ಭಾನುವಾರ, ಜೂನ್ 26, 2022
28 °C

ವರ್ತಮಾನದ ಅಗ್ನಿದಿವ್ಯ ಮತ್ತು ಇಸ್ಲಾಮ್

ಎನ್.ಎ.ಎಂ. ಇಸ್ಮಾಯಿಲ್‌ Updated:

ಅಕ್ಷರ ಗಾತ್ರ : | |

ವರ್ತಮಾನದ ಅಗ್ನಿದಿವ್ಯ ಮತ್ತು ಇಸ್ಲಾಮ್

ಸೆಪ್ಟೆಂಬರ್ 11ರಂದು ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳ ಮೇಲೆ ನಡೆದ ದಾಳಿಯ ನಂತರ ತನ್ನ ನೆರೆ ಮನೆಯವರ ಜೊತೆ ನಡೆದ ಮಾತುಕತೆಯೊಂದನ್ನು ಖ್ಯಾತ ವಿದ್ವಾಂಸ ಮತ್ತು ಪತ್ರಕರ್ತ ಜಿಯಾವುದ್ದೀನ್ ಸರ್ದಾರ್ ದಾಖಲಿಸಿದ್ದಾರೆ. ಸರ್ದಾರ್ ಅವರು ಇಡುವ ಮೂರು ಪ್ರಶ್ನೆಗಳನ್ನು ಬಹುಶಃ ಪ್ರಪಂಚದ ಎಲ್ಲಾ ಮುಸ್ಲಿಮರೂ ಒಂದಲ್ಲಾ ಒಂದು ಸಂದರ್ಭದಲ್ಲಿ ತಮ್ಮ ಮುಸ್ಲಿಮೇತರ ಗೆಳೆಯರಿಂದ ಎದುರಿಸಿರುತ್ತಾರೆ.

ಆ ಪ್ರಶ್ನೆಗಳೆಂದರೆ:

*ಮುಸ್ಲಿಮರೇಕೆ ಈ ಬಗೆಯ ಹಿಂಸೆಗೆ ಇಳಿಯುತ್ತಾರೆ?*ಮುಗ್ಧರನ್ನು ಕೊಲ್ಲುವುದನ್ನು ಇಸ್ಲಾಂ ಏಕೆ ಸಮರ್ಥಿಸುತ್ತದೆ?*ಮುಸ್ಲಿಮರೇಕೆ ಇನ್ನೂ ಮಧ್ಯಯುಗದಲ್ಲೇ ಇದ್ದಾರೆ?
ಇಂಥ ಪ್ರಶ್ನೆಗಳನ್ನು ಎದುರಿಸುವ ಹೆಚ್ಚಿನ ಎಲ್ಲ ಮುಸ್ಲಿಮರೂ ಮೇಲಿನ ಮೂರೂ ಪ್ರಶ್ನೆಗಳನ್ನು ತಮ್ಮ ಮನಸ್ಸಿನಲ್ಲಿಯೂ ಇಟ್ಟುಕೊಂಡಿರುತ್ತಾರೆ. ಪ್ರಶ್ನೆಯ ಸ್ವರೂಪ ಸ್ವಲ್ಪ ಭಿನ್ನ. ಇಸ್ಲಾಂ ಅದೆಲ್ಲಿ ಹಿಂಸೆಯನ್ನು ಬೋಧಿಸಿದೆ? ಮುಗ್ಧರನ್ನು ಕೊಲ್ಲುವುದಕ್ಕಿಂತ ದೊಡ್ಡ ಇಸ್ಲಾಂ ವಿರೋಧಿ ನಡವಳಿಕೆ ಮತ್ತೊಂದಿದೆಯೇ?

ಒಂದೂವರೆ ಸಾವಿರ ವರ್ಷಗಳ ಹಿಂದೆಯೇ ಹೆಣ್ಣುಮಗುವಿನ ಹತ್ಯೆಯನ್ನು ಪಾಪವೆಂದ, ಮಹಿಳೆಗೆ ಆಸ್ತಿಯ ಹಕ್ಕನ್ನು ಕೊಟ್ಟ ಪ್ರವಾದಿಯ ಅನುಯಾಯಿಗಳೇಕೆ ಈಗ ಹೀಗೇಕೆ ವರ್ತಿಸುತ್ತಿದ್ದಾರೆ?ಈ ಎರಡೂ ಬಗೆಯ ಪ್ರಶ್ನೆಗಳು ಇಸ್ಲಾಮಿನ ಮಟ್ಟಿಗೆ ಹೊಸತೇನೂ ಅಲ್ಲ. ಇಸ್ಲಾಮ್‌ನ ಕುರಿತ ಈ ಸಿದ್ಧ ಮಾದರಿಗಳು ಕ್ರುಸೇಡ್ ಅಥವಾ ಶಿಲುಬೆ ಯುದ್ಧದ ಕಾಲದಲ್ಲೇ ಹುಟ್ಟಿಕೊಂಡಿದ್ದವು. ಆದ್ದರಿಂದ ಇಸ್ಲಾಂ ಮತ್ತು ಭಯೋತ್ಪಾದನೆಗೆ ಸಂಬಂಧ ಕಲ್ಪಿಸುವ ಎಲ್ಲಾ ಚರ್ಚೆಗಳನ್ನೂ ಈ ಐತಿಹಾಸಿಕ ವಾಸ್ತವದ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದು ಅಗತ್ಯ.

