ಮಂಗಳವಾರ, ಮೇ 24, 2022
26 °C

ವಿಜ್ಞಾನದ ಕಲಿಕೆ, ವೈಜ್ಞಾನಿಕ ಚಿಂತನೆಯಿಂದ ರಾಷ್ಟ್ರದ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

*1947 ರ ಆಗಸ್ಟ್1 ರಂದು ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಾಹರ್‌ಲಾಲ್ ನೆಹರು ಅವರು ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿ ತಮ್ಮ ಭಾಷಣದಲ್ಲಿ (ಖ್ಟಠಿ ಡಿಜಿಠಿ ಛಿಠಿಜ್ಞಿ)ಭಾರತದ ವಿಜ್ಞಾನ ನೀತಿಯನ್ನು ಪ್ರಕಟಿಸಿದಾಗ ಬಹುಶಃ ತಾವಿನ್ನೂ ವಿದ್ಯಾರ್ಥಿ. ಅಂದಿನಿಂದ ಇಂದಿನವರೆಗೆ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದು ಬಂದ ಹಾದಿಯ ಮೇಲೆ ಬೆಳಕು ಚೆಲ್ಲುತ್ತೀರಾ?|ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನಾನಿನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದೆ. ಪ್ರಪಂಚದಲ್ಲಿ ಬೇರೆ ಯಾವ ದೇಶಗಳೂ ವಿಜ್ಞಾನದ ಬಗ್ಗೆ ಮಾತನಾಡದೇ ಇದ್ದಾಗ ಜವಾಹರಲಾಲ್ ನೆಹರೂರವರು ವಿಜ್ಞಾನದ ಬಗ್ಗೆ ಆಸಕ್ತಿ ತೋರಿಸಿದ್ದು ನನಗೆ ತುಂಬಾ ಆಶ್ಚರ್ಯ ತಂದಿರುವ ಸಂಗತಿ.ವಿಜ್ಞಾನ ಕುರಿತ ಅವರ ದೃಷ್ಟಿಕೋನ ಮತ್ತು ಜನತೆಗೆ ಇದರಿಂದ ಒಳ್ಳೆಯದಾಗಬೇಕೆಂಬುದು ಅತ್ಯಂತ ಶ್ಲಾಘನೀಯ ವಿಷಯ. ನಮ್ಮದು ಬಡದೇಶ. ಬಹಳಷ್ಟು ಕಷ್ಟಗಳನ್ನೆದುರಿಸಬೇಕಾದ ದಿನಗಳು ಆಗ ನಮ್ಮ ಮುಂದಿದ್ದವು. ಅಂತಹ ಸಂದರ್ಭದಲ್ಲಿ ನೆಹರೂರವರು ಈ ಬಗ್ಗೆ ಆಲೋಚನೆ ಮಾಡಿದ್ದಲ್ಲದೇ ‘ಸೈನ್ಸ್ ಪಾಲಿಸಿ’ ರೂಪಿಸಿದರು. ಈಗ ಅನೇಕ ಸಂಸ್ಥೆಗಳು ಸಂಶೋಧನೆಗಳಲ್ಲಿ ತೊಡಗಿವೆ.ನಮ್ಮ ಜೊತೆಗೆ ಸ್ಪರ್ಧೆ ಮಾಡುವ ಜನರು, ದೇಶಗಳು ಹೆಚ್ಚಾಗಿವೆ. ದಕ್ಷಿಣ ಕೊರಿಯಾ, ಸಿಂಗಪುರದಂತಹ ಚಿಕ್ಕ ಚಿಕ್ಕ ದೇಶಗಳೂ ವಿಜ್ಞಾನದಲ್ಲಿ ಪೈಪೋಟಿ ನೀಡುತ್ತಿವೆ. ಆದ್ದರಿಂದ ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ವಿಜ್ಞಾನದಲ್ಲಿ ಎಲ್ಲವೂ ಒಂದೇ. ಮನುಷ್ಯರಲ್ಲಿ ಮಾನವ ಜಾತಿ ಒಂದೇ ಎಂಬಂತೆ ವಿಜ್ಞಾನದಲ್ಲಿಯೂ ಒಂದೇ ಜಾತಿ. ಕೆಲವರು ಪ್ಯೂರ್ ಅಂಡ್ ಅಪ್ಲೈಡ್ ಅಂತ ಹೇಳ್ತಾರೆ. ಅದೆಲ್ಲ ನಾನು ಒಪ್ಪೋದಿಲ್ಲ. ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿಯೊಬ್ಬರು ಹೀಗೆ ಹೇಳ್ತಾರೆ. ‘ ಠ್ಚಜಿಛ್ಞ್ಚಿಛಿ ಠಿಠಿ  ಚಿಛಿಛ್ಞಿ ಟ್ಝಜಿಛಿ, ಠಿಠಿ ಜಿ ಛಿಠಿ ಠಿಟಚಿಛಿ ಟ್ಝಜಿಛಿ’. ಎಲ್ಲ ಅನ್ವಯಿಕ ವಿಜ್ಞಾನಕ್ಕೂ ಮೂಲವಿಜ್ಞಾನ ಬೇಕೇ ಬೇಕು. ಬುದ್ಧಿವಂತಿಕೆ, ಪರಿಶ್ರಮ ಇಲ್ಲದೆ ಏನೂ ಆಗಲ್ಲ.

