ಸೋಮವಾರ, ಏಪ್ರಿಲ್ 19, 2021
32 °C

ವಾಣಿವಿಲಾಸ ಜಲಾಶಯ: ಸಮಗ್ರ ದೃಷ್ಟಿಕೋನದಿಂದ ನೋಡಲು ಡಿಸಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ವಾಣಿ ವಿಲಾಸ ಜಲಾಶಯದಿಂದ ಕೊಳವೆ ಮಾರ್ಗದ ಮೂಲಕ ಚಳ್ಳಕೆರೆಗೆ ನೀರು ಪೂರೈಕೆ ಮಾಡುವ ಬಗ್ಗೆ ರೈತ ಸಂಘ ಮತ್ತು ಇತರೆ ಮುಖಂಡರ ಜತೆ ಜಿಲ್ಲಾಧಿಕಾರಿಗಳು ನಡೆಸಿದ ಮಾತುಕತೆ ವಾದ-ಪ್ರತಿವಾದಗಳ ವೇದಿಕೆಯಾಗಿ ಪರಿಣಮಿಸಿತು.

ಜಿಲ್ಲಾಧಿಕಾರಿ ಬನ್ಸಾಲ್ ಮಾತನಾಡಿ, ಜಿಲ್ಲೆಯ ಆರು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಹಿಂದಿನ ವರ್ಷ ಶೇ  32ರಷ್ಟು ಬಿತ್ತನೆ ಆಗಿತ್ತು. ಈ ವರ್ಷ ಇನ್ನೂ ಕಡಿಮೆ ಆಗಿದೆ. ವಾಣಿವಿಲಾಸ ಜಲಾಶಯದಿಂದ ಈಗಾಗಲೇ ಚಿತ್ರದುರ್ಗ ಮತ್ತು ಹಿರಿಯೂರು ನಗರಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳು ಹಿಂದಿನ 20 ವರ್ಷದಿಂದ ನೀರಿನ ಸಮಸ್ಯೆಯಲ್ಲಿ ಸಿಕ್ಕಿವೆ. ಈ ಯೋಜನೆಯಿಂದ ಚಳ್ಳಕೆರೆ ತಾಲ್ಲೂಕಿನ ಕುದಾಪುರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಗೆ, ಬಾಬಾ ಅಣು ಸಂಶೋಧನಾ ಸಂಸ್ಥೆಗೆ, ಭಾರತೀಯ ಮೀಸಲು ಬೆಟಾಲಿಯನ್‌ಗೆ ಕೊಳವೆ ಮಾರ್ಗದ ಮೂಲಕ ನೀರು ಒಯ್ಯಲಾಗುತ್ತದೆ. ಜತೆಗೆ ಮಾರ್ಗ ಮಧ್ಯದಲ್ಲಿ ಬರುವ 18 ಹಳ್ಳಿಗಳಿಗೆ ನೀರು ಕೊಡಲಾಗುತ್ತದೆ. ರಾಜ್ಯ-ರಾಷ್ಟ್ರದ ಸಮಗ್ರ ದೃಷ್ಟಿಕೋನದಿಂದ ನೋಡಿ ರೈತರು ಈ ಯೋಜನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ. ಜಯಣ್ಣ ಮಾತನಾಡಿ, ಹಿರಿಯೂರು ತಾಲ್ಲೂಕಿನಲ್ಲೂ ನೀರಿಗೆ ತೀವ್ರ ಸಮಸ್ಯೆಯಿದೆ. ಪಿಲ್ಲಾಜನಹಳ್ಳಿಯಲ್ಲಿ ನೀರಿಗಾಗಿ ಸ್ವಾತಂತ್ರ್ಯ ಉತ್ಸವ ಬಹಿಷ್ಕರಿಸಲು ಮುಂದಾಗಿದ್ದವರನ್ನು ಮನ ಒಲಿಸಲಾಯಿತು. ಬಹುತೇಕ ಎಲ್ಲಾ ಹಳ್ಳಿಗಳಲ್ಲೂ ನೀರಿನಲ್ಲಿ ಫ್ಲೋರೈಡ್ ಅಂಶವಿದೆ. ಚಳ್ಳಕೆರೆಗೆ ನೀರು ಕೊಡುವ ಮುಂಚೆ ವಾಣಿವಿಲಾಸಕ್ಕೆ ನೀರು ತಂದು, ಈ ತಾಲ್ಲೂಕಿನ ಜನತೆಗೆ ನೀರು ಕೊಡುವ ಕೆಲಸ ಮಾಡಿ. ಚಳ್ಳಕೆರೆಗೆ ಸೂಳೆಕೆರೆ ಅಥವಾ ರಂಗಯ್ಯನದುರ್ಗದಿಂದ ಕೊಡಿ ಎಂದು ಒತ್ತಾಯಿಸಿದರು.

