ಶನಿವಾರ, ಜನವರಿ 25, 2020
16 °C

ವಕೀಲರ ವಿರುದ್ಧ ಕ್ರಿಮಿನಲ್ ದಾವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬೆಂಗಳೂರು: `ವಕೀಲರು ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಹಿನ್ನೆಲೆಯಲ್ಲಿ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ~ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ತಿಳಿಸಿದ ಬೆನ್ನಹಿಂದೆಯೇ ಗುರುವಾರ ರಾಜ್ಯದಾದ್ಯಂತ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಲು ಬೆಂಗಳೂರು ವಕೀಲರ ಸಂಘವು ಕರೆ ಕೊಟ್ಟಿದೆ.ವಕೀಲರ ದಿಢೀರ್ ಪ್ರತಿಭಟನೆಯಿಂದಾದ ಪರಿಣಾಮಗಳ ಕುರಿತು ನಗರದಲ್ಲಿ ಬುಧವಾರ ವಕೀಲರ ಸಂಘಗಳ ಸದಸ್ಯರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಬಿದರಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.`ವಕೀಲರು ಏಳು ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದೆ. ರೋಗಿಗಳು, ಶಾಲಾ ಮಕ್ಕಳು, ಕಚೇರಿಗಳಿಗೆ ಹೊರಟಿದ್ದ ನೌಕರರು ಪ್ರತಿಭಟನೆಯಿಂದ ತೀವ್ರ ತೊಂದರೆ ಅನುಭವಿಸಿದ್ದಾರೆ. ಅಲ್ಲದೇ ವಾಣಿಜ್ಯ ಚಟುವಟಿಕೆಗಳಿಗೂ ಹಿನ್ನಡೆಯಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ~ ಎಂದು ಹೇಳಿದರು.`ಸಚಿವರು, ವಕೀಲರು, ಪೊಲೀಸ್ ಅಧಿಕಾರಿಗಳು ಯಾರೇ ಆಗಲಿ ಕಾನೂನು ಎಲ್ಲರಿಗೂ ಒಂದೇ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಮುಂದಿನ ದಿನಗಳಲ್ಲಿ ಯಾವುದೇ ಸಂಘ ಸಂಸ್ಥೆಯ ಸದಸ್ಯರು ಐದು ಅಥವಾ ಹತ್ತು ನಿಮಿಷಕ್ಕಿಂತ ಹೆಚ್ಚು ಕಾಲ ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದರೆ ಅಂತಹವರನ್ನು ಕೂಡಲೇ ಬಂಧಿಸಲಾಗುತ್ತದೆ~ ಎಂದು ಎಚ್ಚರಿಕೆ ನೀಡಿದರು.`ಮಂಗಳವಾರ ಇಡೀ ದಿನ ನಡೆದ ಘಟನಾವಳಿಗಳ ಬಗ್ಗೆ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು 20 ಪುಟಗಳ ವರದಿ ನೀಡಿದ್ದಾರೆ. ಆ ವರದಿಯನ್ನು ಪರಿಶೀಲಿಸಲಾಗುತ್ತಿದೆ. ಕಾನ್‌ಸ್ಟೇಬಲ್ ಅರುಣ್‌ಕುಮಾರ್ ಅವರನ್ನು ಅಮಾನತು ಮಾಡಿರುವ ಆದೇಶದ ಬಗ್ಗೆ ಮಿರ್ಜಿ ಅವರೇ ನಿರ್ಧಾರ ಕೈಗೊಳ್ಳುತ್ತಾರೆ. ಅರುಣ್‌ಕುಮಾರ್ ಅವರಿಗೆ ಅನ್ಯಾಯವಾಗಿದ್ದರೆ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತಾರೆ~ ಎಂದು ಬಿದರಿ ಮಾಹಿತಿ ನೀಡಿದರು. ಆದರೆ, ಅಮಾನತು ಆದೇಶ ಹಿಂತೆಗೆದುಕೊಳ್ಳಲಾಗುವುದು ಎಂದು ಗೃಹಸಚಿವ ಅಶೋಕ ತಿಳಿಸಿದ್ದಾರೆ.ವಶಕ್ಕೆ ತೆಗೆದುಕೊಂಡಿಲ್ಲ: `ಘಟನೆ ಸಂಬಂಧ ದೊಂಬಿ, ಕಾನೂನು ಬಾಹಿರವಾಗಿ ಗುಂಪು ಸೇರುವುದು, ಸಾರ್ವಜನಿಕರನ್ನು ತಡೆ ಹಿಡಿಯುವುದು, ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಮತ್ತು ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ವಕೀಲರ ವಿರುದ್ಧ ಪ್ರತ್ಯೇಕವಾಗಿ ಎರಡು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 143, 147,    149, 353, 341 ಮತ್ತು 427ರ ಅಡಿ ಮೊಕದ್ದಮೆಗಳು ದಾಖಲಾಗಿವೆ. ಪ್ರಕರಣದ ಸಂಬಂಧ ಈವರೆಗೂ ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ~ ಎಂದು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.ಜ್ಯೋತಿಪ್ರಕಾಶ್ ಮಿರ್ಜಿ, ಸುನಿಲ್‌ಕುಮಾರ್, ಅಪರಾಧ (ಪೂರ್ವ) ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಹಾಗೂ ವಕೀಲರ ಸಂಘದ ಇತರೆ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.ಈ ಮಧ್ಯೆ ಬೆಂಗಳೂರು ವಕೀಲರ ಸಂಘದ ಸದಸ್ಯರೂ ಸೇರಿದಂತೆ ಹಲವು ವಕೀಲರು    ಕೋರ್ಟ್‌ಗೆ ಹಾಜರು ಆಗಬಾರದು ಎಂದು ನಿರ್ಧರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬುಧವಾರ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸಿದ ಸಂಘವು ಈ ನಿರ್ಣಯ ತೆಗೆದುಕೊಂಡಿದೆ. ರಾಜ್ಯದಲ್ಲಿರುವ ಎಲ್ಲ ವಕೀಲರ ಸಂಘಗಳಿಗೆ ಮನವಿ ಮಾಡಿಕೊಳ್ಳುವ ಮೂಲಕ ಕೋರ್ಟ್ ಕಲಾಪ ಬಹಿಷ್ಕರಿಸುವಂತೆ ತಿಳಿಸಲು ಸಂಘ ನಿರ್ಧರಿಸಿದೆ. 

