ಸೋಮವಾರ, ಜೂನ್ 21, 2021
29 °C

ವಕೀಲಿ ವೃತ್ತಿಯ ಪಾವಿತ್ರ್ಯ ಉಳಿಸುವ ಪ್ರಯತ್ನ ಈಗ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶುಕ್ರವಾರ ಬೆಂಗಳೂರಿನಲ್ಲಿ ಪತ್ರಕರ್ತರು ಹಾಗೂ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ನಡೆಸಿದ ವಕೀಲರ ಕೃತ್ಯವನ್ನು ನಾವು ಕಟುವಾಗಿ ಖಂಡಿಸುತ್ತೇವೆ.ಜನರಿಗೆ ಕಾನೂನಿನ ಕುರಿತು ತಿಳುವಳಿಕೆ ನೀಡಿ ಅವರಿಗೆ ಕಾನೂನು ರೀತಿ ನ್ಯಾಯ ಒದಗಿಸಲು ಸಂವಿಧಾನದಿಂದ ವಿಶೇಷ ಗೌರವದ ಅವಕಾಶ ಪಡೆದ ಸುಶಿಕ್ಷಿತ ಸಮುದಾಯವಾದ ವಕೀಲರೇ ಕಾನೂನನ್ನು ಕೈಗೆತ್ತಿಕೊಂಡು ಬೀದಿ ರೌಡಿಗಳಂತೆ ಪುಂಡಾಟಿಕೆಗಿಳಿದು ದೌರ್ಜನ್ಯ ನಡೆಸಿರುವುದು ನಾಗರಿಕ ಸಮಾಜದಲ್ಲಿ ಕಪ್ಪುಚುಕ್ಕೆಯಾಗಿದೆ.ಜನಾರ್ದನ ರೆಡ್ಡಿ ಕೋರ್ಟಿನಲ್ಲಿ ಹಾಜರಾಗುವುದನ್ನು ವರದಿ ಮಾಡಲು ಪತ್ರಕರ್ತರು ಅಲ್ಲಿಗೆ ಬಂದಿದ್ದರು. ಪತ್ರಿಕಾ ಸ್ವಾತಂತ್ರ್ಯ ಸಂವಿಧಾನಬದ್ಧ ಹಕ್ಕಾಗಿರುವುದರಿಂದ ಅದರಲ್ಲಿ ತಪ್ಪೇನೂ ಇಲ್ಲ. ಯಾವುದೇ ಘಟನೆಯನ್ನು ವರದಿ ಮಾಡದಂತೆ ತಡೆಯುವ ಹಕ್ಕು ವಕೀಲರಿಗಿಲ್ಲ.ಸಂವಿಧಾನ ವಕೀಲರಿಗೆ ವಿಶೇಷವಾದ ರಕ್ಷಣೆಯನ್ನು ಒದಗಿಸಿದೆ. ಜನಸಾಮಾನ್ಯರಂತೆ ಇವರು ಅಸಹಾಯಕರೇನೂ ಅಲ್ಲ. ಈ ಕಾರಣದಿಂದ ವಕೀಲರು ಮಾಡುವ ಪ್ರತಿಭಟನೆಗಳು ಪ್ರಜಾಸತ್ತಾತ್ಮಕವಾಗಿರಬೇಕು ಮತ್ತು ಇತರರಿಗೆ ಮಾದರಿಯಾಗಿರಬೇಕು.

