ಶನಿವಾರ, ಜನವರಿ 18, 2020
26 °C

ವಕೀಲರಿಂದ ಗ್ರಾ.ಪಂ. ಅಧ್ಯಕ್ಷ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ತಾವು ನಡೆಸುತ್ತಿದ್ದ ದಿಢೀರ್ ರಸ್ತೆ ತಡೆಯನ್ನು ಪ್ರಶ್ನಿಸಲು ಬಂದ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರನ್ನು ವಕೀಲರು ಹಿಡಿದು ಥಳಿಸಿದ ಘಟನೆ ಗುರುವಾರ ನಗರದಲ್ಲಿ ನಡೆದಿದೆ.ನವಲಗುಂದ ತಾಲ್ಲೂಕು ಗುಡಿಸಾಗರದ ಬಸವರಾಜ ಉಳ್ಳಾಗಡ್ಡಿ ಎಂಬುವವರೇ ವಕೀಲರಿಂದ ಏಟು ತಿಂದ ವ್ಯಕ್ತಿಯಾಗಿದ್ದಾರೆ.ಗುರುವಾರ ಬೆಳಿಗ್ಗೆ ಕಲಾಪ ಬಹಿಷ್ಕರಿಸಿದ ವಕೀಲರು ಕೋರ್ಟ್ ಆವರಣದಿಂದ ಹೊರಬಂದು ರಸ್ತೆತಡೆ ಚಳವಳಿ ಆರಂಭಿಸಿದರು. ಕೋರ್ಟ್ ಮುಂಭಾಗದಿಂದ ಸರ್ಕಲ್ ಕಡೆಗೆ ತೆರಳಿದ ಪ್ರತಿಭಟನಾಕಾರರು ಅಲ್ಲಿಯೂ ರಸ್ತೆತಡೆ ಮುಂದುವರಿಸಿದರು. ಇದರಿಂದ ಬಾಗಲಕೋಟೆ ಮತ್ತು ಗದಗ ಹೆದ್ದಾರಿಗಳಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು.ನವಲಗುಂದ ಕಡೆಯಿಂದ ಟ್ರ್ಯಾಕ್ಟರ್‌ನಲ್ಲಿ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಗುಡಿಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ, ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರತಿಭಟನೆ ನಡೆಸುತ್ತಿದ್ದ ವಕೀಲರ ಬಳಿಗೆ ಬಂದರು. `ಮೊದಲೇ ಸೂಚನೆ ನೀಡದೆ ರಸ್ತೆತಡೆ ನಡೆಸಿದರೆ ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲವೆ~ ಎಂದು ಅವರು ಪ್ರಶ್ನಿಸಿದರು.`ನಾವು ರೈತರು ಅಲ್ಲಿ ಸಾಯುತ್ತಿದ್ದೇವೆ. ನೀವು ಇಲ್ಲಿ ವಿನಾಕಾರಣ ಪ್ರತಿಭಟನೆ ನಡೆಸುವ ಮೂಲಕ ಎಲ್ಲರಿಗೂ ತೊಂದರೆ ಮಾಡುತ್ತಿದ್ದೀರಿ. ದಿನ ಬೆಳಗಾದರೆ ಕಾನೂನು ಜಪಿಸುವ ನಿಮಗೆ ಕಾನೂನು ಪಾಲಿಸುವ ಅಗತ್ಯ ಕಾಣುವುದಿಲ್ಲವೆ~ ಎಂದು ಅವರು ಕೇಳಿದರು. `ರಸ್ತೆತಡೆ ಕೈಬಿಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು~ ಎಂಬ ಆಗ್ರಹವನ್ನೂ ಮಾಡಿದರು.