ಗುರುವಾರ , ಮೇ 6, 2021
23 °C

ಲೋಕಾಯುಕ್ತದಲ್ಲಿ 14 ಸಾವಿರ ಪ್ರಕರಣ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: `ಲೋಕಾಯುಕ್ತ ಇಲಾಖೆಯಲ್ಲಿ ಸುಮಾರು 14 ಸಾವಿರಗಳಷ್ಟು ಪ್ರಕರಣಗಳು ಇತ್ಯರ್ಥವಾಗಬೇಕಿದ್ದು, ಅವುಗಳನ್ನು ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುವುದು. ದೀರ್ಘಕಾಲದವರೆಗೆ ಲೋಕಾಯುಕ್ತರ ನೇಮಕಾತಿಯಾಗದ ಕಾರಣ ಪ್ರಕರಣಗಳು ಹಾಗೇ ಬಾಕಿ ಉಳಿದುಕೊಂಡಿವೆ' ಎಂದು ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ.ಭಾಸ್ಕರ್‌ರಾವ್ ತಿಳಿಸಿದರು.ನಗರದ ಒಕ್ಕಲಿಗರ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಅಹವಾಲು ಸ್ವೀಕಾರ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಬಹುತೇಕ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ, ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಪ್ರಕರಣಗಳ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲಾಗುವುದು' ಎಂದರು.`ಲೋಕಾಯುಕ್ತ ಇಲಾಖೆಯಲ್ಲಿ ಯಾವುದೇ ರೀತಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ. ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುವುದು. ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಿ, ಅಮಾಯಕರಿಗೆ ನ್ಯಾಯವನ್ನು ಒದಗಿಸಲಾಗುವುದು. ಲೋಕಾಯುಕ್ತ ಇಲಾಖೆ ಮೇಲೆ ಜನರು ನಂಬಿಕೆ ಇಡುವಂತೆ ಮಾಡಲಾಗುವುದು' ಎಂದು ಅವರು ಹೇಳಿದರು.`ಲೋಕಾಯುಕ್ತ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೊರತೆಯಿದ್ದು, ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲು ಆಗುತ್ತಿಲ್ಲ. ನಿರೀಕ್ಷೆಯನುಸಾರವಾಗಿ ನೇಮಕಾತಿ ನಡೆದಲ್ಲಿ, ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರಕರಣಗಳನ್ನು ಬೇಗನೆ ಇತ್ಯರ್ಥಗೊಳಿಸಲು ಅನುಕೂಲವಾಗುತ್ತದೆ' ಎಂದು ಅವರು ಹೇಳಿದರು.ಲೋಕಾಯುಕ್ತ ನ್ಯಾಯಮೂರ್ತಿಯವರೇ ಅಹವಾಲುಗಳನ್ನು ಸ್ವೀಕರಿಸಲು ಬರುತ್ತಾರೆಂದು ವಿಷಯ ತಿಳಿದು ಒಕ್ಕಲಿಗರ ಭವನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಜಮೀನು ಒತ್ತುವರಿಯಾಗಿರುವುದು, ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು, ಕೆಲವರಿಂದ ಕಿರಿಕಿರಿಯಾಗುತ್ತಿರುವ ಕುರಿತು, ಮರಳು ಗಣಿಗಾರಿಕೆ, ಭ್ರಷ್ಟಾಚಾರ ಮುಂತಾದವುಗಳ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದರು. `ಕೆಲ ದೂರುಗಳನ್ನು ಸ್ಥಳೀಯ ಮಟ್ಟದಲ್ಲಿ ಪರಿಹರಿಸುವ ಬಗ್ಗೆ ಮತ್ತು ಕೆಲ ದೂರುಗಳನ್ನು ಬೆಂಗಳೂರಿನಲ್ಲಿ ಪರಿಹರಿಸಲಾಗುವುದು' ಎಂದು ಲೋಕಾಯುಕ್ತ ನ್ಯಾಯಮೂರ್ತಿ ತಿಳಿಸಿದರು.ಜಿಲ್ಲಾ ಲೋಕಾಯುಕ್ತ ಅಧಿಕಾರಿ ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ. ಆರ್.ವಿಶಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಿವಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಸತ್ಯಭಾಮಾ, ಉಪವಿಭಾಗಾಧಿಕಾರಿ ಕೆ.ಟಿ.ಶಾಂತಲಾ, ತಹಶೀಲ್ದಾರ್ ಡಿ.ಬಿ.ನಟೇಶ್, ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಮಹೇಶ್‌ಕುಮಾರ್ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.