ಶನಿವಾರ, ಮೇ 15, 2021
24 °C

ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: 2010-11ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಆದರ್ಶ ಶಾಲೆಯಲ್ಲಿ ಮೂಲ ಸೌಲಭ್ಯಗಳಿಲ್ಲದೆ ಪರಿತಪಿಸುವಂತಾಗಿದೆ. ಹೆಸರಿಗಷ್ಟೇ ಆಕರ್ಷಕ ಆದರ್ಶ ಶಾಲೆಯಾಗಿದೆ. ಶಿಕ್ಷಕರ ಕೊರತೆಯಿಂದ ಹಿಡಿದು ಕನಿಷ್ಠ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲದಾಗಿದೆ ಎಂದು ಪಾಲಕರು ದೂರಿದ್ದಾರೆ.ಖಾಸಗಿ ಶಾಲೆಗಳಲ್ಲಿ ಕಲಿಸುವ ಇಂಗ್ಲಿಷ್ ಭಾಷೆಗೆ ಸೆಡ್ಡು ಹೊಡೆದು ಸರ್ಕಾರವೇ 6ನೇ ತರಗತಿಯಿಂದ ಪ್ರತಿ ತಾಲ್ಲೂಕಿಗೊಂದು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡಲು ಆದರ್ಶ ಶಾಲೆ ಆರಂಭಿಸಿತು. ಐದನೇಯ ತರಗತಿ ಪಾಸಾದ ವಿದ್ಯಾರ್ಥಿ ಲಿಖಿತವಾಗಿ ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಪಾಸಾದರೆ ಆರನೇಯ ತರಗತಿಗೆ ಆದರ್ಶ ಶಾಲೆಗೆ ಪ್ರವೇಶ ದೊರೆಯುತ್ತದೆ. ಪ್ರತಿ ವರ್ಷ 80 ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ರಾಜ್ಯ ಪಠ್ಯಪುಸ್ತಕ ಕ್ರಮದಂತೆ ಕನ್ನಡದ ಬದಲು ಇಂಗ್ಲಿಷ್ ಭಾಷೆಯಲ್ಲಿ ಬೋಧನೆ ಮಾಡಲಾಗುತ್ತದೆ ಎನ್ನುತ್ತಾರೆ ಆದರ್ಶ ಶಾಲೆಯ ಪ್ರಾಚಾರ್ಯ ನಿಂಗಣ್ಣ ಸಿಂಪಿ.ಸದ್ಯಕ್ಕೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೋಣೆಗಳಲ್ಲಿ ತಾತ್ಕಾಲಿಕವಾಗಿ ಶಾಲೆ ನಡೆಸಲಾಗುತ್ತಿದೆ. ಸ್ವಂತ ಕಟ್ಟಡಕ್ಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಇನ್ನೂ ಅನುಮೋದನೆಗೊಂಡಿಲ್ಲ. ಒಟ್ಟು 214 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಏಳು ಶಿಕ್ಷಕರು ಆಗಮಿಸಲಿದ್ದು ಈಗ ಮೂವರು ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.ಹುಸಿಯಾದ ನಿರೀಕ್ಷೆ: ಆರನೇಯ ತರಗತಿಯಿಂದ ಸರ್ಕಾರ ನಡೆಸುವ ಇಂಗ್ಲಿಷ್ ಮಾಧ್ಯಮದ ಆದರ್ಶ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ. ಬೋಧನೆ ಮಾಡುವ ಶಿಕ್ಷಕರಿಗೆ ಇಂಗ್ಲಿಷ್ ಬರುವುದಿಲ್ಲವೆಂದ ಮೇಲೆ ವಿದ್ಯಾರ್ಥಿಗಳು ಕಲಿಯುವುದಾದರು ಹೇಗೆ ?.

