ಸೋಮವಾರ, ಮೇ 23, 2022
21 °C

ವಿಕಿಪೀಡಿಯ: ಬಹು ಭಾಷೆ- ಬಹುಜ್ಞಾನ

ಜೋಮನ್ ವರ್ಗೀಸ್ Updated:

ಅಕ್ಷರ ಗಾತ್ರ : | |

ಕಳೆದ ಜನವರಿ 15ರಂದು ‘ವಿಕಿಪೀಡಿಯ’ಕ್ಕೆ 10 ವರ್ಷ ತುಂಬಿತು. ದಶಕವೊಂದರ ಕಾಲ ಜ್ಞಾನದ ಬೆಳಕನ್ನು ವಿಶ್ವಸಮುದಾಯಕ್ಕೆ ಹಂಚಿದ ಹೆಗ್ಗಳಿಕೆ ವಿಕಿಪೀಡಿಯದ್ದು. ಜಗತ್ತಿನ ಕೋಟ್ಯಾನು ಕೋಟಿ ವೆಬ್ ತಾಣಗಳಲ್ಲಿ ಈ ಮುಕ್ತ ಆನ್‌ಲೈನ್ ವಿಶ್ವಕೋಶ ಭಿನ್ನವಾಗಿ ನಿಲ್ಲುವುದು ಹಲವು ಕಾರಣಕ್ಕೆ.‘ವಿಕಿಪೀಡಿಯ’ ಎಂದರೆ ಅದೊಂದು ಸಮುದಾಯದ ಸಹಭಾಗಿತ್ವದ ಕೆಲಸ. ದೀಪದಿಂದ ದೀಪ ಬೆಳಗಿದಂತೆ, ಅರಿವಿನ  ಜ್ಯೋತಿಯನ್ನು ಹಚ್ಚುವ  ಕೆಲಸ.ಎಲ್ಲರಿಗೂ ತಿಳಿದಿರುವಂತೆ ವಿಕಿಪೀಡಿಯಕ್ಕೆ ‘ಜಾಹಿರಾತಿನ ವರಮಾನವಿಲ್ಲ. ಇದೊಂದು ಉಚಿತ ಆನ್‌ಲೈನ್ ವಿಶ್ವಕೋಶ. ಬಳಕೆದಾರನೇ ಇದರ ಸಂಪಾದಕ. ಮಾಹಿತಿಯನ್ನು ಹುಡುಕುತ್ತಾ, ತನಗೆ ಗೊತ್ತಿರುವ ಮಾಹಿತಿಯನ್ನು ಸೇರಿಸುತ್ತಾ, ತಪ್ಪುಗಳನ್ನು ತಿದ್ದುತ್ತಾ ವಿಶ್ವಕೋಶ ಬೆಳೆಸುತ್ತಾನೆ. ಇಂತಹ ಉದಾತ್ತ ಕಲ್ಪನೆಗೆ ಅಧಿಕೃತವಾಗಿ ಜಾರಿಗೊಂಡದ್ದು ಜನವರಿ 15, 2001ರಲ್ಲಿ.ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸ್ಯಾಂಗರ್ ವೆಬ್‌ಪುಟಗಳಲ್ಲಿ ಸುಲಭವಾಗಿ ಸಂಕಲನ ಮಾಡಬಹುದಾದ ‘ವಿಕಿ’ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ‘ವಿಕಿಪೀಡಿಯ’ ಕಟ್ಟಿದರು.‘ಜಗತ್ತಿನಲ್ಲಿ ನಡೆಯುವ ಯಾವುದೇ ಕ್ರಾಂತಿಯ ಮೊದಲ ಹೆಜ್ಜೆ ತುಂಬಾ ಸಣ್ಣದಿರುತ್ತದೆ, ನಂತರ ಅದು ತ್ರಿವಿಕ್ರಮಾಕಾರವಾಗಿ ಬೆಳೆದಿರುತ್ತದೆ’ ಎನ್ನುವುದಕ್ಕೆ ವಿಕಿಪೀಡಿಯ ಉತ್ತಮ ಉದಾಹರಣೆ.ಸದ್ಯ ವಿಕಿಪೀಡಿಯಲ್ಲಿ 17 ದಶಲಕ್ಷ ಉಚಿತ ಲೇಖನಗಳಿವೆ. 365 ದಶಲಕ್ಷ ಓದುಗರಿರುವ ಈ ವಿಶ್ವಕೋಶ ಪ್ರಪಂಚದ 262 ಭಾಷೆಗಳಲ್ಲಿ ಲಭ್ಯವಿದೆ. ಕಾಂಗೋ ದೇಶದ ಈಗಿನ ಅಧ್ಯಕ್ಷ ಯಾರು? ಪರ್ಲ್ ಹಾರ್ಬರ್ ಮೇಲೆ ದಾಳಿ ನಡೆದದ್ದು ಯಾವಾಗ? ಬಾಹ್ಯಾಕಾಶ ನೌಕೆ ಗಂಟೆಗೆ ಎಷ್ಟು ಮೈಲು ವೇಗದಲ್ಲಿ ಚಲಿಸುತ್ತದೆ? ಡೈನೋಸಾರ್‌ಗಳ ಅವಸಾನ  ಹೇಗಾಯ್ತು? ಇತ್ಯಾದಿ ಮಾಹಿತಿಗಳು ನಿಖರವಾಗಿ ಬೇಕಿದ್ದರೆ ನಮ್ಮ ಮುಂದಿರುವ ಏಕೈಕ ಆಯ್ಕೆ ‘ವಿಕಿಪೀಡಿಯ’. ಮುದ್ರಿತ ವಿಶ್ವಕೋಶ ಎದುರಿಗಿದ್ದರೂ, ಅದಕ್ಕಿಂತಲೂ ವೇಗವಾಗಿ ಈ ಡಿಜಿಟಲ್ ವಿಶ್ವಕೋಶ ಬೆರಳ ತುದಿಯಲ್ಲಿ ಮಾಹಿತಿ ಒದಗಿಸುತ್ತದೆ.