ಶುಕ್ರವಾರ, ಮೇ 14, 2021
27 °C

ವಾಲಿದ ಗರುಡಸ್ತಂಭದ ವಿಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಉಪಗ್ರಹ ಆಧರಿಸಿದ ಹವಾಮಾನ ಮುನ್ಸೂಚನೆಯನ್ನು ಎಷ್ಟು ಜನ ಕೇಳುತ್ತಾರೆ? ಈ ಬಗ್ಗೆ ಲೆಕ್ಕ ಸಿಗದು. ಆದರೆ, ತಾಲ್ಲೂಕಿನ ಬಹುತೇಕ ರೈತರು ಆಯಾ ವರ್ಷದ ಮಳೆ-ಬೆಳೆ ಬಗ್ಗೆ ಅಂಬಲಗೆರೆಯ ರಂಗನಾಥಸ್ವಾಮಿ ದೇಗುಲದ ಮುಂದಿರುವ ಗರುಡಸ್ತಂಭದ ಮೇಲಿರುವ ಗರುಡ ವಿಗ್ರಹದ ಚಲನೆ ಆಧರಿಸಿ ತೀರ್ಮಾನಕ್ಕೆ ಬರುತ್ತಾರೆ.ಜನರ ನಂಬಿಕೆಯ ಪ್ರಕಾರ, ಗರುಡ ವಿಗ್ರಹ ಹಿಂದಕ್ಕೆ ವಾಲಿದರೆ ಮಳೆ ಬಾರದು. ನೇರವಾಗಿ ನಿಂತರೆ ಉತ್ತಮ ಮಳೆ. ಮುಂದಕ್ಕೆ ವಾಲಿದರೆ ಭೀಕರ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಪ್ರತೀತಿ ಇದೆ.  ಮಂಗಳವಾರ ಸಂಜೆಯಿಂದ ಗರುಡ ವಿಗ್ರಹ ಭೂಮಿ ಕಡೆಗೆ ವಾಲಿದ್ದು, ಎರಡು ದಿನ ಕಳೆದರೂ ವಿಗ್ರಹ ನೇರವಾಗದಿರುವ ಕಾರಣ ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ವಿಗ್ರಹ ಭೂಮಿ ಕಡೆಗೆ ವಾಲಿದಾಗ ಯಾವುದೋ ಅಪಾಯ ಸಂಭವಿಸುತ್ತದೆ ಎನ್ನುವುದಕ್ಕೆ ಸುನಾಮಿ, ಇಂದಿರಾಗಾಂಧಿ, ರಾಜೀವ್‌ಗಾಂಧಿ ಹತ್ಯೆಯಾದ ಉದಾಹರಣೆ ನೀಡುವ ಗ್ರಾಮದ ಹಿರಿಯರು, ಹಿಂದೆಲ್ಲ ಭೂಮಿ ಕಡೆ ವಾಲಿದ್ದ ವಿಗ್ರಹ ಮರುದಿನದ ವೇಳೆಗೆ ನೇರ ನಿಲ್ಲುತ್ತಿತ್ತು. ಆದರೆ, ಈ ಬಾರಿ ವಿಗ್ರಹದ ಚಲನೆ ಬದಲಾಗದಿರುವುದು ಯಾವುದೋ ದೊಡ್ಡ ಅನಾಹುತದ ಸೂಚನೆ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.ಸುಮಾರು 45 ಅಡಿ ಎತ್ತರವಿರುವ ಕಲ್ಲಿನ ಸ್ತಂಭದ ಮೇಲೆ ಗರುಡ ವಿಗ್ರಹ ಕೆತ್ತಲಾಗಿದ್ದು, ಕೆಳಗಿನಿಂದ ವೀಕ್ಷಿಸಿದರೆ ಸ್ತಂಭದ ಮೇಲೆ ಗರುಡ ವಿಗ್ರಹ ಕೂರಿಸಿದಂತೆ ಕಾಣುತ್ತದೆ. ಈ ವಿಗ್ರಹದ ಚಲನೆ ಆಧರಿಸಿ ಮಳೆಯ ಪ್ರಮಾಣ ಊಹಿಸಲಾಗುತ್ತದೆ. ಗರುಡ ವಿಗ್ರಹ ಹೇಗೆ ಚಲಿಸುತ್ತದೆ ಎಂಬ ಬಗ್ಗೆ ಊರಿನವರು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಇದೆಲ್ಲಾ ದೇವರ ಅನುಗ್ರಹದಿಂದಲೇ ನಡೆಯುತ್ತದೆ ಎಂಬ ಭಾವನೆ ಇಲ್ಲಿನವರದ್ದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.