ಶುಕ್ರವಾರ, ಮೇ 27, 2022
31 °C

ರೈತರ ಬತ್ತ ಕದಿಯುತ್ತಿದ್ದ ಕಳ್ಳ ವ್ಯಾಪಾರಿಗಳು

ಪೂರ್ವೀ Updated:

ಅಕ್ಷರ ಗಾತ್ರ : | |

ಯಾವ ಕಾಲದಲ್ಲಿ ಯಾವ ರಾಜನಾದರೂ ಆಳುತ್ತಿರಲಿ, ಮಂತ್ರಿಗಳು, ಅಧಿಕಾರಿಗಳು, ಪುರೋಹಿತರಂತೆ ವ್ಯಾಪಾರಿಗಳೂ ಬಹಳ ಪ್ರಾಮುಖ್ಯ ಪಡೆದಿರುತ್ತಾರೆ.   ಕನ್ನಡಕ್ಕೆ ಬಂದ `ವಡ್ಡಾರಾಧನೆ~ ಯ ಕಥೆಗಳಲ್ಲಿ ಈ ವ್ಯಾಪಾರಿ ವರ್ಗದ ವರ್ಣನೆ ತುಂಬಾ ಸ್ವಾರಸ್ಯಕರವಾಗಿದೆ. ಪ್ರಾಚೀನ ಕಾಲದ ಜನಜೀವನ, ಆರ್ಥಿಕ ವ್ಯವಸ್ಥೆಗೆ ಈ ವರ್ಣನೆಗಳೇ ಕನ್ನಡಿ ಹಿಡಿಯುತ್ತವೆ.ವ್ಯಾಪಾರ ಅಂದಮೇಲೆ ಊರೂರು ಸಂಚಾರ, ಹೊರನಾಡಿನ ಸಂಚಾರಗಳು ಆ ಕಾಲದಲ್ಲೂ ವ್ಯಾಪಾರಿಗಳಿಗೆ ಸಾಮಾನ್ಯವಾಗಿದ್ದವು. ಬತ್ತದಿಂದ ಹಿಡಿದು ಮುತ್ತುರತ್ನದವರೆಗೆ ವೈವಿಧ್ಯಮಯ ಸರಕು ವ್ಯಾಪಾರದಲ್ಲಿ ಇರುತ್ತಿದ್ದವು. ಒಂದು ಕಥೆಯಲ್ಲಿ ಹೇಳುವಂತೆ, ಅರಸನನ್ನು ಭೇಟಿಯಾಗಲು ಅರಣ್ಯಗಳಿಂದ ಬೇಡನಾಯಕರು ಆಗಾಗ ಬರುತ್ತಿದ್ದರು.ಬರಿಗೈಲಿ ಬರದೆ ಆನೆಯ ದಂತಗಳು, ಮುತ್ತುಗಳು, ಹುಲಿಯ ಚರ್ಮಗಳು, ಚಮರಿಗಳನ್ನು ತಂದು ರಾಜನಿಗೆ ಅರ್ಪಿಸುತ್ತಿದ್ದರು. ರಾಜ ಈ ಕಾಣಿಕೆಗಳನ್ನು ವ್ಯಾಪಾರಿಗಳಿಗೆ ಕೊಡುತ್ತಿದ್ದ. ಅವರು ಹೊರದೇಶಗಳಿಗೆ ಹೋಗಿ ಇವುಗಳನ್ನು ಮಾರಿ, ಅಲ್ಲಿಂದ ಅಮೂಲ್ಯ ರತ್ನಗಳು, ಸುಗಂಧ ವಸ್ತುಗಳನ್ನು ತಂದು ರಾಜನಿಗೆ ಒಪ್ಪಿಸುತ್ತಿದ್ದರು.

