ಸೋಮವಾರ, ಮಾರ್ಚ್ 8, 2021
19 °C

ಲಯ ವಾದ್ಯ ನಿಪುಣ

ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಲಯ ವಾದ್ಯ ನಿಪುಣ

ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಪ್ರಮುಖ ಲಯವಾದ್ಯಗಾರರಲ್ಲಿ ಇಂದು ಮೊದಲಿಗೇ ಕೇಳಿ ಬರುವ ಹೆಸರು ಪಂಡಿತ್ ರವೀಂದ್ರ ಯಾವಗಲ್. ಸಾಥ್ ನೀಡಲು ಗಾಯಕರು, ವಾದ್ಯಗಾರರ ಮೊದಲ ಆಯ್ಕೆಯೇ ರವೀಂದ್ರ ಯಾವಗಲ್.ಹಾಗೆ ನೋಡಿದರೆ ರವೀಂದ್ರ ಅವರಿಗೆ ಸಂಗೀತ ಆಕಸ್ಮಿಕವಾಗಿ ಬಂದುದೇನಲ್ಲ. ತಬಲಾ ವಾದಕ ರಾಮಚಂದ್ರ ಯಾವಗಲ್ ಅವರ ಮಗನಾಗಿ (ಜನನ 1959) ಹುಟ್ಟಿನಿಂದಲೇ ಸಂಗೀತ ಸಂಸ್ಕಾರ ಪಡೆದುಕೊಂಡ ರವೀಂದ್ರರಿಗೆ, 4 ವರ್ಷದ ಮಗುವಾಗಿದ್ದಾಗಲೇ ಸಂಗೀತ ಪಾಠ ಪ್ರಾರಂಭವಾಯಿತು. ಮುಂದೆ ಪಂಡಿತ್ ಶೇಷಗಿರಿ ಹಾನಗಲ್ ಅವರ ಶಿಷ್ಯರಾಗಿ ದಶಕಗಳ ಕಠಿಣ ಶಿಕ್ಷಣದಿಂದ ರವೀಂದ್ರ ಯಾವಗಲ್ ಅವರ ತಬಲಾ ವಾದನ ಪ್ರೌಢವಾಗಿ ರೂಪುಗೊಂಡಿತು.ಜೊತೆಗೆ ಪಂಡಿತ್ ಲಾಲ್‍ಜಿ ಗೋಖಲೆ ಅವರಿಂದಲೂ ಮಾರ್ಗದರ್ಶನ ದೊರಕಿತು. ಇವರು ಉಸ್ತಾದ್ ಅಹ್ಮದ್ ಜಾನ್ ತಿರಕ್ವ ಅವರ ಶಿಷ್ಯರು. ಅಲ್ಲದೆ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನೂ (ಖೈರಾಘರ್ ವಿಶ್ವವಿದ್ಯಾಲಯ) ಗಳಿಸಿ ತಮ್ಮ ಕಲಿಕೆಯನ್ನು ಬಲಗೊಳಿಸಿಕೊಂಡರು.ರವೀಂದ್ರ ಯಾವಗಲ್‌ ಅವರು ಬಾಲ ಪ್ರತಿಭೆ. ಪಕ್ಕವಾದ್ಯಗಾರ ಹಾಗೂ ತನಿ ವಾದಕರಾಗಿ ಗುರ್ತಿಸಿಕೊಂಡವರು. ಕೇವಲ 10 ವರ್ಷದ ಬಾಲಕನಾಗಿದ್ದಾಗಲೇ ತನಿವಾದನ ಮಾಡಿದ ಧೀಮಂತ ಕಲಾವಿದ. ಕುಂದಗೋಳದ ಸವಾಯಿ ಗಂಧರ್ವ ಸಂಗೀತೋತ್ಸವದಲ್ಲಿ ಆರಂಭವಾದ ಅವರ ಈ ನಾದಯಾತ್ರೆ ಅವಿರತವಾಗಿ ಮುಂದುವರಿದಿದೆ. ಗಂಗೂಬಾಯಿಯಿಂದ ಗೋಪಾಲಕೃಷ್ಣ ಅವರವರೆಗೆ, ಮಲ್ಲಿಕಾರ್ಜುನ ಮನ್ಸೂರ್‌ ಅವರಿಂದ ಮಾಲಿನಿ ರಾಜೂರ್‌ಕರ್‌ವರೆಗೆ, ಭೀಮಸೇನ ಜೋಶಿಯಿಂದ ಬೇಗಂ ಪರ್ವೀನ್ ಸುಲ್ತಾನರವರೆಗೆ, ರಾಮರಾವ್ ನಾಯಕರಿಂದ ರಾಜೀವ ತಾರಾನಾಥ್‌ರವರೆಗೆ ಯಾವಗಲ್‌ ಅವರ ತಬಲಾ ಸಾಥಿ ಮೊಳಗಿದೆ. ಅವರ ತಬಲಾ ತನಿ ಬೆಂಗಳೂರಲ್ಲದೆ ಮುಂಬಯಿ, ಹೈದರಾಬಾದ್, ಔರಂಗಾಬಾದ್ - ಮುಂತಾದೆಡೆ ಸಹ ವಿಜೃಂಭಿಸಿದೆ.ಗಾಯಕರನ್ನು ನೆರಳಿನಂತೆ ಅನುಸರಿಸುತ್ತಾ, ರವೀಂದ್ರರು ಕಛೇರಿಯ ಕಾವನ್ನು ವರ್ಧಿಸುತ್ತಾ, ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾಗುತ್ತಾರೆ. ಅಷ್ಟೇ ಅಲ್ಲ, ಅವರ ತಬಲಾ ಪ್ರಧಾನ ಕಲಾವಿದರಿಗೆ ಎಂದೂ ಸ್ಫೂರ್ತಿದಾಯಕ. ಜುಗಲ್ಬಂದಿಗಳಲ್ಲಿ ಉಮಯಾಳಪುರಂ ಶಿವರಾಮನ್, ಗುರುವಾಯೂರು ದೊರೆ, ತಂಜಾವೂರು ಉಪೇಂದ್ರನ್, ಬಾಲಮುರಳಿ ಕೃಷ್ಣ - ಮುಂತಾದ ದಿಗ್ಗಜರೊಂದಿಗೆ ನಡೆಸಿರುವ ವಾದನ ಒಂದು ಅವಿಸ್ಮರಣೀಯ ನಾದಾನುಭವ ಕೊಟ್ಟಿದೆ. 

