್ಪರ್ಧೆಗೆ ಅದಾಗಲೇ ಸಿದ್ಧವಾಗಿದ್ದ ಚಿನಾ ದೇಶವು ತನ್ನ ರೇಷ್ಮೆ ಕೃಷಿ ನೀತಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದುಕೊಂಡಿತ್ತು. ಇದೇ ವೇಳೆಗೆ, ಭಾರತದಲ್ಲಿ ನೇಕಾರರು ಹೆಚ್ಚಿದ್ದು, ಅವರಿಗೆ ದೇಶದಲ್ಲಿ ಅಗತ್ಯವಿರುವಷ್ಟು ರೇಷ್ಮೆ ದೊರೆಯುತ್ತಿಲ್ಲ ಎಂಬ ನೆಪವೊಡ್ಡಿ ಕೇಂದ್ರ ಸರ್ಕಾರವು ಚೀನಾ ರೇಷ್ಮೆಗೆ ರತ್ನಗಂಬಳಿಯ ಸ್ವಾಗತ ನೀಡಿತು.

ಹೆಚ್ಚಿನ ಪ್ರಮಾಣದಲ್ಲಿ ಆಮದು ಸುಂಕ ವಿಧಿಸಿ ದೇಶದ ರೇಷ್ಮೆಯನ್ನು ರಕ್ಷಿಸಬೇಕಿದ್ದ ಸರ್ಕಾರ ವಿದೇಶಿ ರೇಷ್ಮೆ ನೂಲಿಗೆ ಕೇವಲ ಶೇ 35ರಷ್ಟು ಆಮದು ಸುಂಕ ವಿಧಿಸಿತು.  ಇದರ ಪರಿಣಾಮ 1991ರ ತರುವಾಯ ರೇಷ್ಮೆ ಧಾರಣೆಯಲ್ಲಿ ಕುಸಿತ ದಾಖಲಾಯಿತು.ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಎಂದು ಪ್ರಸಿದ್ಧಿಯಾಗಿರುವ ರಾಮನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ 1991ರಲ್ಲಿ ಮಿಶ್ರ ತಳಿ ರೇಷ್ಮೆ ಗೂಡು ಸರಾಸರಿ ಕೆ.ಜಿಗೆ ₹ 126 (ಕನಿಷ್ಠ 51, ಗರಿಷ್ಠ 221) ಇತ್ತು.  ಅದು 1992ರಲ್ಲಿ ಸರಾಸರಿ ₹ 93.88ಕ್ಕೆ (ಕನಿಷ್ಠ 38.10, ಗರಿಷ್ಠ 169) ಕುಸಿಯಿತು.

1993ರಲ್ಲಿ ಸರಾಸರಿ ಕೆ.ಜಿಗೆ ₹ 83.60ಕ್ಕೆ (ಕನಿಷ್ಠ 30.70, ಗರಿಷ್ಠ 135) ಇಳಿಯಿತು. ಈ ವರ್ಷಗಳಲ್ಲಿ ರೈತರು ಬೀದಿಗಳಿದು, ಗೂಡನ್ನು ರಸ್ತೆಯಲ್ಲಿ ಚೆಲ್ಲಿ ಹೋರಾಟ, ಪ್ರತಿಭಟನೆ, ಧರಣಿ ನಡೆಸಿದರು. ಆದರೆ ಸರ್ಕಾರಕ್ಕೆ ರೈತರ ಕೂಗು ಕೇಳಿಸಲಿಲ್ಲ.ಮುಂದುವರಿದ ಶೋಷಣೆ: ಈ ಆರ್ಥಿಕ ಸುಧಾರಣೆಯ ಮುಕ್ತ ನೀತಿಯ ಅಡ್ಡ ಪರಿಣಾಮ ಅಲ್ಲಿಗೆ ನಿಲ್ಲಲಿಲ್ಲ. 2002–03ರಲ್ಲಿ ಮತ್ತೆ ಭುಗಿಲೆದ್ದಿತು. ಕೇಂದ್ರದಲ್ಲಿ ಅಧಿಕಾರದಲ್ಲಿ ಎ.ಬಿ.ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ರೇಷ್ಮೆ ರೈತರ ಗಾಯದ ಮೇಲೆ ಬರೆ ಎಳೆಯಿತು. ಅದು ರೇಷ್ಮೆ ಆಮದು ಸುಂಕವನ್ನು ಶೇ 35ರಿಂದ ಶೇ 30ಕ್ಕೆ ಇಳಿಸಿತು.

