ಬುಧವಾರ, ಮೇ 18, 2022
23 °C
ಆರೋಪಿಗಳಿಂದ ಇತರ ರಾಜ್ಯದಲ್ಲೂ ವಂಚನೆ: ದಿಲೀಪ್

`ವಂಚನೆಗೊಳಗಾಗಿದ್ದಲ್ಲಿ ಮಾಹಿತಿ ಕೊಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ನಗರದಲ್ಲಿ ಈಚೆಗೆ ಸಿಕ್ಕಿಬಿದ್ದ ಇಬ್ಬರು ಆರೋಪಿಗಳು ನಮ್ಮ ರಾಜ್ಯವಲ್ಲದೇ ಬೇರೆ ರಾಜ್ಯದಲ್ಲಿಯೂ ವಂಚನೆ ಮಾಡಿರುವ ಪ್ರಕರಣ ಬಯಲಿಗೆ ಬಂದಿದೆ ಎಂದು ಜಿಲ್ಲಾ ಎಸ್ಪಿ ಆರ್. ದಿಲೀಪ್ ತಿಳಿಸಿದರು.

ನಗರದ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಆರೋಪಿಗಳಾದ ಅಬ್ದುಲ್ ಜಾವೇದ್ ಮತ್ತು ಖಾದರ್ ಖಾನ್ ಎಂಬುವವರು ಯೋಜನಾ ಆಯೋಗದ ಸದಸ್ಯರೆಂದು ಹೇಳಿಕೊಂಡು ನಗರದ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದಾಗ ಪೊಲೀಸರು ಅನುಮಾನಗೊಂಡು ಅವರನ್ನು ಬಂಧಿಸಿದ್ದರು.

ಬಂಧಿತರು ಕರ್ನಾಟಕ ಅಲ್ಲದೇ ಗೋವಾ ರಾಜ್ಯದಲ್ಲೂ ವಂಚನೆ ಮಾಡಿರುವ ಪ್ರಕರಣ ಬಯಲಿಗೆ ಬಂದಿದ್ದು, ನಗರದಲ್ಲೂ ವಂಚನೆ ಮಾಡಲು ಯೋಜನೆ ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ' ಎಂದರು.`ಬಂಧಿತರಿಬ್ಬರು ಬೆಂಗಳೂರಿನವರಾಗಿದ್ದು, ಅವರಲ್ಲಿ ಅಬ್ದುಲ್ ಜಾವೇದ್ ಯೋಜನಾ ಆಯೋಗದ ಸದಸ್ಯ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಸದಸ್ಯನೆಂದು ವಿಸಿಟಿಂಗ್ ಕಾರ್ಡ್ ಮುದ್ರಿಸಿಕೊಂಡು ಜನರಿಗೆ ಮೋಸ ಮಾಡುವ ಉದ್ದೇಶ ಹೊಂದಿದ್ದ. ಈತ 2002ರಲ್ಲಿ ಭಟ್ಕಳದಲ್ಲಿ ನಾಲ್ಕು ಮಂದಿಗೆ ವಿದೇಶದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಅವರಿಂದ ಹಣ ಪಡೆದು ಮೋಸ ಕೂಡ ಮಾಡಿದ್ದಾನೆ.