ಸೋಮಗುದ್ದು ರಂಗಸ್ವಾಮಿ ಮಾತನಾಡಿ, ಹಿಂದಿನ ನೂರು ವರ್ಷಗಳಲ್ಲಿ 67 ವರ್ಷ ಬರ ಅನುಭವಿಸಿದ್ದೇವೆ. 1980ರಿಂದ ನೀರಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಒಮ್ಮೆ ಮಾತ್ರ ಕೋಡಿ ಬಿದ್ದಿರುವ ವಾಣಿ ವಿಲಾಸದಿಂದ ನೀರು ಕೊಂಡೊಯ್ಯುವ ಯೋಜನೆ ಅಧಿಕಾರಿಗಳಿಗೆ ಬಂದಿದ್ದಾದರೂ ಹೇಗೆ? ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಜಾರಿಗೊಳಿಸಬೇಕು. ನಂತರ ನೀರು ಒಯ್ಯಬೇಕು ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ಮಾತನಾಡಿ, ಫ್ಲೋರೈಡ್‌ಯುಕ್ತ ನೀರು ಕುಡಿದು ತಾಯಿಯ ಎದೆ ಹಾಲು ಕಲುಷಿತವಾಗಿದೆ. ಎಳೆಯ ಮಕ್ಕಳು ಕೀಲು-ಮೂಳೆಯಿಂದ ಬಳಲುತ್ತಿದ್ದಾರೆ. ಹಲ್ಲುಗಳು ಹಾಳಾಗಿವೆ. ಈ ಹೋರಾಟ ನಮ್ಮ ಉಳಿವಿಗಾಗಿಯೇ ಹೊರತು ಬೇರೆ ಯಾರ ವಿರುದ್ಧವೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎ. ಕೃಷ್ಣಸ್ವಾಮಿ, ಮಾಜಿ ಶಾಸಕ ಆರ್. ರಾಮಯ್ಯ, ಜಿ.ಪಂ. ಮಾಜಿ ಅಧ್ಯಕ್ಷೆ ಗೀತಾನಂದಿನಿ, ಜೆ.ಡಿ.ಎಸ್ ಮುಖಂಡ ಕಾಶ್ಯಾಮಯ್ಯ, ತಾ.ಪಂ. ಸದಸ್ಯೆ ಡಾ.ಸುಜಾತಾ, ರೈತ ಮುಖಂಡರಾದ ಆರನಕಟ್ಟೆ ಶಿವಕುಮಾರ್, ತುಳಸೀದಾಸ್, ಅಶ್ವಕ್ ಅಹಮದ್, ಎಚ್.ಆರ್. ತಿಮ್ಮಯ್ಯ , ಮುದ್ದಪ್ಪ, ಜೀವೇಶ್, ಸಂಗಪ್ಪ, ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ, ಯೋಜನೆಯಿಂದ ಜಲಾಶಯಕ್ಕೆ ನೀರು ಬರುವ ಪ್ರಮಾಣ ಮತ್ತಿತರ ವಿವರ ನೀಡಬೇಕು. ಯಾವುದೇ ಕಾರಣಕ್ಕೂ ಈಗಿರುವ ನೀರಿನಲ್ಲಿ ಬೇರೆ ಕಡೆಗೆ ನೀರು ಕೊಂಡೊಯ್ಯಬಾರದು ಎಂದು ಆಗ್ರಹಿಸಿದರು.

ಸಭೆಗೆ ಶಾಸಕರು, ಸಂಸತ್ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಗೈರು ಹಾಜರಾಗಿದ್ದಕ್ಕೆ ರೈತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಯೋಜನೆ ಅನುಷ್ಠಾನ ಕುರಿತು ಮತ್ತೊಮ್ಮೆ ಸಭೆ ಸೇರಿ ಚರ್ಚೆ ನಡೆಸಿ ಜಿಲ್ಲಾಧಿಕಾರಿಗೆ ತೀರ್ಮಾನ ತಿಳಿಸಲಾಗುವುದು ಎಂದು ರೈತರು ತಿಳಿಸಿದರು.

ಉಪ ವಿಭಾಗಾಧಿಕಾರಿ ನಾಗರಾಜ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಪುರಸಭಾಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಜ್ಯೋತಿಲಕ್ಷ್ಮೀ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.