 

ಪ್ರತಿಭಟನೆಯಿಂದ ಬೆಂಗಳೂರು ಜನತೆ ಅನುಭವಿಸಿದ ಸಂಕಷ್ಟಗಳ ಕುರಿತು ವರದಿ ಮಾಡಿರುವ ಮಾಧ್ಯಮಗಳ ವಿರುದ್ಧವೂ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಇದರೊಂದಿಗೆ ವಕೀಲರ ವರ್ತನೆ ವಿರುದ್ಧ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಗೃಹ ಸಚಿವ ಆರ್.ಅಶೋಕ ಹಾಗೂ ಕಾನೂನು ಸಚಿವ ಸುರೇಶ್‌ಕುಮಾರ್ ಅವರ ಹೇಳಿಕೆಗಳನ್ನೂ ವಕೀಲರು ಖಂಡಿಸಿದ್ದಾರೆ.  `ಈ ರೀತಿ ಮಾಧ್ಯಮಗಳು ನಮ್ಮ ತೇಜೋವಧೆ ಮಾಡಿರುವುದು ಸರಿಯಲ್ಲ. ಸಚಿವರು ಹೇಳಿಕೆ ನೀಡಿರುವುದೂ ಸಮಂಜಸವಲ್ಲ. ವಕೀಲರ ಮೇಲೆ ದೌರ್ಜನ್ಯ ನಡೆದಿದೆ. ಆದರೆ ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ~ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.  ಗುರುವಾರ ಬೆಳಿಗ್ಗೆ 10.30ಕ್ಕೆ ನಗರ ಸಿವಿಲ್ ಕೋರ್ಟ್ ಆವರಣದಿಂದ ರಾಜಭವನಕ್ಕೆ ಮೆರವಣಿಗೆ ಮೂಲಕ ತೆರಳಲಿರುವ ವಕೀಲರು ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ. `ವಕೀಲರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದರೂ, ಅವರ ವಿರುದ್ಧ ಏನೂ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಆದೇಶಿಸಬೇಕು~ ಎನ್ನುವುದು ಅವರ ಮನವಿ. ಇತರ ಎಲ್ಲ ನ್ಯಾಯಾಲಯಗಳ ಮುಂದೆಯೂ ಸಂಜೆ 6ಗಂಟೆಯ ವರೆಗೆ ಪ್ರತಿಭಟನೆ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.  ಹಿರಿಯರ ಅತೃಪ್ತಿ: ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ತೀರ್ಪುಗಳನ್ನು ಉಲ್ಲಂಘಿಸಿ ಈ ರೀತಿ ಬಹಿಷ್ಕಾರಕ್ಕೆ ಕರೆ ನೀಡಿರುವ ವಕೀಲರ ವಿರುದ್ಧ ಹಿರಿಯ ವಕೀಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ಸುಪ್ರೀಂಕೋರ್ಟ್ ನೀಡಿದ ತೀರ್ಪುಗಳನ್ನು ಉಲ್ಲಂಘಿಸಿ ಈ ರೀತಿ ನಡೆದುಕೊಳ್ಳುತ್ತಿರುವುದು ಉಚಿತವಲ್ಲ. ಹಿಂದೆ ಕೂಡ ವಕೀಲರು ಇದೇ ರೀತಿ ವರ್ತಿಸಿ ನ್ಯಾಯಮೂರ್ತಿಯೊಬ್ಬರನ್ನು ಕೂಡಿ ಹಾಕಿದ್ದರು~ ಎಂದು ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರ‌್ನಹಳ್ಳಿ ತಿಳಿಸಿದರು. 

