ಗುರುವಾರ , ಜೂನ್ 24, 2021
27 °C

ರೈಲ್ವೆ ಬಜೆಟ್: ಅಭಿಪ್ರಾಯಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ರಾಜ್ಯಕ್ಕೆ ಸಮಾಧಾನವಿಲ್ಲ~

ಎಲ್ಲ ದರ್ಜೆಯ ಪ್ರಯಾಣ ದರವನ್ನೂ ಹೆಚ್ಚಳ ಮಾಡಿರುವುದೇ ರೈಲ್ವೆ ಬಜೆಟ್‌ನ ಕೊಡುಗೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಶ್ರೀಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಆಗಲಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ರಾಜ್ಯಕ್ಕೆ ಸಮಾಧಾನಕರ ರೀತಿಯ ಅನುದಾನ ನೀಡಲಾಗಿತ್ತು. ಆದರೆ, ಈ ಬಾರಿ ಸಮಾಧಾನಪಡುವ ಸ್ಥಿತಿ ಇಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಅನುದಾನ ಮಾತ್ರ ನೀಡಲಾಗಿದೆ.ರಾಜ್ಯದವರೇ ಆದ ಕೆ.ಎಚ್.ಮುನಿಯಪ್ಪ ಅವರು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರೂ ಕರ್ನಾಟಕಕ್ಕೆ ಬಜೆಟ್‌ನಲ್ಲಿ ನ್ಯಾಯ ದೊರೆತಿಲ್ಲ. 2011-12ರ ಬಜೆಟ್‌ನಲ್ಲಿ ದೊರೆತ ಅನುದಾನಕ್ಕಿಂತಲೂ ಹೆಚ್ಚು ಮೊತ್ತ ಪಡೆಯಲು ಅವರು ಪ್ರಯತ್ನಿಸಬೇಕು.

 - ಕೆ.ಎಸ್.ಈಶ್ವರಪ್ಪ,  ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು

`ಶ್ರೀಸಾಮಾನ್ಯನಿಗೆ ಬರೆ~

ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಪ್ರಯಾಣ ದರ ಹೆಚ್ಚಿಸುವ ಮೂಲಕ ಶ್ರೀಸಾಮಾನ್ಯರ ಮೇಲೆ ಬರೆ ಎಳೆದಿದ್ದಾರೆ. ಜನರು ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿದ್ದಾರೆ. ಈಗ ರೈಲ್ವೆ ಪ್ರಯಾಣ ದರವೂ ಹೆಚ್ಚಳ ಆಗಿರುವುದರಿಂದ, ಅದು ಎಲ್ಲ ವಸ್ತುಗಳ ಬೆಲೆಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಜನರು ಮತ್ತಷ್ಟು ಹೊರೆ ಅನುಭವಿಸ ಬೇಕಾಗುತ್ತದೆ.ರಾಜ್ಯದಲ್ಲಿ ಈಗಾಗಲೇ ಇರುವ ಮಾರ್ಗಗಳಲ್ಲಿ ಹೊಸ ರೈಲುಗಳನ್ನು ಓಡಿಸುವ ಘೋಷಣೆ ಮಾತ್ರ ಕರ್ನಾಟಕದ ಪಾಲಿಗೆ ದೊರೆತಿದೆ. ಇದು ದೊಡ್ಡ ಸಾಧನೆ ಅಲ್ಲ. ಇದರಿಂದ ರಾಜ್ಯದ ಜನರಿಗೆ ಹೆಚ್ಚಿನ ಅನುಕೂಲವೂ ಆಗುವುದಿಲ್ಲ. ದೇಶದ ರೈಲ್ವೆ ಸಂಪರ್ಕ ನಕ್ಷೆಯಲ್ಲಿ ಕರ್ನಾಟಕಕ್ಕೆ ಸ್ಥಾನ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ. ರಾಜ್ಯದ ಪಾಲಿಗೆ ಈ ಬಜೆಟ್ ನಿರಾಶಾದಾಯಕ.

 - ಎಚ್.ಡಿ.ಕುಮಾರಸ್ವಾಮಿ,  ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರು

`ಸ್ವಾಗತಾರ್ಹ ಬಜೆಟ್~

ರಾಜ್ಯದಲ್ಲಿ 10 ಹೊಸ ರೈಲುಗಳನ್ನು ಓಡಿಸುವ ಘೋಷಣೆ, ಕೋಲಾರದಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪನೆಯ ನಿರ್ಧಾರ ಸ್ವಾಗತಾರ್ಹ.ಕಳೆದ 10 ವರ್ಷಗಳಿಂದ ರೈಲ್ವೆ ಪ್ರಯಾಣ ದರ ಏರಿಸಿರಲಿಲ್ಲ. ನಿರ್ವಹಣಾ ವೆಚ್ಚದಲ್ಲಿ ಸಹಜವಾಗಿಯೇ ಏರಿಕೆ ಆಗಿರುವ ಕಾರಣ, ಪ್ರಯಾಣ ದರದಲ್ಲಿ ತುಸು ಹೆಚ್ಚಳ ಮಾಡಲಾಗಿದೆ.  ಈ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕ. ಸರ್ಕಾರ ನೂತನ ಯೋಜನೆಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು.

 - ಡಾ.ಜಿ. ಪರಮೇಶ್ವರ್,  ಕೆಪಿಸಿಸಿ ಅಧ್ಯಕ್ಷರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.