ಮಂಗಳವಾರ, ಏಪ್ರಿಲ್ 20, 2021
25 °C

ವಾಪಸು ಬನ್ನಿ- ರಾಜ್ಯ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಲ್ಲಸಲ್ಲದ ವದಂತಿಗಳಿಂದ ಭೀತಿಗೊಂಡು ಕರ್ನಾಟಕದಿಂದ ನಿರ್ಗಮಿಸಿರುವ ಈಶಾನ್ಯ ರಾಜ್ಯಗಳ ಜನರು ತಕ್ಷಣ  ವಾಪಸು ಬರಬೇಕು. ಇಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪರಿಸ್ಥಿತಿ ಶಾಂತವಾಗಿದೆ ಎಂದು ಗೃಹ ಸಚಿವ ಆರ್.ಅಶೋಕ ಮಂಗಳವಾರ ಇಲ್ಲಿ ಮನವಿ ಮಾಡಿದರು.ಇಲ್ಲಿಗೆ ಭೇಟಿ ನೀಡಿರುವ ಟಿಬೆಟ್ ಗೃಹ ಸಚಿವೆ ಡೊಲ್ಮಾ ಗ್ಯಾರಿ ಜತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಶಾನ್ಯ ರಾಜ್ಯಗಳ ಜನರು ಹೆಚ್ಚಿಗೆ ವಾಸಿಸಿರುವ ಪ್ರದೇಶಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದರು.

 

ಡೊಲ್ಮಾ ಗ್ಯಾರಿ

`ನಗರದಲ್ಲಿ ನೆಲೆಸಿರುವ ಈಶಾನ್ಯ ರಾಜ್ಯಗಳ ಜನರಿಗೆ ಬೆದರಿಕೆ ಹಾಕಿದ ಹಾಗೂ ವದಂತಿಗಳನ್ನು ಹಬ್ಬಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೂ 20 ಮಂದಿಯನ್ನು ಬಂಧಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು~ ಎಂದು ಸಚಿವ ಅಶೋಕ ಹೇಳಿದರು.`ಇದೇ 20ರಂದು ಗಲಭೆ ಸಂಭವಿಸಲಿದೆ. ಅಷ್ಟರಲ್ಲಿ ಕರ್ನಾಟಕ ಖಾಲಿ ಮಾಡಿ ಎನ್ನುವ ಎಸ್‌ಎಂಎಸ್ ಸಂದೇಶ ಮೊಬೈಲ್ ಫೋನ್‌ಗಳಲ್ಲಿ ಹರಿದಾಡಿದ ಕಾರಣ ಕೆಲವರು ಆತಂಕಕ್ಕೆ ಒಳಗಾಗಿದ್ದರು. ರಂಜಾನ್‌ಗೂ ಮೊದಲು ಮತ್ತು ರಂಜಾನ್ ದಿನ ನಾನೇ ಬೆಂಗಳೂರಿನಲ್ಲಿ ಗಸ್ತು ತಿರುಗಿದ್ದೇನೆ. ಈಶಾನ್ಯ ರಾಜ್ಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದೆ. ಯಾವ ಅಹಿತಕರ ಘಟನೆಗಳೂ ನಡೆದಿಲ್ಲ. ಗಾಳಿ ಸುದ್ದಿಗೆ ಕಿವಿಗೊಡದೆ ಈಶಾನ್ಯ ರಾಜ್ಯಗಳ ಜನರು ಕರ್ನಾಟಕಕ್ಕೆ ಹಿಂದಿರುಗಬೇಕು~ ಎಂದು ಅವರು ಮನವಿ ಮಾಡಿದರು.`ವದಂತಿಗಳ ಮೂಲ ಪಾಕಿಸ್ತಾನ ಎನ್ನುವುದು ಈಗ ಬಹಿರಂಗವಾಗಿದೆ. ವದಂತಿ ಹಬ್ಬಿಸಿದ ಕೆಲವರನ್ನು ರಾಜ್ಯದಲ್ಲಿ ಬಂಧಿಸಲಾಗಿದೆ. ವಿಚಾರಣೆ ವೇಳೆ ಅವರು ನೀಡಿದ ಮಾಹಿತಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ಈಶಾನ್ಯ ರಾಜ್ಯಗಳ ಸುಮಾರು 3.5 ಲಕ್ಷ ಜನರು ರಾಜ್ಯದಲ್ಲಿ ನೆಲೆಸಿದ್ದಾರೆ. ಇವರಲ್ಲಿ 25 ಸಾವಿರ ಮಂದಿ ತವರಿಗೆ ತೆರಳಿದ್ದಾರೆ. ಎಲ್ಲರೂ ವಾಪಸು ಬರಬೇಕು ಎಂದು ಕೋರಲಾಗಿದೆ.  ಅಗತ್ಯಬಿದ್ದರೆ ಆ ರಾಜ್ಯಗಳಿಗೆ ಭೇಟಿ ನೀಡಿ ಅವರ ಮನವೊಲಿಸುವ ಪ್ರಯತ್ನ ಮಾಡಲಾಗುವುದು~ ಎಂದರು.ಮೆಚ್ಚುಗೆ: ಕರ್ನಾಟಕದ ಪೊಲೀಸರು ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಿದ್ದಾರೆ. ಗೃಹ ಸಚಿವರೇ ಗಸ್ತು ತಿರುಗಿದ್ದಾರೆ. ಇದು ಶ್ಲಾಘನೀಯ ಎಂದು ಡೊಲ್ಮಾ ಗ್ಯಾರಿ ಅವರು ಮೆಚ್ಚುಗೆ ಸೂಚಿಸಿದರು.ರಾಜ್ಯದಲ್ಲಿ ಸುಮಾರು 4,000 ಮಂದಿ ಟಿಬೆಟಿಯನ್ನರು ವಿವಿಧ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಗೆ ಭೇಟಿ ನೀಡಿ ಅವರಲ್ಲಿ ಧೈರ್ಯ ತುಂಬಲಾಗುವುದು. ಕರ್ನಾಟಕದಲ್ಲಿ ಟಿಬೆಟಿಯನ್ನರಿಗೆ ಅಗತ್ಯ ರಕ್ಷಣೆ ದೊರೆತಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.