ಸೋಮವಾರ, ಮೇ 25, 2020
27 °C

ಲಂಕಾ ನೌಕಾಪಡೆಗೆ ಪ್ರಣವ್ ಮುಖರ್ಜಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ತಮಿಳುನಾಡಿನ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಗುಂಡಿನ ದಾಳಿ ನಡೆಸಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಭಾರತೀಯ ಮೀನುಗಾರರನ್ನು ಗುಂಡಿಟ್ಟು ಕೊಲ್ಲಬೇಡಿ; ಒಂದು ವೇಳೆ ಅವರು ತಪ್ಪು ಮಾಡಿದ್ದರೆ ಬಂಧಿಸಿ ಎಂದು ಅಲ್ಲಿನ ರಕ್ಷಣಾ ಪಡೆಯನ್ನು ಭಾನುವಾರ ಕೇಳಿಕೊಂಡಿದ್ದಾರೆ.ಮೀನುಗಾರರ ಹತ್ಯೆ ಕುರಿತಂತೆ ಭಾನುವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖರ್ಜಿ, ‘ಮೀನುಗಾರರನ್ನು ಗುಂಡಿಟ್ಟು ಕೊಲ್ಲುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಹೇಳಿದರು.ಭಾರತೀಯ ಮೀನುಗಾರರನ್ನು ಗುಂಡಿಟ್ಟು ಹತ್ಯೆ ಮಾಡುವುದನ್ನು ನಿಲ್ಲಿಸಬೇಕು ಎಂದು ಲಂಕಾ ನೌಕಾ ಪಡೆಗೆ ಮನವಿ ಮಾಡಿರುವ ಅವರು,  ಒಂದು ವೇಳೆ ಮೀನುಗಾರರು ಅಂತರರಾಷ್ಟ್ರೀಯ ಸಾಗರ ಗಡಿ ಉಲ್ಲಂಘನೆ ಸೇರಿದಂತೆ ಬೇರೆ ತಪ್ಪುಗಳನ್ನು ಮಾಡಿದರೆ, ಅವರನ್ನು ಬಂಧಿಸಬೇಕು ಮತ್ತು  ಅದಕ್ಕಾಗಿಯೇ ಇರುವ ನಿರ್ದಿಷ್ಟ ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.ಈ ವಿಚಾರವನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತರುತ್ತೇನೆ. ಬಳಿಕ ಸಚಿವಾಲಯವು ಇಂತಹ ಘಟನೆಗಳು ಮರುಕಳಿಸಿದಂತೆ ಮಾಡುವ ಸಂಬಂಧ ಶ್ರೀಲಂಕಾ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಭರವಸೆಯನ್ನು ತಾವು ಕರುಣಾನಿಧಿ ಅವರಿಗೆ ನೀಡಿರುವುದಾಗಿ ಮುಖರ್ಜಿ ತಿಳಿಸಿದರು.ಜನವರಿ 12ರಂದು ಪಾಕ್ ಜಲಸಂಧಿಯಲ್ಲಿ ತಮಿಳುನಾಡಿನ ಮೂವರು ಮೀನುಗಾರರ ಮೇಲೆ ಶ್ರೀಲಂಕಾದ ನೌಕಾಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ತಮಿಳುನಾಡಿನ ಒಬ್ಬ ಮೃತಪಟ್ಟಿದ್ದ. ಈ ಪ್ರಕರಣವನ್ನು ಖಂಡಿಸಿದ್ದ ಭಾರತ ಶ್ರೀಲಂಕಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.