 ಸದ್ಯ ನಡೆಸಲಾಗುತ್ತಿರುವ ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲ. ಕುಡಿಯುವ ನೀರಿಗೂ ಪರದಾಟ. ಕಟ್ಟಡದ ಮುಂದುಗಡೆ  ಒಂದಿಷ್ಟು ಮಳೆಯಾದರೆ ಸಾಕು ಇಡೀ ಪ್ರದೇಶ ಕೆಸರಿನ ಗದ್ದೆಯಾಗಿ ಮಾರ್ಪಡುತ್ತದೆ. ಕಲುಷಿತ ನೀರಿನಲ್ಲಿ ವಿದ್ಯಾರ್ಥಿಗಳು ಅಲೆದಾಡುತ್ತಾ ಪಾಠವನ್ನು ಆಲಿಸಬೇಕು. ಶಾಲೆಯ ಸುತ್ತಮುತ್ತ ಸ್ಚಚ್ಛತೆಯಿಲ್ಲ. ರೋಗದ ಭೀತಿಯನ್ನು ಎದುರಿಸುವಂತಾಗಿದೆ ಎಂಬ ಆತಂಕವನ್ನು ಪಾಲಕರು ವ್ಯಕ್ತಪಡಿಸಿದ್ದಾರೆ.ಬಾಗಿಲು, ಕಿಟಕಿ ಕಿತ್ತು ಹಾಕಲಾಗಿದೆ. ಸಂಜೆಯಾದರೆ ಸಾಕು  ಅನೈತಿಕ ಚಟುವಟಿಕೆಯ ತಾಣವಾಗಿ ರೂಪಾಂತರವಾಗುತ್ತದೆ. ಕೆಲ ಕಿಡಿಗೇಡಿಗಳು ಅದೇ ಕೋಣೆಯಲ್ಲಿ ಕುಳಿತು ಮದ್ಯವನ್ನು ಸೇವೆಸಿ ಬಾಟಲಿಗಳನ್ನು ಎಸೆದು ಹೋಗುತ್ತಾರೆ ಎಂದು ಶಿಕ್ಷಕರೊಬ್ಬರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.ನೋವು: ಏನು ಮಾಡುವುದು ಹೇಳಿ ಸಾಕಷ್ಟು ಬಾರಿ ಪುರಸಭೆ ಇಲಾಖೆಗೆ ಪತ್ರ ಬರೆದು ಸ್ಚಚ್ಛತೆ ಕಾಪಾಡುವಂತೆ ಹಾಗೂ ತಗ್ಗು ಪ್ರದೇಶದಲ್ಲಿ ಮಣ್ಣು ಹಾಕಲು ಸೂಚಿಸಲಾಗಿತ್ತು. ಬಾಯಿ ತೆರೆದ ಕಿಟಿಕಿ ಹಾಗೂ ಬಾಗಿಲು ದುರಸ್ತಿ ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗೆ ಮನವಿ ಮಾಡಿದರೂ  ಸ್ಪಂದಿಸುತ್ತಿಲ್ಲ. ಯಾರ ಮುಂದೆ ನಮ್ಮ ನೋವು ತೋಡಿಕೊಳ್ಳಬೇಕೆಂದು ಶಾಲೆಯ ಅವ್ಯವಸ್ಥೆಯ ಬಗ್ಗೆ ಬೇಸರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಯಪ್ಪರಡ್ಡಿ ವ್ಯಕ್ತಪಡಿಸಿದ್ದಾರೆ.ಮೂಲ ಸೌಲಭ್ಯಗಳಿಂದ ಬಳುತ್ತಿರುವ ಶಾಲೆಗೆ ಸೂಕ್ತ ಸೌಲಭ್ಯಗಳನ್ನು ನೀಡಿ ಇಲ್ಲವೆ ಶಾಲೆಯನ್ನು ಸ್ಥಗಿತಗೊಳಸಿವುದು ಒಳಿತು ಎನ್ನುತ್ತಾರೆ ಪಾಲಕ ನಾಗಯ್ಯ ಸ್ವಾಮಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.