ಭಾನುವಾರ, ಜನವರಿ 19, 2020
20 °C

ಲಕ್ಷ ಗಳಿಸಿಕೊಟ್ಟ ಸಾವಯವ ಕೃಷಿ

–ಎಚ್‌.ಎಸ್‌.ಸಚ್ಚಿತ್‌. Updated:

ಅಕ್ಷರ ಗಾತ್ರ : | |

ವರು ಆರಂಭದಲ್ಲಿ ಸಾವಯವ ಕೃಷಿ ಕೈಗೊಂಡಾಗ ಅದೃಷ್ಟ ಕೈಕೊಟ್ಟಿತು. ಸ್ವಲ್‍ಪ ನಷ್ಟವನ್ನೇ ಅನುಭವಿಸಿದರು. ಆದರೆ ರಾಸಾಯನಿಕ ಕೃಷಿಗಿಂತ ಈ ನಷ್ಟ ಹೆಚ್ಚಿಗೇನೂ ಅಲ್ಲ ಎಂದು ತಿಳಿದು ಅದರಲ್ಲೇ ಮುಂದುವರಿದರು. ಈಗ ಯಶಸ್ಸು ಇವರ ಬೆನ್ನಹಿಂದೆಯೇ ಇದೆ, ಬೇರೆ ರೈತರಿಗೂ ಮಾದರಿಯಾಗಿದ್ದಾರೆ.ಇವರೇ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಶಂಕರಗೌಡನಕೊಪ್ಪಲು ಗ್ರಾಮದ ಯುವ ರೈತ ದೊರೆಸ್ವಾಮಿ. ಪ್ರೌಢಶಾಲೆಯ ಮೆಟ್ಟಿಲೇರಿರುವ ಇವರು ಅರ್ಧದಲ್ಲಿಯೇ ಶಾಲೆ ಬಿಟ್ಟರು. ಮೂರು ಎಕರೆ ಜಮೀನೇ ಇವರಿಗೆ ಪಾಠಶಾಲೆಯಾಯಿತು. ಸಾವಯವ ಕೃಷಿ ಮಾಡುವ ಕನಸಿನೊಂದಿಗೆ ಕೃಷಿ ಜಗತ್ತಿಗೆ ಧುಮುಕಿದರು.

ಆದರೆ ಆರಂಭದ ದಿನಗಳು ಸುಲಭವಾಗಲಿಲ್ಲ. ಆದರೂ ಛಲ ಬಿಡದ ಇವರು ರಾಸಾಯನಿಕದ ಮೊರೆ ಹೋಗ­ಲಿಲ್ಲ. ಮನೆಯಲ್ಲಿನ ಕೊಟ್ಟಿಗೆ ಹಾಗೂ ಎರೆಹುಳು ಗೊಬ್ಬರವನ್ನೇ ತೋಟಕ್ಕೆ ಬಳಸಿದರು. ಇದರಿಂದ ಕೆಲವೇ ತಿಂಗಳುಗಳಲ್ಲಿ ಸಮೃದ್ಧವಾಗಿ ತರಕಾರಿ ಬೆಳೆಯಿತು. ಕೈ ತುಂಬ ಹಣ ಬಂದಿತು.ಸಾವಯವ ಕೃಷಿ ಬಗ್ಗೆ ತಿಳಿಯಲು ಕೃಷಿ ಇಲಾಖೆ ನಡೆಸುವ ಯಾವುದೇ ಕಾರ್ಯಾಗಾರಕ್ಕೂ ಹೋಗದ ಇವರು, ಪತ್ರಿಕೆಗಳಲ್ಲಿ ಬರುವ ಅಭಿವೃದ್ಧಿ ಕೃಷಿ ಲೇಖನಗಳನ್ನಷ್ಟೇ ಓದಿ ಈ ಹಾದಿ ಹಿಡಿದವರು. ಇರುವ ಒಂದು ಕೊಳವೆ ಬಾವಿಯನ್ನು ಸಮರ್ಥವಾಗಿ ಬಳಸಿಕೊಂಡು, ಟೊಮೆಟೊ, ಬೀನ್ಸ್‌, ಕೋಸು, ಹೀರೇಕಾಯಿ, ಮೆಣಸಿನಕಾಯಿ ಹೀಗೆ ಕಾಲಕ್ಕೆ ತಕ್ಕಂತೆ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.ಕೂಲಿ ಆಳು ಬೇಡ