ಇನ್ನು ಇಸ್ಲಾಂನ ಮಟ್ಟಿಗೆ ಶಾಂತಿ ಎಂಬುದು ದೇವರಿಗೆ ಶರಣಾಗುವುದಕ್ಕೆ ಅಗತ್ಯವಿರುವ ಷರತ್ತುಗಳಲ್ಲಿ ಒಂದು. ಇಸ್ಲಾಮ್‌ನ ಆದರ್ಶಗಳನ್ನು ಬದುಕಿನ ಎಲ್ಲಾ ಮಜಲುಗಳಲ್ಲಿ ಅಳವಡಿಸಿಕೊಳ್ಳುವುದಕ್ಕೆ ಶಾಂತಿ ಇರಲೇಬೇಕಾಗುತ್ತದೆ.ಒಂದು ನಾಗರಿಕತೆಯಾಗಿ, ಒಂದು ಧರ್ಮವಾಗಿ ಮತ್ತು ಒಂದು ಸಂಸ್ಕೃತಿಯಾಗಿ ಇಸ್ಲಾಮ್ ಏನನ್ನು ಪ್ರತಿಪಾದಿಸುತ್ತಿದೆಯೋ ಅದಕ್ಕೆ ವಿರುದ್ಧವಾದ ಚಿತ್ರಣವೊಂದನ್ನು ಅನಾವರಣಗೊಳಿಸುವಲ್ಲಿ ತಥಾಕಥಿತ ಇಸ್ಲಾಮೀ ಪ್ರಭುತ್ವಗಳು ಮತ್ತು ಇಸ್ಲಾಮಿನ ಹೆಸರಿನಲ್ಲಿ ಭಯೋತ್ಪಾದನೆ ನಡೆಸುವ ಸಂಘಟನೆಗಳು ಯಶಸ್ವಿಯಾಗಿವೆ. ಇದನ್ನು ಮತ್ತೊಂದು ಬಗೆಯಲ್ಲಿ ಕೂಡಾ ಹೇಳಬಹುದು.

ಕ್ರುಸೇಡ್‌ಗಳ ಕಾಲದಲ್ಲಿ ಇಸ್ಲಾಮಿನ ಬಗ್ಗೆ ಪಶ್ಚಿಮದ ಮನಸ್ಸುಗಳು ಸೃಷ್ಟಿಸಿದ ಸಿದ್ಧ ಮಾದರಿಗಳಲ್ಲಿ ಪ್ರತಿಪಾದಿಸಿದ ಎಲ್ಲವನ್ನೂ ‘ಇಸ್ಲಾಮಿನ ರಕ್ಷಕರು’ ತಮ್ಮ ಮೇಲೆ ಅವಾಹಿಸಿಕೊಂಡಿದ್ದಾರೆ. ವರ್ತಮಾನದ ಇಸ್ಲಾಂ ಎದುರಿಸುತ್ತಿರುವ ದೊಡ್ಡ ಬಿಕ್ಕಟ್ಟು ಇದು.ಇದಕ್ಕೆ ಇಸ್ಲಾಮಿನ ಹೊರಗೆ ಉತ್ತರಗಳನ್ನು ಹುಡುಕುವುದು ಸುಲಭ. ಈ ಉತ್ತರಗಳನ್ನು ಎಲ್ಲಾ ಇಸ್ಲಾಮೀ ಸಮಾಜಗಳೂ ಸುಲಭವಾಗಿ ಒಪ್ಪಿಕೊಳ್ಳುತ್ತವೆ. ಇದರಲ್ಲಿ ಕ್ರುಸೇಡ್‌ಗಳ ಕಾಲದಿಂದ ವರ್ತಮಾನದ ಜಾಗತಿಕ ರಾಜಕಾರಣದವರೆಗಿನ ಪ್ರತಿಯೊಂದೂ ಒಳಗೊಳ್ಳುತ್ತದೆ.

ಆದರೆ ಈ ಉತ್ತರ ಕೇವಲ ಅರ್ಧ ಸತ್ಯ ಮಾತ್ರ. ಇನ್ನುಳಿದ ಅರ್ಧ ಭಾಗ ಇಸ್ಲಾಮೀ ಸಮಾಜಗಳ ಇತಿಹಾಸದ ಒಳಗೇ ಹುದುಗಿದೆ ಎಂಬುದು ವಾಸ್ತವ. ಅಂದರೆ, ಇಸ್ಲಾಮಿ ಸಮಾಜಗಳ ಒಳಗೆ ಉಳಿದುಕೊಂಡು ಬಂದಿರುವ ಸಾಮಾಜಿಕ, ರಾಜಕೀಯ ಮತ್ತು ಬೌದ್ಧಿಕ ಜಡತ್ವ ಇಂದಿನ ಬಿಕ್ಕಟ್ಟಿನ ಹಿಂದಿನ ಬಹುಮುಖ್ಯ ಕಾರಣ.ಒಂದೂವರೆ ಸಾವಿರ ವರ್ಷಗಳ ಹಿಂದೆ ಅರಬ್ ಬುಡಕಟ್ಟುಗಳನ್ನು ಸಮಾನತೆಯ ಆದರ್ಶದ ಹಾದಿಯಲ್ಲಿ ಸಾಗುವಂತೆ ಮಾಡಿದ ಧರ್ಮವೊಂದು ಆಧುನಿಕ ಯುಗದಲ್ಲಿ ಉಸಿರುಗಟ್ಟಿಸುವ ಶೋಷಕ ವ್ಯವಸ್ಥೆಯಾಗಿ ಬದಲಾಯಿಸಿದ್ದರ ಹಿಂದೆ ಮೇಲೆ ಹೇಳಿದ ಎಲ್ಲಾ ಜಡತ್ವಗಳೂ ಕೆಲಸ ಮಾಡಿವೆ.ಈ ವಾದವೂ ಹೊಸತೇನೂ ಅಲ್ಲ. ಸುಮಾರು ಒಂದು ನೂರು ವರ್ಷಗಳ ಹಿಂದೆಯೇ ಇಂಥದ್ದೊಂದು ಚಿಂತನೆಯನ್ನು ಆ ಕಾಲದ ಪ್ರಸಿದ್ಧ ಮುಸ್ಲಿಂ ವಿದ್ವಾಂಸರು ಮುಂದಿಟ್ಟಿದ್ದರು. ಇರಾನ್‌ನ ಸುಧಾರಣಾವಾದಿ ಜಮಾಲುದ್ದೀನ್ ಅಫ್ಘಾನಿ ಮತ್ತು ಈಜಿಪ್ಟ್‌ನ ಮುಫ್ತಿಯಾಗಿದ್ದ ಮುಹಮ್ಮದ್ ಅಬ್ಧು ಇಬ್ಬರೂ ಸೇರಿ 19ನೇ ಶತಮಾನದ ಅಂತ್ಯದಲ್ಲಿಯೇ ಇಸ್ಲಾಮಿನ ಸುಧಾರಣೆಯ ಅಗತ್ಯವನ್ನು ಪ್ರತಿಪಾದಿಸಿದ್ದರು.