‘ವಿಕಿಪೀಡಿಯ’ಕ್ಕೆ 10 ವರ್ಷ ತುಂಬಿದಾಗ ವಿಶ್ವದಾದ್ಯಂತ 300ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದವು. ಇದರಲ್ಲಿ 60ಕ್ಕೂ ಹೆಚ್ಚು ಕಾರ್ಯಕ್ರಮಗಳು ಭಾರತದಲ್ಲೇ ನಡೆಯಿತು ಎನ್ನುವುದು ವಿಶೇಷ.ಅಮೆರಿಕ ಹೊರತುಪಡಿಸಿದರೆ ವಿಕಿಪೀಡಿಯದ ಮೊದಲ ವಿದೇಶಿ ಕಚೇರಿ ಇರುವುದು ಭಾರತದಲ್ಲಿ. ಭಾರತದತ್ತ ‘ವಿಕಿಮೀಡಿಯ’ ಪ್ರತಿಷ್ಠಾನಕ್ಕೆ ವಿಶೇಷ ಒಲವಿದೆ ಎನ್ನುತ್ತಾರೆ ಕಾರ್ಯಕಾರಿ ನಿರ್ದೇಶಕ ಸ್ಯು ಗಾರ್ಡ್‌ನರ್.ಸದ್ಯ  20 ಭಾರತೀಯ ಭಾಷೆಗಳಲ್ಲಿ ‘ವಿಕಿಪೀಡಿಯ’ ಲಭ್ಯವಿದೆ. ಇನ್ನೂ 20ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಲ್ಲಿ ಅಂದರೆ ತುಳು, ಕೊಂಕಣಿ, ಮತ್ತು ಮಿಜೊ ಭಾಷಾ ಆವೃತ್ತಿಗಳು ಅಭಿವೃದ್ಧಿಯ ಹಂತದಲ್ಲಿವೆ.‘ವಿಕಿಪೀಡಿಯ’ದ 10ನೇ ವರ್ಷ  ಅಂಗವಾಗಿ ‘ವಿಕಿಮಿಡಿಯ ಇಂಡಿಯಾ ಚಾಪ್ಟರ್’ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಹಿಂದಿ ಸೇರಿದಂತೆ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ದತ್ತಾಂಶ ಸಂಗ್ರಹವನ್ನು ವಿಸ್ತರಿಸುವುದು ಪ್ರಮುಖ ಯೋಜನೆ.  ವಿಕಿಪೀಡಿಯದ ಸಂಪಾದಕೀಯ ವಿಷಯವನ್ನು ಮಾತ್ರ ಗಮನಿಸುವುದು ‘ವಿಕಿಮೀಡಿಯ’ ಪ್ರತಿಷ್ಠಾನದ  ಕೆಲಸವಲ್ಲ, ಮತ್ತಷ್ಟು ಜನರಿಗೆ ವಿಕಿಪೀಡಿಯವನ್ನು ತಲುಪಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎನ್ನುತ್ತಾರೆ ಭಾರತದ ‘ವಿಕಿಮೀಡಿಯ’ ಚಾಪ್ಟರ್‌ನ ಟಿನು ಚೆರಿಯನ್.ವಿಕಿಪೀಡಿಯಕ್ಕೆ 10 ವರ್ಷ ತುಂಬಿದ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ವಿಶ್ವದ 29ನೇ ‘ವಿಕಿಮೀಡಿಯ’ ಶಾಖೆಗೆ ಚಾಲನೆ ನೀಡಲಾಯಿತು. ಇದರೊಂದಿಗೆ ವಿಕಿಪೀಡಿಯ ಅಧಿಕೃತ ಕಚೇರಿ ಭಾರತದಲ್ಲಿ ಪ್ರಾರಂಭವಾಯಿತು. ಸದ್ಯ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ವಿಕಿಪೀಡಿಯಕ್ಕೆ 100 ರಿಂದ 200ಜನ ಮಾಹಿತಿ ಸಂಕಲನಕಾರರಿದ್ದಾರೆ. ಇಂಗ್ಲಿಷ್ ಭಾಷೆ ಒಂದರಲ್ಲೇ ಈ ಸಂಖ್ಯೆ 100ನ್ನು ದಾಟಿದೆ.