ಸೋಮವಾರ, ಮಾರ್ಚ್ 8, 2021
31 °C
ಮೂರನೇ ದಿನ ಪೂರೈಸಿದ ರೇಷ್ಮೆ ಬೆಳೆಗಾರರ ಸತ್ಯಾಗ್ರಹ: ನ್ಯಾಯಯುತ ಬೆಲೆ ನಿಗದಿಗೆ ಆಗ್ರಹ

ರೈತರ ಧರಣಿಯಲ್ಲಿ ಎತ್ತು, ಎಮ್ಮೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರ ಧರಣಿಯಲ್ಲಿ ಎತ್ತು, ಎಮ್ಮೆ!

ರಾಮನಗರ: ರೇಷ್ಮೆ ಬೆಳೆಗಾರರ ಸಂಕಷ್ಟ ಪರಿಹಾರಕ್ಕೆ ಒತ್ತಾಯಿಸಿ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯು ಬುಧವಾರ ಮೂರನೇ ದಿನ ಪೂರೈಸಿತು.ಧರಣಿಯಲ್ಲಿ ಭಾಗವಹಿಸುವ ಮೂಲಕ ಸ್ಫಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ಅವರು ಬೆಂಬಲ ವ್ಯಕ್ತಪಡಿಸಿದರು. ಮೂರನೇ ದಿನ ರೇಷ್ಮೆ ಬೆಳೆಗಾರರು ರೇಷ್ಮ ಮೊಟ್ಟೆಗಳನ್ನು ಹಿಡಿದು ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಹತ್ತು ನಿಮಿಷ ರಸ್ತೆ ತಡೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಎತ್ತು, ಎಮ್ಮೆಯೂ ಭಾಗಿ: ಎತ್ತು ಮತ್ತು ಎಮ್ಮೆಯನ್ನು ಪ್ರತಿಭಟನೆಗೆ ಕರೆತಂದಿದ್ದ ಧರಣಿ ನಿರತರು, ಎತ್ತುಗಳಿಗೆ ‘ನಾನು ರಾಮನಗರದ ಜಿಲ್ಲಾಡಳಿತ’, ‘ನಾನು ರೇಷ್ಮೆ ಇಲಾಖೆ’ ಎಂಬ ನಾಮಫಲಕವನ್ನು ಹಾಗೂ ಎಮ್ಮೆಗೆ ‘ನಾನು ರೈತ ವಿರೋಧಿ ರಾಜ್ಯ ಸರ್ಕಾರ’ ಎಂಬ ನಾಮಫಲಕವನ್ನು ತೊಗಲು ಹಾಕಿ ಸರ್ಕಾರದ ವಿರುದ್ಧ ಕಿಡಿಕಾರಿದರು.ಸ್ಫಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ಮಾತನಾಡಿ, ‘ಶಾಶ್ವತ ನೀರಾವರಿ ಕಲ್ಪಿಸದ, ದುಡಿಯುವ ರೈತರಿಗೆ ಕೆಲಸ ಒದಗಿಸದ, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸದ ಸರ್ಕಾರವು, ರಕ್ತ ಬಸಿದು ರೇಷ್ಮೆ ಉತ್ಪಾದಿಸುವ ರೈತರಿಗೆ ನ್ಯಾಯಯುತ ಬೆಲೆ ದೊರೆಕಿಸಿಕೊಡುವಲ್ಲಿಯೂ ವಿಫಲವಾಗಿದೆ.ಇದು ಎಲ್ಲ ರಾಜಕೀಯ ಪಕ್ಷಗಳಿಗೆ ನಾಚಿಕೆ ತರುವಂತಹ ವಿಚಾರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರೈತರು ಇದ್ದರೆ ಶಾಸಕರು ಮತ್ತು ಸಂಸದರು. ರೈತರ ಭಾವನೆಗಳನ್ನು ಈ ಜನಪ್ರತಿನಿಧಿಗಳು ಮೊದಲು ಅರಿತುಕೊಳ್ಳಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನ ಸೆಳೆದು ಶಾಶ್ವತವಾಗಿ ಸಮಸ್ಯೆ ಪರಿಹರಿಸುವ ಪ್ರಮಾಣಿಕ ಪ್ರಯತ್ನ ಪಡಬೇಕು’ ಎಂದು ಕಿವಿಮಾತು ಹೇಳಿದರು.ಆಮದು ಸುಂಕ ದುಪ್ಪಟ್ಟಾಗಬೇಕು: ‘ಇಪ್ಪತ್ತು ವರ್ಷಗಳ ಹಿಂದೆ ರೇಷ್ಮೆ ಗೂಡಿಗೆ ಇದ್ದಷ್ಟೇ ಬೆಲೆ ಈಗಲೂ ಇದೆ. ಆದರೆ, ಈ ಅವಧಿಯಲ್ಲಿ ದಿನಗೂಲಿ ಹಾಗೂ ದೈನಂದಿನ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇದನ್ನೆಲ್ಲ ಸರ್ಕಾರ ಪರಿಗಣಿಸಬೇಕು. ಕೇಂದ್ರ ಸರ್ಕಾರ ಆದಷ್ಟು ಬೇಗ ಆಮದು ಸುಂಕವನ್ನು ದುಪ್ಪಟ್ಟು ಹೆಚ್ಚಿಸಬೇಕು’ ಎಂದು ಅವರು ಒತ್ತಾಯಿಸಿದರು.ಕರುನಾಡ ಸೇನೆ ಸಂಘಟನೆಯ ಗೌರವ ಅಧ್ಯಕ್ಷರೂ ಆಗಿರುವ ಹಿರಿಯ ಸಿನಿಮಾ ನಿರ್ದೇಶಕ ಸಿ.ವಿ. ಶಿವಶಂಕರ್‌ ಮಾತನಾಡಿ, ಕೃಷಿ ಪ್ರಧಾನ ದೇಶದಲ್ಲಿ ಕೃಷಿಕರ ಸ್ಥಿತಿ ಶೋಚನೀಯವಾಗಿದೆ. ಇದಕ್ಕೆ ಆಡಳಿತ ವರ್ಗ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

ಕರುನಾಡ ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಜಗದೀಶ್‌ ಮಾತನಾಡಿ, ರೈತ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಸರ್ಕಾರ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎಂ. ರಾಮು, ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ, ಮುಖಂಡರಾದ ಸಿ. ಪುಟ್ಟಸ್ವಾಮಿ, ಕುಮಾರಸ್ವಾಮಿ, ಮಹೇಂದ್ರ, ಗೌತಮ್‌ ಗೌಡ, ಚಿಕ್ಕಬೈರೇಗೌಡ, ಟಿ. ಕೃಷ್ಣಪ್ಪ, ವಾಸು, ಕೀರಣಗೆರೆ ಜಗದೀಶ್‌,  ಇದ್ದರು. ರಾಜೀವ್‌ ಗಾಂಧಿ ಪುರದ ಮಹಿಳೆಯರು   ಭಾಗವಹಿಸಿದ್ದರು.‘ಕೇಂದ್ರ ಸರ್ಕಾರವು ವಿದೇಶಿ ರೇಷ್ಮೆ ನೂಲಿನ ಮೇಲೆ ಹೇರಿರುವ ಆಮದು ಸುಂಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಸಂಸದರು ಪ್ರಯತ್ನಿಸಬೇಕು.

ನಂಜಾವಧೂತ ಸ್ವಾಮೀಜಿ,ಸ್ಫಟಿಕಪುರಿ ಮಹಾಸಂಸ್ಥಾನ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.