ಇದನ್ನು ಇಸ್ಲಾಮೀ ಪರಿಭಾಷೆಯಲ್ಲಿ ‘ಇಜ್ತಿಹಾದ್’ ಎನ್ನುತ್ತಾರೆ. ಅದರ ನಂತರ ಕಳೆದ ಒಂದು ಶತಮಾನದ ಉದ್ದಕ್ಕೂ ಅನೇಕ ಸುಧಾರಣಾವಾದಿಗಳು ಇದನ್ನು ಮತ್ತೆ ಮತ್ತೆ ಪ್ರತಿಪಾದಿಸಿದ್ದರೂ ಇಸ್ಲಾಮಿ ಸಮಾಜ ಇದಕ್ಕೆ ಕಿವಿಗೊಡಲೇ ಇಲ್ಲ. ಅಷ್ಟೇಕೆ, ಚರ್ಚಿಸುವ ಕನಿಷ್ಠ ಉತ್ಸಾಹವನ್ನೂ ತೋರಲಿಲ್ಲ.‘ಇಜ್ತಿಹಾದ್’ ಎಂದರೆ ‘ದೃಢ ಪ್ರಯತ್ನ’ ಎಂಬ ಅರ್ಥವಿದೆ. ಇದನ್ನು ಇಸ್ಲಾಮಿ ಧರ್ಮಶಾಸ್ತ್ರದ ಸಂದರ್ಭದಲ್ಲಿ ಬೌದ್ಧಿಕ ವಾಗ್ವಾದಗಳ ಮೂಲಕ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಎಂದು ಅರ್ಥ ಮಾಡಿಕೊಳ್ಳಬಹುದು.ಬೌದ್ಧಿಕ ವಾಗ್ವಾದಗಳಿಗೆ ಕಾರಣವಾಗುವ ದೃಢ ಪ್ರಯತ್ನವೊಂದನ್ನು ನಡೆಸುವ ಬದಲಿಗೆ ಹಳೆಯಕಾಲದ ತೀರ್ಮಾನಗಳಿಗೆ ಜೋತುಬೀಳುವುದು ಸುಲಭ. ವರ್ತಮಾನದ ಇಸ್ಲಾಮೀ ವಿದ್ವಾಂಸರು ಈ ಬಗೆಯ ನಿಲುವನ್ನು ತಳೆಯುವುದರ ಹಿಂದೆಯೂ ಕೆಲವು ಐತಿಹಾಸಿಕ ಕಾರಣಗಳಿವೆ.ಬೌದ್ಧಿಕ ವಾಗ್ವಾದಗಳ ಮೂಲಕ ವರ್ತಮಾನದ ಸಮಸ್ಯೆಗಳಿಗೆ ಇಸ್ಲಾಮೀ ಧರ್ಮಶಾಸ್ತ್ರದ ವ್ಯಾಪ್ತಿಯೊಳಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಕ್ರಿಯೆ ಅಂತ್ಯಗೊಂಡದ್ದು ಅಬ್ಬಾಸಿದ್ ಆಡಳಿತದ ಅವಧಿಯಲ್ಲಿ. ಇದು ಎಂಟನೇ ಶತಮಾನದಿಂದ 13ನೇ ಶತಮಾನದ ತನಕವೂ ಅಸ್ತಿತ್ವದಲ್ಲಿತ್ತು.

ಆ ಕಾಲದ ವಿದ್ವಾಂಸರಿಗೂ ಆಡಳಿತಗಾರರಿಗೂ ಇಸ್ಲಾಮಿನ ತತ್ವಗಳ ವ್ಯಾಖ್ಯಾನ­ದಲ್ಲೊಂದು ಏಕರೂಪತೆಯ ಅಗತ್ಯ ಕಾಣಿಸಿತು. ಇದಕ್ಕೆ ಬಹುಮುಖ್ಯ ಕಾರಣ, ಧರ್ಮಶಾಸ್ತ್ರದಲ್ಲಿ ಯಾವುದೇ ಅರಿವಿಲ್ಲದವರೂ ಅದರ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವುದಕ್ಕೆ ‘ಇಜ್ತಿಹಾದ್’ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡದ್ದು.

