ಸೋಮವಾರ, ಮೇ 23, 2022
22 °C

`ಲಂಬಾಣಿ ಸಮುದಾಯ ಪರಿಶಿಷ್ಟ ಜಾತಿಗೆ ಸೇರಲಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವು ಸಲ್ಲಿಸಿರುವ ವರದಿಯಲ್ಲಿ ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿಯಿಂದ ಕೈಬಿಡಬೇಕು ಎಂಬ ಅಂಶವು ಅಸಮರ್ಪಕವಾಗಿದೆ. ಈ ವರದಿಯನ್ನು ಜಾರಿಗೊಳಿಸಬಾರದು' ಎಂದು ಕರ್ನಾಟಕ ಪ್ರದೇಶ ಲಂಬಾಣಿ ಬಂಜಾರ ಕಲ್ಯಾಣ ಸಂಘದ ಅಧ್ಯಕ್ಷ ಕೃಷ್ಣಾ ನಾಯಕ್ ಒತ್ತಾಯಿಸಿದರು.ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.ಜೆ.ಸದಾಶಿವ ಅವರು ಲಂಬಾಣಿ ಸಮುದಾಯದ ಜನರು ವಾಸಿಸುವ ಸ್ಥಳಗಳಿಗೆ ಭೇಟಿ ನೀಡದೆ, ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡದೆ ವರದಿ ಸಲ್ಲಿಸಿದ್ದಾರೆ. ಲಂಬಾಣಿ ಸಮುದಾಯದ ಜನರು ಇಂದಿಗೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ ಎಂದು ದೂರಿದರು. ಲಂಬಾಣಿ ಸಮುದಾಯದ ಜನರು ಕೂಲಿಗಾಗಿ ಗೋವಾ, ಮುಂಬೈ, ಕೇರಳ ಸೇರಿದಂತೆ ಇತರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಸರ್ಕಾರದ ಶೇ 10ರಷ್ಟು ಸೌಲಭ್ಯಗಳು ಮಾತ್ರ ಸಮುದಾಯವನ್ನು ತಲುಪುತ್ತಿವೆ. ಹೀಗಿರುವಾಗ ಸಮುದಾಯವನ್ನು ಪರಿಶಿಷ್ಟ ಜಾತಿಯಿಂದ ಕೈಬಿಟ್ಟರೆ ಅನ್ಯಾಯವಾಗುತ್ತದೆ ಎಂದು ಹೇಳಿದರು.ರಾಜ್ಯದಲ್ಲಿ ಸುಮಾರು 2,400ಕ್ಕೂ ಅಧಿಕ ಲಂಬಾಣಿ ತಾಂಡಾಗಳಿವೆ. ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1,200 ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿದ್ದರು. ಅದರಲ್ಲಿ 600 ಗ್ರಾಮಗಳು ಮಾತ್ರ ಕಂದಾಯ ಗ್ರಾಮಗಳಾಗಿವೆ. ಇದನ್ನು ಗಮನಿಸಿದರೆ ಸಮುದಾಯವು ಸೌಲಭ್ಯಗಳಿಂದ ವಂಚಿತವಾಗುತ್ತಿರುವುದು ತಿಳಿಯುತ್ತದೆ ಎಂದರು.ಆದ್ದರಿಂದ ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿಯಲ್ಲಿಯೇ ಮುಂದುವರೆಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.