*ಅಂತರರಾಷ್ಟ್ರೀಯ ರಸಾಯನವಿಜ್ಞಾನ ವರ್ಷಾಚರಣೆಯ ಮಹತ್ವವೇನು?1911ರಲ್ಲಿ ಮೇರಿ ಕ್ಯೂರಿಯವರಿಗೆ ಎರಡನೇ ಬಾರಿಗೆ ನೊಬೆಲ್ ಬಹುಮಾನ ರಸಾಯನಶಾಸ್ತ್ರದಲ್ಲಿನ ಸಂಶೋಧನೆಗೆ ದೊರಕಿತ್ತು. ಆದ್ದರಿಂದ ಈ ವರ್ಷವನ್ನು ‘ರಸಾಯನ ವಿಜ್ಞಾನ ವರ್ಷಾಚರಣೆ’ಯಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಮೇರಿ ಕ್ಯೂರಿಯವರಿಗೆ ನೊಬೆಲ್ ಪ್ರಶಸ್ತಿ ಬಂದು 100 ವರ್ಷಗಳಾಗಿವೆ. ಅದರ ಅಂಗವಾಗಿ ಪ್ರಪಂಚದ ಎಲ್ಲ ದೇಶಗಳಲ್ಲಿಯೂ ರಸಾಯನಶಾಸ್ತ್ರದ ಬಗ್ಗೆ ಅರಿವು ಮೂಡಿಸುವ ವಿಚಾರ ಸಂಕಿರಣಗಳು, ವಸ್ತುಪ್ರದರ್ಶನಗಳು ಉಪನ್ಯಾಸಗಳು, ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ.ರಸಾಯನಶಾಸ್ತ್ರವಿಲ್ಲದೇ ಯಾವ ಕ್ಷೇತ್ರವೂ ಇಲ್ಲ. ಜೀವ ಹುಟ್ಟುವುದರಿಂದ ಬದುಕಿನ ಕೊನೆಯವರೆಗೂ ರಸಾಯನಶಾಸ್ತ್ರ ಹಾಸುಹೊಕ್ಕಾಗಿದೆ. ನನ್ನ ಪಾಲಿಗಂತೂ ರಸಾಯನಶಾಸ್ತ್ರದ ಸಂಶೋಧನೆ ತುಂಬ ಸಂತೋಷ ನೀಡಿದೆ. ಕಳೆದ ಅರವತ್ತು ವರ್ಷಗಳಿಂದಲೂ ರಸಾಯನಶಾಸ್ತ್ರದ ಸಂಶೋಧನೆಯಲ್ಲಿ ನಿರತವಾಗಿದ್ದೇನೆ. ನ್ಯಾನೊ ತಂತ್ರಜ್ಞಾನದಲ್ಲಿಯೂ ಶೇಕಡ 50ರಷ್ಟು ರಸಾಯನಶಾಸ್ತ್ರವಿದೆ. ಜೀವಶಾಸ್ತ್ರ, ಪದಾರ್ಥಶಾಸ್ತ್ರಗಳಲ್ಲಿಯೂ ರಸಾಯನ ಶಾಸ್ತ್ರದ ಪಾತ್ರವಿದೆ.

*ನ್ಯಾನೊ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳ ಕೊಡುಗೆ ಹಾಗೂ ಇತ್ತೀಚಿನ ಬೆಳವಣಿಗೆಗಳೇನು? ಉದ್ದೇಶಿತ ನ್ಯಾನೋ ಪಾರ್ಕ್ ಸ್ವರೂಪ ಹೇಗಿರುತ್ತದೆ?ಈಗ ಕೆಲವು ವರ್ಷಗಳ ಹಿಂದೆ ನ್ಯಾನೊವಿಜ್ಞಾನ ಇರಲಿಲ್ಲ. ಆದರೆ ಇವತ್ತು ಭಾರತ ಸರ್ಕಾರ ಅದಕ್ಕಾಗಿ ಕೋಟ್ಯಂತರ ರೂಪಾಯಿ ಧನ ಸಹಾಯ ಮಾಡ್ತಿದೆ. ಬಹಳ ಜನರು ನ್ಯಾನೊ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿಯೂ ಗುಣಮಟ್ಟದ ಸಂಶೋಧನೆ ಹೆಚ್ಚಾಗಬೇಕು. ಸ್ಪರ್ಧೆ ಬಹಳಷ್ಟಿದೆ. ನ್ಯಾನೊವಿಜ್ಞಾನ ತಂತ್ರಜ್ಞಾನದ ಸಂಶೋಧನೆಗಾಗಿ ಬೆಂಗಳೂರು ಹಾಗೂ ಚಂಡೀಗಢದಲ್ಲಿ ಕೇಂದ್ರ ಸರ್ಕಾರ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.