ಇದನ್ನು ತಡೆಯುವುದಕ್ಕಾಗಿ ಅವರು ‘ಎಲ್ಲಾ ಧರ್ಮಸೂಕ್ಷ್ಮಗಳು ಈಗ ಪರಿಹಾರವಾಗಿವೆ. ಈಗ ರೂಪಿಸಲಾಗಿರುವುದನ್ನು ಮಾದರಿಯಾಗಿಟ್ಟುಕೊಂಡು ಎಲ್ಲಾ ಸಮಸ್ಯೆಗಳನ್ನೂ ಮುಂದೆ ಪರಿಹರಿಸಿಕೊಳ್ಳಬಹುದು’ ಎಂಬ ತೀರ್ಮಾನಕ್ಕೆ ಬಂದರು.‘ಇಜ್ತಿಹಾದ್’ನ ಬಾಗಿಲುಗಳು ಮುಚ್ಚಿಹೋದದ್ದು ಇಸ್ಲಾಮ್‌ನ ಅನುಯಾಯಿಗಳ ಸಾಮಾಜಿಕ ಬದುಕು ಮತ್ತು ಚಿಂತನೆಗಳ ಮೇಲೆ ಬಹುದೊಡ್ಡ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಯಿತು. ಇದಕ್ಕೊಂದು ಸರಳ ಉದಾಹರಣೆಯೆಂದರೆ, ಭಾರತದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿಗೆ ಸಂಬಂಧಿಸಿದಂತೆ ನಡೆಯುವ ಚರ್ಚೆಗಳು.ಸಮಾನ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಯಾರು ಮಾತನಾಡಿದರೂ ಅದಕ್ಕೆ ಬಹುಮುಖ್ಯ ವಿರೋಧ ಎದುರಾಗುವುದು ತಥಾಕಥಿತ ಮುಸ್ಲಿಂ ಧಾರ್ಮಿಕ ವಿದ್ವಾಂಸರಿಂದ. ಇವರ ದೃಷ್ಟಿಯಲ್ಲಿ 13ನೇ ಶತಮಾನದಲ್ಲಿ ಅಂದಿನ ಇಸ್ಲಾಮಿನ ವಿದ್ವಾಂಸರು ಕೈಗೊಂಡ ತೀರ್ಮಾನಗಳು ಪವಿತ್ರ ಮತ್ತು ಬದಲಾಯಿಸಲು ಸಾಧ್ಯವಿಲ್ಲದಂಥವು.ಅನೇಕ ಮುಸ್ಲಿಮರು ಪವಿತ್ರವೆಂದು ಭಾವಿಸುವ ‘ಶರಿಯಾ’ ಅಥವಾ ‘ಇಸ್ಲಾಮಿಕ್ ಕಾನೂನು’ ಎಂದರೆ ವಾಸ್ತವದಲ್ಲಿ ಏನು? ಅಬ್ಬಾಸಿದ್ ಆಡಳಿತಾವಧಿಯ ಸಮಾಜದಲ್ಲಿ ರೂಪುಗೊಂಡ ಕಾನೂನುಗಳಷ್ಟೇ. ಇದರಲ್ಲಿರುವ ಹೆಚ್ಚಿನ ಭಾಗ ‘ಫಿಕ್ಹ್’ ಅಥವಾ ನ್ಯಾಯಶಾಸ್ತ್ರದ ಸಮಸ್ಯೆಗಳಿಗೆ ಉತ್ತರಗಳು. ಆ ಕಾಲಕ್ಕೆ ಇರಬಹುದಾದ ಎಲ್ಲಾ ಪೂರ್ವಗ್ರಹಗಳು ಇದರಲ್ಲಿಯೂ ಇದ್ದವು ಎಂದು ಇಸ್ಲಾಮಿನ ಇತಿಹಾಸದ ಬಗ್ಗೆ ಬಹಳಷ್ಟು ಸಂಶೋಧನೆಗಳನ್ನು ನಡೆಸಿರುವ ಮತ್ತು ಅನೇಕ ಕೃತಿಗಳನ್ನು ರಚಿಸಿರುವ ಜಿಯಾವುದ್ದೀನ್ ಸರ್ದಾರ್ ಅಭಿಪ್ರಾಯ ಪಡುತ್ತಾರೆ.