 

ರಾಜಧಾನಿಯ ವಕೀಲ ಸಮುದಾಯದ ಇಂತಹ ಪುಂಡಾಟಿಕೆಗಳನ್ನು ರಾಜ್ಯದ ಉಳಿದೆಲ್ಲ ವಕೀಲರೂ ಖಂಡಿಸುವುದರ ಮೂಲಕ ವಕೀಲ ವೃತ್ತಿ ಪಾವಿತ್ರ್ಯತೆಯನ್ನು ಉಳಿಸಲು ಪ್ರಯತ್ನಿಸಬೇಕು.ಈ ಘಟನೆಯ ಹಿಂದೆ ರಾಜಕೀಯ ಕೈವಾಡದ ಸಾಧ್ಯತೆಗಳೂ ಇರುವ ಅನುಮಾನಗಳು ದಟ್ಟವಾಗಿವೆ. ಆದ್ದರಿಂದ ಈ ಘಟನೆಯಲ್ಲಿ ರಾಜಕೀಯ ವ್ಯಕ್ತಿಗಳು, ವಕೀಲರು ಮತ್ತು ಮಾಧ್ಯಮದ ಪಾತ್ರದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಯಾಗಲಿ.

-ಟಿ.ಆರ್.ಕೃಷ್ಣಪ್ಪ, ಕೆ.ಎಲ್.ಅಶೋಕ್, ಸರ್ಜಾಶಂಕರ ಹರಳಿಮಠ ಮತ್ತಿತರರು,  ಶಿವಮೊಗ್ಗ

* * *

ಕಾನೂನು ಪಾಲಿಸುವವರು ನ್ಯಾಯಾಲಯದಲ್ಲಿ ನ್ಯಾಯವೇ ಲಯವಾಗುವ ರೀತಿಯಲ್ಲಿ ನಡೆಯುತ್ತಿರುವುದು ಏನೇನೂ ಥರವಲ್ಲ. ವಕೀಲರಿಗೆ ಪೀನಲ್ ಕೋಡ್‌ನಂತಹ ನ್ಯಾಯವಾದ ಮತ್ತು ಪ್ರಬಲವಾದ ಅಸ್ತ್ರ ಇರುವಾಗ ಕಳಪೆ ರೌಡಿಗಳ ರೀತಿಯಲ್ಲಿ ವರ್ತಿಸುವುದು ಅಮಾನವೀಯ, ಅಕ್ಷಮ್ಯ.ಇವೆಲ್ಲಾ ನಡೆಯುತ್ತಿರುವುದು ಈಗಿನ ಹೊಸ ಪೀಳಿಗೆಯವರು ಮತ್ತು ಅವರ ಕುಮ್ಮಕ್ಕಿಗೆ ಇರುವ ಮಂದಿಯಿಂದ. ವಕೀಲರ ಸಂಘದವರಿಗೆ ಇಂತಹವರು ಯಾರೆಂಬುದು ಖಚಿತವಾಗಿ ತಿಳಿದಿರುತ್ತದೆ. ಇಂತಹ ನ್ಯಾಯಹೀನರನ್ನು ಗುರುತಿಸಿ ಅವರನ್ನು ಬಾರ್‌ನಿಂದ ಡಿಬಾರ್ ಮಾಡಿ, ಅವರು ಯಾವ ವಿಧದ ವಕೀಲಿಕೆಯನ್ನೂ ಮಾಡಬಾರದೆಂದು ತಾಕೀತು ಪಡಿಸಿದರೆ ಹುರುಳು ಉಳಿದು, ಜೊಳ್ಳು ಹಾರೀತು. 

 -ರಾಮ್,  ಬೆಂಗಳೂರು

* * *ಒಬ್ಬ ಮಾಜಿ ಮಂತ್ರಿ ಭ್ರಷ್ಟಾಚಾರ ಆರೋಪ ಹೊತ್ತು ಪೋಲೀಸರ ಬಂಧನದಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ಘಟನಾವಳಿಯನ್ನು ಚಿತ್ರೀಕರಿಸಿ ಪ್ರಸಾರ ಮಾಡಲು ಹೊರಟ ಮಾಧ್ಯಮ ಪ್ರತಿನಿಧಿಗಳನ್ನು ಥಳಿಸಿರುವ ವಕೀಲರ ದುಂಡಾವರ್ತನೆ ಖಂಡನೀಯ. ಸಂವಿಧಾನಬದ್ಧವಾಗಿ ಅಸ್ತಿತ್ವದಲ್ಲಿರುವ ರಾಜ್ಯ ಸರ್ಕಾರ ಸಂವಿಧಾನ ಮೌಲ್ಯಗಳನ್ನು ಎತ್ತಿ ಹಿಡಿಯಲು ವಿಫಲವಾದಾಗ ಅದರ ಉಪಸ್ಥಿತಿಯೇ ಪ್ರಶ್ನಾರ್ಹವಾಗಿದೆ. 

