ಗುರುವಾರ , ಮೇ 13, 2021
22 °C

ವಾರಕ್ಕೆ 6 ದಿನ ಕಚೇರಿ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯ ಸರ್ಕಾರದ ಕಚೇರಿಗಳು ಈಗಿರುವಂತೆಯೇ ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸಲಿವೆ. ಕೆಲಸದ ದಿನಗಳನ್ನು ಐದಕ್ಕೆ ಇಳಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದರು. ಅಧಿಕಾರಿಗಳ ವೇತನ ಸಮಿತಿ ಕಳೆದ ತಿಂಗಳು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಸರ್ಕಾರಿ ಕಚೇರಿಗಳ ವಾರದ ಕಾರ್ಯನಿರ್ವಹಣೆಯನ್ನು ಐದು ದಿನಕ್ಕೆ ಇಳಿಸುವಂತೆ ಶಿಫಾರಸು ಮಾಡಿದ್ದರಿಂದ ಬದಲಾವಣೆಯ ಮಾತುಗಳು ಕೇಳಿಬಂದಿದ್ದವು. ಆದರೆ, ಸದಾನಂದಗೌಡ ಅವರು ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, `ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿಜಾರಿಗೆ ತರಲಾಗುತ್ತದೆ ಎಂಬುದು ಊಹಾಪೋಹ. ಆ ಬಗ್ಗೆ ಸರ್ಕಾರ ಚಿಂತನೆ ಮಾಡಿಲ್ಲ~ ಎಂದು ಗುರುವಾರ ಇಲ್ಲಿ ತಿಳಿಸಿದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಬೈರಪ್ಪ ನೇತೃತ್ವದ ನಿಯೋಗದೊಂದಿಗೆ ವೇತನ ತಾರತಮ್ಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಈಗಿರುವ ವ್ಯವಸ್ಥೆಯೇ ಮುಂದುವರಿಯಲಿದೆ. ಅದರಲ್ಲಿ ಬದಲಾವಣೆ ತರುವ ಅಗತ್ಯ ಕಾಣುತ್ತಿಲ್ಲ~ ಎಂದರು.`ಹೈದರಾಬಾದ್ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ವೇಳೆಯನ್ನು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30ಕ್ಕೆ ನಿಗದಿ ಮಾಡಲಾಗಿದೆ. ಆದರೆ, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನದ ನಡುವೆ ವ್ಯತ್ಯಾಸ ಇದೆ. ವೈಜ್ಞಾನಿಕವಾಗಿ ವೇತನ ಪರಿಷ್ಕರಣೆಯಾಗಿಲ್ಲ. ಕೆಲವು ಭತ್ಯೆಗಳಲ್ಲಿ ಕಡಿತವಾಗಿದೆ ಎಂದು ನೌಕರರ ಸಂಘದ ಪದಾಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಆದರೆ ರಾಜ್ಯದಲ್ಲಿ ಈಗ ಬರಗಾಲವಿದೆ. ಗಣಿಗಾರಿಕೆ ಸ್ಥಗಿತದಿಂದಾಗಿ ಆದಾಯ ಕುಂಠಿತವಾಗಿದೆ. ಡೀಸೆಲ್ ಮೇಲಿನ ತೆರಿಗೆಯನ್ನು ಶೇ 1.25ರಷ್ಟು ಕಡಿಮೆ ಮಾಡಿರುವುದರಿಂದ ರೂ 360 ಕೋಟಿ   ಆದಾಯ ಕಡಿಮೆಯಾಗುತ್ತದೆ~ ಎಂದರು.`ಆರ್ಥಿಕ ಇತಿಮಿತಿಗಳ ನಡುವೆಯೂ ಸರ್ಕಾರಿ ನೌಕರರ ವೇತನ ಶೇ 22.5ರಷ್ಟು ಹೆಚ್ಚಳ ಮಾಡಲಾಗಿದೆ. ಇದಕ್ಕಿಂತ ಜಾಸ್ತಿ ಮಾಡುವುದು ಕಷ್ಟ. ಆದರೂ ಅವರ ಬೇಡಿಕೆಗಳ ಬಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ವೇತನ ಹೆಚ್ಚಳವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಯಾವುದೇ ಬದಲಾವಣೆ ಮಾಡಬೇಕಾದರೂ ಸದನದಲ್ಲಿ ಚರ್ಚೆಯಾಗಬೇಕಾಗುತ್ತದೆ~ ಎಂದರು.