ಅವರು ಹೇಳುವಂತೆ ಆ ಕಾಲದ ನ್ಯಾಯಶಾಸ್ತ್ರ ಜಗತ್ತನ್ನು ಕಪ್ಪು–ಬಿಳುಪಾಗಿ ವಿಭಾಗಿಸಿತು; ದಾರುಲ್ ಇಸ್ಲಾಮ್ (ಶಾಂತಿಯ ಭೂಮಿ) ಮತ್ತು ದಾರುಲ್ ಹರ್ಬ್ (ಯುದ್ಧ ಭೂಮಿ) – ಇಸ್ಲಾಮಿ ಸಾಮ್ರಾಜ್ಯದ ವ್ಯಾಪ್ತಿಯಲ್ಲಿರುವುದೆಲ್ಲವನ್ನೂ ಶಾಂತಿಯ ಪ್ರದೇಶವಾಗಿಯೂ ಅದರ ಹೊರಗಿರುವುದನ್ನು ಯುದ್ಧಭೂಮಿಯನ್ನಾಗಿ ಪರಿಭಾವಿಸಿದ ಸರಳ ಸೂತ್ರವಿದು. ಇದರ ಜೊತೆಗೆ ಆ ಕಾಲದ ಸಾಮ್ರಾಜ್ಯಶಾಹಿಯ ಪೂರ್ವಗ್ರಹಗಳೂ ಈ ನ್ಯಾಯಶಾಸ್ತ್ರದ ಭಾಗವಾಗಿಬಿಟ್ಟವು.ಈ ನಿಯಮಗಳನ್ನು ಪ್ರಶ್ನಿಸದೆ ಇಸ್ಲಾಮಿ ಸಮಾಜ ಒಪ್ಪಿಕೊಂಡು ಬಂದದ್ದರ ಹಿಂದೆಯೂ ಕೆಲವು ಕಾರಣಗಳಿವೆ. ಬಹಳ ಮುಖ್ಯವಾದುದು ಇಸ್ಲಾಮ್ ಒಂದು ಧರ್ಮವಾಗಿ ಮತ್ತು ಸಂಸ್ಕೃತಿಯಾಗಿ ಎದುರಿಸಿದ ಕೆಲವು ಬಿಕ್ಕಟ್ಟುಗಳು. ‘ಶಿಲುಬೆ ಯುದ್ಧ’ದ ಅವಧಿಯಲ್ಲಿ ಇಸ್ಲಾಮೀ ಸಂಸ್ಕೃತಿ ಎದುರಿಸಿದ ಅಭದ್ರತೆ ಬಹಳ ತೀವ್ರವಾದುದು. ಇಸ್ಲಾಮನ್ನು ಹಲ ಬಗೆಯಲ್ಲಿ ವ್ಯಾಖ್ಯಾನಿಸುವುದು ಅದರ ಅಸ್ತಿತ್ವಕ್ಕೇ ಮಾರಕ ಎಂಬ ಮನಃಸ್ಥಿತಿ ಆ ಕಾಲದಲ್ಲಿತ್ತು.ಪರಿಣಾಮವಾಗಿ ‘ದೃಢ ಪ್ರಯತ್ನ’ದ ಮೂಲಕ ಕಾಲಕ್ಕೆ ಅಗತ್ಯವಿರುವ ನಿಯಮಗಳನ್ನು ರೂಪಿಸಿಕೊಳ್ಳುವ ಕೆಲಸ ಆಗಲಿಲ್ಲ. ಇಸ್ಲಾಮಿನ ತಥಾಕಥಿತ ‘ಸುವರ್ಣ ಯುಗ’ದಲ್ಲಿ ರೂಪುಗೊಂಡ ನಿಯಮಗಳೇ ಸಾಕು ಎಂಬ ನಿರ್ಧಾರಕ್ಕೆ ಬರಲಾಯಿತು. ಇಸ್ಲಾಮ್ ಒಂದು ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ ಅದರ ಅಕ್ಷರಾರ್ಥದ ವ್ಯಾಖ್ಯೆಗಳಿಗೆ ಮಹತ್ವ ಬಂದಬಿಡುತ್ತದೆ.

13ನೇ ಶತಮಾನದಲ್ಲಿ ಇಬ್ನ್ ತಯ್ಮಿಯಾರ ವಾದಗಳು ಜನಪ್ರಿಯವಾದದ್ದು ಇದೇ ಕಾರಣದಿಂದ. ‘ಶಿಲುಬೆ ಯುದ್ಧ’ ಇಸ್ಲಾಮಿನ ಅಸ್ತಿತ್ವಕ್ಕೇ ಧಕ್ಕೆ ತರಬಹುದೆಂಬ ಅಭದ್ರತೆಯಿಂದ ಈ ವ್ಯಾಖ್ಯಾನಗಳಿಗೆ ಮಹತ್ವ ದೊರೆಯಿತು.ಇದೇ ಬಗೆಯ ವ್ಯಾಖ್ಯಾನಗಳು ಮತ್ತೆ ಮಹತ್ವ ಪಡೆದದ್ದು 18ನೇ ಶತಮಾನದಲ್ಲಿ. ಅರೇಬಿಯಾದಲ್ಲಿ ವಸಾಹುಶಾಹಿ ತನ್ನ ಪ್ರಭುತ್ವವನ್ನು ವಿಸ್ತರಿಸಿಕೊಳ್ಳುತ್ತಿದ್ದ ಕಾಲಘಟ್ಟವದು. ಇದಕ್ಕೊಂದು ಪ್ರತಿಕ್ರಿಯೆ ಎಂಬಂತೆ ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್ ಎಂಬ ಮತ ಪಂಡಿತರು ‘ದಿವ್ಯಗ್ರಂಥ’ ಮತ್ತು ಪ್ರವಾದಿ ಚರ್ಯೆಗಳಿಗೆ ಹಿಂದಿರುಗುವುದಕ್ಕೆ ಕರೆ ನೀಡಿ ಮುಸ್ಲಿಮರನ್ನು ಸಂಘಟಿಸಲಾರಂಭಿಸಿದರು.