ಸಾವಯವ ಕೃಷಿಯಲ್ಲಿ ಹೆಚ್ಚು ಕೂಲಿ ಆಳುಗಳ ಅವಶ್ಯಕತೆ ಇಲ್ಲ. ಮೂರು ಎಕರೆ ಪ್ರದೇಶದಲ್ಲಿ ಸಹೋದರ ಮತ್ತು ಕುಟುಂಬದ­ ಸಹಕಾರದೊಂದಿಗೆ ಬೇಸಾಯ ಮಾಡುತ್ತಿದ್ದು, ಬೇಸಾಯದ ವೆಚ್ಚ ತಗ್ಗಿಸಿ ಲಾಭಾಂಶ ಹೆಚ್ಚಿಸಿಕೊಳ್ಳುತ್ತೇವೆ ಎನ್ನುತ್ತಾರೆ.ಸಾಮಾನ್ಯವಾಗಿ ರೈತರು ಒಂದೇ ಮಾದರಿ ತರಕಾರಿ ಬೆಳೆದು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೇ ಕೈ ಸುಟ್ಟುಕೊಳ್ಳುವುದನ್ನು ತಿಳಿದ ದೊರೆಸ್ವಾಮಿ, ತಮ್ಮ ಜಮೀನಿನಲ್ಲಿ ಬೀನ್ಸ್‌ ಬೆಳೆಯ ನಂತರ ಟೊಮೆಟೊ, ಹೀರೇಕಾಯಿ ಮತ್ತು ಮೆಣಸಿನ ಕಾಯಿ ಬೆಳೆಯುತ್ತಿದ್ದಾರೆ.

ಈ ಬಾರಿ 30 ಗುಂಟೆ ಪ್ರದೇಶದಲ್ಲಿ ಬೀನ್ಸ್‌ ಬೆಳೆದಿದ್ದು, ಇದಕ್ಕೆ 8 ರಿಂದ 10 ಸಾವಿರ ಖರ್ಚು ಮಾಡಿದ್ದಾರೆ. ಈಗಾಗಲೇ ಮೊದಲ ಕಟಾವು ತೆಗೆದು 700 ಕೆ.ಜೆ. ಬೀನ್ಸ್‌ ಮಾರಾಟ ಮಾಡಿ 20 ಸಾವಿರ ಗಳಿಸಿದ್ದಾರೆ. ಕನಿಷ್ಠ 8 ಬಾರಿ ಕಟಾವು ಮಾಡುವುದರಿಂದ ಲಕ್ಷ ರೂಪಾಯಿಗೂ ಹೆಚ್ಚು ಲಾಭ ನೋಡುವ ನಿರೀಕ್ಷೆಯಲ್ಲಿ ಇವರಿದ್ದಾರೆ.

ಒಂದಾದ ನಂತರ ಒಂದು ಬೆಳೆ

ಬೀನ್ಸ್‌ ಮುಗಿಯುತ್ತಿದ್ದಂತೆ ಟೊಮೆಟೊ, ಹೀರೇಕಾಯಿ ಹೀಗೆ ಒಂದಾದ ನಂತರ ಒಂದು ತರಕಾರಿ ಬೆಳೆಯುವಲ್ಲಿ ಮಗ್ನರಾಗುವ ಇವರು, ಪ್ರತಿ ಬಾರಿಯೂ ಹದಗೊಳಿಸಿದ ಭೂಮಿಗೆ ಕೊಟ್ಟಿಗೆ ಹಾಗೂ ಎರೆಹುಳು ಗೊಬ್ಬರ ನೀಡಿ ಉಳುಮೆ ಮಾಡುತ್ತಿದ್ದಾರೆ. ‘ಈ ವರ್ಷ ಬೆಳೆದ ಟೊಮೆಟೊ ಪ್ರತಿಯೊಂದು ಕಾಯಿ 500ರಿಂದ 600 ಗ್ರಾಂ ತೂಗುತ್ತಿತ್ತು’ ಎಂದು ಹರ್ಷದಿಂದ ಹೇಳುತ್ತಾರೆ.

ಬೇವಿನ ಕಾಯಿ ಮತ್ತು ಹಸುವಿನ ಗಂಜಲದ ಕಷಾಯ ಇವರ ಗಿಡಕ್ಕೆ ಮದ್ದು.  ತರಕಾರಿ ಬೇಸಾಯಕ್ಕೆ ವಾರ್ಷಿಕ ಖರ್ಚು 50–60 ಸಾವಿರ ತಗುಲಿದ್ದು, 3ರಿಂದ 4 ಲಕ್ಷ ಲಾಭ ಕೈಸೇರಿದೆ ಎನ್ನುವ ದೊರೆಸ್ವಾಮಿ ವಾಣಿಜ್ಯ ಬೆಳೆ ಹೊಗೆಸೊಪ್ಪು ಬೆಳೆಗಾರರಿಗೆ ತರಕಾರಿ ಬೆಳೆದು ಆರ್ಥಿಕವಾಗಿ ಮಾದರಿಯಾಗಿದ್ದಾರೆ. 

–ಎಚ್‌.ಎಸ್‌.ಸಚ್ಚಿತ್‌.

ಪ್ರತಿಕ್ರಿಯಿಸಿ (+)