ಗುರುವಾರ , ಮೇ 19, 2022
25 °C

ವಾರ್ಡಲ್ಲೇ ಉಳಿದ ಶವ: ದುರ್ವಾಸನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ರಾತ್ರಿಯೇ ಮೃತಪಟ್ಟಿದ್ದರೂ, ಮರುದಿನ ಮಧ್ಯಾಹ್ನದವರೆಗೆ ಶವವನ್ನು ವಾರ್ಡ್‌ನಿಂದ ಹೊರಕ್ಕೆ ಹಾಕದಿರುವುದರಿಂದ ರೋಗಿಗಳು, ಸಂಬಂಧಿಕರು ದುರ್ವಾಸನೆಯಿಂದ ಪರದಾಡಿದ ಘಟನೆ ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.ಕಳೆದ 15 ದಿನಗಳ ಹಿಂದೆ ಅನಾರೋಗ್ಯ ಪೀಡಿತವಾಗಿದ್ದ ವೃದ್ಧೆಯೊಬ್ಬಳನ್ನು ಆರೋಗ್ಯ ಕವಚ 108 ವಾಹನದ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಕಾಲು ಕೊಳೆತ ಸ್ಥಿತಿಯಲ್ಲಿದ್ದ ಈ ವೃದ್ಧೆ ಅರೆಪ್ರಜ್ಞಾವಸ್ಥೆಯಲ್ಲಿಯೇ ಇದ್ದಳು. ಹೆಸರು, ಊರುಗಳ ಹೆಸರನ್ನು ಸರಿಯಾಗಿ ಹೇಳಲಾಗಿದ ಸ್ಥಿತಿಯಲ್ಲಿದ್ದಳು. ಆದರೆ ಆರೋಗ್ಯ ತೀವ್ರ ಹದಗೆಟ್ಟು ಈ ವೃದ್ಧೆ ಭಾನುವಾರ ರಾತ್ರಿಯೇ ಜಿಲ್ಲಾ ಆಸ್ಪತ್ರೆಯ ವಾರ್ಡ್‌ನಲ್ಲಿ ಮೃತಪಟ್ಟಿದ್ದಾಳೆ.ಆಕೆಯ ಶವವನ್ನು ಸೋಮವಾರ ಮಧ್ಯಾಹ್ನದವರೆಗೂ ಶವಾಗಾರಕ್ಕಾಗಲಿ, ಅಂತ್ಯಸಂಸ್ಕಾರಕ್ಕಾಗಲಿ ಸಾಗಿಸದೇ ಇರುವುದರಿಂದ ಅಕ್ಕಪಕ್ಕದ ವಾರ್ಡುಗಳಲ್ಲಿ ದುರ್ವಾಸನೆ ಹರಡಿತು. ಇದರಿಂದ ಬೇರೆ ರೋಗಿಗಳು ಹಾಗೂ ಅವರ ಸಂಬಂಧಿಕರು ಮೂಗಿಗೆ ಕರವಸ್ತ್ರ ಸುತ್ತಿಕೊಂಡು ಓಡಾಡುವಂತಾಯಿತು. ಚಿಕ್ಕಮಕ್ಕಳನ್ನು ಕಟ್ಟಿಕೊಂಡು ಆಸ್ಪತ್ರೆ ಬಂದಿದ್ದ ರೋಗಿಗಳು, ಸಂಬಂಧಿಕರ ಪಾಡಂತೂ ಹೇಳತೀರದಾಗಿತ್ತು.ಮೊದಲೇ ಕಾಲು ಕೊಳೆತು ಹೋಗದ್ದರಿಂದ ಶವವು ಇನ್ನಷ್ಟು ಹೆಚ್ಚಾಗಿ ದುರ್ವಾಸನೆ ಬೀರುತ್ತಿತ್ತು. ಇದರಿಂದಾಗಿ ಆಸ್ಪತ್ರೆಯ ಆವರಣದಲ್ಲಿ ಅಸಹನೀಯ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿದ ಟಿಪ್ಪು ಸುಲ್ತಾನ್ ಯುವಕ ಸಂಘದ ಅಧ್ಯಕ್ಷ ಅಬ್ದುಲ್ ಕರೀಂ ಹಾಗೂ ಸದಸ್ಯರು ಆಸ್ಪತ್ರೆಗೆ ತೆರಳಿ, ಶವವನ್ನು ಬೇರೆಡೆ ಸಾಗಿಸದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಶವವನ್ನು ಇಲ್ಲಿಯೇ ಇಟ್ಟುಕೊಂಡಿರುವುದರಿಂದ ಬೇರೆ ರೋಗಿಗಳಿಗೆ ತೊಂದರೆ ಆಗುತ್ತಿದೆ. ಆಸ್ಪತ್ರೆಯ ತುಂಬೆಲ್ಲ ದುರ್ವಾಸನೆ ಹರಡಿದೆ ಎಂದು ದೂರಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿಜಯಕುಮಾರ, ವೃದ್ಧೆಯನ್ನು 15 ದಿನಗಳ ಹಿಂದೆ ಆರೋಗ್ಯ ಕವಚದ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಯ ಕಾಲು ಕೊಳೆತು ಹೋಗಿತ್ತು. ಸರಿಯಾಗಿ ಹೆಸರು, ವಿಳಾಸ ಹೇಳಲು ಆಗದಂತಹ ಸ್ಥಿತಿಯಲ್ಲಿ ಆಕೆ ಇದ್ದಳು. ಆದರೆ ಭಾನುವಾರ ರಾತ್ರಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದರು. ಅಪರಿಚಿತ ಶವ ಇದಾಗಿರುವುದರಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ನಗರಸಭೆಗೆ ವಿಷಯ ತಿಳಿಸಿ, ನಗರಸಭೆಯಿಂದ ಅಂತ್ಯಸಂಸ್ಕಾರ ಮಾಡಬೇಕಾಗಿದೆ. ಬೆಳಿಗ್ಗೆ ಪೊಲೀಸರು ಬಂದು ಹೋಗಿದ್ದಾರೆ. ಇದುವರೆಗೂ ನಗರಸಭೆಯವರು ಆಕೆಯ ಶವವನ್ನು ತೆಗೆದುಕೊಂಡು ಹೋಗಿಲ್ಲ ಎಂದು ವಿವರಿಸಿದರು.ಶವವನ್ನು ಶವಾಗಾರಕ್ಕೆ ಸಾಗಿಸಬೇಕಿತ್ತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ. ವಿಜಯಕುಮಾರ, ಬೆಳಿಗ್ಗೆಯೇ ಪೊಲೀಸರು, ನಗರಸಭೆಯವರು ಬಂದು ಶವವನ್ನು ಒಯ್ಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಹಾಗಾಗಿ ಶವವನ್ನು ಅಲ್ಲಿಯೇ ಇಡಲಾಗಿದೆ ಎಂದು ತಿಳಿಸಿದರು. ಭಾನುವಾರ ರಾತ್ರಿಯೇ ವೃದ್ಧೆ ಮೃತಪಟ್ಟಿದ್ದರೂ, ಆಕೆಯ ಶವವನ್ನು ವಾರ್ಡಿನಲ್ಲಿಯೇ ಇರಿಸಿದ್ದು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಯಿತು. ನಗರಸಭೆ ಸಿಬ್ಬಂದಿ ಬರುವವರೆಗೂ ಶವವನ್ನು ಶವಾಗಾರಕ್ಕೆ ಸಾಗಿಸಬಹುದಿತ್ತು ಎಂದು ಆಸ್ಪತ್ರೆಯಲ್ಲಿದ್ದ ರೋಗಿಗಳ ಸಂಬಂಧಿಕರು ಹೇಳು ತ್ತಿದ್ದುದು ಸಾಮಾನ್ಯವಾಗಿತ್ತು.ರೋಗಿಗಳಿಗೆ ಬೆಡ್‌ಶೀಟ್

ಜಿಲ್ಲಾ ಆಸ್ಪತ್ರೆಯ ಬೆಡ್‌ಗಳ ಮೇಲೆ ಇದೀಗ ಬೆಡ್‌ಶೀಟ್‌ಗಳನ್ನು ಹಾಕಲಾಗಿದ್ದು, ರೋಗಿಗಳು ನೆಮ್ಮ ದಿಯ ನಿಟ್ಟುಸಿ ರುವ ಬಿಡುವಂತಾ ಗಿದೆ. ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರು ಬೆಡ್‌ಶೀಟ್‌ಗಳಿಲ್ಲದೇ ತೊಂದರೆ ಅನುಭವಿಸುತ್ತಿದ್ದ ಬಗ್ಗೆ ಪ್ರಜಾವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿ ಸಿದ ಆಸ್ಪತ್ರೆಯ ಆಡಳಿತ ವ್ಯವಸ್ಥೆ, ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಎಲ್ಲ ರೋಗಿಗಳಿಗೆ ಬೆಡ್‌ಶೀಟ್‌ಗಳನ್ನು ಒದಗಿಸಲಾಗಿದೆ ಎಂದು ರೋಗಿಗಳ ಸಂಬಂಧಿಕರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.