ಈಗ ವಿಕಿಪೀಡಿಯ ತಿಂಗಳ ಪುಟ ವೀಕ್ಷಣೆ ಸಂಖ್ಯೆ 8.5 ಶತಕೋಟಿಗೆ ಏರಿದ್ದು, ಅತಿ ಹೆಚ್ಚು ಜನ ಭೇಟಿ ನೀಡುವ ಪ್ರಪಂಚದ ಐದನೆಯ ವೆಬ್ ತಾಣ ವಿಕಿಪೀಡಿಯ. ಈಗಿರುವ ಬಳಕೆದಾರರ ಸಂಖ್ಯೆಯನ್ನು ಒಂದು ಶತಕೋಟಿಗೆ ಹಾಗೂ ಲೇಖನಗಳ ಸಂಖ್ಯೆಯನ್ನು 50 ದಶಲಕ್ಷಗಳಿಗೆ ಹೆಚ್ಚಿಸುವುದು ವಿಕಿಪೀಡಿಯದ ಮುಂದಿರುವ  ಮೊದಲ ಗುರಿ. ಅತ್ಯುತ್ತಮ ಗುಣಮಟ್ಟದ ಲೇಖನಗಳ ಸಂಖ್ಯೆಯನ್ನು ಶೇಕಡ 25ರಷ್ಟು ಹೆಚ್ಚಿಸುವುದು, ಮಹಿಳಾ ಪಾಲುದಾರರ ಸಂಖ್ಯೆ ಹಾಗೂ ಜಾಗತಿಕ ಕೊಡುಗೆದಾರರ ಸಂಖ್ಯೆಯನ್ನು ಕ್ರಮವಾಗಿ ಶೇ 25 ಮತ್ತು 37ರಷ್ಟು ಹೆಚ್ಚಿಸುವ ಯೋಜನೆಯೂ ಇದೆ.ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಅದರಲ್ಲೂ ಮೊಬೈಲ್ ಮೂಲಕ ಅಂತರ್ಜಾಲ ಜಾಲಾಡುವರ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಭಾರತದ ಮಾರುಕಟ್ಟೆಯತ್ತ ವಿಶೇಷ ಗಮನ ಹರಿಸುತ್ತಿದ್ದೇವೆ ಎನ್ನುತ್ತಾರೆ ಗಾರ್ಡನರ್.ಇದೇನಿದ್ದರೂ, ಕೆಲವು ಅಂತರ್ಜಾಲ ತಜ್ಞರು ಹೇಳುವಂತೆ ವಿಕಿಪೀಡಿಯ ಮಾಹಿತಿ ಸಂಕಲನಕಾರರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. ಮಾರ್ಚ್ 2007ರಲ್ಲಿ 54,000 ಇದ್ದ ಭಾಷಾ ಕೊಡುಗೆದಾರರ ಸಂಖ್ಯೆ ಸೆಪ್ಟಂಬರ್ 2010ಕ್ಕೆ 35,000 ಕ್ಕೆ ಕುಸಿದಿದೆ.‘ವಿಕಿಪೀಡಿಯ’ ಇಲ್ಲದ ಮುಂದಿನ ತಲೆಮಾರನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈಗಿನ ಡಿಜಿಟಲ್ ಯುಗದಲ್ಲಿ ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಿದ್ದರೂ, ಅದನ್ನು ಖಚಿತಪಡಿಸಿಕೊಳ್ಳಲು ವಿಕಿಪೀಡಿಯ ಬೇಕೇಬೇಕು. ಬಹು  ಭಾಷೆ, ಬಹು ಜ್ಞಾನದ ವಿಕಿಪೀಡಿಯವನ್ನು ಬೆಳೆಸೋಣ. ಹನಿ ಹನಿ ಸೇರಿ ಅರಿವಿನ ಸಾಗರ...   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.