ಮಂಗಳವಾರ, ಜೂನ್ 22, 2021
29 °C

ವಕೀಲರು, ಮಾಧ್ಯಮಗಳ ಜಟಾಪಟಿ: ಸಂಘರ್ಷಕ್ಕೆ ತೆರೆ ಎಳೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪತ್ರಕರ್ತರು ಹಾಗೂ ವಕೀಲರ ನಡುವಿನ ಸಂಘರ್ಷಕ್ಕೆ ತೆರೆ ಎಳೆಯಲು ರಾಜ್ಯ ಸರ್ಕಾರ ತಕ್ಷಣ ಸಂಧಾನಕ್ಕೆ ಮುಂದಾಗಬೇಕು. ಕೂಡಲೇ ಸಮಿತಿಯೊಂದನ್ನು ರಚಿಸುವ ಮೂಲಕ ಎರಡೂ ಕಡೆಯವರೊಂದಿಗೆ ಸಂಧಾನ ನಡೆಸಿ ಒಂದು ತಿಂಗಳಲ್ಲಿ ಪರಿಹಾರ ಕಂಡುಕೊಳ್ಳಬೇಕು~ ಎಂದು ಸಂಸದ ಡಿ.ಬಿ.ಚಂದ್ರೇಗೌಡ, ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಪ್ರೊ.ಬಿ.ಕೆ.ಚಂದ್ರಶೇಖರ್, ವಿ.ಆರ್. ಸುದರ್ಶನ್ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ಸೋಮವಾರ ಇಲ್ಲಿ ಒತ್ತಾಯಿಸಿದರು.ಕುಮಾರಕೃಪ ಅತಿಥಿಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚಿರುವುದರಿಂದ ಮಾಧ್ಯಮ ಸಂಸ್ಥೆಗಳ ವಾಹನಗಳಿಗೆ ಹಾನಿಗೀಡಾಗಿರುವ ಹಿನ್ನೆಲೆಯಲ್ಲಿ ಸರ್ಕಾರವೇ ನಷ್ಟ ಭರಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಅನಾಹುತ ಮರುಕಳಿಸುವುದನ್ನು ತಪ್ಪಿಸಲು ಮುನ್ನೆಚ್ಚರಿಕೆ ವಹಿಸಬೇಕು~ ಎಂದು ಆಗ್ರಹಿಸಿದರು.`ಸಿಬಿಐ ಅಥವಾ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಾಂಗ ತನಿಖೆಯಿಂದ ತಕ್ಷಣಕ್ಕೆ ಪರಿಹಾರ ಸಿಗಲು ಸಾಧ್ಯವಿಲ್ಲ. ಸಿಬಿಐ ತನಿಖೆ 20 ವರ್ಷಗಳ ಸುದೀರ್ಘ ಕಾಲ ನಡೆದ ಉದಾಹರಣೆಗಳೂ ನಮ್ಮ ಕಣ್ಮುಂದಿವೆ. ಒಬ್ಬ ಲೋಕಪಾಲ್ ಮಸೂದೆ ಸದಸ್ಯನಾಗಿ ನಾನು ಈ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇನೆ. ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಶುಕ್ರವಾರ ನಡೆದ ಘಟನೆಯಿಂದ ಎಲ್ಲರ ಮನಸ್ಸುಗಳು ನೊಂದಿವೆ. ರಾಜ್ಯದ ಜನ ತಕ್ಷಣ ಸಮಸ್ಯೆಯ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.ಈ ದೃಷ್ಟಿಯಿಂದ ಸರ್ಕಾರ ತಕ್ಷಣ ಸಂಧಾನ ಮಾರ್ಗವನ್ನು ಅನುಸರಿಸಬೇಕು~ ಎಂದು ಚಂದ್ರೇಗೌಡ ಮನವಿ ಮಾಡಿದರು.