*ಅತಿವಾಹಕತೆ (Super Conductivity)ಕುರಿತಂತೆ ತಾವು ಸ್ವತಃ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೀರಿ. ಈ ದಿಸೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗಿರುವ ಸಂಶೋಧನೆಗಳ ಕುರಿತು ತಮ್ಮ ಅಭಿಪ್ರಾಯವೇನು?1986-87ರಲ್ಲಿ ಅತಿವಾಹಕತೆ ಕುರಿತ ಸಂಶೋಧನೆ ಮಾಡಿದೆ. ಮೊಟ್ಟಮೊದಲು 1903ರಲ್ಲಿ 26 ಡಿಗ್ರಿ ಉಷ್ಣತೆಯಲ್ಲಿ ಮಾತ್ರ ಅತಿವಾಹಕತೆ ಕಂಡು ಹಿಡಿದಿದ್ದರು. ನಂತರ 35 ಡಿಗ್ರಿ ಕೆಲ್ವಿನ್‌ನಲ್ಲಿ ಕಂಡುಹಿಡಿದರು. ನಂತರ 1986-87 ರಲ್ಲಿ 90 ಡಿಗ್ರಿ ಕೆಲ್ವಿನ್‌ನಲ್ಲಿ ಲಿಕ್ವಿಡ್ ನೈಟ್ರೊಜನ್‌ನಲ್ಲಿ ಅತಿವಾಹಕತೆಯ ಸಂಶೋಧನೆಯಾಯಿತು. ಪ್ರಪಂಚದಾದ್ಯಂತ ನಾಲ್ಕು ಜನರು ಈ ಸಂಶೋಧನೆ ಮಾಡಿದರು. ಬೆಂಗಳೂರಿನಲ್ಲಿ ಸಂಶೋಧನೆ ಮಾಡಿದ ನಾನೂ ಕೂಡ ಅವರಲ್ಲಿ ಒಬ್ಬ. ನಾವು ಮಾಗ್ನೆಟ್ ಮಾಡಿದ್ದೇವೆ. ವೈದ್ಯಕೀಯ ಕ್ಷೇತ್ರದಲ್ಲಿ ಇದರ ಬಳಕೆಯಿಂದ ಕಾಯಿಲೆಗಳನ್ನು ಶೀಘ್ರವಾಗಿ ಗುರುತಿಸುವುದು ಸಾಧ್ಯವಾಗಿದೆ.ಹೃದಯದ ರೋಗಗಳನ್ನು ಕಂಡುಹಿಡಿಯಲು ಮೆದುಳಿನಲ್ಲಿ ಜರುಗುವ ಪ್ರತಿಕ್ರಿಯೆಗಳನ್ನು ಗುರುತಿಸಲು ಸಾಧ್ಯವಾಗಿದೆ. ಟ್ರಾನ್ಸ್‌ಮೀಟರ್‌ಗಳಲ್ಲಿಯೂ ಅತಿವಾಹಕತೆ ಬಳಸುವುದರಿಂದ ವಿದ್ಯುತ್ ಪೋಲಾಗುವುದನ್ನು ತಡೆಯಬಹುದಾಗಿದೆ. ಈಗ ಇನ್ನೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. 135 ಡಿಗ್ರಿ ಕೆಲ್ವಿನ್‌ನಲ್ಲಿ ಸಾಧ್ಯವಾದಲ್ಲಿ ರೈಲು ಗಾಳಿಯಲ್ಲಿ ತೇಲಿದಂತೆ ಹೋಗಬಹುದಾಗಿದೆ.*ಭಾರತದಲ್ಲಿ  ಇಂದು ವಿಜ್ಞಾನದ ಸಹಾಯದಿಂದ ಹುಟ್ಟಿಕೊಂಡ ಉಪಭೋಗ ವಸ್ತುಗಳಿಗೆ ಬಹಳಷ್ಟು ಬೇಡಿಕೆ ಇದೆ. ಉದಾ: ಇಂದು ಪ್ರತಿಯೊಬ್ಬರೂ ಮೊಬೈಲ್ ಬಳಸೋದನ್ನ ನಾವು ನೋಡ್ತೀವಿ. ಆದರೆ ಅದರ ಹಿಂದಿರುವ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅರಿಯೋ ಕುತೂಹಲ ಕಡಿಮೆ ಆಗ್ತಾ ಇದೆಯಾ, ಹೀಗೇಕೆ?