ಸೋಮವಾರ, ಜೂನ್ 21, 2021
29 °C

ಲಂಚ: ಸರ್ಜಾಪುರ ಎಸ್‌ಐ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೂಜು ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ಆರೋಪಿಯ ಮೋಟಾರ್ ಬೈಕ್ ವಾಪಸ್ ನೀಡಲು 30 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸರ್ಜಾಪುರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎಂ.ರಾಘವೇಂದ್ರ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.ಇತ್ತೀಚೆಗೆ ಒಂದು ದಿನ ಸರ್ಜಾಪುರ ಠಾಣೆಯ ವ್ಯಾಪ್ತಿಯಲ್ಲಿ ಜೂಜು ನಡೆಯುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಅಲ್ಲಿನ ಪೊಲೀಸರು, ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳ ವಾಹನಗಳನ್ನೂ ವಶಪಡಿಸಿಕೊಂಡಿದ್ದರು. ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದ ನ್ಯಾಯಾಲಯ, ವಾಹನಗಳನ್ನು ಮರಳಿಸುವಂತೆ ಆದೇಶಿಸಿತ್ತು.. ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದ ರಾಜಪ್ಪ ಎಂಬುವರು, ನ್ಯಾಯಾಲಯದ ಆದೇಶದಂತೆ ಬೈಕ್ ಮರಳಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ, ರೂ 30 ಸಾವಿರ ಲಂಚ ನೀಡಿದರೆ ಮಾತ್ರ ಬೈಕ್ ವಾಪಸ್ ಕೊಡುವುದಾಗಿ ಎಸ್‌ಐ ರಾಘವೇಂದ್ರ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ರಾಜಪ್ಪ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ಶನಿವಾರ ಸಂಜೆ ಠಾಣೆಗೆ ಬಂದು ಹಣ ನೀಡುವಂತೆ ಆರೋಪಿ ಎಸ್‌ಐ ಸೂಚಿಸಿದ್ದರು. ಅದರಂತೆ ರಾಜಪ್ಪ ಅಲ್ಲಿಗೆ ತೆರಳಿದ್ದರು. ಆಗ ಠಾಣೆಯಿಂದ ತುಸು ದೂರದಲ್ಲಿ ಬಂದು ಎಸ್‌ಐ ಹಣ ಪಡೆದರು. ತಕ್ಷಣವೇ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ವಜೀರ್ ಅಹಮ್ಮದ್ ಖಾನ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿತು.ರೂ 70 ಸಾವಿರ ಪತ್ತೆ: `ಆರೋಪಿಯನ್ನು ಬಂಧಿಸಿದ ಬಳಿಕ ಪರಿಶೀಲನೆ ನಡೆಸಿದಾಗ ಅವರ ಜೇಬಿನಲ್ಲಿ ರೂ 60 ಸಾವಿರ ನಗದು ಪತ್ತೆಯಾಯಿತು. ಠಾಣೆಯಲ್ಲಿ ರೂ 10 ಸಾವಿರ ಪತ್ತೆಯಾಗಿದೆ. ರಾಘವೇಂದ್ರ ಮನೆಯ ಮೇಲೂ ದಾಳಿ ನಡೆಸಿ ಶೋಧ ನಡೆಸಲಾಗಿದೆ~ ಎಂದು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್‌ಪಿ ಪರಮೇಶ್ವರಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.