ಇನ್ನೊಂದು ಕಥೆಯಲ್ಲಿ ರತ್ನದ್ವೀಪ ಎಂಬ ಹೊರದೇಶದ ವ್ಯಾಪಾರಿಗಳು ತಂದ ಒಂದು ರತ್ನಗಂಬಳಿಯನ್ನು ಕೊಳ್ಳಲು ಅರಸನ ಬಳಿ ಹಣವೇ ಇರಲಿಲ್ಲ. ಆದರೆ ಆ ಊರಿನ ಶ್ರೀಮಂತ ವ್ಯಾಪಾರಿಯ ಹೆಂಡತಿ ಅದನ್ನು ಸಲೀಸಾಗಿ ಕೊಂಡು ತನ್ನ ಸೊಸೆಯರಿಗೆ ಹರಿದು ಹಂಚಿದಳು. ಈ ವ್ಯಾಪಾರಿಯ ಮಗನ ಸಿರಿವಂತಿಕೆ ಕಂಡ ರಾಜ `ಅಯ್ಯೋ ಇವನ ಕ್ಷಣಮಾತ್ರದ ಭೋಗಕ್ಕೆ, ಸುಖಕ್ಕೆ ನನ್ನೆಲ್ಲಾ ಅರಸುತನ ಸಮನಲ್ಲ~ ಎಂದು ಕೊರಗುತ್ತಾನೆ. ಅನೇಕ ವ್ಯಾಪಾರಿಗಳು ರಾಜರಿಗಿಂತ ಶ್ರೀಮಂತರಾಗಿರುತ್ತಿದ್ದರು, ಕೆಲವೊಮ್ಮೆ ಅರಮನೆಗೇ ಸಾಲ ಕೊಡುತ್ತಿದ್ದರು.ಈ ವ್ಯಾಪಾರಿಗಳು ನಾಡಿನಿಂದ ನಾಡಿಗೆ ಸಂಚರಿಸುತ್ತಾ ಅಲ್ಲಿನ ರಾಜರು, ಹಣವಂತರನ್ನು ಭೇಟಿ ಮಾಡಿ ಅವರಿಗೆ ತಮ್ಮ ಸರಕು ಮಾರುತ್ತಿದ್ದರು. ಅವರೆಲ್ಲ ಸದಾ ಗುಂಪುಗಳಲ್ಲೇ ಸಂಚರಿಸುತ್ತಿದ್ದರು. ಆದರೂ ಅವರಿಗೆ ದರೋಡೆಕೋರರ, ಕಳ್ಳರ ಕಾಟ ತಪ್ಪುತ್ತಿರಲಿಲ್ಲ. ಕಾಡುಗಳಲ್ಲಿ ವ್ಯಾಪಾರಿಗಳ ಬಂಡಿಗಳಿಗೇ ಕಾದು ಕುಳಿತಿರುತ್ತಿದ್ದ ಕಳ್ಳರು ಅವರನ್ನು ಅಡ್ಡಗಟ್ಟಿ ದೋಚುತ್ತಿದ್ದರು.ಬಂಡಿಗಳಲ್ಲದೆ ಎತ್ತುಗಳನ್ನೂ ಕದ್ದೊಯ್ಯುತ್ತಿದ್ದರು. ರಾಜರ ರಕ್ಷಣೆ ಇದ್ದರೂ ಕಳ್ಳರ ಹೊಡೆತ, ಇರಿತದಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳುವುದು ವ್ಯಾಪಾರಿಗಳಿಗೆ ತುಂಬಾ ಕಷ್ಟವಾಗಿ, ಅವರ ಜೀವನ ಸದಾ ಅಪಾಯದಲ್ಲಿ ಇರುತ್ತಿತ್ತು ಎಂದು ಕಥೆಗಳು ಹೇಳುತ್ತವೆ.ವ್ಯಾಪಾರ ಮಾಡುವುದರಲ್ಲಿ ವಂಚನೆ ಇಲ್ಲದಿದ್ದರೆ ಹೇಗೆ? ಒಂದು ಕಥೆಯಲ್ಲಿ ಹೇಳುವ ಹಾಗೆ ವ್ಯಾಪಾರಿಗಳು ಗೌಡರಿಂದ ಬತ್ತ ಮತ್ತು ಇತರ ಧಾನ್ಯಗಳನ್ನು ಕೊಂಡು ಬೇರೆ ಊರುಗಳಿಗೆ ಹೋಗಿ ಅದನ್ನು ಮಾರಿ ಲಾಭ ಗಳಿಸುತ್ತಿದ್ದರು. ಆ ಕಾಲಕ್ಕೂ ಬೆಳೆದವನಿಗೆ ಏನೂ ಸಿಗುತ್ತಿರಲಿಲ್ಲ. ಅದರ ಮೇಲೆ ವ್ಯಾಪಾರಿಗಳ ಮೋಸ ಬೇರೆ! ಈ ಕಳ್ಳ ವ್ಯಾಪಾರಿಗಳು ಬತ್ತ ಮಾರಲು ಬರುವ ಹಳ್ಳಿಯ ಗೌಡರಿಗೆ ಚಿತ್ರಪಟಗಳನ್ನು ತೋರಿಸಿ ಕಥೆ ಹೇಳಿ, ಅವರ ಗಮನವನ್ನು ಬೇರೆ ಕಡೆಗೆ ಸೆಳೆದು ಬತ್ತವನ್ನು ಕಳ್ಳತನದಿಂದ ಸಾಗಿಸಿಬಿಡುತ್ತಿದ್ದರಂತೆ. ಆದರೆ ರಾಜನಾದವನು ರೈತರ ರಕ್ಷಣೆಯನ್ನೂ ಮಾಡಬೇಕಲ್ಲ? ಬತ್ತ ಕದಿಯುವ ಇಲ್ಲವೇ ವ್ಯವಹಾರದಲ್ಲಿ ಮೋಸ ಮಾಡುವ ಕಳ್ಳ ವ್ಯಾಪಾರಿಗಳು ಸಿಕ್ಕಿ ಬಿದ್ದರೆ ಅವರನ್ನು ಶೂಲಕ್ಕೆ ಏರಿಸುತ್ತಿದ್ದನಂತೆ.ಕೆಲವು ನಗರಗಳಲ್ಲಿ ಶ್ರೇಷ್ಠಿಗಳು ಆಳುವ ರಾಜರಿಗಿಂತ ದೊಡ್ಡ ಭವನಗಳಲ್ಲಿ ವಾಸ ಮಾಡುತ್ತಿದ್ದರು. ಇವರಿಗೆ ಕಣ್ಸೆಳೆಯುವ ಸೌಂದರ್ಯದ ಹೆಣ್ಣುಮಕ್ಕಳು ಇದ್ದರೆ ರಾಜರು ಒತ್ತಾಯಿಸಿ ಮದುವೆಯಾಗುತ್ತಿದ್ದರು. ಶ್ರೇಷ್ಠಿಗಳಿಗೆ ಸುಂದರ ಪತ್ನಿಯರಿದ್ದರೆ ರಾಜರು ಅಪಹರಿಸುತ್ತಿದ್ದರು ಎಂದು ಕಥೆಗಳು ಹೇಳುತ್ತವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.