ವಿಜ್ಞಾನದ ಬಗ್ಗೆ ಜನಸಾಮಾನ್ಯರಲ್ಲಿ ಬಹಳಷ್ಟು ತಪ್ಪು ತಿಳುವಳಿಕೆ ಇದೆ.  ಐಟಿ ಮಾತ್ರ ವಿಜ್ಞಾನ ಅಲ್ಲ. ವಿಜ್ಞಾನವೆಂದರೆ ಸಂಶೋಧನೆಯೆಂದರೆ ಪರಿಶ್ರಮದ ಕಾರ್ಯ. ಉದಾಹರಣೆಗೆ ಹೇಳಬೇಕೆಂದರೆ ಮರಗಿಡಗಳು ಸೂರ್ಯನ ಬೆಳಕಿನಿಂದ ದ್ಯುತಿ ಸಂಶ್ಲೇಷಣೆ ಕಾರ್ಯ ನಡೆಸಿ ಆಹಾರ ಹೇಗೆ ತಯಾರಿಸಿಕೊಳ್ಳುತ್ತವೋ (ಫೋಟೊ ಸಿಂಥೆಸಿಸ್) ಅದಕ್ಕಿಂತ ಉತ್ತಮವಾದ ರೀತಿಯಲ್ಲಿ ಪ್ರಯೋಗಾಲಯಗಳಲ್ಲಿ ಮಾಡುವುದು ಸಾಧ್ಯವಾದಲ್ಲಿ ಅದೇ ವಿಜ್ಞಾನ.ಈಗ ಎಲ್ಲರೂ ಎಂಜಿನಿಯರ್ ಪದವಿ ಪಡೆಯಲು ಹಾತೊರೆಯುತ್ತಿದ್ದಾರೆ. ಮಕ್ಕಳೇನಾದರೂ  ವಿಜ್ಞಾನ ಕಲಿಯಲು ಇಷ್ಟಪಟ್ಟರೂ ಕೂಡ ತಂದೆ ತಾಯಿಗಳೇ. ಎಂಜಿನಿಯರಿಂಗ್ ಕಾಲೇಜಿಗೆ ಸೇರಿಸುತ್ತಾರೆ.  ವಿಜ್ಞಾನ ಕೂಡ ಒಂದು ತಪಸ್ಸು. ಅದರಲ್ಲಿಯೇ ಸಂಪೂರ್ಣ ತನ್ಮಯತೆ ಬರಬೇಕು. ಜನಸಾಮಾನ್ಯರು ಆಟಂಬಾಂಬ್, ರಾಕೆಟ್, ವಾಯುಯಾನ ಮಾತ್ರ ವಿಜ್ಞಾನ ಅಂತ ಭಾವಿಸಿದ್ದಾರೆ. ವಿಜ್ಞಾನ ಕಲಿಯುವವರಲ್ಲಿ ಪ್ರಗತಿಶೀಲ ಚಿಂತನೆಗಳು, ವೈಜ್ಞಾನಿಕ ಮನೋಭಾವ ಮೂಡುತ್ತದೆ.

*ತಮ್ಮ ಅನುಭವದ ಕಣ್ಣುಗಳಿಗೆ ಭಾರತದಲ್ಲಿ ವಿಜ್ಞಾನದ ಅಧ್ಯಯನ ಮತ್ತು ಸಂಶೋಧನೆಗಳ ಭವಿಷ್ಯ ಹೇಗೆ ಕಾಣ್ತಾ ಇದೆ? ವಿದೇಶಗಳಿಗೆ ಹೋಲಿಸಿದರೆ ನಮ್ಮ ಸ್ಥಾನವೇನು?ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಸಮಿತಿಯಿಂದ ಇತ್ತೀಚೆಗೆ ಹೊಸ ಪುಸ್ತಕ ಪ್ರಕಟವಾಗಿವೆ. ‘ಕ್ಯಾನ್ ಇಂಡಿಯಾ ಬಿ ಎ ಗ್ಲೋಬಲ್ ಪವರ್?’ ವಿಜ್ಞಾನದ ಗುಣಮಟ್ಟ ಹೆಚ್ಚಾಗಬೇಕು. ಸಂಶೋಧನೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ತೊಡಗಿಕೊಳ್ಳಬೇಕು. ಸರ್ಕಾರವು ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಹಣ ವಿನಿಯೋಗಿಸಬೇಕು. ನನ್ನ ಪ್ರಕಾರ ಪ್ರಪಂಚದ ಪ್ರಥಮ ಐದು ರಾಷ್ಟ್ರಗಳಲ್ಲಿ ಭಾರತವೂ ಸೇರಬೇಕು. ಅಮೆರಿಕ ಪ್ರಥಮ ಸ್ಥಾನದಲ್ಲಿದೆ.