ಇದರ ದುಷ್ಪರಿಣಾಮ ಆ ಕೂಡಲೇ ರೇಷ್ಮೆ ಗೂಡಿನ ಧಾರಣೆಯ ಮೇಲೆ ಬಿದ್ದಿತು. 2000ನೇ ಇಸವಿಯಲ್ಲಿ ಮಿಶ್ರ ತಳಿ ರೇಷ್ಮೆ ಗೂಡು ಸರಾಸರಿ ಕೆ.ಜಿಗೆ ₹ 113 (ಕನಿಷ್ಠ 30, ಗರಿಷ್ಠ 219) ಇತ್ತು. ಅದು 2002–03ರಲ್ಲಿ ದಿಢೀರನೆ ಕುಸಿತವಾಗಿ ಸರಾಸರಿ ಕೆ.ಜಿಗೆ ₹ 94.50 (ಕನಿಷ್ಠ 52, ಗರಿಷ್ಠ 135.60) ಇಳಿತ ದಾಖಲಿಸಿತು.2002ರಲ್ಲಿ ರಾಜ್ಯದಲ್ಲಿ 1.16 ಲಕ್ಷ ಹೆಕ್ಟೇರ್‌ನಲ್ಲಿ ಹಿಪ್ಪುನೇರಳೆ ವ್ಯವಸಾಯ ವ್ಯಾಪಿಸಿತ್ತು. 2.56 ಲಕ್ಷ ಕುಟುಂಬ, 12 ಸಾವಿರ ರೀಲರ್‌ಗಳು ಈ ಉದ್ಯಮವನ್ನು ಅವಲಂಬಿಸಿದ್ದರು. ಆಗ ದೇಶದಲ್ಲಿ 14500 ಮೆಟ್ರಿಕ್‌ ಟನ್‌ ಕಚ್ಚಾ ರೇಷ್ಮೆ ಉತ್ಪಾದನೆ ಆಗುತ್ತಿತ್ತು. ಅದರಲ್ಲಿ ರಾಜ್ಯದ ಕೊಡುಗೆ 8700 ಮೆಟ್ರಿಕ್‌ ಟನ್‌ ಇತ್ತು.2001–02ರಲ್ಲಿ ಚೀನಾ ರೇಷ್ಮೆಯ ಆಮದು ಪ್ರಮಾಣ ಹೆಚ್ಚಾಗಿತ್ತು. ಆಗ ರೇಷ್ಮೆ ನೂಲು ಕೆ.ಜಿಗೆ ಸರಾಸರಿ 24 ಡಾಲರ್‌ ಇತ್ತು. ಅದು 2002–03ರ ವೇಳೆಗೆ 13ರಿಂದ 14 ಡಾಲರ್‌ಗೆ ಕುಸಿಯಿತು. ಇದರಿಂದ ನೇಕಾರರು ಚೀನಾದ ರೇಷ್ಮೆ ಖರೀದಿಸಲು ಮುಗಿಬಿದ್ದರು.ಇವುಗಳ ಜತೆಗೆ ‘ಎಕ್ಸ್‌ಪೋರ್ಟ್‌ ಪ್ರೊಸೆಸಿಂಗ್‌ ಜೋನ್‌’, ‘ಎಕ್ಸ್‌ಪೋರ್ಟ್‌ ಪ್ರಮೋಷನ್‌ ಕ್ಯಾಪಿಟಲ್‌ ಗೂಡ್ಸ್‌’ ಸೇರಿದಂತೆ ಹಲವು ಹೆಸರಿನಲ್ಲಿ ಸುಂಕ ರಹಿತವಾಗಿಯೂ ವಿದೇಶಿ ರೇಷ್ಮೆ ಭಾರತಕ್ಕೆ ಬರುವುದು ಹೆಚ್ಚಾಯಿತು. ಇವೇ ಅಲ್ಲದೆ ನೇಪಾಳ, ಬಾಂಗ್ಲಾದೇಶದಿಂದ ಚೀನಾ ರೇಷ್ಮೆಯು ದೊಡ್ಡ ಪ್ರಮಾಣದಲ್ಲಿ ಕಳ್ಳಸಾಗಾಣಿಕೆಯಾಗಿ ಭಾರತ ಪ್ರವೇಶಿಸುತ್ತಿತ್ತು.ರಾಜ್ಯ ವಿಧಾನಸಭೆಯಲ್ಲಿ 2002ರ ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ರೇಷ್ಮೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಎನ್‌.ಎಚ್.