 -ರವಿಸಾಗರ್, ಬೆಂಗಳೂರು

* * *

ಮಾಧ್ಯಮಗಳ ಮೇಲೆ ವಕೀಲರು ಮಾಡಿದ ದಾಳಿಯಿಂದ, ಪ್ರಜ್ಞಾವಂತ ನಾಗರಿಕರಲ್ಲಿ ಈ ರಾಷ್ಟ್ರ ಸಂವಿಧಾನರಹಿತ ರಾಷ್ಟ್ರವೇ ಎಂಬ ಗೊಂದಲ ಸೃಷ್ಟಿಯಾಗಿದೆ. ವಕೀಲರಾದ ಮಾತ್ರಕ್ಕೆ ಕಾನೂನು ಕಾಯ್ದೆಗಳು ಅವರ ಸ್ವಂತ ಆಸ್ತಿಯೇ? ಈ ಪ್ರಕರಣದಿಂದ ಮಾಧ್ಯಮದವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿವೆ. 19 (1) (ಎ), 19 (1) (ಜಿ) ಕಾನೂನು ಎಲ್ಲರಿಗೂ ಒಂದೇ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.

 -ಸುಧಾಕರ್ ಹೊಸಳ್ಳಿ, ಮೈಸೂರು

* * *ಜನಸಾಮಾನ್ಯರ ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸುವುದು, ಗೌರವವಾಗಿ ಬದುಕುವ ಹಕ್ಕು ಹಾಗೂ ಮುಕ್ತ ಮಾಹಿತಿ ವಿನಿಮಯದ ಖಾತರಿ ನೀಡಲು ಪತ್ರಕರ್ತರು ಅಹರ್ನಿಶಿ ದುಡಿಯುತ್ತಿದ್ದಾರೆ. ಇತ್ತೀಚೆಗೆ ಪತ್ರಕರ್ತರ ಮೇಲೆ ದೌರ್ಜನ್ಯ ನಡೆಸುವುದು ಹೆಚ್ಚಾಗುತ್ತಿದೆ. ಜ್ಯೋತಿರ್ಮಯಿ ಡೇ ಹಾಗೂ ಚಂದ್ರಿಕಾ ರಾಯ್ ಕುಟುಂಬದ ಹತ್ಯೆ ದೇಶದಲ್ಲಿ ತಲ್ಲಣ ಮೂಡಿಸಿದ್ದು ಮೊದಲೇ ಅತಂತ್ರ ಸ್ಥಿತಿಯಲ್ಲಿದ್ದ ಪತ್ರಕರ್ತರು ಜೀವ ಭದ್ರತೆಯಿಲ್ಲದೆ ನರಳುವಂತಾಗಿದೆ. ಕಾನೂನನ್ನು ಗೌರವಿಸಿ ನ್ಯಾಯ ದೊರಕಿಸಿಕೊಡುವ ಗೌರವಾನ್ವಿತ ವಕೀಲರು ಮಾಧ್ಯಮದವರ ಮೇಲೆ ನಡೆಸಿರುವ ಹಲ್ಲೆ ವಿಷಾದಕರ.

