ಸೋಮವಾರ, ಏಪ್ರಿಲ್ 12, 2021
24 °C

ವಿದ್ಯಾರ್ಥಿಗಳಿಂದ ಇನ್ನು ಉಪನ್ಯಾಸಕರ ಪರೀಕ್ಷೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬೋಧನಾ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಹೊಸದಾಗಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಲೆಕ್ಕಪತ್ರ (ಎಎಎ) ಸಮಿತಿ ರಚಿಸಲಾಗಿದ್ದು, ಉಪನ್ಯಾಸಕರು, ರೀಡರ್‌ಗಳು, ಪ್ರೊಫೆಸರ್‌ಗಳ ಬಗ್ಗೆ ವಿದ್ಯಾರ್ಥಿಗಳು ಮಾಡುವ ಮೌಲ್ಯಮಾಪನ ಮತ್ತು ಇತರ ಮಾನದಂಡಗಳ ಆಧಾರದಲ್ಲಿ ಸಮಿತಿಯು ವರದಿ ಸಿದ್ಧಪಡಿಸಲಿದೆ.ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಈ ಶೈಕ್ಷಣಿಕ ವರ್ಷದ ಪ್ರಥಮ ಶೈಕ್ಷಣಿಕ ಮಂಡಳಿ ಸಭೆಯ ಬಳಿಕ ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ಅವರು ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ವೆಂಕಟರಾಮಯ್ಯ ಅವರು ಈ ಸಮಿತಿಯ ಮುಖ್ಯಸ್ಥರಾಗಿದ್ದು, ಸಮಿತಿ ತಮಗೆ ನೀಡುವ ವರದಿಯನ್ನು `ನ್ಯಾಕ್~ಗೆ ಕಳುಹಿಸಿಕೊಡಲಾಗುವುದು. ಮೌಲ್ಯಮಾಪನದ ಬಳಿಕ ಪ್ರತಿಯೊಬ್ಬ ಪ್ರಾಧ್ಯಾಪಕರಿಗೆ `ಎ~~ಬಿ~~ಸಿ~~ಡಿ~ ಅಂಕ ನೀಡಲಾಗುವುದು. `ಸಿ~ ಮತ್ತು `ಡಿ~ ಅಂಕ ಗಳಿಸಿದವರಿಗೆ ಎಚ್ಚರಿಕೆ ನೀಡುವುದು, ಕೌನ್ಸೆಲಿಂಗ್ ನಡೆಸುವಂತಹ ಕ್ರಮಗಳ ಮೂಲಕ ಅವರ ಬೋಧನಾ ಕ್ರಮ ಸುಧಾರಿಸುವ ಪ್ರಯತ್ನ ಮಾಡಲಾಗುವುದು ಎಂದರು.ಈ ಬಾರಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಲ್ಲಿ ಸಹ ವಿದ್ಯಾರ್ಥಿಗಳ ಮೌಲ್ಯಮಾಪನವನ್ನೇ ಮುಖ್ಯವಾಗಿ ಪರಿಗಣಿಸಲಾಗಿದೆ. ಗುಣಮಟ್ಟ ಕಾಯ್ದುಕೊಳ್ಳದ 8-9 ಉಪನ್ಯಾಸಕರನ್ನು ಯಾವ ಮುಲಾಜೂ ಇಲ್ಲದೆ ಕೈಬಿಟ್ಟಿದ್ದರೆ, 15 ಮಂದಿಗೆ ಎಚ್ಚರಿಕೆ ನೀಡಲಾಗಿದೆ. ಹೀಗೆ ಕ್ರಮ ಕೈಗೊಳ್ಳುವಲ್ಲಿ ಬಂದಂತಹ ಯಾವುದೇ ಒತ್ತಡಕ್ಕೂ ಮಣಿದಿಲ್ಲ, ಉಪನ್ಯಾಸಕರನ್ನು ಮೌಲ್ಯಮಾಪನಕ್ಕೆ ಒಳಪಡಿಸುವ ಕಾರ್ಯ ಮೈಸೂರು ವಿವಿಯಲ್ಲಿ ಈಗಾಗಲೇ ಆರಂಭವಾಗಿದೆ ಎಂದರು.ತಟ್ಟಿದ ಬಿಸಿ

ಗುಣಮಟ್ಟ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಂತೆ ಉಪನ್ಯಾಸಕರೂ ತಮ್ಮ ಅರ್ಹತೆ ಹೆಚ್ಚಿಸಿಕೊಳ್ಳಲು ಶತಪ್ರಯತ್ನ ಆರಂಭಿಸಿರುವುದು ಡಿಸೆಂಬರ್‌ನಲ್ಲಿ ನಡೆದ `ನೆಟ್~ ಪರೀಕ್ಷೆಯಿಂದ ಸಾಬೀತಾಗಿದೆ. ಮಂಗಳೂರಿನಲ್ಲಿ ಪರೀಕ್ಷೆಗೆ ಕುಳಿತವರಲ್ಲಿ 100ಕ್ಕೂ ಅಧಿಕ ಮಂದಿ ಕಿರಿಯ ಸಂಶೋಧಕ, ಉಪನ್ಯಾಸಕ ಅರ್ಹತೆ ಗಳಿಸಿಕೊಂಡಿದ್ದಾರೆ.

