ವಿದ್ಯಾರ್ಥಿನಿಲಯಕ್ಕೆ ಮೂಲಸೌಲಭ್ಯಕ್ಕೆ ಆಗ್ರಹಿಸಿ ಶಾಸಕರ ಘೇರಾವ್ ಯತ್ನ
ಹರಪನಹಳ್ಳಿ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿನಿಲಯ ಸ್ಥಾಪಿಸಬೇಕು ಹಾಗೂ ಅರ್ಜಿ ಸಲ್ಲಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೂ ನಿಲಯದಲ್ಲಿ ಪ್ರವೇಶ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಶಾಸಕ ಜಿ. ಕರುಣಾಕರರೆಡ್ಡಿ ಅವರಿಗೆ ಘೇರಾವ್ ಹಾಕಿ, ಕಪ್ಪುಬಟ್ಟೆ ಪ್ರದರ್ಶಿಸಲು ಯತ್ನಿಸುತ್ತಿದ್ದ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಸೋಮವಾರ ಬಂಧಿಸಿದರು.
ವಿದ್ಯಾರ್ಥಿ ವಿರೋಧಿನೀತಿ ಅನುಸರಿಸುತ್ತಿರುವ ಶಾಸಕರಿಗೆ ಧಿಕ್ಕಾರ, ಹಾಸ್ಟೆಲ್ ಸೌಲಭ್ಯಕ್ಕಾಗಿ ಒತ್ತಾಯಿಸಿ ಶಾಸಕರಿಗೆ ಘೇರಾವ್... ಇತ್ಯಾದಿ ಘೋಷಣಾ ಫಲಕಗಳನ್ನು ಕೈಯಲ್ಲಿಡಿದು, ಆಚಾರ್ಯ ಬಡಾವಣೆಯಲ್ಲಿರುವ ಶಾಸಕರ ಮನೆ ಮುಂದೆ ಕಾರ್ಯಕರ್ತರು ಜಮಾಯಿಸಿದರು. ತಾಲ್ಲೂಕು ಕಚೇರಿಯಲ್ಲಿ ಸಭೆ ಮುಗಿಸಿಕೊಂಡು ಶಾಸಕರು ಇನ್ನೇನು ಮನೆಯ ಬಳಿ ಧಾವಿಸುತ್ತಿದ್ದಂತಿಯೇ ಘೇರಾವ್ ಹಾಕಲು ಯತ್ನಿಸುತ್ತಿದ್ದ 9ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಶಾಶ್ವತ ಬರಪೀಡಿತ ಪ್ರದೇಶದ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕು ಶೈಕ್ಷಣಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಜಿಲ್ಲೆಯಲ್ಲಿಯೇ ಅತ್ಯಧಿಕ ಸಂಖ್ಯೆಯ ವಿವಿಧ ಕೋರ್ಸ್ಗಳ ಶಾಲಾ- ಕಾಲೇಜು ಹೊಂದಿರುವ ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿನಿಲಯ ಆರಂಭಿಸಬೇಕು ಹಾಗೂ ಅರ್ಜಿ ಸಲ್ಲಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೂ ನಿಲಯದಲ್ಲಿ ಪ್ರವೇಶ ನೀಡಬೇಕು ಎಂದು ಸಂಘಟನೆಯ ಕಾರ್ಯಕರ್ತರು ದಿಢೀರ್ ಪ್ರತಿಭಟನೆಗೆ ಮುಂದಾಗಿದ್ದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಲಹಳ್ಳಿ ಮಂಜುನಾಥ, ತಾಲ್ಲೂಕು ಘಟಕದ ಅಧ್ಯಕ್ಷ ದೇವೇಂದ್ರಪ್ಪ, ಮುಖಂಡರಾದ ಬೀರಪ್ಪ, ಸತೀಶ ನಾಯ್ಕ, ಆರ್. ಮಂಜುನಾಥ, ಎಲ್. ಮಂಜುನಾಥ, ಡಿವೈಎಫ್ಐ ಸಂಘಟನೆಯ ಮುಖಂಡ ಬೇವಿನಹಳ್ಳಿ ವೆಂಕಟೇಶ, ವೈ. ಬಸವರಾಜ, ಕೃಷಿ ಕೂಲಿಕಾರ್ಮಿಕರ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಎಲ್.ಬಿ. ಹಾಲೇಶ ನಾಯ್ಕ ಬಂಧಿತ ಕಾರ್ಯಕರ್ತರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.