`ಬುಧವಾರವೇ ವಕೀಲರು ಬಹಳಷ್ಟು ಗಲಾಟೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದಾರೆ. ಈಗ ಕೋರ್ಟ್ ಕಲಾಪ ಬಹಿಷ್ಕಾರ ಮಾಡುತ್ತಿರುವುದು ಉಚಿತವಲ್ಲ~ ಎಂದು ಮಾಜಿ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ನುಡಿದರು.`ಇದು ಬಹಳ ವಿಷಾದದ ಸಂಗತಿ. ವಕೀಲರು ಯಾವ ಸನ್ನಿವೇಶದಲ್ಲಿಯೂ ನ್ಯಾಯಾಲಯಗಳನ್ನು ಬಹಿಷ್ಕರಿಸಬಾರದು. ವಕೀಲರು ಹಾಜರಾಗಿ ಅವರ ಕಕ್ಷಿದಾರರ ಹಿತಾಸಕ್ತಿ ಕಾಪಾಡಬೇಕು. ಇಲ್ಲದಿದ್ದರೆ ಕಕ್ಷಿದಾರರನ್ನು ನಾವೇ ದಂಡಿಸಿದಂತಾಗುತ್ತದೆ. ಇಂತಹ ನಿರ್ಣಯ ತೆಗೆದುಕೊಂಡ ವಕೀಲರ ಸಂಘದ ಪದಾಧಿಕಾರಿಗಳು ಕೂಡಲೇ ರಾಜೀನಾಮೆ ಕೊಟ್ಟು ವಕೀಲಿ ವೃತ್ತಿಯ ಘನತೆ ಕಾಪಾಡುವುದು ಅಗತ್ಯ~ ಎಂದು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವಿವರಿಸಿದರು.

ಕಾನೂನು ಉಲ್ಲಂಘನೆ ವಿರುದ್ಧ ಕ್ರಮ: ಸರ್ಕಾರ

 `ನ್ಯಾಯ ಎತ್ತಿ ಹಿಡಿಯಬೇಕಾದ ವಕೀಲರು ಯಾವುದೇ ಸೂಚನೆ ನೀಡದೆ, ಯಾರ ಅನುಮತಿಯನ್ನು ಪಡೆಯದೇ ಮಂಗಳವಾರ ದಿಢೀರ್ ಧರಣಿ ನಡೆಸಿದ್ದಾರೆ. ಇದರಿಂದ ಏಳು ಗಂಟೆ ಕಾಲ ಸಂಚಾರಕ್ಕೆ ಅಡ್ಡಿಯುಂಟಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸುವುದಾಗಿ ಗೃಹ ಸಚಿವ ಆರ್. ಅಶೋಕ ತಿಳಿಸಿದರು. `ಕಾನೂನು ಉಲ್ಲಂಘಿಸಿದವರನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಪ್ರತಿಭಟನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ವಕೀಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಸಹ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿ ಪ್ರತಿಭಟನಾಕಾರ ಮನವೊಲಿಸಲು ಯತ್ನಿಸಿದರು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.

 

`ಪಿಐಎಲ್ ಹಾಕಬಾರದೇಕೆ?~

ವಕೀಲರ ಮುಷ್ಕರದಿಂದ ಮಂಗಳವಾರ ಜನತೆ ಅನುಭವಿಸಿದ ಕಷ್ಟ ನಷ್ಟಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ಅವರು ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಬಾರದೇಕೆ ಎಂಬುದಾಗಿ ವಿಚಾರಣೆಯೊಂದರ ವೇಳೆ ವಕೀಲರನ್ನು ಉದ್ದೇಶಿಸಿ ನುಡಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜೈಲಿನಲ್ಲಿ ಇದ್ದಾಗ ಕಾನೂನು ಉಲ್ಲಂಘಿಸಿ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿತ್ತು. ಅಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿನ ರೋಗಿಗಳನ್ನು ನೋಡಲು ಅವರ ಸಂಬಂಧಿಗಳಿಗೆ ಬಿಟ್ಟಿಲ್ಲ ಎಂದು ದೂರಿ ಸಲ್ಲಿಸಲಾದ ಅರ್ಜಿ ಇದಾಗಿದೆ.ಸಂಬಂಧಿಗಳು ತೊಂದರೆ ಅನುಭವಿಸುವಂತಾಯಿತು ಎಂದು ವಕೀಲರು ಹೇಳುತ್ತಿದ್ದಂತೆ, ನ್ಯಾಯಮೂರ್ತಿಗಳು, `ನಿನ್ನೆ ಕೂಡ ಹೀಗೆಯೇ ಜನರು ತೀವ್ರವಾಗಿ ತೊಂದರೆ ಅನುಭವಿಸಿದರಲ್ಲವೆ, ಅಂತಹ ಪ್ರಕರಣಗಳ ಬಗ್ಗೆ ಏಕೆ ಗಮನ ಹರಿಸುವುದಿಲ್ಲ. ಪಿಐಎಲ್ ಏಕೆ ಹಾಕುವುದಿಲ್ಲ~ ಎಂದು ಮೌಖಿಕವಾಗಿ ಪ್ರಶ್ನಿಸಿದರು.

