ಗುರುವಾರ , ಜೂನ್ 24, 2021
29 °C
ಚುನಾವಣಾ ಚುಟುಕು

ವಾಹಿನಿ ವಿರುದ್ಧ ಕಾಂಗ್ರೆಸ್‌ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ‘ವಿಶೇಷವಾಗಿ ಬಿಂಬಿಸುವ’ ಉದ್ದೇಶ­ದಿಂದಲೇ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಕಾರ್ಯಕ್ರಮ ಪ್ರಸಾರ ಮಾಡಿದ ಸುದ್ದಿ ವಾಹಿನಿ ವಿರುದ್ಧ ಕ್ರಮ ಕೈಗೊಳ್ಳ­ಬೇಕೆಂದು ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.‘ಹಿಂದೂಗಳಲ್ಲಿ  ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಮೋದಿ ಅವರನ್ನು ಬಿಂಬಿಸುವುದಕ್ಕಾಗಿಯೇ ಉದ್ದೇಶಪೂರ್ವಕವಾಗಿ ಈ ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು’ ಎಂದು  ಕಾಂಗ್ರೆಸ್‌ ಕಾನೂನು ಘಟಕದ ಕಾರ್ಯದರ್ಶಿ ಕೆ.ಸಿ. ಮಿತ್ತಲ್‌ ಆರೋಪಿಸಿದ್ದಾರೆ.‘ಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದರಿಂದ ಈ ಕಥೆಯನ್ನು ಉದ್ದೇಶಪೂರ್ವಕವಾಗಿ ಹೆಣೆಯಲಾಗಿದೆ ಎಂಬುದು ಸುಸ್ಪಷ್ಟ. ಇದರೊಂದಿಗೆ ವಾಹಿನಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ’ ಎಂದು ಆಯೋಗಕ್ಕೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಗೋವಾ ಮತದಾನ ದಿನಾಂಕ ಬದಲು

ನವದೆಹಲಿ (ಪಿಟಿಐ):
ಧಾರ್ಮಿಕ ಹಬ್ಬಗಳ ಕಾರಣದಿಂದ ಚುನಾವಣಾ ದಿನಾಂಕ ಬದ­ಲಾ­ಯಿಸ­ಬೇಕು ಎಂಬ ಬೇಡಿಕೆಗೆ ಸ್ಪಂದಿಸಿರುವ ಚುನಾ­ವಣಾ ಆಯೋಗ, ಗೋವಾ ಮತ್ತು ಜಾರ್ಖಂಡ್‌ನ  ಒಂದು  ಕ್ಷೇತ್ರದ ಮತದಾನ  ದಿನಾಂಕ­ವನ್ನು ಬದಲಾಯಿಸಿದೆ.ಗೋವಾದ ಎರಡು ಕ್ಷೇತ್ರಗಳಲ್ಲಿ ಏಪ್ರಿಲ್‌ 17ರ ಬದಲಿಗೆ 12ರಂದೇ ಮತದಾನ ನಡೆಯಲಿದೆ. ಹಾಗೆಯೇ ಜಾರ್ಖಂಡ್‌ನ ಹಜಾರಿಬಾಗ್‌ ಕ್ಷೇತ್ರದ ಮತದಾನವನ್ನು ಏಪ್ರಿಲ್‌ 10ರ ಬದಲಿಗೆ 17ಕ್ಕೆ ಮುಂದೂಡಲಾಗಿದೆ.ಪ್ರಧಾನಿ ಅಭ್ಯರ್ಥಿ ಘೋಷಣೆ ಅಸಾಂವಿಧಾನಿಕ

ಭೋಪಾಲ್‌ (ಪಿಟಿಐ):
ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಪ್ರಧಾನಿ­ಯಾಗಲು ಅತ್ಯುತ್ತಮ ಆಯ್ಕೆ ಆಗಿದ್ದರೂ ಪಕ್ಷ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ, ಮುಂಬೈ ಈಶಾನ್ಯ ಕ್ಷೇತ್ರದ ಅಭ್ಯರ್ಥಿ ಮೇಧಾ ಪಾಟ್ಕರ್‌ ಹೇಳಿದರು.ಚುನಾವಣೆಗೆ ಮೊದಲೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸು­ವುದು ಅಸಾಂವಿಧಾನಿಕ ಎಂದು ಹೇಳಿದರು

‘ಪ್ರಧಾನಿಯನ್ನು  ಆಯ್ಕೆ ಮಾಡುವುದು ಚುನಾಯಿತ ಸಂಸದರ ಹಕ್ಕು. ಯಾರಾದರೂ ಚುನಾವಣೆಗೆ ಮೊದಲೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿದರೆ ಅದು ಜನಪ್ರತಿನಿಧಿ­ಗಳ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ’ ಎಂದು ಮೇಧಾ ಹೇಳಿದರು.ಕಿರಣ್‌ ಪಕ್ಷ ‘ಜೈ ಸಮೈಕ್ಯ ಆಂಧ್ರ’

ಹೈದರಾಬಾದ್‌ (ಐಎಎನ್‌ಎಸ್‌):
‘ಜೈ ಸಮೈಕ್ಯ ಆಂಧ್ರ’ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್‌ ಕುಮಾರ್‌ ರೆಡ್ಡಿ ಅವರ ನೂತನ ರಾಜಕೀಯ ಪಕ್ಷದ ಹೆಸರು.‘ಜೈ ಸಮೈಕ್ಯ ಆಂಧ್ರ ಅಥವಾ ಸಂಯುಕ್ತ ಆಂಧ್ರ’ ಆಂಧ್ರ ಪ್ರದೇಶ ವಿಭಜನೆಯನ್ನು ವಿರೋಧಿಸುತ್ತಿದ್ದವರ ಘೋಷವಾಕ್ಯ­ವಾಗಿತ್ತು. ‘ತೆಲುಗು ಜನರು ಅಥವಾ ಭಾಷಿಕರ ಆತ್ಮಗೌರವ-­ಕ್ಕಾಗಿ ತಮ್ಮ ಪಕ್ಷ ಹೋರಾಟ ನಡೆಸಲಿದೆ’ ಎಂದು ಕಿರಣ್‌ ಕುಮಾರ್‌ ರೆಡ್ಡಿ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.