ಭಾನುವಾರ, ಏಪ್ರಿಲ್ 11, 2021
25 °C

ಲಸಿತ್ ಮಾಲಿಂಗ ಹ್ಯಾಟ್ರಿಕ್ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ: ಲಸಿತ್ ಮಾಲಿಂಗ ಭರ್ಜರಿ ಹ್ಯಾಟ್ರಿಕ್ ಸಾಧನೆಯೊಂದಿಗೆ ಹತ್ತನೇ ವಿಶ್ವಕಪ್ ಟೂರ್ನಿಗೆ ತಮ್ಮ ಆಗಮನವನ್ನು ಸಾರಿದ್ದಾರೆ. ಅವರ ಘಾತಕ ವೇಗದ ಬೌಲಿಂಗ್ ಮುಂದೆ ಕೀನ್ಯಾ ನಡುಗಿತು. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಕೀನ್ಯಾ ಸತತ ಮೂರನೇ ಸೋಲು ಅನುಭವಿಸಿ ಕ್ವಾರ್ಟರ್ ಫೈನಲ್ ಪ್ರವೇಶದ ಅವಕಾಶ ಕಳೆದುಕೊಂಡಿತು.ಬೆನ್ನುನೋವಿನ ಕಾರಣ ಮೊದಲ ಎರಡು ಪಂದ್ಯಗಳಲ್ಲಿ ಆಡದೇ ಇದ್ದ ಮಾಲಿಂಗ ಮಂಗಳವಾರ ಪ್ರೇಮದಾಸ ಕ್ರೀಡಾಂಗಣದಲ್ಲಿ ತೋರಿದ್ದು ಅದ್ಭುತ ಬೌಲಿಂಗ್. 38 ರನ್‌ಗಳಿಗೆ ಆರು ವಿಕೆಟ್ ಪಡೆದ ಅವರು ಮೊದಲು ಬ್ಯಾಟ್ ಮಾಡಿದ ಕೀನ್ಯಾ ತಂಡವನ್ನು 43.4 ಓವರ್‌ಗಳಲ್ಲಿ 142 ರನ್‌ಗಳಿಗೆ ಕಟ್ಟಿಹಾಕಿದರು. ಬಳಿಕ ಕುಮಾರ ಸಂಗಕ್ಕಾರ ಬಳಗ 18.4 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 146 ರನ್ ಗಳಿಸಿ ಗೆಲುವು ಪಡೆಯಿತು. ಲಂಕಾ ತಂಡ ಜಯದ ಹಾದಿಯಲ್ಲಿ ತಿಲಕರತ್ನೆ ದಿಲ್ಶಾನ್ (44, 30 ಎಸೆತ, 8 ಬೌಂ) ಅವರನ್ನು ಮಾತ್ರ ಕಳೆದುಕೊಂಡಿತು.ಉಪುಲ್ ತರಂಗ (ಅಜೇಯ 67, 59 ಎಸೆತ, 12 ಬೌಂ) ಮತ್ತು ಸಂಗಕ್ಕಾರ (ಅಜೇಯ 27, 24 ಎಸೆತ, 3 ಬೌಂ) ಅಜೇಯ ಜೊತೆಯಾಟದ ಮೂಲಕ ತಂಡವನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದರು. ಮಾಲಿಂಗ ಮ್ಯಾಜಿಕ್: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೀನ್ಯಾ ತಂಡವು ಮಾಲಿಂಗ ನೀಡಿದ ಪೆಟ್ಟಿನಿಂದ ಸುಲಭದಲ್ಲಿ ಹೊರಬರಲು ಸಾಧ್ಯವಿಲ್ಲ. ಅವರ ಘಾತಕ ಯಾರ್ಕರ್‌ಗಳಿಗೆ ಹೇಗೆ ಉತ್ತರಿಸಬೇಕು ಎಂಬುದು ಕೀನ್ಯಾ ಬ್ಯಾಟ್ಸ್‌ಮನ್‌ಗಳಿಗೆ ತಿಳಿಯಲಿಲ್ಲ.ಪ್ರಸಕ್ತ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಎರಡನೇ ಬೌಲರ್ ಎಂಬ ಗೌರವ ಮಾಲಿಂಗ ತಮ್ಮದಾಗಿಸಿಕೊಂಡರು. ಸೋಮವಾರ ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಹಾಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡದ ಕೆಮರ್ ರೋಚ್ ಅವರು ಇಂತಹದೇ ಸಾಧನೆ ಮಾಡಿದ್ದರು. ಆದರೆ ವಿಶ್ವಕಪ್‌ನ ಇತಿಹಾಸದಲ್ಲಿ ಎರಡು ಸಲ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ದಾಖಲೆ ಮಾಲಿಂಗ ಹೆಸರಿಗೆ ಸೇರಿದೆ. 2007ರ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಾಲಿಂಗ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.ಕೀನ್ಯಾ ಎಂಟು ರನ್ ಗಳಿಸುವಷ್ಟರಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಯಾದ ಕಾಲಿನ್ಸ್ ಒಬುಯಾ (52) ಮತ್ತು ಡೇವಿಡ್ ಒಬುಯಾ (51) ಅವರು ಮೂರನೇ ವಿಕೆಟ್‌ಗೆ 92 ರನ್‌ಗಳ ಜೊತೆಯಾಟ ನೀಡಿದರು. ಆದರೆ ಕೊನೆಯ ಎಂಟು ವಿಕೆಟ್‌ಗಳು 40 ರನ್ ಅಂತರದಲ್ಲಿ ಉರುಳಿದವು. ಮಾಲಿಂಗ ಅಬ್ಬರ ಅದಕ್ಕೆ ಕಾರಣ. ಅವರು ಐದು ಎಸೆತಗಳ ಅಂತರದಲ್ಲಿ ಹ್ಯಾಟ್ರಿಕ್ ಒಳಗೊಂಡಂತೆ ನಾಲ್ಕು ವಿಕೆಟ್ ಪಡೆದರು.42ನೇ ಓವರ್‌ನ ಕೊನೆಯ ಎಸೆತದಲ್ಲಿ ತನ್ಮಯ್ ಮಿಶ್ರಾ ಅವರನ್ನು ಎಲ್‌ಬಿಡಬ್ಲ್ಯು ಬಲೆಯಲ್ಲಿ ಕೆಡವಿದ ಮಾಲಿಂಗ 44ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಪೀಟರ್ ಒಂಗೊಂಡೊ ಹಾಗೂ ಶೆಮ್ ನೋಚೆ ಅವರನ್ನು ಕ್ಲೀನ್‌ಬೌಲ್ಡ್ ಮಾಡಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಎರಡು ಎಸೆತಗಳ ಬಳಿಕ ಎಲಿಜಾ ಒಟೀನೊ ಅವರನ್ನೂ ಬೌಲ್ಡ್ ಮಾಡಿ ಕೀನ್ಯಾ ಇನಿಂಗ್ಸ್‌ಗೆ ಅಂತ್ಯ ಹಾಡಿದರು.ಐಸಿಸಿ ವಿಶ್ವಕಪ್ 2011 ಪಾಯಿಂಟ್ ಪಟ್ಟಿ