 

ರವೀಂದ್ರ ಯಾವಗಲ್‌ರ ಕೈಚಳಕ ಅಮೆರಿಕ, ಫ್ರಾನ್ಸ್, ಈಜಿಪ್ಟ್ - ಮುಂತಾದ ದೇಶಗಳ ಸಂಗೀತ ಅಭಿಮಾನಿಗಳನ್ನೂ ಸಂತೋಷಗೊಳಿಸಿದೆ. ಬೆಂಗಳೂರು ಬಾನುಲಿ ನಿಲಯದ ಕಲಾವಿದರಾಗಿ ಅನೇಕ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ರವೀಂದ್ರ ಯಾವಗಲ್‌ ಅವರು ಇಂದು ‘ಟಾಪ್ ರ‍್ಯಾಂಕಿಂಗ್ ’ ಕಲಾವಿದರಾಗಿರುವರಲ್ಲದೆ ಆಕಾಶವಾಣಿ ಸಂಗೀತ ಸಮ್ಮೇಳನ, ರಾಷ್ಟ್ರೀಯ ಸಂಗೀತ ಸಮ್ಮೇಳನಗಳಲ್ಲೂ ಪಾಲ್ಗೊಂಡಿದ್ದಾರೆ.ದಕ್ಷ ಬೋಧಕರೂ ಆಗಿರುವ ಅವರ ಅನೇಕ ಶಿಷ್ಯರು ಇಂದು ವೇದಿಕೆಯ ಮೇಲೆ ಬೆಳಗುತ್ತಿದ್ದಾರೆ. ಅಕಾಡೆಮಿ ಹಾಗೂ ಪಠ್ಯ ಪುಸ್ತಕ ಸಮಿತಿಗಳಲ್ಲೂ ಸೇವೆ ಸಲ್ಲಿಸಿರುವ ಶ್ರೀಯುತರಿಗೆ ರಾಜ್ಯೋತ್ಸವ ಪ್ರಶಸ್ತಿಯಲ್ಲದೆ ಅನೇಕ ಸಂಸ್ಥೆಗಳು ಬಿರುದು ನೀಡಿ ಸನ್ಮಾನಿಸಿವೆ. ಇದಲ್ಲದೆ ಈ ವರ್ಷ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿಯೂ ಅವರಿಗೆ ಸಲ್ಲುತ್ತಿರುವುದು - ಇನ್ನೊಂದು ವಿಶೇಷ.ನಾದಾರ್ಪಣ ಕಾರ್ಯಕ್ರಮ

ರವೀಂದ್ರ ಯಾವಗಲ್‌ ಅವರಿಗೆ ಗುರುವಂದನೆ ಕಾರ್ಯಕ್ರಮ ಏರ್ಪಡಿಲಾಗಿದೆ. ಮುಖ್ಯ ಅತಿಥಿಗಳು– ರಾಜೀವ್‌ ತಾರಾನಾಥ್‌, ಲಲಿತಾ ಜೆ ರಾವ್‌, ಉಪಸ್ಥಿತಿ– ಸ್ವಾತ್ಮರಮಾನಂದಜೀ. ಸ್ಥಳ: ಜೆ.ಎಸ್‌.ಎಸ್‌. ಸಭಾಂಗಣ, ಜಯನಗರ 8ನೇ ಬ್ಲಾಕ್‌. ಭಾನುವಾರ ಸಂಜೆ 5. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.