ಎರಡನೆಯ ಸ್ಥಾನ ಚೈನಾದ್ದು. ಮೂರನೆಯದು ಜಪಾನ್. ಯೂರೋಪ್. ನಾಲ್ಕನೆಯ ಸ್ಥಾನದಲ್ಲಿದೆ.ಬಹುಶಃ ಭಾರತದ ಸ್ಥಾನ ಐದನೆಯದಾಗಬಹುದು. ಚೈನಾದವರು ಇಷ್ಟು ಬೇಗ ಅಭಿವೃದ್ಧಿ ಹೊಂದಲು ಅವರ ಪರಿಶ್ರಮ ಮತ್ತು ಅವರಿಗಿರುವ ದೇಶದ ಬಗೆಗಿನ ಹೆಮ್ಮೆ. ಅವರಿಂದ ನಾವು ಕಲಿಯುವುದು ಸಾಕಷ್ಟಿದೆ. ನಾವು ಮನಸ್ಸು ಮಾಡಿದ್ರೆ ಚೈನಾವನ್ನು ಮೀರಿಸಬಹುದು.ಸ್ವಾಭಿಮಾನದಿಂದ ಮುನ್ನುಗ್ಗಬೇಕು. ನಮ್ಮ ದೇಶದ ಬಗ್ಗೆ ನಮ್ಮ ಶಕ್ತಿ ಮತ್ತು ಪ್ರಭಾವದ ಬಗ್ಗೆ ನಮಗೇ ಅರಿವಿಲ್ಲದಿರೋದು ಒಂದು ದೊಡ್ಡ ಕೊರತೆ. ಅಲ್ಲದೇ ನಾವು ಒಂದು ರೀತಿಯ ಕೀಳರಿಮೆ ಬೆಳೆಸಿಕೊಂಡಿದ್ದೇವೆ.ಅಮೆರಿಕದವರು ಎಂದ ಕೂಡಲೇ ನಮ್ಮ ನಡವಳಿಕೆಯೇ ಬದಲಾಗಿ ಬಿಡುತ್ತದೆ. ಬಹುಶಃ ಅದು ಬ್ರಿಟಿಷರು ನಮ್ಮನ್ನಾಳಿದ ಫಲವಿರಬಹುದು.ಬೆಂಗಳೂರಿನಲ್ಲಿ ನಾನು ಚಿಕ್ಕವನಾಗಿದ್ದಾಗ ಒಂದು ವಿಚಾರ ನೆನಪಿಗೆ ಬರುತ್ತದೆ. ಬ್ರಿಟಿಷರ ಆಳ್ವಿಕೆಯಲ್ಲಿದ್ದಾಗ ಬೆಂಗಳೂರಿನ ಕೆಲವು ರೆಸ್ಟೊರೆಂಟ್‌ಗಳಲ್ಲಿ  ‘ಡಾಗ್ಸ್ ಅಂಡ್ ಇಂಡಿಯನ್ಸ್ ನಾಟ್ ಅಲೋಡ್’ಎಂಬ ಬೋರ್ಡ್ ಹಾಕಿರುತ್ತಿತ್ತು. ಭಾರತೀಯರಾದ ನಾವು ಯಾರಿಗೂ ಕಡಿಮೆ ಇಲ್ಲ. ವಿಜ್ಞಾನದಲ್ಲಿ ಎಲ್ಲವೂ ಎಲ್ಲರೂ ಒಂದೇ. ನಾವು ಅಭಿಮಾನ ಶೂನ್ಯರಾಗುವುದು ಬೇಡ.*ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಿಗೆ ಸಾಮಾನ್ಯವಾಗಿ ಡಾಕ್ಟರೇಟ್  ಹಂತದಲ್ಲಿ ಹೋಗ್ತಾ ಇದ್ರು. ಆದರೆ ಇತ್ತೀಚಿನ ದಿನಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನದ ಹಂತದಲ್ಲಿಯೇ ಹೋಗೋದು ಕಂಡು ಬರ್ತಾ ಇದೆ. ಯಾಕೆ ಹೀಗಾಗ್ತಾ ಇದೆ? ಭಾರತದಲ್ಲಿ ವಿಜ್ಞಾನದ ಅಧ್ಯಯನಕ್ಕಿರುವ ಅವಕಾಶಗಳು ಹೇಗಿವೆ?