ಶಿವಶಂಕರ ರೆಡ್ಡಿ ಅವರು, ‘2001–02ರ ಆರ್ಥಿಕ ವರ್ಷದಲ್ಲಿ ದೇಶಕ್ಕೆ 6870 ಮೆಟ್ರಿಕ್‌ ಟನ್‌ನಷ್ಟು ರೇಷ್ಮೆ ಆಮದಾಗಿತ್ತು.ಅದರಲ್ಲಿ ಕೇವಲ ಶೇ 2ರಷ್ಟಕ್ಕೆ ಮಾತ್ರ ಆಮದು ಸುಂಕ ಹಾಕಲಾಗಿತ್ತು. ಉಳಿದ ಶೇ 98ರಷ್ಟು ರೇಷ್ಮೆಯು ಕೇಂದ್ರದ ವಿವಿಧ ಯೋಜನೆ ಮತ್ತು ಸ್ಕೀಂಗಳ ಮೂಲಕ ಭಾರತಕ್ಕೆ ಹರಿದು ಬಂದಿದೆ’ ಎಂದು ಅಂಕಿ ಅಂಶಗಳ ಸಹಿತ ಮಾಹಿತಿ ತೆರೆದಿಟ್ಟಿದ್ದರು.ಇದೇ ವೇಳೆ ಅಧಿವೇಶನದಲ್ಲಿ ಪ್ರತಿಕ್ರಿಯಿಸಿದ್ದ ಶಾಸಕ ವೈ.ಕೆ.ರಾಮಯ್ಯ ಅವರು, ‘ಡಬ್ಲ್ಯುಟಿಒ ಅಂತಿಮ ಕರಾರು ಬಂದ ನಂತರದಿಂದ ಆಮದು ಶುಲ್ಕ ವಿಧಿಸುವ ಕೆಲಸ ನಡೆಯುತ್ತಿದೆ. ಕರಾರಿನ ಪ್ರಕಾರ ಗರಿಷ್ಠ ಶೇ 300ರಷ್ಟು ಆಮದು ಸುಂಕ ವಿಧಿಸಬಹುದು. ಆದರೆ ಅದನ್ನು ಶೇ 35ಕ್ಕೆ ನಿಗದಿಪಡಿಸಿದ್ದು ಏಕೆ. ಅದನ್ನೀಗ ಶೇ 30ಕ್ಕೆ ಇಳಿಸಿದ್ದೇಕೆ’ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.ನೇಕಾರರ ಲಾಬಿಗೆ ರೇಷ್ಮೆ ಕೃಷಿಕರು ಬಲಿ: ಇನ್ನು 2010ರಿಂದೀಚೆಗೆ ಕೇಂದ್ರ ಸರ್ಕಾರವು ವಿದೇಶಿ ರೇಷ್ಮೆ ನೂಲಿನ ಆಮದಿನ ಮೇಲೆ ವಿಧಿಸುವ ಆಮದು ಸುಂಕವನ್ನು ಪ್ರತಿ ಬಜೆಟ್‌ನಲ್ಲಿಯೂ ಏರಿಳಿತ ಮಾಡುತ್ತಿರುವುದು ರೇಷ್ಮೆ ರೈತರ ಬದುಕು ಮೂರಾಬಟ್ಟೆ ಆಗುವಂತೆ ಮಾಡಿದೆ.2011ರಲ್ಲಿ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರವು ರೇಷ್ಮೆ ಆಮದು ಸುಂಕವನ್ನು ಶೇ 30ರಿಂದ ಶೇ 5ಕ್ಕೆ ಇಳಿಸಿತು. ಇದಕ್ಕೆ ಬನಾರಸ್‌ ಮತ್ತು ಮುಂಬೈ ನೇಕಾರರು ಮತ್ತು ಜವಳಿ ವ್ಯಾಪಾರಿಗಳ ಲಾಬಿಯೇ ಕಾರಣ.ಇದರಿಂದ ರೇಷ್ಮೆ ಗೂಡಿನ ಬೆಲೆ ಪ್ರಪಾತಕ್ಕೆ ಇಳಿಯಿತು. ಮಿಶ್ರ ತಳಿ ಕೆ.ಜಿಗೆ ಗರಿಷ್ಠ ₹ 400 ಇದ್ದ ಬೆಲೆಯು ಏಕಾಏಕಿ ₹ 110ಕ್ಕೆ ಕುಸಿಯಿತು. ಇದನ್ನು ವಿರೋಧಿಸಿ ರಾಜ್ಯದ ವಿವಿಧ ಹೆದ್ದಾರಿಗಳಲ್ಲಿ ಗಂಟೆಗಟ್ಟಲೆ ರಸ್ತೆ ತಡೆ ರೈತರು ಮಾಡಿದರು.