ಶನಿವಾರ, ಮೇ 15, 2021
26 °C

ಲಿಂಗನಮಕ್ಕಿ: ಕಳೆದ ವರ್ಷಕ್ಕಿಂತ 6 ಅಡಿ ಕಡಿಮೆ ನೀರು:50 ದಿನ ಮಾತ್ರ ವಿದ್ಯುತ್ ಉತ್ಪಾದನೆ

ಪ್ರಜಾವಾಣಿ ವಾರ್ತೆ/ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮಲೆನಾಡಿನಲ್ಲಿ ಬೇಸಿಗೆ ಮಳೆ ಕೈ ಕೊಟ್ಟಿದೆ. ಜೀವನದಿ ಶರಾವತಿಯಲ್ಲಿ ನೀರು ಬತ್ತಿದೆ. ಲಿಂಗನಮಕ್ಕಿ ಅಣೆಕಟ್ಟೆಗೆ ಒಳ ಹರಿವು ನಿಂತಿದೆ. ಕೇವಲ 45ರಿಂದ 50 ದಿವಸ ಮಾತ್ರ ವಿದ್ಯುತ್ ಉತ್ಪಾದನೆ ಮಾಡುವಷ್ಟು ನೀರಿನ ಸಂಗ್ರಹವಿದೆ.ಈಗಾಗಲೇ ವಾಡಿಕೆ ಮಳೆ 31 ಮಿ.ಮೀ. ಬೀಳಬೇಕಿತ್ತು. ಆಗಿದ್ದು ಕೇವಲ 10 ಮಿ.ಮೀ. ವಾಡಿಕೆ ಮಳೆಯೂ ಮಾಯವಾದ ಕಾರಣ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಶೂನ್ಯವಾಗಿದೆ. ವಿದ್ಯುತ್ ಉತ್ಪಾದನೆಗೆ ಬಳಸುವ ಅಣೆಕಟ್ಟೆಯ ಹೊರ ಹರಿವಿನ ಪ್ರಮಾಣ 7 ಸಾವಿರ ಕ್ಯೂಸೆಕ್‌ಗೆ ಏರಿದೆ. ಲಿಂಗನಮಕ್ಕಿ ಅಣೆಕಟ್ಟೆ ಗರಿಷ್ಠ ನೀರಿನ ಮಟ್ಟ 1,819 ಅಡಿ. ಅಣೆಕಟ್ಟೆಯಲ್ಲಿ ಈಗ  1,772.40 ಅಡಿ ನೀರಿದೆ. ಈ ನೀರಿನಿಂದ ಪ್ರತಿನಿತ್ಯ ಸರಾಸರಿ 21 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಿದರೂ ಮಳೆಗಾಲ ಆರಂಭದವರೆಗೂ ತೊಂದರೆ ಇಲ್ಲ. ಮಳೆಗಾಲ ಆರಂಭ ವಿಳಂಬವಾದರೆ ಮಾತ್ರ ಕಷ್ಟ ಕಟ್ಟಿಟ್ಟ ಬುತ್ತಿ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮೂಲಗಳು ತಿಳಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ ಈಗ ಸುಮಾರು 6 ಅಡಿ ಕಡಿಮೆ ಇದೆ. ಒಟ್ಟು ಈಗ ಅಣೆಕಟ್ಟೆ ಸಂಗ್ರಹ ಸಾಮರ್ಥ್ಯದ ಶೇ. 27ರಷ್ಟು ನೀರಿದೆ. ಹಾಲಿ ಪ್ರತಿ ದಿನ 20ರಿಂದ 22 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇನ್ನೂ 45ರಿಂದ 50 ದಿವಸ ಇದೇ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವಷ್ಟು ನೀರಿದೆ ಎಂದು ಶರಾವತಿ ಯೋಜನೆ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.ಈಗ ಪ್ರತಿ ದಿನ ಉತ್ಪಾದಿಸುವ ವಿದ್ಯುತ್‌ಗೆ ಕನಿಷ್ಠ ಏಳರಿಂದ ಏಳೂವರೆ ಸಾವಿರ ಕ್ಯೂಸೆಕ್ ನೀರು ಬಳಕೆಯಾಗುತ್ತಿದೆ. ಈ ಪ್ರಮಾಣ ಲೆಕ್ಕ ಹಾಕಿದರೆ ಮೇ ಅಂತ್ಯದವರೆಗೆ ನಿರಾತಂಕವಾಗಿ ಶರಾವತಿ ವಿದ್ಯುತ್ ಯೋಜನೆಯಿಂದ ವಿದ್ಯುತ್ ಪೂರೈಸಬಹುದು.ರಾಜ್ಯದಲ್ಲಿ ಈಗ ಪ್ರತಿ ದಿನ 155 ದಶಲಕ್ಷ ಯೂನಿಟ್ ವಿದ್ಯುತ್ ಬೇಡಿಕೆ ಇದೆ. ಇದರಲ್ಲಿ ಕೇವಲ 78 ದಶಲಕ್ಷ ಯೂನಿಟ್  ಮಾತ್ರ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಉಳಿದ ವಿದ್ಯುತ್‌ನ್ನು ಬೇರೆ-ಬೇರೆ ಮೂಲಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. 78 ದಶಲಕ್ಷ ಯೂನಿಟ್‌ನಲ್ಲಿ 21ದಶಲಕ್ಷ ಯೂನಿಟ್ ಶರಾವತಿ ಯೋಜನೆ ಒಂದರಿಂದಲೇ ಪೂರೈಕೆಯಾಗುತ್ತದೆ ಎಂದು ಶರಾವತಿ ಯೋಜನೆ ಮುಖ್ಯ ಎಂಜಿನಿಯರ್ (ಸಿವಿಲ್) ರಾಜಮುಡಿ `ಪ್ರಜಾವಾಣಿ~ಗೆ ತಿಳಿಸಿದರು.ಮುಖ್ಯಾಂಶಗಳು*  ಕೇವಲ 10 ಮಿ.ಮೀ. ಮಳೆ

*  ಒಳಹರಿವು ಶೂನ್ಯ

*  ಮಳೆಗಾಲ ಬೇಗ ಆರಂಭವಾದರೆ ಬಜಾವ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.