ಈ ಕಾಲದಲ್ಲಿಯೂ ಇಸ್ಲಾಮಿನ ರಾಜಕೀಯ ಸಮಸ್ಯೆಗಳಿಗೆ ‘ದಿವ್ಯಗ್ರಂಥ’ ಮತ್ತು ಪ್ರವಾದಿ ಚರ್ಯೆಯ ಅಕ್ಷರಶಃ ಅನುಕರಣೆಯೇ ಮಾರ್ಗ ಎಂದು ಭಾವಿಸಲಾಯಿತು. ಸೌದ್ ವಂಶದ ದೊರೆಗಳಿಗೆ ಅರೇಬಿಯಾದ ಆಡಳಿತವನ್ನು ಒದಗಿಸಿಕೊಟ್ಟದ್ದೂ ಇದೇ ಚಿಂತನೆಯೇ. ಇಂದಿನ ‘ಐಸಿಸ್‌’, ‘ತಾಲಿಬಾನ್’ ಮುಂತಾದ ಸಂಘಟನೆಗಳ ಇಸ್ಲಾಮಿನ ಗ್ರಹಿಕೆಯ ಹಿಂದೆಯೂ ಇದೇ ತಾತ್ವಿಕತೆ ಕೆಲಸ ಮಾಡುತ್ತಿದೆ.ಇಸ್ಲಾಮಿ ಸಮಾಜದ ಸಾಮುದಾಯಿಕ ಬದುಕಿಗೆ ಬಹಳ ಅಗತ್ಯವಾದುದು ‘ಒಮ್ಮತ’ ಅಥವಾ ‘ಇಜ್ಮಾ’. ಈ ಒಮ್ಮತ ಎಂಬುದು ಕೇವಲ ಧಾರ್ಮಿಕ ಪಂಡಿತರ ಒಮ್ಮತವಲ್ಲ. ಇದು ಜನರ ಒಮ್ಮತ. ಆದರೆ ಇಸ್ಲಾಮಿನ ತತ್ವಗಳ ಏಕರೂಪೀ ವ್ಯಾಖ್ಯಾನದಿಂದಾಗಿ ಇದು ಕೆಲವೇ ಕೆಲವು ಧಾರ್ಮಿಕ ಪಂಡಿತರ ಒಮ್ಮತವನ್ನು ‘ಸಾಮುದಾಯಿಕ ಒಮ್ಮತ’ ಎನ್ನುವಂತೆ ಮಾಡಿತು.

ಪ್ರವಾದಿ ಮುಹಮ್ಮದರು ಈ ‘ಒಮ್ಮತ’ದ ತತ್ವವನ್ನು ಅನುಸರಿಸುತ್ತಿದ್ದ ಬಗೆಯೆಂದರೆ, ಇಡೀ ಸಮುದಾಯವನ್ನು ಮಸೀದಿಗೆ ಕರೆದು ಸಭೆ ನಡೆಸಿ ಎಲ್ಲರ ಅಭಿಪ್ರಾಯ ಪಡೆಯುವ ಮೂಲಕ. ಆ ಕಾಲದಲ್ಲಿ ಸಮುದಾಯ ಬಹಳ ಚಿಕ್ಕದಾಗಿದ್ದರಿಂದ ಇದು ಸಾಧ್ಯವಿತ್ತು ಎಂಬ ತರ್ಕವನ್ನು ಒಪ್ಪಿಕೊಳ್ಳಬಹುದು. ಆದರೆ ಜನರ ಒಮ್ಮತವನ್ನು ಕೇವಲ ಧಾರ್ಮಿಕ ಪಂಡಿತರ ಅಥವಾ ತಥಾಕಥಿತ ನಾಯಕರ ಒಮ್ಮತಕ್ಕಷ್ಟೇ ಸೀಮಿತಗೊಳಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ?

ಇಸ್ಲಾಮಿನ ಏಕರೂಪಿಯಾದ ವ್ಯಾಖ್ಯಾನೋತ್ಸಾಹದಲ್ಲಿ ಕಳೆದುಹೋದದ್ದು ಅನೇಕ ವಿಶಾಲ ಮನೋಧರ್ಮದ ಪರಿಕಲ್ಪನೆಗಳು. ಇದರ ಪರಿಣಾಮವಾಗಿಯೇ ‘ಜಿಹಾದ್’ ಎಂಬ ಪರಿಕಲ್ಪನೆಗೆ ಇದ್ದ ವಿಶಾಲವಾದ ಅರ್ಥ ಸಂಕುಚಿತಗೊಂಡಿತು. ಈ ಪರಿಕಲ್ಪನೆಯ ಜೊತೆಗೆ ಮೇಳೈಸಿಕೊಂಡಿದ್ದ ಬೌದ್ಧಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಆಯಾಮಗಳೆಲ್ಲವೂ ಕಳಚಿಕೊಂಡು ಕೇವಲ ‘ಯುದ್ಧ’ವೆಂಬ ಅರ್ಥ ಮಾತ್ರ ಉಳಿದುಕೊಂಡಿತು.