 -ಎಲ್.ಎನ್.ಪ್ರಸಾದ್, ತುರುವೇಕೆರೆ

* * *ವಕೀಲರು ನಡೆಸಿದ ಹಿಂಸಾಚಾರ ಖಂಡಿಸಿ ಸುಮ್ಮನಾಗುವಂತಹದಲ್ಲ. ಈ ಅಮಾನವೀಯ ಹಿಂಸಾಚಾರ ನಾಗರಿಕತೆಯ ಮೇಲೆಸಗಿದ ಅತ್ಯಾಚಾರ. ವಕೀಲರೆಲ್ಲ ದುಷ್ಟರು ಅನ್ನುವುದು ತಪ್ಪಾಗುತ್ತದೆ. ಬಹುಪಾಲು ಲಾಯರ್‌ಗಳು ನಾಗರಿಕರು.ಜವಾಬ್ದಾರಿ ಅರಿತಿರುವವರು. ಆದರೆ, ವಕೀಲ ಸಮೂಹದಲ್ಲಿ ಸೇರಿಕೊಂಡಿರುವ ಕೆಲವು ದುಷ್ಟರಿಂದ ಇಡೀ ಸಮೂಹಕ್ಕೆ ಕಳಂಕ ಅಂಟಿದೆ. ಆ ದುಷ್ಟರನ್ನು ವಕೀಲಿ ವೃತ್ತಿಯಿಂದ ಹೊರದೂಡಲು ಬಾರ್ ಕೌನ್ಸಿಲ್ ಮುಂದಾಗಬೇಕು.

 

ಪೊಲೀಸರನ್ನು ಕೂಡಿಹಾಕಿದ್ದು, ಹೊಡೆದಿದ್ದು, ಸುದ್ದಿ ಮಾಧ್ಯಮದವರ, ವಿದ್ಯಾರ್ಥಿಗಳ, ನಾಗರಿಕರ ಮೇಲೆ ಹಲ್ಲೆ ನಡೆಸಿದ ವಿಚಾರದಲ್ಲಿ ಗೃಹ ಸಚಿವರು, ಪೊಲೀಸ್ ಮೇಲಧಿಕಾರಿಗಳು ಮೃದು ಧೋರಣೆ ತಳೆದಿರುವುದು ಖಂಡನಾರ್ಹ. ಸರ್ಕಾರ ಕಾನೂನನ್ನು ಕೈಗೆ ತೆಗೆದುಕೊಂಡವರಿಗೆ ಪಾಠ ಕಲಿಸದಿದ್ದರೆ, ಜನರೇ ಆ ಕೆಲಸ ಮಾಡುತ್ತಾರೆ.

  -ರಾ.ನಂ. ಚಂದ್ರಶೇಖರ, ಬೆಂಗಳೂರು

* * *ಲೋಕಾಯುಕ್ತ ಸಂತೋಷ ಹೆಗ್ಡೆ ಅವರು ಸಲ್ಲಿಸಿದ ಅಕ್ರಮ ಗಣಿಗಾರಿಕೆ ಕುರಿತ ವರದಿಯಲ್ಲಿ ರಾಜ್ಯದ ನಿಸರ್ಗ ಸಂಪತ್ತಿನ ಲೂಟಿಯಲ್ಲಿ ನೂರಾರು ಅಧಿಕಾರಿಗಳು, ಕೆಲವು ಪತ್ರಕರ್ತರು ಪಾಲು ಪಡೆದಿದ್ದಾರೆಂದು ದಾಖಲಿಸಿದ್ದಾರಷ್ಟೆ. ಗಣಿಧಣಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಂದರ್ಭದಲ್ಲಿ ಅವರಿಂದ ಹಫ್ತಾ ಪಡೆದ `ಪತ್ರಕರ್ತ~ರೂ ಕೋರ್ಟಿನ ಆವರಣಕ್ಕೆ ಬಂದಿದ್ದಾರೆಂದು ವಕೀಲರು, ಎಲ್ಲ ಮಾಧ್ಯಮದವರನ್ನೂ ಅನುಮಾನಪಟ್ಟು ಹಲ್ಲೆ ನಡೆಸಿದರೋ ಹೇಗೆ?

 - ಎಸ್. ಮಂಜುನಾಥ, ತುಮಕೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.