ಬೇಡಿಕೆಗಳು: ಕೇಂದ್ರ ಸರ್ಕಾರಿ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಬಳದಲ್ಲಿ ಇರುವ ವ್ಯತ್ಯಾಸವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಕನಿಷ್ಠ ಶೇ 52ರಷ್ಟು ವೇತನ ಹೆಚ್ಚಳ ಮಾಡಬೇಕು. ಈಗಾಗಲೇ ಪರಿಷ್ಕರಣೆಯಾಗಿರುವ ವೇತನವನ್ನು ಏಪ್ರಿಲ್ ಒಂದರ ಬದಲಾಗಿ ಕಳೆದ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಜಾರಿಗೊಳಿಸಬೇಕು ಎಂದು ಸಂಘದ ಅಧ್ಯಕ್ಷ ಬೈರಪ್ಪ ಆಗ್ರಹಿಸಿದರು.ನಗರ ಪರಿಹಾರ ಭತ್ಯೆಯನ್ನು ಬೆಂಗಳೂರು ನಗರದಲ್ಲಿ ಹಾಲಿ ಇರುವ ರೂ 80ರಿಂದ ರೂ 300 ಬದಲಿಗೆ, ರೂ 250ರಿಂದ ರೂ 400ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಇದು ತುಂಬಾ ಕಡಿಮೆಯಾಗಿದೆ. ಆದ್ದರಿಂದ ರೂ 400ರಿಂದ ರೂ 700 ನಗರ ಪರಿಹಾರ ಭತ್ಯೆ ನಿಗದಿ ಮಾಡಬೇಕು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಮನೆ ಬಾಡಿಗೆ ಬಹುತೇಕ ಒಂದೇ ರೀತಿ ಇರುವುದರಿಂದ ಮನೆ ಬಾಡಿಗೆ ಭತ್ಯೆಯನ್ನು ವೈಜ್ಞಾನಿಕವಾಗಿ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.ಆಂಧ್ರಪ್ರದೇಶ ಮಾದರಿಯ ವೇತನ ಪದ್ಧತಿಯನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು. ಗಿರಿತಾಣ ಜಿಲ್ಲೆಗಳಾದ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳು, ಕೊಡಗು ಜಿಲ್ಲೆಯ ವಿರಾಜಪೇಟೆ ಮತ್ತು ಸೋಮವಾರ ಪೇಟೆ ತಾಲ್ಲೂಕಿನ ಗಿರಿ ತಾಣ ಪ್ರದೇಶದ ನೌಕರರಿಗೆ ಗಿರಿ ಭತ್ಯೆಯನ್ನು ಮಂಜೂರು ಮಾಡಬೇಕು ಎಂಬುದು ಸೇರಿದಂತೆ ಕೆಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಎಂದರು.ಅಧಿಕಾರಿಗಳ ವೇತನ ಸಮಿತಿ ಮಾಡಿರುವ ಶಿಫಾರಸುಗಳಲ್ಲಿ ಕೆಲವೊಂದು ನ್ಯೂನತೆಗಳಿವೆ. ಇವುಗಳನ್ನು ಸರಿಪಡಿಸುವ ಮೂಲಕ ಸರ್ಕಾರಿ ನೌಕರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.ಸಂಘದ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಅಭಿವೃದ್ಧಿ ಆಯುಕ್ತ ಸುಬೀರ್ ಹರಿಸಿಂಗ್, ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ವಿ.ನಾಗರಾಜನ್, ಕಾರ್ಯದರ್ಶಿ ಅನಿಲ್‌ಕುಮಾರ್ ಝಾ, ಸಂಘದ ಗೌರವ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.