ಸೋಮವಾರ, ಏಪ್ರಿಲ್ 12, 2021
29 °C

ವಿದ್ಯಾರ್ಥಿಗಳ ಸಾಮೂಹಿಕ ಗೈರು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಸಮರ್ಪಕ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ತಾಲ್ಲೂಕಿನ ದೇವರಗೋನಾಲದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗುರುವಾರ ಶಾಲೆಗೆ ಸಾಮೂಹಿಕ ಗೈರು ಹಾಜರಾಗಿ ವಿನೂತನ ಪ್ರತಿಭಟನೆ ನಡೆಸಿದರು.ತಾಲ್ಲೂಕು ಕೇಂದ್ರದಿಂದ ಕೇವಲ 6 ಕಿ.ಮೀ. ಅಂತರದಲ್ಲಿರುವ ದೇವರಗೋನಾಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. 8ನೇ ತರಗತಿಯಲ್ಲಿ 60 ವಿದ್ಯಾರ್ಥಿಗಳು, 9ನೇ ತರಗತಿಯಲ್ಲಿ 39 ಮತ್ತು 10ನೇ ತರಗತಿಯಲ್ಲಿ 47 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಶಿಕ್ಷಕರ ಕೊರತೆಯಿಂದ ಪಾಠಗಳು ನಡೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು.ಮುಖ್ಯ ವಿಷಯಗಳಾದ ಗಣಿತ ಮತ್ತು ವಿಜ್ಞಾನ ಶಿಕ್ಷಕರು ಇಲ್ಲ. ದೈಹಿಕ ಶಿಕ್ಷಕ ಇಲ್ಲ. ಹಿಂದಿ ಶಿಕ್ಷಕ ಎರಡು ತಿಂಗಳಿಂದ ರಜೆ ಮೇಲಿದ್ದಾರೆ. ಮುಖ್ಯ ಗುರುಗಳು ಪ್ರಭಾರರಾಗಿದ್ದಾರೆ. ಶಾಲೆ ಆರಂಭವಾಗಿ ಎರಡು ತಿಂಗಳು ಗತಿಸಿದರೂ ಪರಿಸ್ಥಿತಿ ಹೀಗೆ ಇದೆ ಎಂದು ವಿದ್ಯಾರ್ಥಿಗಳು ವಿವರಿಸಿದರು.ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶನಾಯಕ್ ಭೈರಿಮಡ್ಡಿ ಮಾತನಾಡಿ, ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದರೆ ಎಷ್ಟೆ ಪ್ರಯತ್ನ ಪಟ್ಟರೂ ಎಲ್ಲ ಶಾಲೆಗಳಿಗೆ ಶಿಕ್ಷಕರ ಕೊರತೆ ನೀಗಿಸಲು ಸಾಧ್ಯವಾಗಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕಾ ಗುಣ ಮಟ್ಟ ಕುಸಿಯುತ್ತಿದೆ ಎಂದು ದೂರಿದರು.ತಕ್ಷಣ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲ್ಲೂಕಿನ ಶಿಕ್ಷಕರ ಕೊರತೆಯನ್ನು ಸರ್ಕಾರದ ಗಮನಕ್ಕೆ ತರಬೇಕು. ದೇವರಗೋನಾಲ ಶಾಲೆಗೆ ವಿಜ್ಞಾನ, ಗಣಿತ ಮತ್ತು ದೈಹಿಕ ಶಿಕ್ಷಕರನ್ನು ನೇಮಿಸಬೇಕು. ರಜೆ ಮೇಲಿರುವ ಹಿಂದಿ ಶಿಕ್ಷಕರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಬೇಕು. ಕಾಯಂ ಪ್ರಧಾನ ಗುರುಗಳನ್ನು ನಿಯೋಜಿಸಬೇಕು.

 

ಇಲ್ಲದಿದ್ದರೆ ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ವೇದಿಕೆಯ ತಾಲ್ಲೂಕು ಅಧ್ಯಕ್ಷ ವೆಂಕಟೇಶ ಪ್ಯಾಪ್ಲಿ, ಉಪಾಧ್ಯಕ್ಷ ಅಂಬ್ಲಯ್ಯ ಬೇಟೆಗಾರ್, ಯುವ ಮುಖಂಡ ಬಸವರಾಜ ಕೆರಿಕೋಡಿ ಮತ್ತು ಪಾಲಕರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.