ಸೋಮವಾರ, ಮೇ 23, 2022
21 °C

ವಾಹನ ಮಾರಾಟ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹಬ್ಬಗಳ ಕಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಕಾರು ಮಾರಾಟ ಗಣನೀಯವಾಗಿ ಚೇತರಿಸಿಕೊಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹುಂಡೈ ಮೋಟಾರ್ ಇಂಡಿಯಾ ಮತ್ತು ಟಾಟಾ ಮೋಟಾರ್ಸ್ ಮಾರಾಟ ಏರಿಕೆ ದಾಖಲಿಸಿದೆ. ಆದರೆ, ಮಾರುಕಟ್ಟೆ ಮುಂಚೂಣಿ ಮಾರುತಿ ಸುಜುಕಿ ಮಾರಾಟ ಗಣನೀಯವಾಗಿ ಕುಸಿದಿದೆ.ಮಾನೇಸರ ಘಟಕದಲ್ಲಿ ನಡೆದ ಕಾರ್ಮಿಕರ ಮುಷ್ಕರದ  ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಾರುಗಳ ಮಾರಾಟ ಶೇ 17ರಷ್ಟು ಕುಸಿತ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸುಜುಕಿ 81,060 ಕಾರುಗಳನ್ನು ಮಾರಾಟ ಮಾಡಿತ್ತು, ಸೆಪ್ಟೆಂಬರ್‌ನಲ್ಲಿ ಇದು 66,667ಕ್ಕೆ ಕುಸಿತ ಕಂಡಿದೆ. ಆದರೆ, ಟೊಯೊಟ ಕಿರ್ಲೋಸ್ಕರ್, ಜನರಲ್ ಮೋಟಾರ್ ಇಂಡಿಯಾ ಹಬ್ಬದ ಅವಧಿಯ ಸಂಪೂರ್ಣ ಲಾಭವನ್ನು ಪಡೆದುಕೊಂಡಿವೆ.ಕಳೆದ ವರ್ಷಕ್ಕೆ ಹೋಲಿಸಿದರೆ ಹುಂಡೈ ಮೋಟಾರ್ ಇಂಡಿಯಾ ಶೇ 13ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ 31,756 ಕಾರುಗಳನ್ನು ಮಾರಾಟ ಮಾಡಿದ್ದ ಹುಂಡೈ ಸೆಪ್ಟೆಂಬರ್‌ನಲ್ಲಿ 35,955 ಕಾರುಗಳನ್ನು ಮಾರಾಟ ಮಾಡಿದೆ. ಮಾರಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ಹೊಸ ಸಣ್ಣ ಕಾರು `ಇಯಾನ್~ ಅನ್ನು ಈ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಕಂಪೆನಿಯ ಮಾರುಕಟ್ಟೆ ಮುಖ್ಯಸ್ಥ ಅರವಿಂದ ಸಕ್ಸೇನಾ ತಿಳಿಸಿದ್ದಾರೆ.ಟಾಟಾ ಮೋಟಾರ್ಸ್ ಶೇ 10ರಷ್ಟು ಪ್ರಗತಿ ದಾಖಲಿಸಿದ್ದು, ಒಟ್ಟು 26,319 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಜನರಲ್ ಮೋಟಾರ್ಸ್ ಮಾರಾಟವೂ ಸೆಪ್ಟೆಂಬರ್‌ನಲ್ಲಿ ಶೇ 17ರಷ್ಟು ಪ್ರಗತಿ ದಾಖಲಿಸಿದೆ.

 

ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪೆನಿ 8,617 ವಾಹನಗಳನ್ನು ಮಾರಾಟ ಮಾಡಿತ್ತು, ಈ ಅವಧಿಯಲ್ಲಿ ಇದು 10,112ಕ್ಕೆ ಏರಿಕೆ ಕಂಡಿದೆ. `ಇಟಿಯೋಸ್~ ಮತ್ತು `ಲಿವಾ~ ಮಾದರಿಗಳ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ, ಟೋಯೊಟಾ ಕಿರ್ಲೊಸ್ಕರ್ ಮಾರಾಟ ದ್ವಿಗುಣ ಪ್ರಗತಿ ಕಂಡಿದೆ. ಕಂಪೆನಿ ಒಟ್ಟು 12,807 ಕಾರುಗಳನ್ನು ಸೆಪ್ಟೆಂಬರ್‌ನಲ್ಲಿ ಮಾರಾಟ ಮಾಡಿದೆ. ಚೆನ್ನೈ ಮೂಲದ ಟಿವಿಎಸ್ ಮೋಟಾರ್ ಮಾರಾಟ ಶೇ 16ರಷ್ಟು ಏರಿಕೆ ಕಂಡಿದೆ. ಕಂಪೆನಿ 1,92,027 ವಾಹನಗಳನ್ನು ಮಾರಾಟ ಮಾಡಿದೆ. ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) 1,78,462 ವಾಹನಗಳನ್ನು ಮಾರಾಟ ಮಾಡಿದ್ದು, ಶೇ 44ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.