ರೈತರ ಪ್ರತಿಭಟನೆಯಿಂದಲೋ ಅಥವಾ ಲೋಕಸಭಾ ಚುನಾವಣೆ ಸಮೀಪಿಸಿತು ಎಂಬ ಕಾರಣಕ್ಕೋ ಕೇಂದ್ರದ ಯುಪಿಎ ಸರ್ಕಾರವು 2014ರಲ್ಲಿ ರೇಷ್ಮೆ ಆಮದು ನೀತಿಯನ್ನು ಶೇ 5ರಿಂದ ಶೇ 15ಕ್ಕೆ ಹೆಚ್ಚಿಸಿತ್ತು. ಇದರಿಂದ ಮಿಶ್ರ ತಳಿಯು ಸರಾಸರಿ ಕೆ.ಜಿಗೆ 318 (ಕನಿಷ್ಠ 150, ಗರಿಷ್ಠ 480)ಕ್ಕೆ ಏರಿತು. ಇದೇ ವೇಳೆ ದ್ವಿತಳಿ (ಬೈವೋಲ್ಟಿನ್‌) ಗೂಡು ಸರಾಸರಿ ಕೆ.ಜಿಗೆ ₹ 351 (ಕನಿಷ್ಠ 202, ಗರಿಷ್ಠ 561)ಕ್ಕೆ ಏರಿಕೆ ಆಯಿತು.  ಆದರೆ ಈ ಏರಿಕೆಯು ಅಲ್ಪ ಸಮಯದ್ದಾಯಿತು.ಏಕೆಂದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು 2015ರಲ್ಲಿ ಆಮದು ಸುಂಕವನ್ನು ಶೇ 15ರಿಂದ ಶೇ 10ಕ್ಕೆ ಇಳಿಸಿತು. ಇದರ ಪರಿಣಾಮ ಪುನಃ ದೇಶೀಯ ರೇಷ್ಮೆ ಗೂಡಿನ ಧಾರಣೆಯ ಮೇಲೆ ಬಿದ್ದಿತು. ಚನ್ನಪಟ್ಟಣ, ರಾಮನಗರ, ಕನಕಪುರ, ಕೊಳ್ಳೆಗಾಲ ಮಾರುಕಟ್ಟೆಯಲ್ಲಿ ರೀಲರ್‌ಗಳು ಕೆ.ಜಿಗೆ ಗೂಡಿಗೆ ಕೇವಲ ₹ 30, 40, 50ರಂತೆ ಹರಾಜು ಕೂಗಲಾರಂಭಿಸಿದರು.ಇದರಿಂದ ಆತಂಕಗೊಂಡ ರೈತರು ರಾಜ್ಯದ ವಿವಿಧೆಡೆ ರೇಷ್ಮೆ ಹರಾಜು ಬಹಿಷ್ಕರಿಸಿ ಗಂಟೆಗಟ್ಟಲೆ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ರಾಜ್ಯ ಸರ್ಕಾರ ರೇಷ್ಮೆ ಗೂಡು ಅಥವಾ ಕಚ್ಚಾ ರೇಷ್ಮೆಯ ಉತ್ಪಾದನೆಯ ಧಾರಣೆ ಹಾಗೂ ಮಾರಾಟ ವ್ಯವಸ್ಥೆಯ ಸಮಗ್ರ ಅಧ್ಯಯನಕ್ಕೆ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಡಾ. ಎಚ್‌. ಬಸವರಾಜ್‌ ಅವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿತು. ಈ ಸಮಿತಿಯು ವರದಿಯನ್ನು ನೀಡಿ ಎಂಟು ತಿಂಗಳಾದರೂ ಅದರಲ್ಲಿನ ಶಿಫಾರಸುಗಳ ಅನುಷ್ಠಾನಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿದೆ.

(ರೇಷ್ಮೆ ಹಿತರಕ್ಷಣಾ ಸಮಿತಿಯ ಸಂಚಾಲಕರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.