`ವಕೀಲರ ಸಂಘ, ವಕೀಲರ ಪರಿಷತ್, ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ಸರ್ಕಾರದ ಪರ ಒಬ್ಬೊಬ್ಬ ಪ್ರತಿನಿಧಿ ಹಾಗೂ ಅಗತ್ಯವೆನಿಸಿದಲ್ಲಿ ಸಾರ್ವಜನಿಕ ಸಂಘ- ಸಂಸ್ಥೆಗಳ ಪ್ರತಿನಿಧಿಗಳನ್ನೂ ಸೇರಿಸಿಕೊಂಡು ಸಮಿತಿ ರಚಿಸುವ ಮೂಲಕ ಒಂದು ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ಸಮಿತಿಯಲ್ಲಿ ಏಳೆಂಟು ಮಂದಿ ಸದಸ್ಯರಿದ್ದರೂ ಅಭ್ಯಂತರವಿಲ್ಲ. ಸರ್ಕಾರಕ್ಕೆ ಎಲ್ಲ ರೀತಿಯ ಮಾರ್ಗದರ್ಶನ-ಸಲಹೆ ನೀಡಲು ನಾವು ಕೂಡ ಸಿದ್ಧ~ ಎಂದು ಅವರು ಹೇಳಿದರು.ಸರ್ಕಾರಕ್ಕೆ ಸೂಕ್ಷ್ಮ ಪ್ರಜ್ಞೆಯ ಕೊರತೆ: `ರಾಜ್ಯ ಸರ್ಕಾರಕ್ಕೆ ಸಮಸ್ಯೆಯ ಗಂಭೀರತೆಯ ಅರಿವಿದ್ದಂತಿಲ್ಲ. ಘಟನೆ ನಡೆದು ಮೂರು ದಿನಗಳಾದರೂ ಸಮಸ್ಯೆಯನ್ನು ಬಗೆಹರಿಸುವ ಸೂಕ್ಷ್ಮ ಪ್ರಜ್ಞೆಯ ಕೊರತೆ ಎದ್ದು ಕಾಣುತ್ತಿದೆ. ಮಾಧ್ಯಮ ಸಂಸ್ಥೆ ಮತ್ತು ಪತ್ರಕರ್ತರ ಪರ ವಾದ ಮಂಡಿಸದಿರಲು ವಕೀಲರ ಸಂಘ ಕೈಗೊಂಡಿರುವ ನಿರ್ಧಾರ ಸರಿಯಾದುದಲ್ಲ. ಯಾರೂ ಕಾನೂನಿಗಿಂತ ದೊಡ್ಡವರಲ್ಲ~ ಎಂದು ಪ್ರೊ.ಬಿ.ಕೆ. ಚಂದ್ರಶೇಖರ್ ನುಡಿದರು.`ಇಂತಹ ಬೆದರಿಕೆ ಸರಿಯಾದುದಲ್ಲ~ ಎಂದು ವಿ.ಆರ್. ಸುದರ್ಶನ್ ಹೇಳಿದರೆ, `ಅದು ಸಂವಿಧಾನಕ್ಕೆ ಅಪಚಾರ ಮಾಡುವಂಥದ್ದು~ ಎಂದು ವಾಟಾಳ್ ನಾಗರಾಜ್ ಟೀಕಿಸಿದರು. `ಒಂದು ವೇಳೆ ನಾವೇ ಹೋಗಿ ಪೊಲೀಸರನ್ನು ಬಂಧಿಸಿಕೊಂಡು ಬರುತ್ತೇವೆ ಎಂದು ವಕೀಲರು ಹೇಳುವುದಾದರೆ ಪರಿಸ್ಥಿತಿ ಎಲ್ಲಿಗೆ ತಲುಪಬಹುದು?~ ಎಂದು ಬಿ.ಕೆ. ಚಂದ್ರಶೇಖರ್ ಪ್ರಶ್ನಿಸಿದರು.`ಪ್ರತಿಭಟನೆ ನಡೆಸುವುದು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಹೇಳಿದೆ. ವಕೀಲರು ಕಲಾಪ ಬಹಿಷ್ಕರಿಸುವುದು ತಪ್ಪು. ವಕೀಲರ ಸಂಘ ಹಾಗೂ ವಕೀಲರ ಪರಿಷತ್ತು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು~ ಎಂದು ಆಗ್ರಹಿಸಿದ ಸುದರ್ಶನ್, `ಅಗತ್ಯ ಬಿದ್ದರೆ ಸರ್ಕಾರ ತಕ್ಷಣ ಸರ್ವ ಪಕ್ಷಗಳ ಸಭೆ ಕರೆಯಬೇಕು~ ಎಂದು ಒತ್ತಾಯಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.