ಭಾನುವಾರ, ಏಪ್ರಿಲ್ 18, 2021
33 °C

ಲೋಕಪಾಲ್ ಮಸೂದೆಗೆ ಪುನಶ್ಚೇತನ: ಮೊಯಿಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ: ಭ್ರಷ್ಟಾಚಾರ ನಿಯಂತ್ರಣಕ್ಕೆ ಕೇಂದ್ರದ ಯುಪಿಎ ಸರ್ಕಾರ ಮುಂದಿನ ಆರು ದಿನಗಳಲ್ಲಿ ಲೋಕಪಾಲ್ ಮಸೂದೆಗೆ ಪುನಶ್ಚೇತನ ನೀಡಲಿದೆ ಎಂದು ಕೇಂದ್ರ ಕಾನೂನು ಹಾಗೂ ನ್ಯಾಯ ಸಚಿವ ಎಂ. ವೀರಪ್ಪ ಮೊಯಿಲಿ ತಿಳಿಸಿದರು.ಕಾಂಗ್ರೆಸ್ ವತಿಯಿಂದ ಇಲ್ಲಿನ ಮಂಜುನಾಥ ಪೈ ಸಾಂಸ್ಕತಿಕ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡ ‘ಗಾಂಧಿ ನಡಿಗೆ’ ಬೂತ್ ಮಟ್ಟದ ಕಾರ್ಯಕರ್ತರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಎನ್‌ಡಿಎ ಸರ್ಕಾರ ಈ ಕಾಯ್ದೆಯನ್ನು ನಿರ್ಲಕ್ಷಿಸಿತ್ತು ಎಂದು ದೂರಿದರು.ವಿರೋಧ ಪಕ್ಷಗಳು ಏನೇ ಆರೋಪ ಮಾಡಿದರೂ ಪ್ರಧಾನಿ ಮನಮೋಹನ್ ಸಿಂಗ್ ಅವರ ಶುದ್ಧ ಚಾರಿತ್ರ್ಯ ಹಾಗೂ ಪ್ರಬಲ ಸಂಕಲ್ಪದೊಂದಿಗೆ ಭವಿಷ್ಯದಲ್ಲಿ ಭ್ರಷ್ಟಾಚಾರ ಕಿತ್ತೆಸೆಯುವ ಕೆಲಸದಲ್ಲಿ ಕಾಂಗ್ರೆಸ್ ತಲ್ಲೆನವಾಗಿದೆ. ಮುಂದಿನ ದಿನಗಳಲ್ಲಿ ಇದರ ಸ್ಪಷ್ಟ ಚಿತ್ರಣ ಜನತೆಗೆ ದೊರಕಲಿದೆ ಎಂದು ಅವರು ಭರವಸೆ ನೀಡಿದರು. ಜನಸಮುದಾಯವನ್ನು ಬೂತ್ ಮಟ್ಟದಲ್ಲಿ ಅರ್ಥಮಾಡಿಕೊಳ್ಳುವ ಸಲುವಾಗಿ ಕಾರ್ಯಕರ್ತರ ಪಡೆ ಕಟ್ಟಬೇಕಾಗಿದೆ. ವೈವಿಧ್ಯತೆಯುಳ್ಳ ದೇಶದ ಸಂಸ್ಕೃತಿಯಲ್ಲಿ ಏಕತೆಯ ಭಾವನೆ ಹುಟ್ಟಿಸಬೇಕಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಮರ್ಥವಾಗಿ ಜನರಲ್ಲಿ ತರಬೇಕಾಗಿದೆ ಎಂದರು.ಪ್ರಜಾಪ್ರಭುತ್ವ ಕೆಡಹುವ ಸಂಚು ನಡೆಯುತ್ತಿದೆ. ಸಂವಿಧಾನದ ಭದ್ರ ಬುನಾದಿ ಶಿಥಿಲಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ. ಜಾತ್ಯತೀತ, ಸ್ವಾತಂತ್ರ್ಯ ಹೋರಾಟ ಉಳಿಯಬೇಕಾದರೆ ಸಾರ್ವಜನಿಕ ಮೌಲ್ಯಗಳು, ರಾಷ್ಟ್ರ ಮೌಲ್ಯಗಳು ನಾಶವಾಗದಂತೆ ತಡೆಯಬೇಕಾದರೆ ಜಾತಿ, ಮತ, ವರ್ಣ ಎಂಬ ಕೆಟ್ಟ ಕಳೆಗಳನ್ನು ನಾಶ ಪಡಿಸಬೇಕಾಗಿದೆ. ಅದನ್ನು ತಳಮಟ್ಟದಲ್ಲಿ ಮಾಡಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.ಆಡಳಿತದ ಮೂಲಬೇರುಗಳನ್ನು ಗಟ್ಟಿಗೊಳಿಸಬೇಕಾಗಿದೆ. ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಿದ್ಧಾಂತಗಳನ್ನು ಸ್ಥಿರೀಕರಿಸಬೇಕಾಗಿದೆ. ಕಾಂಗ್ರೆಸ್‌ನಲ್ಲೇ ಅದು ದುರ್ಬಲವಾಗಬಾರದು. ಶಿಥಿಲವಾಗುತ್ತಿರುವ ಸಿದ್ಧಾಂತಗಳನ್ನು ಸುದೃಢಗೊಳಿಸಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಬೈಂದೂರು ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಶಾಸಕ ಎಚ್.ಗೋಪಾಲ ಭಂಡಾರಿ, ಎಸ್‌ಸಿಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ  ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಾ.ಸಂತೋಷ ಕುಮಾರ್ ಶೆಟ್ಟಿ, ಪುರಸಭಾಧ್ಯಕ್ಷೆ ಪ್ರತಿಮಾ ಮೋಹನ್, ಸುಭಿತ್ ಎನ್.ಆರ್., ಉದ್ಯಮಿ ಅವೆಲಿನ್ ಲೂಯಿಸ್, ಹೆಬ್ರಿಯ ಪ್ರಸನ್ನ ಬಲ್ಲಾಳ್, ಜಿಲ್ಲಾ ಪಂಚಾಯಿತಿ ಸದಸ್ಯ ಸುಪ್ರೀತ್ ಶೆಟ್ಟಿ, ಮಂಜುನಾಥ  ಪೂಜಾರಿ, ಭವಾನಿಶಂಕರ್, ಹರ್ಷ ಮೊಯಿಲಿ, ಮಾಲಿನಿ ರೈ, ಪ್ರೇಮಾ ಆಚಾರ್ಯ, ವಸಂತ ಚಿಪಳೂಣ್‌ಕರ್, ಜಿ.ಎ. ಬಾವಾ, ಬ್ಲಾಕ್ ಕಾಂಗ್ರೆಸ್ ಕರ್ಯದರ್ಶಿ ರಾಜೇಶ್ ಶೆಣೈ, ಬಿಪಿನ್ ಚಂದ್ರಪಾಲ್, ನಿತ್ಯಾನಂದ ಶೆಟ್ಟಿ, ಜೆ.ಡಿ. ನಾಯಕ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.