ಗುರುವಾರ , ಮೇ 13, 2021
31 °C

ಲೈವ್‌ಬ್ಯಾಂಡ್ ನೀತಿ: 21ಕ್ಕೆ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಲೈವ್ ಬ್ಯಾಂಡ್, ಡಾನ್ಸ್ ಬಾರ್, ಡಿಸ್ಕೊಥೆಕ್, ವಿಡಿಯೊ ಪಾಲರ್ರ್ ಮತ್ತು ಜೂಜು ಕೇಂದ್ರಗಳ ನಿರ್ವಹಣೆ ಸಂಬಂಧ ಸಮಗ್ರ ನೀತಿ ರೂಪಿಸುವ ಉದ್ದೇಶದಿಂದ ಜೂನ್ 21ರಂದು ವಿಕಾಸಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುತ್ತದೆ' ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.ಗೃಹ ಸಚಿವರಾದ ಬಳಿಕ ಶನಿವಾರ ಮೊದಲ ಬಾರಿಗೆ ನಗರ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಜ್ಯದ ವಿವಿಧೆಡೆ ವಿಡಿಯೊ ಪಾರ್ಲರ್, ಡಿಸ್ಕೊಥೆಕ್ ಹಾಗೂ ಜೂಜು ಕೇಂದ್ರಗಳ ಮೇಲೆ ಪೊಲೀಸರು ದಾಳಿ ನಡೆಸಿ, ಚಟುವಟಿಕೆಗಳನ್ನು ಬಂದ್ ಮಾಡಿಸಿದ ನಂತರವೂ ಅವುಗಳ ಮಾಲೀಕರಿಂದ ಸಾಕಷ್ಟು ದೂರು ಕೇಳಿಬಂದಿದೆ. ಆದ್ದರಿಂದ ಅವುಗಳ ನಿರ್ವಹಣೆಗೆ ಸ್ಪಷ್ಟ ನೀತಿ ರೂಪಿಸುವ ಅಗತ್ಯವಿದೆ' ಎಂದರು.`ಬಾರ್‌ಗಳಲ್ಲಿ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಕೋರ್ಟ್ ಅನುಮತಿ ನೀಡಿದೆ. ಅಲ್ಲದೇ, ಕಾನೂನಿನ ಚೌಕಟ್ಟಿನಲ್ಲೇ ವ್ಯವಹಾರ ನಡೆಸುತ್ತಿದ್ದೇವೆ ಎಂದು ಹೇಳಿರುವ ಕೆಲ ಬಾರ್‌ಗಳ ಮಾಲೀಕರು ಪೊಲೀಸರ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ ಕಾರಣ ಗೃಹ ಇಲಾಖೆ ಕಾರ್ಯದರ್ಶಿ, ಹಿರಿಯ ಪೊಲೀಸ್ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು, ಹೋಟೆಲ್ ಹಾಗೂ ಬಾರ್ ಮಾಲೀಕರ ಸಂಘದ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ಆಯೋಜಿಸಲಾಗಿದೆ. ಜೂಜು ಮತ್ತಿತರ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದು ಹೇಳಿದರು.`ಬೆಂಗಳೂರು ಸುರಕ್ಷಿತ ನಗರವಾಗಿದೆ. ನಗರದಲ್ಲಿ ಕಾನೂನು ಪ್ರಕಾರ ನಡೆಯುವ ಯಾವುದೇ ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುವುದಿಲ್ಲ. ಇಲಾಖೆಯ ಒಟ್ಟು ಸಿಬ್ಬಂದಿಯಲ್ಲಿ ಪ್ರಸ್ತುತ ಶೇ 6ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ. ಈ ಪ್ರಮಾಣವನ್ನು ಶೇ 20ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದೇವೆ. ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ 20ರಷ್ಟು ಮೀಸಲಾತಿ ನೀಡಲಾಗುತ್ತದೆ' ಎಂದು ತಿಳಿಸಿದರು.ಚರ್ಚ್ ದಾಳಿ: ಕರಾವಳಿ ಪ್ರದೇಶದಲ್ಲಿ ಚರ್ಚ್‌ಗಳ ಮೇಲೆ ನಡೆದಿದ್ದ ದಾಳಿ ಪ್ರಕರಣಗಳ ಸಂಬಂಧ ಮರುತನಿಖೆ ನಡೆಸುವಂತೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಒತ್ತಾಯಿಸಿರುವ ಬಗ್ಗೆ ಪ್ರಶ್ನಿಸಿದಾಗ, `ಜೂ.18, 19ರಂದು ಮಂಗಳೂರು ಹಾಗೂ ಉಡುಪಿಗೆ ಭೇಟಿ ನೀಡುತ್ತಿದ್ದೇನೆ. ಆಗ ಆ ವಿಷಯವಾಗಿ ಲೋಬೊ ಅವರೊಂದಿಗೆ ಚರ್ಚಿಸುತ್ತೇನೆ' ಎಂದರು.ಮಾಧ್ಯಮ ಪ್ರತಿನಿಧಿಗಳು, ವಕೀಲರು ಮತ್ತು ಪೊಲೀಸರ ನಡುವೆ 2012ರಲ್ಲಿ ನಡೆದಿದ್ದ ಘರ್ಷಣೆ ಬಗ್ಗೆ ಪ್ರಸ್ತಾಪಿಸಿದಾಗ, `ಅಂಥ ಅಹಿತಕರ ಘಟನೆ ನಡೆಯಬಾರದಿತ್ತು. ಮಾಧ್ಯಮದವರು, ವಕೀಲರು ಮತ್ತು ಪೊಲೀಸರ ನಡುವೆ ಬಾಂಧವ್ಯ ಸುಧಾರಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ಆ ಮೂರೂ ರಂಗಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗುತ್ತದೆ. ಆದರೆ ಘಟನೆ ಸಂಬಂಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದರು.ಮಾತುಕತೆಗೆ ಸಿದ್ಧ: `ನಕ್ಸಲರ ವಿರುದ್ಧ ಸರ್ಕಾರ ಸಮರ ಸಾರಲಿದೆ ಎಂದು ನಾನು ಹೇಳಿಕೆ ಕೊಟ್ಟಿದ್ದೇನೆ ಎಂದು ಕೆಲ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ. ಆದರೆ, ನಕ್ಸಲರ ವಿರುದ್ಧ ಸಮರ ಸಾರುವ ಪ್ರಶ್ನೆಯೇ ಇಲ್ಲ. ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ. ನಕ್ಸಲ್‌ಪೀಡಿತ ಪ್ರದೇಶಗಳಲ್ಲಿನ ಜನರ ಮೇಲಿನ ದೌರ್ಜನ್ಯ, ಶೋಷಣೆ ಮತ್ತು ಅಭಿವೃದ್ಧಿ ವಿಷಯವಾಗಿ ಚರ್ಚೆ ನಡೆಸಲು ನಕ್ಸಲರು ಬಯಸಿದರೆ ಅವರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಾಗುತ್ತದೆ' ಎಂದು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.