ಈಗ ಭಾರತದಲ್ಲಿಯೇ ಅನೇಕ ಪ್ರಯೋಗಾಲಯಗಳಿವೆ. ನಾನು ಸಂಶೋಧನೆ ಮಾಡುವ ಸಂದರ್ಭದಲ್ಲಿ ಭಾರತದಲ್ಲಿ ಅದಕ್ಕೆ ತಕ್ಕ ವ್ಯವಸ್ಥೆಗಳಿರಲಿಲ್ಲ. ಈಗ ನನ್ನ ವಿದ್ಯಾರ್ಥಿ ಇಲ್ಲಿಂದ ಕ್ಯಾಲಿಫೋರ್ನಿಯಾಗೆ ಹೋಗಿದ್ದಾನೆ. ಮತ್ತೊಬ್ಬ ಲಂಡನ್‌ಗೆ ಹೋಗುತ್ತಿದ್ದಾನೆ. ಸಂಶೋಧನೆಗೆ ಎಲ್ಲೆಡೆ ತೆರೆದ ಅವಕಾಶಗಳಿವೆ. ಒಂದು ಬೇಸರದ ಸಂಗತಿ ಎಂದರೆ ಮಕ್ಕಳು ಉನ್ನತ ವ್ಯಾಸಂಗವನ್ನು ವಿದೇಶಗಳಲ್ಲಿ ಮಾಡಬೇಕೆಂದು ಬಯಸುವ ತಂದೆ ತಾಯಿ, ಅಧಿಕ ಮೊತ್ತ ತೆತ್ತು ಕುಕಿಂಗ್, ಹಾಸ್ಪಿಟಾಲಿಟಿ, ಹೋಟೆಲ್ ಮ್ಯಾನೇಜ್‌ಮೆಂಟ್ ಮುಂತಾದವು ಕಲಿಯಲು ಕಳಿಸುವುದು. ಆತಿಥ್ಯಕ್ಕೆ ಹೆಸರುವಾಸಿಯಾದ ರಾಷ್ಟ್ರ ಭಾರತ. ಹಾಗಿರುವಾಗ ಇಲ್ಲಿಂದ ಅಲ್ಲಿ ಹೋಗಿ ಹಾಸ್ಪಿಟಾಲಿಟಿ ಏನು ಕಲಿಯಬಲ್ಲರು?*ಇಂದು ಬೆಂಗಳೂರು ವಿಜ್ಞಾನ ನಗರಿ (Tech-City) ಎನ್ನುವುದಕ್ಕಿಂತ ತಂತ್ರಜ್ಞಾನ ನಗರಿ ಎಂದೇ ಪ್ರಸಿದ್ಧಿ ಪಡೆಯುತ್ತಿದೆ. ಇದನ್ನು ಹೇಗೆ ಸಮರ್ಥಿಸಿಕೊಳ್ಳಬಹುದು?ಬೆಂಗಳೂರು ವಿಜ್ಞಾನ ನಗರಿ ಸತ್ಯ. ಸ್ವಲ್ಪಮಟ್ಟಿಗೆ ತಂತ್ರಜ್ಞಾನ ನಗರಿ ಇರಬಹುದು. ಆದರೆ ಭಾರತದಲ್ಲಿ ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರಿಗೆ ವಿಜ್ಞಾನದಲ್ಲಿ ಪ್ರಥಮ ಸ್ಥಾನ. ಕೇಂದ್ರ ಸರ್ಕಾರದ ಅನೇಕ ವಿಜ್ಞಾನ ಸಂಸ್ಥೆಗಳು ಬೆಂಗಳೂರಿನಲ್ಲಿವೆ. ಬೆಂಗಳೂರು ವಿಜ್ಞಾನನಗರಿ ಎಂಬುದಕ್ಕೆ ನಾವೆಲ್ಲ ಹೆಮ್ಮೆ, ಸಂತೋಷ ಪಡೋಣ. ಭಾರತೀಯ ವಿಜ್ಞಾನ ಸಂಸ್ಥೆ, ಜವಾಹರಲಾಲ್ ನೆಹರೂ ಸಂಶೋಧನಾ ಸಂಸ್ಥೆ, ಜವಾಹರಲಾಲ್ ನೆಹರೂ ತಾರಾಲಯ, ಮುಂತಾದ ಅನೇಕ ಪ್ರಮುಖ ಸಂಸ್ಥೆಗಳು ಬೆಂಗಳೂರಿನಲ್ಲಿಯೇ ಸ್ಥಾಪಿತವಾಗಿರುವುದು ಕರ್ನಾಟಕ ವಿಜ್ಞಾನಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂಬುದಕ್ಕೆ ಸಾಕ್ಷಿ.