ಪರಿಣಾಮವಾಗಿ ಯಾರು ಯಾರ ವಿರುದ್ಧ ಬೇಕಾದರೂ ‘ಜಿಹಾದ್’ ಘೋಷಿಸಬಹುದೆಂಬ ವಾತಾವರಣ ಸೃಷ್ಟಿಯಾಗಿದೆ. ಜಿಹಾದ್ ಎಂಬುದು ಒಂದು ಬೌದ್ಧಿಕ ಮತ್ತು ಆಧ್ಯಾತ್ಮಿಕವಾದ ಹೋರಾಟ ಎಂಬುದನ್ನು ಎಷ್ಟೇ ನೆನಪಿಸಿದರೂ ಯಾರಿಗೂ ಅರ್ಥವಾಗದ ಸ್ಥಿತಿ ಈಗಿದೆ.ಈ ವಾಸ್ತವಕ್ಕೆ ಮುಖಾಮುಖಿಯಾಗುವುದು ಹೇಗೆ ಎಂಬುದು ಜಗತ್ತಿನ ಎಲ್ಲ ಮುಸ್ಲಿಮರ ಎದುರು ಇರುವ ಸವಾಲು. ನಮ್ಮ ಇಂದಿನ ಬಿಕ್ಕಟ್ಟುಗಳಿಗೆ ಇಸ್ಲಾಮ್ ಸಿದ್ಧ ಉತ್ತರಗಳನ್ನು ನೀಡಿಲ್ಲ. ಈ ಬಿಕ್ಕಟ್ಟುಗಳನ್ನು ವರ್ತಮಾನದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಭೂಮಿಕೆಯೊಳಗೇ ನಿಂತು ಪರಿಹರಿಸಿಕೊಳ್ಳಲು ಬೇಕಿರುವ ಬೌದ್ಧಿಕ ಪರಿಕರಗಳನ್ನು ಮುಸ್ಲಿಮರು ರೂಪಿಸಿಕೊಳ್ಳಬೇಕಾಗಿದೆ.

ಇದರ ಅರ್ಥ ಇಸ್ಲಾಮ್ ಪ್ರತಿಪಾದಿಸುವ ಆಧ್ಯಾತ್ಮಿಕ ಹಾದಿಯನ್ನು ತೊರೆಯಬೇಕು ಎಂದಲ್ಲ. ಅದು ಸೂತ್ರರೂಪದಲ್ಲಿ ಹೇಳಿರುವ ಸಮಾನತೆಯ ಸಹಬಾಳ್ವೆಯ ತತ್ವವನ್ನು ಅಕ್ಷರಾರ್ಥದಲ್ಲಿ ಗ್ರಹಿಸುವುದರ ಬದಲಿಗೆ, ಧ್ವನ್ಯರ್ಥದಲ್ಲಿ ಗ್ರಹಿಸುವ ಅಗತ್ಯವಿದೆ. ಇಸ್ಲಾಮಿನ ತತ್ವಗಳ ಏಕರೂಪಿ ಗ್ರಹಿಕೆಯ ಬದಲಿಗೆ ಅದರ ಬಹುತ್ವವನ್ನು ಅರಿತು ಮುಂದುವರಿಯಬೇಕಾಗಿದೆ.ಮುಗ್ಧರನ್ನು ಇಸ್ಲಾಮಿನ ಹೆಸರಿನಲ್ಲಿ ಭಯೋತ್ಪಾದಕರು ಕೊಂದಾಗ ‘ದಿವ್ಯ ಗ್ರಂಥದಲ್ಲಿ ಎಲ್ಲಿಯೂ ಇದನ್ನು ಹೇಳಿಲ್ಲ’ ಎನ್ನುವುದು ಒಂದು ಮಟ್ಟದ ಉತ್ತರ ಮಾತ್ರ. ಇಸ್ಲಾಮಿನ ಹೆಸರಿನಲ್ಲಿ ಹಿಂಸಾಚಾರಕ್ಕೆ ನಿಂತವರೂ ಕೂಡಾ ‘ದಿವ್ಯ ಗ್ರಂಥ’ವನ್ನೇ ಉಲ್ಲೇಖಿಸುತ್ತಾರೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅಂದರೆ ಧರ್ಮದ ಪರಿಧಿಯೊಳಗೇ ನಿಂತು ಈ ‘ಉದ್ಧಟತನ’ಕ್ಕೆ ಉತ್ತರಗಳನ್ನು ಕಂಡುಕೊಳ್ಳಬೇಕಾಗುತ್ತದೆ.

ಇದಕ್ಕೆ ಅಗತ್ಯವಾಗಿ ಬೇಕಿರುವುದು ಮತ್ತೊಂದು ‘ದೃಢಪ್ರಯತ್ನ’ ಮತ್ತು ‘ಒಮ್ಮತ’ ಎಂಬ ಇಸ್ಲಾಮಿನ ಪರಿಕಲ್ಪನೆಗಳಿಗೆ ಮರುಜನ್ಮ ನೀಡುವುದು. ಇದಕ್ಕೆ ಬಹುಮುಖ್ಯವಾಗಿ ಆಗಬೇಕಿರುವುದು, ಇಸ್ಲಾಮಿನ ಏಕರೂಪಿ ವ್ಯಾಖ್ಯಾನಗಳ ವಿರುದ್ಧ ಮುಸ್ಲಿಮರು ವೈಯಕ್ತಿಕ ಮತ್ತು ಸಾಮುದಾಯಿಕ ನೆಲೆಯಲ್ಲಿ ಹೋರಾಟ ಆರಂಭಿಸುವುದು.

