ಭಾನುವಾರ, ಮೇ 16, 2021
29 °C
ಡಿಎಚ್‌ಒ ಡಾ.ಶಿವಣ್ಣ ರೆಡ್ಡಿ ಎಚ್ಚರಿಕೆ

`ರೋಗಿಗಳು ಸೇವಕರಲ್ಲ; ನೀವು ರಾಜರಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: `ರೋಗಿಗಳು ಸೇವಕರಲ್ಲ; ನೀವು ರಾಜರಲ್ಲ. ಕನಿಷ್ಠ ಅವರನ್ನು ಮನುಷ್ಯರಂತೆ ಉಪಚರಿಸಿ' -ಇದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಣ್ಣರೆಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ವಿಚಾರರಿಗೆ ಮಾಸಿಕ ಸಭೆಯಲ್ಲಿ ನೀಡಿದ ಸಲಹೆ.ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮೇಲ್ವಿ ಚಾರಕರನ್ನು ಅವರು ತರಾಟೆ ತೆಗೆದುಕೊಂಡರು.`ಆಸ್ಪತ್ರೆಗೆ ಬರುವ ರೋಗಿಗಳನ್ನು ಕೆಲವು ಕಡೆ ಭಿಕ್ಷುಕರಂತೆ ನೋಡಲಾಗುತ್ತಿದೆ. ಹಾಗಾದರೆ, ಅವರು ಆಸ್ಪತ್ರೆಗೆ ಬರುವುದು ಬೇಡವೇ? ಶಿರಾಳಕೊಪ್ಪದಲ್ಲಿ ಮಹಿಳೆಯೊಬ್ಬರು ಓಲೆ ಮಾರಿ ತಮ್ಮ ಮಕ್ಕಳಿಗೆ ಜ್ವರಕ್ಕೆ ಔಷಧ ಕೊಡಿಸಿದ ಬಗ್ಗೆ ಹೇಳಿಕೊಂಡರು. ಈ ಆಸ್ಪತ್ರೆಯಲ್ಲಿ ಔಷಧ ದಾಸ್ತಾನು ಇದೆ. ಆದರೂ ಔಷಧವನ್ನು ಹೊರಗಡೆಯಿಂದ ಬರಲಾಗಿದೆ. ಹಾಗಾದರೆ ನಮ್ಮ ಆಸ್ಪತ್ರೆಗಳು ಅಷ್ಟೊಂದು ಕೆಟ್ಟು ಹೋಗಿವೆಯೇ? ಇಂತಹ ದೂರುಗಳ ಬಗ್ಗೆ ಕ್ರಮ ಕೈಗೊಳ್ಳುವುದು ಕಷ್ಟವಲ್ಲ; ಆದರೆ, ನೀವು ಮನುಷ್ಯರಂತೆ ಯೋಚಿಸಿ, ಕನಿಷ್ಠ ಮಾನವೀಯತೆಯಿಂದ ನೋಡಿ' ಎಂದು ಎಚ್ಚರಿಕೆ ನೀಡಿದರು.ಭದ್ರಾವತಿ ಕಡದಕಟ್ಟೆಯಲ್ಲಿ ಅರ್ಧ ಬಿದ್ದು ಹೋದ ಆಸ್ಪತ್ರೆ ಗೋಡೆಗೆ ಕಳೆದ ಐದು ವರ್ಷಗಳಿಂದ ಬಣ್ಣ ಹೊಡೆಯುವ ಹೆಸರಿನಲ್ಲಿ ಬಿಲ್ಲು ಮಾಡಲಾಗುತ್ತಿದ್ದು, ಅದನ್ನು ಗಮನಿಸಿ ಈ ಬಾರಿ ತಡೆ ಹಿಡಿದಿದ್ದೇನೆ. ಕನಿಷ್ಠ ಈ ಸಣ್ಣ ಸೂಕ್ಷ್ಮವೂ ನಿಮಗಿಲ್ಲವೇ? ಎಂದು ಸಂಬಂಧಪಟ್ಟ ಮೇಲ್ವಿಚಾರಕರನ್ನು ತರಾಟೆ ತೆಗೆದುಕೊಂಡರು.