*ವಿಜ್ಞಾನದ ಅಧ್ಯಯನವನ್ನು ಆಸಕ್ತಿದಾಯಕವಾಗಿ ಮಾಡುವ ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸುವ ಹೊಣೆ ಇವತ್ತು ಯಾರ ಮೇಲಿದೆ?ಕರ್ನಾಟಕದಲ್ಲಿ ನವೋದಯ ಶಾಲೆಗಳು ಆರಂಭವಾಗಿವೆ. ಪ್ರಸ್ತುತ ಇನ್ನಷ್ಟು ಶಾಲೆಗಳನ್ನು ತೆರೆಯುವ ಯೋಜನೆ ಇದೆ. ವಿಜ್ಞಾನ ಕಲಿಕೆಯು ಸುಲಭಸಾಧ್ಯವಾಗುವ ನಿಟ್ಟಿನಲ್ಲಿ ರೂಪಿಸಲಾಗಿದೆ. ಬಡಮಕ್ಕಳು ಸ್ಪರ್ಧೆಯಲ್ಲಿ ಹಿಂದುಳಿಯಬಾರದು. ಅದಕ್ಕಾಗಿ ವಿಜ್ಞಾನ ಶಿಕ್ಷಕ - ಶಿಕ್ಷಕಿಯರಿಗೆ ತರಬೇತಿ ನೀಡಬೇಕು. ಗುರುಗಳು ಹೇಳಿದ್ದನ್ನು ಮಕ್ಕಳು ಎಂದೆಂದಿಗೂ ಮರೆಯಲಾರರು.ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ, ಅರಿವು, ಆಕರ್ಷಣೆ ಮೂಡಿಸಲು ‘ವಿದ್ಯಾರ್ಥಿ - ವಿಜ್ಞಾನಿ ನೇರ ಸಂವಾದ’ದಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಷನ್ ಗ್ರೂಪ್ ಇದನ್ನು ಸಮರ್ಥವಾಗಿ ನಡೆಸಿ ಕೊಡುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲ,ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿಂ, ಮಿಜೋರಾಂ, ಹಿಮಾಚಲ ಪ್ರದೇಶಗಳಲ್ಲಿ ಬಡ ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ. ನಾವು ಈಗ ಇಂತಹ ಕಾರ್ಯಕ್ರಮಗಳನ್ನು ಆರಂಭಿಸಿರಬಹುದು. ಇದರ ಫಲ ತಕ್ಷಣ ಸಿಗದಿರಬಹುದು. ಇನ್ನು 20 ವರ್ಷಗಳ ನಂತರ ನಮಗೆ ಖಂಡಿತ ದೊರೆಯುತ್ತದೆ.

*ವಿಜ್ಞಾನ ಸಂವಹನವನ್ನು ಕನ್ನಡದಲ್ಲಿ ಮಾಡುವವರಿಗೆ ತಮ್ಮ ಸಂದೇಶವೇನು?ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನವನ್ನು ಕನ್ನಡದಲ್ಲಿಯೇ ಕಲಿಸಬೇಕು. ಮಾತೃಭಾಷೆಯಲ್ಲಿಯೇ ಕಲಿತದ್ದು ಹೆಚ್ಚು ಪರಿಣಾಮ ಬೀರುತ್ತದೆ. ನಾನು ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು. ವಿಜ್ಞಾನ ಕಲಿಸುತ್ತಿದ್ದ ನಮ್ಮ ಮೇಷ್ಟ್ರು ಶಿವರುದ್ರಪ್ಪನವರನ್ನು ನಾನು ಎಂದಿಗೂ ಮರೆಯಲಾರೆ. ಅವರು ಗಂಧಕದ ಪ್ರಯೋಗ ಮಾಡಿ ತೋರಿಸುತ್ತಿದ್ದ ರೀತಿ ವಿಶಿಷ್ಟ. ಅವರು ಶ್ರದ್ಧೆಯಿಂದ ಕಲಿಸುತ್ತಿದ್ದರು. ಕನ್ನಡದಲ್ಲಿ ವಿಜ್ಞಾನದ ಸಂವಹನ ಅತ್ಯಂತ ಅವಶ್ಯಕ. ಜನರ ಮನಸ್ಸು ಮುಟ್ಟುವಲ್ಲಿ ಅದು ತುಂಬ ಸಹಕಾರಿ.

*ಒಬ್ಬ ವಿಜ್ಞಾನಿಯಾಗಿ ಭಾರತದ ಬಗ್ಗೆ ತಮ್ಮ ಕನಸೇನು?