ಕೇವಲ ಪರೀಕ್ಷೆಯಲ್ಲಿ ಪಾಸಾಗುವುದು, ಪ್ರಬಂಧ ಸಿದ್ಧಪಡಿಸುವುದಷ್ಟೇ ಅಲ್ಲ, ವಿದ್ಯಾರ್ಥಿಗಳೊಂದಿಗೆ ಸಂವಹನ, ಬೋಧನಾ ತಯಾರಿಯಂತಹ ವಿಚಾರಗಳಲ್ಲೂ ಉಪನ್ಯಾಸಕರು ಪರಿಪೂರ್ಣರಾಗಿರಬೇಕಾಗುತ್ತದೆ ಎಂದು ಶಿವಶಂಕರಮೂರ್ತಿ ಹೇಳಿದರು.ಬಿ.ಕಾಂ.ಗೆ ಭಾರಿ ಬೇಡಿಕೆ

ಈ ಬಾರಿ ಬಿ.ಕಾಂ.ಗೆ ಭಾರಿ ಬೇಡಿಕೆ ಬಂದಿದೆ. ಹೀಗಾಗಿ 16 ಸರ್ಕಾರಿ ಕಾಲೇಜುಗಳು ಮತ್ತು 17 ಖಾಸಗಿ ಕಾಲೇಜುಗಳಿಗೆ ಹೆಚ್ಚುವರಿ ಸೀಟಿಗೆ ಅವಕಾಶ ಕಲ್ಪಿಸಲಾಗಿದೆ. ಈ ರೀತಿಯಲ್ಲಿ ಈ ವರ್ಷ 657 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಬಹುತೇಕ ಮಂದಿ ಬಿ.ಕಾಂ. ವಿದ್ಯಾರ್ಥಿಗಳು ಎಂದು ಕುಲಪತಿ ಅವರು ಶೈಕ್ಷಣಿಕ ಮಂಡಳಿ ಸಭೆಗೆ ಮಾಹಿತಿ ನೀಡಿದರು.ಈ ಬಾರಿ ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ನಡೆದಿದ್ದು, ಇದರಿಂದ ಈ ಪ್ರಕ್ರಿಯೆ ಬಹಳ ವೇಗವಾಗಿ ನಡೆದಿದೆ. ವಾಕ್‌ಶ್ರವಣ, ಲಲಿತಕಲೆ ಮತ್ತು ಸಂಗೀತ ವಿಚಾರಗಳಲ್ಲಿ ಪ್ರವೇಶಕ್ಕೆ ಅಂತಿಮ ದಿನಾಂಕವನ್ನು ಇದೇ 15ರವರೆಗೆ ವಿಸ್ತರಿಸಲಾಗಿದೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ಫಲಿತಾಂಶದ ಹಿನ್ನೆಲೆಯಲ್ಲಿ ಇತರ ಪದವಿ ತರಗತಿಗಳಿಗೆ ಪ್ರವೇಶದ ಅಂತಿಮ ದಿನಾಂಕವನ್ನು ವಿಸ್ತರಿಸುವ ಯೋಚನೆಯೂ ಇದೆ ಎಂದರು.ಜೂನ್ 29 ಮತ್ತು 30ರಂದು ವಿವಿಯಲ್ಲಿ ಸ್ನಾತಕೋತ್ತರ ಪ್ರವೇಶ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಇದೇ 7ರೊಳಗೆ ನೇಮಕಾತಿ ಪ್ರಕ್ತಿಯೆ ಕೊನೆಗೊಳ್ಳಲಿದೆ. ಸರ್ಕಾರಿ ಕಾಲೇಜುಗಳಲ್ಲಿ ವಿವಿ ವತಿಯಿಂದಲೇ ಅರ್ಹತೆ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದರೆ, ಖಾಸಗಿ ಕಾಲೇಜುಗಳ ಶೇ 50ರಷ್ಟು ಸೀಟುಗಳನ್ನು ವಿವಿಯಿಂದಲೇ ಭರ್ತಿ ಮಾಡಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಸ್ವಾಯತ್ತ ಶಿಕ್ಷಣ ಸಂಸ್ಥೆಗಳಾದ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜು, ಉಜಿರೆಯ ಎಸ್‌ಡಿಎಂ ಕಾಲೇಜು ಸಹಿತ ಇತರ ಹಲವು ಕಾಲೇಜುಗಳಲ್ಲಿ ಸಂಯೋಜನಾ ಮಂಜೂರಾತಿಗೆ ಸಭೆ ಯಲ್ಲಿ ಒಪ್ಪಿಗೆ ನೀಡಲಾಯಿತು.ವಿಶ್ವವಿದ್ಯಾಲಯ ಮತ್ತು ಅದಕ್ಕೆ ಒಳಪಟ್ಟ ಕಾಲೇಜುಗಳಲ್ಲಿ 76 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಿಸಲು, ಅಂಚೆ ತೆರಪಿನ ಶಿಕ್ಷಣ ನಿರ್ದೇಶನಾಲಯಕ್ಕೆ 34 ಮಂದಿ ಬೋಧಕೇತರ ಸಿಬ್ಬಂದಿ ನೇಮಿಸಲು ಅನುಮತಿ ಸಿಕ್ಕಿದ್ದನ್ನು ಸಹ ತಿಳಿಸಲಾಯಿತು. ಕುಲಸಚಿವರಾದ ಪ್ರೊ.ಕೆ.ಚಿನ್ನಪ್ಪ ಗೌಡ, ಪ್ರೊ.ಪಿ.ಎಸ್.ಯಡಪಡಿತ್ತಾಯ, ಹಣಕಾಸು ಅಧಿಕಾರಿ ಫಕೀರಪ್ಪ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.