ಅರ್ಥಾತ್ ‘ದಿವ್ಯಗ್ರಂಥ’ವೂ ಸೇರಿದಂತೆ ಇಸ್ಲಾಮಿ ಜೀವನ ವ್ಯವಸ್ಥೆಯ ನೆಲೆಗಟ್ಟಾಗಿರುವ ಮೂಲ ಗ್ರಂಥಗಳನ್ನು ತಮ್ಮದೇ ನೆಲೆಯಲ್ಲಿ ವ್ಯಾಖ್ಯಾನಿಸುವ ತಮ್ಮ ಹಕ್ಕು–ಕರ್ತವ್ಯವನ್ನು ಪಾಲಿಸುವುದು.ಇದಕ್ಕೆ ಬಹುಮುಖ್ಯವಾಗಿ ಬೇಕಿರುವುದು ‘ಅಭದ್ರತೆ’ಯಿಂದ ವಿಮೋಚನೆ. ಕಳೆದ ಎಂಟು ನೂರು ವರ್ಷಗಳ ಅವಧಿಯಲ್ಲಿ ಎಲ್ಲಾ ಬಗೆಯ ಪ್ರಭುತ್ವಗಳೂ ತಮ್ಮ ಸ್ವಾರ್ಥಕ್ಕಾಗಿ ಮುಸ್ಲಿಮರೊಳಗೊಂದು ಅಭದ್ರತೆ ಇರುವಂತೆ ನೋಡಿಕೊಂಡೇ ಬಂದಿವೆ. ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ ಇದು ಪಶ್ಚಿಮದ ತೈಲ ಮೋಹದಿಂದಾಗಿ ಇದು ಚಾಲನೆಯಲ್ಲಿದೆ.

‘ದಿವ್ಯಗ್ರಂಥ’ ಮತ್ತು ಪ್ರವಾದಿ ಚರ್ಯೆಯ ಬಹುಬಗೆಯ ವ್ಯಾಖ್ಯಾನಗಳನ್ನು ನಿರಾಕರಿಸುವ ತಾತ್ವಿಕತೆಯನ್ನು ತನ್ನ ಆಡಳಿತ ನೀತಿಯನ್ನಾಗಿ ಇಟ್ಟುಕೊಂಡಿರುವ ಸೌದಿ ಅರೇಬಿಯಾ ಒಂದು ರಾಜಪ್ರಭುತ್ವ ಮಾತ್ರ.

ಇಸ್ಲಾಮಿನ ಪರಿಕಲ್ಪನೆಯೊಳಗೆ ರಾಜಪ್ರಭುತ್ವಕ್ಕೆ ಅವಕಾಶವೇ ಇಲ್ಲ. ದಕ್ಷಿಣ ಏಷ್ಯಾದಲ್ಲಿ ಇರುವ ಒಂದೆರಡು ತಥಾಕಥಿತ ಪ್ರಜಾಪ್ರಭುತ್ವ ದೇಶಗಳು ತಮ್ಮ ಪ್ರಜೆಗಳ ನಿತ್ಯದ ಸಮಸ್ಯೆಗಳನ್ನು ಪರಿಹರಿಸಲಾಗದೆ ಅದಕ್ಕೆ ಸಂಬಂಧಿಸಿದಂತೆ ರಾಜಕೀಯ ಹೋರಾಟಗಳು ರೂಪುಗೊಳ್ಳುವುದನ್ನು ತಡೆಯುವುದಕ್ಕಾಗಿ ‘ಇಸ್ಲಾಮಿನ ರಕ್ಷಕ’ ವೇಷವನ್ನು ತೊಟ್ಟಿವೆ.ಪ್ರಪಂಚದಲ್ಲಿ ಬಹುದೊಡ ಸಂಖ್ಯೆಯಲ್ಲಿ ಇಸ್ಲಾಮಿನ ಅನುಯಾಯಿಗಳಿರುವ ಭಾರತದಲ್ಲಿ ಇಸ್ಲಾಮಿಗೆ ಇಲ್ಲಿನದ್ದೇ ಆದ ವಿಶಿಷ್ಟ ಪರಂಪರೆಯಿದೆ. ಇಲ್ಲಿ ಆಳಿ ಹೋದವರಲ್ಲಿ ಇಸ್ಲಾಮಿನ ಅನುಯಾಯಿಗಳಿದ್ದಂತೆಯೇ ಇಲ್ಲಿನ ಬೌದ್ಧಿಕ ವಾಗ್ವಾದಗಳಿಗೆ ಮುಖಾಮುಖಿಯಾದ ಮುಸ್ಲಿಂ ಸಂತರು ಮತ್ತು ತಾತ್ವಿಕರಿದ್ದಾರೆ.

ಪ್ರಪಂಚದ ಬೇರೆಲ್ಲೆಡೆಗಿಂತ ಭಿನ್ನವಾದ ಇಸ್ಲಾಮಿ ಸಂಸ್ಕೃತಿಯೊಂದು ಇಲ್ಲಿದೆ. ಇದು ಏಕರೂಪಿಯಾದ ಇಸ್ಲಾಮಿನ ಹೇರಿಕೆಯನ್ನು ವಿರೋಧಿಸುವುದಕ್ಕೆ ಭಾರತೀಯ ಮುಸ್ಲಿಮರ ಬಳಿ ಇರುವ ದೊಡ್ಡ ಅಸ್ತ್ರ. ಇಸ್ಲಾಂ ಒಂದು ಸಂಸ್ಕೃತಿಯಾಗಿ ಮತ್ತು ನಾಗರಿಕತೆಯಾಗಿ ಉಳಿಯುವುದಕ್ಕೆ ಇರುವ ಏಕೈಕ ಮಾರ್ಗವೂ ಇದುವೇ.

(ಈ ಲೇಖನದಲ್ಲಿರುವ ಅಭಿಪ್ರಾಯ ಲೇಖಕರವು. ಇದು ಯಾವುದೇ ಬಗೆಯಲ್ಲೂ ಪತ್ರಿಕೆ ನಿಲುವನ್ನು ಪ್ರತಿನಿಧಿಸುವುದಿಲ್ಲ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.