ಬಸವರಾಜ ಅವರ ಮಾತಿನಿಂದ ರೊಚ್ಚಿಗೆದ್ದ ಕೆಲವು ವಕೀಲರು, ಅವರನ್ನು ಹಿಡಿದು ಥಳಿಸಿದರು. ಇನ್ನಷ್ಟು ಜನ ಅವರತ್ತ ನುಗ್ಗಿ ಬರುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಪೊಲೀಸರು, ಹಲ್ಲೆಯಿಂದ ಅವರನ್ನು ರಕ್ಷಿಸಿದರು. ಘಟನೆ ನಡೆದ ತಕ್ಷಣವೇ ವಕೀಲರು ಅಲ್ಲಿಂದ ಕೋರ್ಟ್‌ನತ್ತ ಧಾವಿಸಿದರು. ರಸ್ತೆ ಸಂಚಾರಕ್ಕೆ ಮುಕ್ತವಾಯಿತು.ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬಸವರಾಜ ಅವರು, `ಕರಿಕೋಟು ಧರಿಸಿದ ಮಾತ್ರಕ್ಕೆ ಏನು ಮಾಡಿದರೂ ನಡೆಯುತ್ತದೆಯೇ~ ಎಂದು ಪ್ರಶ್ನಿಸಿದರು. `ಕಾನೂನಿನ ಪ್ರಕಾರ ನಡೆಯಬೇಕು ಎಂಬ ನನ್ನ ಸಲಹೆಯಲ್ಲಿ ಏನು ತಪ್ಪಿತ್ತು. ಅವರ ದಬ್ಬಾಳಿಕೆ ಇಲ್ಲಿಗೆ ಕೊನೆಗೊಳ್ಳಬೇಕು~ ಎಂದು ಆಕ್ರೋಶ ವ್ಯಕ್ತಪಡಿಸಿದರು.`ಮೊದಲೇ ಒಂದೊಂದು ಆಳಿಗೆ ರೂ 200ರವರೆಗೆ ಕೂಲಿ ಕೊಟ್ಟು ಬಸವಳಿದಿದ್ದೇವೆ. ಮಾರಾಟಕ್ಕೆ ಹೊರಟಾಗಲೂ ವಿನಾಕಾರಣ ತಡವಾದರೆ ನಮಗೆ ನೋವಾಗುತ್ತದೆ. ಆಸ್ಪತ್ರೆ, ಶಾಲೆ, ಕಚೇರಿ ಸೇರಿದಂತೆ ಎಲ್ಲೆಡೆ ತೆರಳುವ ಸಾರ್ವಜನಿಕರಿಗೂ ರಸ್ತೆತಡೆಯಿಂದ ತೊಂದರೆ ಆಗುತ್ತಿದೆ. ಒಂದುವೇಳೆ ಪ್ರತಿಭಟನೆ ನಡೆಸುವುದಿದ್ದರೆ ಮೊದಲೇ ಸೂಚನೆ ನೀಡಬೇಕು. ಇದರಿಂದ ನಮ್ಮ ಕೆಲಸವನ್ನಾದರೂ ಮುಂದಕ್ಕೆ ಹಾಕಲು ಅನುವಾಗುತ್ತದೆ~ ಎಂದು ಅವರು ಹೇಳಿದರು.ಬೆಂಗಳೂರು ಘಟನೆ ಹಿನ್ನೆಲೆಯಲ್ಲಿ ವಕೀಲರು ಈ ಪ್ರತಿಭಟನೆ ಹಮ್ಮಿಕೊಂಡಿದ್ದರು. ಡಿಸಿಪಿ ಎಸ್.ಎಂ. ಪ್ರತಾಪನ್, ಎಸಿಪಿ ಎ.ಆರ್. ಬಡಿಗೇರ್ ನೇತೃಥ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಘಟನೆ ಕುರಿತಂತೆ ಪ್ರತಾಪನ್ ಅವರನ್ನು ಪ್ರಶ್ನಿಸಿದಾಗ, `ಥಳಿತಕ್ಕೆ ಒಳಗಾದ ವ್ಯಕ್ತಿ ದೂರು ನೀಡಿದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ~ ಎಂದರು.

 

ಪ್ರತಿಕ್ರಿಯಿಸಿ (+)