ಶುಕ್ರವಾರ, ಮೇ 7, 2021
27 °C

ವಿಜೃಂಭಣೆಯಿಂದ ನಡೆದ ಕುದುರೆ ವಾಹನೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಬಾಗೂರು ಗ್ರಾಮ ದೇವತೆ ಸಂತೇಕಾಳೇಶ್ವರಿ ದೇವಿಯ ರಥೋತ್ಸವದ ಅಂಗವಾಗಿ ಕುದುರೆ ವಾಹನೋತ್ಸವ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ಹೋಬಳಿ ಕೇಂದ್ರದಲ್ಲಿರುವ ಗ್ರಾಮದೇವತೆಗೆ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕುದುರೆ ವಾಹನೋತ್ಸವಕ್ಕೆ ಚಾಲನೆ ನೀಡಲಾಯಿತು.ಕುದುರೆ ವಾಹನೋತ್ಸವ ಸಾಗುವ ದಾರಿಯನ್ನು ಸ್ವಚ್ಛಗೊಳಿಸಿ ರಂಗೋಲಿ ಇಟ್ಟು ಬರ ಮಾಡಿಕೊಳ್ಳಲಾಯಿತು. ವಾಹನೋತ್ಸವ ಹೊತ್ತ ಯುವಕರು ಮುಖಕ್ಕೆ ಬಣ್ಣ ಬಳಿದುಕೊಂಡು ಹರ್ಷೋದ್ಗಾರ ಮಾಡುತ್ತ ಮೆರವಣಿಗೆಯಲ್ಲಿ ಸಾಗಿದರು.ಕುದುರೆ ವಾಹನೋತ್ಸವ ಹೊತ್ತ ಭಕ್ತರ ಕಾಲನ್ನು ಮಹಿಳೆಯರು ನೀರಿನಿಂದ ತೊಳೆದು, ದೇವರಿಗೆ ಹಣ್ಣು, ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ಹರಕೆ ಹೊತ್ತವರು ದೇವರಿಗೆ ಹೊಸ ಸೀರೆಗಳನ್ನು ಸಲ್ಲಿಸಿದರು. ಸಂಜೆವರೆಗೆ ನಡೆದ ಉತ್ಸವ ನಂತರ ಸ್ವಸ್ಥಾನಕ್ಕೆ ಮರಳಿತು.ಇದಕ್ಕೂ ಮುನ್ನಾ ಭಾನುವಾರ ಮುಂಜಾನೆ ದೇವರಿಗೆ ಪೂಜೆ ಮಾಡಿದ ನಂತರ ಅಲಂಕೃತ ರಥದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿದ ರಥೋತ್ಸವ ನಡೆಯಿತು. ಸುತ್ತಲಿನ ದ್ಯಾವನೂರು, ಕೂರದಹಳ್ಳಿ. ಕುಂಬಾರಹಳ್ಳಿ, ಹೊನ್ನೇನಹಳ್ಳಿ, ಚೌಡೇನಹಳ್ಳಿ, ಮರುವನಹಳ್ಳಿ ಗ್ರಾಮಸ್ಥರು ಊರುಗಳಲ್ಲಿ ಪೂಜೆ ಸಲ್ಲಿಸಿದ ಶನಿವಾರ ಸಂಜೆ ರಥಗಳು ಬಾಗೂರು ಗ್ರಾಮಕ್ಕೆ ಆಗಮಿಸಿದ್ದವು. ದಾರಿಯಲ್ಲಿ ಮಧ್ಯದಲ್ಲಿ ಸಿಗುವ ಹಳ್ಳಿಗಳಲ್ಲಿ ಜನತೆ ಪೂಜೆ ಸಲ್ಲಿಸಿದರು. ಭಾನುವಾರ ಬೆಳಿಗ್ಗೆ ರಥೋತ್ಸವ ಸಾಗುತ್ತಿದ್ದಂತೆ ಭಕ್ತರು ಹಣ್ಣು, ಜವನ ಎಸೆದು ಭಕ್ತಿಯಿಂದ ನಮಿಸಿದರು.ಜಾತ್ರೆ ಶುಕ್ರವಾರದಿಂದ ಆರಂಭವಾಗಿದ್ದು, ಶನಿವಾರ ಸಿಡಿ ಉತ್ಸವ ಜರುಗಿತು. ಸುತ್ತಲಿನ ಹಳ್ಳಿಗಳಲ್ಲಿ ಸ್ನೇಹಿತರು, ನೆಂಟರಿಷ್ಟರೊಂದಿಗೆ ಮಾಂಸದೂಟ ಸವಿಯುವುದು ಜಾತ್ರೆಯ ವಿಶೇಷ. ಸೋಮವಾರ ಸಂಜೆ ದೇವಿಗೆ ಪೂಜೆ ಸಲ್ಲಿಸಿದ ನಂತರ ರಥಗಳು ಪುನಃ ಗ್ರಾಮಕ್ಕೆ ತೆರಳುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.