ಶನಿವಾರ, ಮೇ 28, 2022
26 °C

ವಿಂಬಲ್ಡನ್ ಟೆನಿಸ್: ಎರಡನೇ ಸುತ್ತಿಗೆ ಭೂಪತಿ-ಬೋಪಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ವಿಶ್ವಾಸಪೂರ್ಣ ಆಟವಾಡಿದ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣಗೆ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಯಶಸ್ಸು ಸಿಕ್ಕಿತು.ಬುಧವಾರ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿಯು 6-0, 7-6 (1), 6-2ರಲ್ಲಿ ಉರುಗ್ವೆಯ ಮಾರ್ಸೆಲ್ ಫೆಲ್ಡರ್ ಹಾಗೂ ಟ್ಯುನಿಷಿಯಾದ ಮಾಲೆಕ್ ಜಾಜೀರಿ ವಿರುದ್ಧ ಗೆಲುವು ಸಾಧಿಸಿ, ಎರಡನೇ ಸುತ್ತಿಗೆ ಕಾಲಿಟ್ಟಿತು.ಏಳನೇ ಶ್ರೇಯಾಂಕ ಹೊಂದಿರುವ ಭೂಪತಿ ಮತ್ತು ಬೋಪಣ್ಣ ಅವರು ಒಂದು ತಾಸು 36 ನಿಮಿಷಗಳ ಈ ಹಣಾಹಣಿಯ ಪ್ರಥಮ ಸೆಟ್‌ನಲ್ಲಿ ಸುಲಭವಾಗಿ ಗೆದ್ದರು. ಎದುರಾಳಿಗಳಿಗೆ ಒಂದು ಗೇಮ್ ಕೂಡ ಬಿಟ್ಟುಕೊಡಲಿಲ್ಲ. ಆದರೆ ನಂತರದ ಸೆಟ್‌ನಲ್ಲಿ ಫೆಲ್ಡರ್ ಹಾಗೂ ಜಾಜೀರ್ ಪ್ರಬಲ ಪೈಪೋಟಿ ನಡೆಸಿದರು. ಆದರೂ ನಿರಾಸೆಯೇನು ಕಾಡಲಿಲ್ಲ.ಕೊನೆಯ ಸೆಟ್‌ನಲ್ಲಿ ಸಾಕಷ್ಟು ಹೊಂದಾಣಿಕೆಯಿಂದ ಹೋರಾಡಿದ ಮಹೇಶ್-ರೋಹನ್‌ಗೆ ಗೆಲುವಿನ ಹಾದಿ ಕಷ್ಟದ್ದೆನಿಸಲಿಲ್ಲ. ಎದುರಾಳಿಗಳು ಎರಡು ಗೇಮ್ ಗೆದ್ದರೂ, ಪಂದ್ಯದ ಮೇಲಿನ ಬಿಗಿ ಹಿಡಿತವನ್ನು ಭಾರತದ ಜೋಡಿ ಸಡಿಲಗೊಳಿಸಲಿಲ್ಲ.ಲಂಡನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ಸ್‌ನಲ್ಲಿ ಜೊತೆಯಾಗಿ ಆಡುವ ಅವಕಾಶ ಪಡೆದಿರುವ ಬೋಪಣ್ಣ ಹಾಗೂ ಭೂಪತಿಗೆ ಈ ಟೂರ್ನಿ ಅಭ್ಯಾಸದ ವೇದಿಕೆಯಾಗಿದೆ. ಇಲ್ಲಿ ಪ್ರಶಸ್ತಿ ಗೆಲ್ಲುವ ಮಟ್ಟವನ್ನು ಮುಟ್ಟುವ ಮೂಲಕ ಒಲಿಂಪಿಕ್‌ಗೆ ಮುನ್ನ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು.ಇಲ್ಲಿ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿಗೆ ಯಾರು ಎದುರಾಗುತ್ತಾರೆನ್ನುವುದು ಇನ್ನೂ ನಿರ್ಧಾರವಾಗಿಲ್ಲ. ರಷ್ಯಾದ ಮಿಖೈಲ್ ಎಲ್ಗಿನಿ-ಉಜ್ಬೇಕಿಸ್ತಾನದ ಡೆನಿಸ್ ಐಸ್ಟೊಮಿನ್ ಹಾಗೂ ಸ್ಪೇನ್‌ನವರಾದ ಪಾಬ್ಲೊ ಆ್ಯಂಡುಜಾರ್-ಗುಲಿರ್ಮೊ ಗಾರ್ಸಿಯಾ ನಡುವಣ ಪಂದ್ಯದಲ್ಲಿ ಗೆಲ್ಲುವ ಜೋಡಿ ಎದುರಾಳಿ ಆಗಲಿದೆ.ಇವಾನೊವಿಕ್‌ಗೆ ಜಯ: ಹದಿನಾಲ್ಕನೇ ಶ್ರೇಯಾಂಕ ಹೊಂದಿರುವ ಸರ್ಬಿಯಾದ ಅನಾ ಇವಾನೊವಿಕ್ ಅವರು ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ವಿಜಯ ಸಾಧಿಸಿ, ಮುಂದಿನ ಸುತ್ತಿನಲ್ಲಿ ಉಕ್ರೇನ್‌ನ ಕ್ಯಾಥರಿನಾ ಬೊದಾರೆಂಕೊ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ.ಆಕರ್ಷಕ ಆಟದಿಂದ ಗಮನ ಸೆಳೆದ ಅನಾ ಎರಡನೇ ಸೆಟ್‌ನಲ್ಲಿ ನಿರಾಸೆ ಹೊಂದಿದರೂ 6-3, 3-6, 6-3ರಲ್ಲಿ ಸ್ಪೇನ್‌ನ ಜೋಸ್ ಮಾರ್ಟಿನೇಜ್ ಸಾಂಚೇಜ್ ವಿರುದ್ಧ ಗೆಲುವು ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ಕ್ಯಾಥರಿನಾ 5-7, 6-3, 6-3ರಲ್ಲಿ ಜಪಾನ್‌ನ ಕಿಮಿಕೊ ಡೇಟ್ ಕ್ರುಮ್ ಎದುರು ಜಯಿಸಿದರು.ಮುರ‌್ರೆಗೆ ಶರಣಾದ ನಿಕೊಲಯ್: ನಾಲ್ಕನೇ ಶ್ರೇಯಾಂಕದ ಆಟಗಾರ ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆಗೆ ಮೊದಲ ಸುತ್ತಿನ ಪಂದ್ಯವು ಕಷ್ಟದ್ದಾಗಲೇ ಇಲ್ಲ. ಅವರು 6-1, 6-1, 6-4ರಲ್ಲಿ ರಷ್ಯಾದ ನಿಕೊಲಯ್ ಡವಿಡೆಂಕೊ ವಿರುದ್ಧ ಗೆದ್ದು ಎರಡನೇ ಸುತ್ತಿಗೆ ರಹದಾರಿ ಪಡೆದರು.ಸ್ಪೇನ್‌ನ ಟೆನಿಸ್ ತಾರೆ ಏಳನೇ ಶ್ರೇಯಾಂಕದ ಡೇವಿಡ್ ಫೆರೆರ್ 7-6 (7-5), 6-4, 6-4ರಲ್ಲಿ ಜರ್ಮನಿಯ ಡಸ್ಟಿನ್ ಬ್ರೌನ್ ಅವರನ್ನು ಪರಾಭವಗೊಳಿಸಿದರು. ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪಾಟ್ರೊ ಅವರು 6-4, 3-6, 7-6 (7-3), 7-5ರಲ್ಲಿ ಹಾಲೆಂಡ್‌ನ ರಾಬಿನ್ ಹಾಸ್ ಎದುರು ಗೆದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.