ಶಿರಾಳಕೊಪ್ಪದಲ್ಲಿ ವೈದ್ಯರು ಆಸ್ಪತ್ರೆ ಸಮೀಪವೇ ತಮ್ಮ ಸ್ವಂತ ಕ್ಲಿನಿಕ್ ಆರಂಭಿಸಿದ್ದಾರೆ. 24 ಗಂಟೆಗಳೂ ಅಲ್ಲಿ ಕೆಲಸ ಮಾಡುವ ಅವರು ಕನಿಷ್ಠ ದಿನಕ್ಕೆ ನಾಲ್ಕು ಗಂಟೆಯಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದು ಬೇಡವೇ? ಡೆಂಗೆ ಜ್ವರ ಇರುವಂತಹ ಸಮಯದಲ್ಲೂ ಈ ರೀತಿ ವರ್ತಿಸಿದರೆ ಸರ್ಕಾರಿ ವ್ಯವಸ್ಥೆ ಇರುವುದು ಯಾರಿಗಾಗಿ? ಎಂದು ಪ್ರಶ್ನಿಸಿದರು.108 ಆ್ಯಂಬುಲೆನ್ಸ್ ಸಿಬ್ಬಂದಿ, ರೋಗಿಗಳಿಂದ ಬಲವಂತವಾಗಿ ಹಣ ಕೇಳುತ್ತಾರೆಂಬ ದೂರು ಗಳಿವೆ. ಈ ಬಗ್ಗೆ ಸಿಬ್ಬಂದಿ ಜತೆ ಮಾತನಾಡಿ, ಅವರ ಸಮಸ್ಯೆಗಳನ್ನು ಆಲಿಸಿ ವರದಿ ನೀಡುವಂತೆ ಸಂಬಂಧಪಟ್ಟ ತಾಲ್ಲೂಕು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.ಆರೋಗ್ಯ ಇಲಾಖೆ `ಸಕಾಲ' ಯೋಜನೆ ಜಾರಿಯಲ್ಲಿ ಕನಿಷ್ಠಮಟ್ಟದ ಪ್ರಗತಿ ತೋರಿಸಿದೆ. ಈ ಬಗ್ಗೆ ಇಲಾಖಾ ಕಾರ್ಯದರ್ಶಿಗಳು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಮಾಹಿತಿ ಹಕ್ಕು ಅಡಿ ಮಾಹಿತಿ ಕೇಳಿದ ಸಾರ್ವಜನಿಕರನ್ನು ವೈರಿಗಳಂತೆ ಕಾಣಬೇಡಿ.ಮಾಹಿತಿ ನೀಡಲು ಸಾಧ್ಯವಾಗದಿದ್ದರೆ ಸಂಕ್ಷಿಪ್ತವಾಗಿ ಪ್ರಶ್ನೆಗಳನ್ನು ಕೇಳಿ ಎಂದು ಅವರಿಗೆ ಸಲಹೆ ಮಾಡಿ. ಅದಕ್ಕೆ ಸಾಕಷ್ಟು ಕಾಲಾವಕಾಶ ಇರುತ್ತದೆ. ಯಾವುದೇ ಕಾರಣಕ್ಕೂ ಮಾಹಿತಿ ನೀಡಲು ಸಾಧ್ಯವೇ ಇಲ್ಲ ಎಂಬ ಮಾತುಗಳನ್ನು ಆಡಬೇಡಿ ಎಂದರು.ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಘುನಂದನ್, ಜಿಲ್ಲಾ ಎಚ್‌ಐವಿ ಮತ್ತು ಏಡ್ಸ್ ನಿಯಂತ್ರಣ ಘಟಕ ಅಧಿಕಾರಿ ಡಾ.ದಿನಕರ್, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾ ಧಿಕಾರಿ ಡಾ.ರಾಥೋಡ್, ಎನ್‌ಆರ್‌ಎಂ ಅಧಿಕಾರಿ ಡಾ.ಮಧು ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.