 

ಸುಪ್ರೀಂಕೋರ್ಟ್ ಹೇಳಿರುವುದೇನು?

ವಕೀಲರ ಮುಷ್ಕರ ಹಾಗೂ ಪ್ರತಿಭಟನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳು:`ಎ ರಿಜಿಸ್ಟರ್ಡ್‌ ಸೊಸೈಟಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ~:

`ವಕೀಲರು ಖುದ್ದಾಗಿ ಪ್ರತಿಭಟನೆ ನಡೆಸುವುದು ಅಥವಾ ಪ್ರತಿಭಟನೆ ನಡೆಸಲು ಪ್ರಚೋದನೆ ನೀಡಿದರೆ ಅಂತಹ ವಕೀಲರ ವಿರುದ್ಧ ರಾಜ್ಯ ವಕೀಲರ ಪರಿಷತ್ತು ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು, ಅವರಿಗೆ ಭಾರಿ ದಂಡ ವಿಧಿಸಬೇಕು. ಇದರ ಜೊತೆಗೆ, ಇವರು ನ್ಯಾಯಾಲಯಕ್ಕೆ ಹಾಜರಾಗದೇ ಹೋದರೆ ಅದರಿಂದ ಕಕ್ಷಿದಾರರಿಗೆ ಉಂಟಾಗುವ ನಷ್ಟವನ್ನು ವಕೀಲರೇ ಭರಿಸಬೇಕು~.`ಮಹಾವೀರ ಪ್ರಸಾದ್ ಸಿಂಗ್ ವರ್ಸಸ್ ಜಾಕ್ಸ್ ಎವಿಯೇಷನ್ ಲಿಮಿಟೆಡ್~: ವಕೀಲರ ಸಂಘ ಅಥವಾ ವಕೀಲರ ಪರಿಷತ್ತು ಪ್ರತಿಭಟನೆ ನಡೆಸಿದ ಮಾತ್ರಕ್ಕೆ ಕೋರ್ಟ್‌ಗಳು ಕಲಾಪ ನಿಲ್ಲಿಸಬಾರದು. ನ್ಯಾಯಾಲಯದ ಅವಧಿಯಲ್ಲಿ ಕಲಾಪ ಮುಂದುವರಿಸುವುದು ಅದರ ಕರ್ತವ್ಯ.`ಹರೀಶ್ ಉಪ್ಪಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ~: ಒಬ್ಬ ಕಕ್ಷಿದಾರರಿಗೆ ವಕಾಲತು ಹಾಕಿದಾಗ ಕೋರ್ಟ್‌ಗೆ ಹಾಜರಾಗುವುದು ಆತನ ಕರ್ತವ್ಯ. ಪ್ರತಿಭಟನೆ, ಬಹಿಷ್ಕಾರ ಹೆಸರಿನಲ್ಲಿ ವಕೀಲ ಹಾಜರು ಆಗದೇ ಹೋದರೆ ಆತ ಕಕ್ಷಿದಾರನಿಗೆ ಪರಿಹಾರ ನೀಡಬೇಕು~.`ರಾಮನ್ ಸರ್ವಿಸಸ್ ವರ್ಸಸ್ ಸುಭಾಷ್ ಕಪೂರ್~: `ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯಬೇಕಾದ ಸಂದರ್ಭದಲ್ಲಿ ಮಾತ್ರ ಪ್ರತಿಭಟನೆಯನ್ನು ವಕೀಲರು ನಡೆಸಬಹುದಾಗಿದೆ. ಆದರೆ ಕ್ಷುಲ್ಲಕ ಕಾರಣಕ್ಕೆ ಪ್ರತಿಭಟನೆ ನಡೆಸಿದರೆ ಎಲ್ಲದಕ್ಕೂ ಅವನೇ ನೇರ ಹೊಣೆ ಆಗಬೇಕಾಗುತ್ತದೆ.

ಪ್ರತಿಕ್ರಿಯಿಸಿ (+)