ಈ ಪ್ರಕರಣ ಭಟ್ಕಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅದೇ ರೀತಿ ಬೆಂಗಳೂರು ಪ್ರೇಜರ್‌ಟೌನ್‌ಪೊಲೀಸ್ ಠಾಣೆಯಲ್ಲೂ ವಂಚನೆ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಆತನ ಬ್ಯಾಂಕ್ ವ್ಯವಹಾರವನ್ನು ಪತ್ತೆ ಹಚ್ಚಲಾಗಿದ್ದು, ಈತನ ಖಾತೆಯಲ್ಲಿ ಹೆಚ್ಚಿನ ಮಟ್ಟದ ಹಣದ ವ್ಯವಹಾರ ಕಂಡುಬಂದಿದೆ. ಈತ ಗೋವಾ ರಾಜ್ಯದಲ್ಲೂ ವ್ಯವಹಾರ ನಡೆಸಿದ್ದು, ಈ ಬಗ್ಗೆಯೂ ಕೂಲಂಕಷವಾಗಿ ತನಿಖೆ ಕೈಗೊಳ್ಳಲಾಗಿದೆ' ಎಂದರು.`ಜಾವೇದ್ ಬೆಂಗಳೂರಿನಲ್ಲಿ ತನ್ನ ಹೆಸರನ್ನು ಮರೆಮಾಚಿ ಸುನೀಲ್ ಎಂದು ಕಳೆದ 8-10 ವರ್ಷಗಳಿಂದ ವಾಸ್ತವ್ಯ ಮಾಡಿದ್ದ. ತಾನು ವ್ಯವಹರಿಸುವಾಗ ಬೇರೆ ಬೇರೆ ವಿಳಾಸಗಳನ್ನು ನೀಡಿ ಅಲ್ಪ ಅವಧಿಯಲ್ಲಿ ಆ ವಿಳಾಸಗಳನ್ನು ಬದಲಾಯಿಸುತ್ತಿದ್ದ. ಇದರಿಂದ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ. ಇವರ ಜೊತೆ ಸವಿತಾ ಶೆಟ್ಟಿ ಹಾಗೂ ನಮೀಜ್ ಎನ್ನುವವರು ಸೇರಿ ಹಲವು ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರನ್ನು ಕೂಡಲೇ ಬಂಧಿಸಲಾಗುವುದು' ಎಂದರು.ಬಹುಮಾನ: ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲ ಪೊಲೀಸ್ ಸಿಬ್ಬಂದಿಗೆ ಹಾಗೂ ಮಾಹಿತಿದಾರರಿಗೂ ದಿಲೀಪ್ ಅವರು ಸೂಕ್ತ ಬಹುಮಾನ ಘೋಷಿಸಿದರು. ಅಡಿಷನಲ್ ಎಸ್ಪಿ ಮಗೆಣ್ಣ, ಡಿವೈಎಸ್ಪಿ ಉಲ್ಲಾಸ ವೆರ್ಣೇಕರ್, ಕಾರವಾರ ಸರ್ಕಲ್ ಇನ್‌ಸ್ಪೆಕ್ಟರ್ ಎನ್.ಆರ್. ಮುಕ್ರಿ, ಅಂಕೋಲಾ ಇನ್‌ಸ್ಪೆಕ್ಟರ್ ವಿಜಯ್‌ಪ್ರಸಾದ್ ಹಾಜರಿದ್ದರು.

ವಂಚಕರಿಂದ ಜಾಗೃತರಾಗಿರಿ...

ಕಾರವಾರ: ಆರೋಪಿಗಳಿಂದ ವಂಚನೆಗೊಳಗಾದವರು ಮುಂದೆ ಬಂದರೆ ಅವರಿಗೆ ನ್ಯಾಯ ದೊರಕಿಸಿಕೊಡಲಾಗುವುದು. ಅಲ್ಲದೇ ಮುಂದಿನ ತನಿಖೆಗೂ ಸಹಕಾರಿಯಾಗಲಿದೆ. ಸಾರ್ವಜನಿಕರು ಈ ರೀತಿ ವಂಚಕರಿಂದ ಸದಾ ಜಾಗೃತರಾಗಿರಬೇಕು ಎಂದು ಜಿಲ್ಲಾ ಎಸ್ಪಿ ಆರ್. ದಿಲೀಪ್ ಸಲಹೆ ನೀಡಿದರು.ಈ ರೀತಿಯ ವಂಚನೆ ಪ್ರಕರಣಗಳಲ್ಲಿ ಸಿಲುಕುವ ಮುನ್ನ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದ ಅವರು, ವಂಚಿತ ವ್ಯಕ್ತಿಗಳು ಗಮನ ಬಂದರೆ ಪೊಲೀಸ್ ಇಲಾಖೆಗೆ ಅಥವಾ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು ಎಂದರು.ಈ ಆರೋಪಿಗಳಿಂದ ವಂಚಿರಾದವರು ಇದ್ದರೆ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ದೂ:  08382-226233, ಮೊ: 94808 05201, ಡಿವೈಎಸ್ಪಿ ದೂ: 226416, ಮೊ: 94909 05220, ಸರ್ಕಲ್ ಇನ್‌ಸ್ಪೆಕ್ಟರ್ ದೂ: 225337, 94808 05230, ಕಂಟ್ರೋಲ್ ರೂಂ 226550 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.