ಮಂಗಳವಾರ, ಆಗಸ್ಟ್ 4, 2020
24 °C

ರೈತರ ಹೋರಾಟ ಹಿಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರ ಹೋರಾಟ ಹಿಂದಕ್ಕೆ

ಧಾರವಾಡ: ರೈತರ ಸಾಲ ಮನ್ನಾ ಮಾಡಬೇಕು, ತಾತ್ಕಾಲಿಕ ಪಡಿತರ ಚೀಟಿಗಳ ಬದಲಾಗಿ ಕಾಯಂ ಪಡಿತರ ಚೀಟಿಗಳನ್ನು ವಿತರಿಸಬೇಕು, ಬೆಳೆ ವಿಮೆ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮಾಜಿ ಶಾಸಕ ವಿನಯ ಕುಲಕರ್ಣಿ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು, ಬೇಡಿಕೆ ಈಡೇರಿಸುವ ಬಗ್ಗೆ ಜಿಲ್ಲಾಧಿಕಾರಿ ದರ್ಪಣ ಜೈನ್ ನೀಡಿದ ಭರವಸೆ ಹಿನ್ನೆಲೆಯಲ್ಲಿ ಬುಧವಾರ ಹಿಂದಕ್ಕೆ ಪಡೆಯಲಾಯಿತು.ಈ ನಿರ್ಧಾರವನ್ನು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ವಿನಯ ಕುಲಕರ್ಣಿ, “ನಮ್ಮ ಬೇಡಿಕೆಗಳಲ್ಲಿ ತಮ್ಮ ವ್ಯಾಪ್ತಿಗೊಳಪಡುವ ಕೆಲವನ್ನು ಈಡೇರಿಸಲು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆಯನ್ನು ನಿವಾರಿಸಲು ಹೆಸ್ಕಾಂಗೆ ಸೂಚಿಸುವುದಾಗಿ ತಿಳಿಸಿದ್ದು, ಪಡಿತರ ಚೀಟಿಗಳನ್ನು ಕಾಯಂಗೊಳಿಸಲು ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿಯೂ ತಿಳಿಸಿದ್ದಾರೆ.ಬೆಳೆ ವಿಮೆ ಈಗಾಗಲೇ ಬಿಡುಗಡೆ ವಿಷಯ ಸರ್ಕಾರದ ಮಟ್ಟದಲ್ಲಿ ಇತ್ಯರ್ಥವಾಗಬೇಕಿದ್ದು, ಆ ಬಗ್ಗೆ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಲಿರುವ ಜಗದೀಶ ಶೆಟ್ಟರ್ ಅವರು ನಗರಕ್ಕೆ ಬಂದ ಕೂಡಲೇ ಅವರಿಗೆ ನಮ್ಮ ಬೇಡಿಕೆಗಳನ್ನು ತಿಳಿಸಿ ಮಾತುಕತೆ ಏರ್ಪಡಿಸುವುದಾಗಿ ತಿಳಿಸಿದ್ದಾರೆ. ಇದು ಹೋರಾಟದ ಯಶಸ್ಸಲ್ಲ. ಆದರೆ ಆಗಸ್ಟ್ 15ರವರೆಗೆ ಬೇಡಿಕೆ ಈಡೇರಲು ಗಡುವು ನೀಡಿ ಅಹೋರಾತ್ರಿ ಧರಣಿ ಹಿಂದಕ್ಕೆ ಪಡೆಯುತ್ತಿದ್ದೇವೆ” ಎಂದು ತಿಳಿಸಿದರು.ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರು. ಬಹುತೇಕ ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ರೈತರ ಸಭೆಯಲ್ಲಿ ಭರವಸೆ ನೀಡಿದ ಸಂಗತಿಗಳನ್ನೇ ಅವರು ಇಲ್ಲಿಯೂ ಪುನರುಚ್ಚರಿಸಿದರು. ಅದಕ್ಕೂ ಮುನ್ನ ಎಸಿಪಿ ಸಂಜೀವ್ ಪಾಟೀಲ ಅವರೂ ಮಾತುಕತೆ ನಡೆಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, “ಕಳಸಾ-ಬಂಡೂರಿ ಹಾಗೂ ಬೆಣ್ಣಿಹಳ್ಳಕ್ಕೆ ಶಾಶ್ವತ ಯೋಜನೆಗಳನ್ನು ರೂಪಿಸಲು ಭಾವಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಮ್ಮ ಪ್ರಥಮ ಸಚಿವ ಸಂಪುಟದಲ್ಲಿಯೇ ನಿರ್ಧಾರ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.ಕಾಣದ ಕಾಂಗ್ರೆಸ್ ಮುಖಂಡರು


ಮಾಜಿ ಶಾಸಕ ವಿನಯ ಕುಲಕರ್ಣಿ ನೇತೃತ್ವದಲ್ಲಿ ನಡೆದ ರೈತರ ಹೋರಾಟಕ್ಕೆ ಕಾಂಗ್ರೆಸ್ಸಿಗರಿಂದಲೇ ಅಗತ್ಯ ಬೆಂಬಲ ವ್ಯಕ್ತವಾಗಲಿಲ್ಲ. ಅಮ್ಮಿನಭಾವಿಯಿಂದ ಧಾರವಾಡದವರೆಗೆ ಮೊದಲ ದಿನ ನಡೆದ ಪಾದಯಾತ್ರೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಬಳಿ ಬಂದು ಮಾಜಿ ಸಚಿವ ಎಸ್.ಆರ್.ಮೋರೆ ಭಾಷಣ ಮಾಡಿದ್ದರಷ್ಟೇ. ಬರ ಕಾಮಗಾರಿಗೆ ಆಗ್ರಹಿಸಿ ಬೃಹತ್ ರೈತ ಹೋರಾಟ ಸಂಘಟಿಸಿದ್ದ ಕಲಘಟಗಿ ಶಾಸಕ ಸಂತೋಷ ಲಾಡ್ ಅವರೂ ಬರಲಿಲ್ಲ. ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಪಾಲಿಕೆ ಸದಸ್ಯ     ರಾಮಣ್ಣ ಸವದತ್ತಿ ಅವರನ್ನು ಹೊರತುಪಡಿಸಿದರೆ ಬಹುತೇಕ ಕಾಂಗ್ರೆಸ್ಸಿಗರು ಪ್ರತಿಭಟನೆಯಿಂದ ದೂರ ಉಳಿದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.