ಮಂಗಳವಾರ, ಮೇ 18, 2021
23 °C

ಲೋಕಾಯುಕ್ತ ಬಲೆಗೆ ಆರೋಗ್ಯ ನಿರೀಕ್ಷಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಣಿಜ್ಯ ಮಳಿಗೆಯೊಂದರ ಪರವಾನಗಿ ನವೀಕರಿಸಲು ರೂ20 ಸಾವಿರ ಲಂಚ ಪಡೆಯುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬಸವನಗುಡಿ ವಲಯದ ಹಿರಿಯ ಆರೋಗ್ಯ ನಿರೀಕ್ಷಕ ಶಿವಣ್ಣ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಹನುಮಂತನಗರದ ಎನ್.ಸಿ.ವಿಜಯಕುಮಾರ್ ಅವರು ಅದೇ ಪ್ರದೇಶದಲ್ಲಿ ತಮ್ಮ ಅಣ್ಣನ ಮಗ ಮಂಜುನಾಥ್ ಅವರು ಹೊಂದಿರುವ `ದೀಪಾ ಎಂಜಿನಿಯರಿಂಗ್ ವರ್ಕ್ಸ್'ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಮಳಿಗೆಯ ಪರವಾನಗಿ ಅವಧಿ ಕಳೆದ ಫೆಬ್ರುವರಿಯಲ್ಲಿ ಅಂತ್ಯವಾಗಿತ್ತು. ಪರವಾನಗಿ ನವೀಕರಣ ಮಾಡಿಸುವ ಸಂಬಂಧ ವಿಜಯಕುಮಾರ್ ಕೆಲ ದಿನಗಳ ಹಿಂದೆ ಶಿವಣ್ಣ ಅವರನ್ನು ಭೇಟಿ ಮಾಡಿದ್ದರು.ಪರವಾನಗಿ ನವೀಕರಣಕ್ಕೆ ರೂ 25 ಸಾವಿರ ಲಂಚ ನೀಡುವಂತೆ ಆರೋಪಿ ಒತ್ತಾಯಿಸಿದ್ದರು. ನಂತರ ಚೌಕಾಸಿ ಮಾಡಿದಾಗ ರೂ 20 ಸಾವಿರ ನೀಡಿದಲ್ಲಿ, ಪರವಾನಗಿ ನವೀಕರಿಸುವ ಭರವಸೆ ನೀಡಿದ್ದರು. ಈ ಕುರಿತು ವಿಜಯಕುಮಾರ್ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.ಬಸವನಗುಡಿಯ ದ್ವಾರಕಾ ಹೋಟೆಲ್ ಬಳಿ ಮಂಗಳವಾರ ಹಣ ತರುವಂತೆ ಆರೋಪಿಯು ಅರ್ಜಿದಾರರಿಗೆ ಸೂಚಿಸಿದ್ದರು. ಅದರಂತೆ ವಿಜಯಕುಮಾರ್ ಅವರು ಅಲ್ಲಿಗೆ ಹೋಗಿ ಹಣ ನೀಡಿದರು. ತಕ್ಷಣ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಶಿವಣ್ಣ ಅವರನ್ನು ಬಂಧಿಸಿದ್ದಾರೆ.ಪ್ರಾಥಮಿಕ ತನಿಖೆ ಪೂರ್ಣಗೊಳಿಸಿ ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.