‘ಎ’ ಗುಂಪು

ತಂಡ ಪಂದ್ಯ ಜಯ ಸೋಲು ಟೈ ರದ್ದು ಪಾಯಿಂಟ್ ರನ್‌ರೇಟ್

ಶ್ರೀಲಂಕಾ 3 2 1 0 0 4 +2.663

ಪಾಕಿಸ್ತಾನ 2 2 0 0 0 4 +2.160

ಆಸ್ಟ್ರೇಲಿಯ 2 2 0 0 0 4 +1.813

ನ್ಯೂಜಿಲೆಂಡ್ 2 1 1 0 0 2 +1.507

ಜಿಂಬಾಬ್ವೆ 2 1 1 0 0 2 +0.840

ಕೆನಡಾ 2 0 2 0 0 0 -3.850

ಕೀನ್ಯಾ 3 0 3 0 0 0 -4.825‘ಬಿ’ ಗುಂಪು

ತಂಡ ಪಂದ್ಯ ಜಯ ಸೋಲು ಟೈ ರದ್ದು ಪಾಯಿಂಟ್ ರನ್‌ರೇಟ್

ಭಾರತ 2 1 0 1 0 3 +0.870

ಇಂಗ್ಲೆಂಡ್ 2 1 0 1 0 3 +0.126

ವೆಸ್ಟ್ ಇಂಡೀಸ್ 2 1 1 0 0 2 -1.879

ದಕ್ಷಿಣ ಆಫ್ರಿಕ 1 1 0 0 0 2 +0.766

ಬಾಂಗ್ಲಾದೇಶ 2 1 1 0 0 2 -0.600

ಐರ್ಲೆಂಡ್ 1 0 1 0 0 0 -0.540

ಹಾಲೆಂಡ್ 2 0 2 0 0 0 -2.275

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.