ವಿಜ್ಞಾನವೆಂಬುದು ಮಿತಿಯಿಲ್ಲದ ಏಣಿ. ವಿಜ್ಞಾನದ ಏಣಿ ನಾವು ಏರುತ್ತಲೇ ಹೋಗಬೇಕು. ವಿಜ್ಞಾನದಲ್ಲಿ ನಾವು ಉನ್ನತಿ ಸಾಧಿಸಲೇಬೇಕು. ಇಲ್ಲದಿದ್ರೆ ಭಾರತದ ಭವಿಷ್ಯ ಚೆನ್ನಾಗಿರಲಾರದು. ಕೈಗಾರಿಕಾ ಕ್ಷೇತ್ರಗಳಲ್ಲಿ ನಮ್ಮ ಹೆಗ್ಗಳಿಕೆ ಹೇಳಿಕೊಳ್ಳುವಂತೆ ವಿಜ್ಞಾನದಲ್ಲಿಯೂ ಔನ್ನತ್ಯ ಪಡೆಯಬೇಕು.ಪ್ರಧಾನ ಮಂತ್ರಿಗಳನ್ನು ಒಳಗೊಂಡಂತೆ ಎಲ್ಲರೂ ತಮ್ಮ ಭಾಷಣದಲ್ಲಿ ವಿಜ್ಞಾನದ ಬಗೆಗೂ ಮಾತನಾಡಬೇಕು. ವೈಜ್ಞಾನಿಕ ಚಿಂತನೆ ನಡೆಸಬೇಕು. ಪ್ರಪಂಚದ ಮೇಲ್ಮಟ್ಟದ ಸಂಶೋಧನೆ ಶೇಕಡ 1 ರಷ್ಟಿದ್ದರೆ ಅವರಲ್ಲಿ ಅಮೆರಿಕದ ಪಾಲು ಶೇ 63 ಯೂರೋಪ್ ಶೇ 23, ಚೈನಾ ಶೇ 2.5 ರಷ್ಟು, ಭಾರತದ್ದು ಕೇವಲ ಶೇ 0.5 ರಷ್ಟು. ಆದ್ದರಿಂದ ಭಾರತದ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು.

*ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಒಂದೆಡೆಯಾದರೆ, ಮೂಢನಂಬಿಕೆ ಕೂಡ ಹೆಚ್ಚಾಗುತ್ತಿವೆಯಲ್ಲ? ಈ ಬಗ್ಗೆ ನಿಮ್ಮ ಅನಿಸಿಕೆ ಏನು?

ಮೂಢನಂಬಿಕೆ ಸಲ್ಲದು. ದೇವರ ಪೂಜೆಗೂ, ಮೌಢ್ಯತೆಗೆ ಒಳಗಾಗುವುದಕ್ಕೂ ತುಂಬ ವ್ಯತ್ಯಾಸವಿದೆ. ದೇವರಲ್ಲಿ ನಂಬಿಕೆ ಇಡುವುದು. ಪೂಜೆ ಮಾಡುವುದು ಅವರವರ ಇಷ್ಟ. ದೇವರ ಹೆಸರಲ್ಲಿ ಆಡಂಬರ, ಭಯ, ಮೌಢ್ಯ ನಾವು ವಿರೋಧಿಸಬೇಕು. ನನ್ನ ತಂದೆ ಜ್ಯೋತಿಷ ನಂಬುತ್ತಿರಲಿಲ್ಲ.ನನ್ನ ಜಾತಕ ಬರೆಸಿಯೇ ಇರಲಿಲ್ಲ. ಅವರಿಗೆ ಜಾತಕಗಳಲ್ಲಿ ನಂಬಿಕೆಯಿರಲಿಲ್ಲ. ನನ್ನ ತಾತ ಬಹು ದೊಡ್ಡ ಜ್ಯೋತಿಷಿಯಾಗಿದ್ದರು. ಅನೇಕ ಜನ ಜ್ಯೋತಿಷಿಗಳಿಗೆ ಅವರ ಭವಿಷ್ಯವೇ ಗೊತ್ತಿರುವುದಿಲ್ಲ. ಇನ್ನು ಇತರರ ಭವಿಷ್ಯ ಏನು ಹೇಳಿಯಾರು? ಅಮೂಲ್ಯವಾದ ಸಮಯವನ್ನು ವ್ಯರ್ಥಗೊಳಿಸದೆ ಮೌಢ್ಯಗಳಿಗೆ ಬಲಿಯಾಗದೆ ಬದುಕು ರೂಪಿಸಿಕೊಳ್ಳಬೇಕು. ನಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಸ್ವಾಭಿಮಾನಿಗಳಾಗಿ ಬಾಳಬೇಕು. ವಿಜ್ಞಾನದ ಕಲಿಕೆ ವೈಜ್ಞಾನಿಕ ಚಿಂತನೆ, ಸಂಶೋಧನೆಗಳು ನಮ್ಮನ್ನು ಹಾಗೂ ರಾಷ್ಟ್ರವನ್ನೂ ಉತ್ತಮ ಮಟ್ಟಕ್ಕೆ ಕೊಂಡೊಯ್ಯುವವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.