ಶುಕ್ರವಾರ, ಮಾರ್ಚ್ 5, 2021
21 °C

ವಿದ್ಯಾಳಲ್ಲಿ ಶಬಾನಾ ಕಂಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾಳಲ್ಲಿ ಶಬಾನಾ ಕಂಡೆ

ವಿದ್ಯಾ ಬಾಲನ್ ಶಬಾನಾ ಅಜ್ಮಿಯನ್ನೇ ಹೋಲುತ್ತಾಳೆ, ಈಗಿನ ಯುವ ಕಲಾವಿದರಲ್ಲಿ ನನ್ನನ್ನು ಹೆಚ್ಚು ಸೆಳೆದಿರುವುದು ವಿದ್ಯಾ ನಟನೆ, ವಿದ್ಯಾಳಿಗೆ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ- ಹೀಗೆ ಹೊಗಳಿಕೆಯ ಮಳೆಗರೆದವರು ಚಿತ್ರ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್.`ಬ್ಲಡ್ ಮನಿ~ ಚಿತ್ರದ ಪ್ರಚಾರಕ್ಕೆಂದು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ನಿರ್ಮಾಪಕ ಮಹೇಶ್ ಭಟ್ ಅವರಲ್ಲಿ ಎಂದೂ ಬತ್ತದ ಉತ್ಸಾಹ. ಯುವಜನರನ್ನೂ ನಾಚಿಸುವಂಥ ಅವರ ಚೈತನ್ಯ ಕಂಡರೆ ಎಂತಹವರಿಗೂ ಆಶ್ಚರ್ಯ ಆಗದೆ ಇರದು.ಚಿತ್ರ ನಿರ್ಮಾಣದಲ್ಲಿ ಮಹೇಶ್ ಅವರದ್ದು ಪಳಗಿದ ಕೈ. ಇಷ್ಟು ಹಿರಿಯರಾಗಿದ್ದರೂ ಕಿರಿಯ ಕಲಾವಿದರೊಂದಿಗೆ ಅವರು ಬೆರೆಯುವ ರೀತಿ, ಪ್ರಚಾರಕ್ಕೆಂದು ದೇಶವಿಡೀ ಸಂಚರಿಸಿ ಜನರೊಂದಿಗೆ ಮಾತನಾಡುವ ಧಾಟಿ ಎಲ್ಲವೂ ಅವರ ಪಕ್ವತೆಗೆ ಸಾಕ್ಷಿ.ಮಹೇಶ್ ಭಟ್ ಮಾರ್ಕೆಟಿಂಗ್  ಬಗ್ಗೆಯೂ ಮಾತು ಹಂಚಿಕೊಂಡರು. ಒಂದು ಚಿತ್ರದ ಯಶಸ್ಸಿಗೆ ಮಾರ್ಕೆಟಿಂಗ್ ಎಷ್ಟು ಮುಖ್ಯ, ಎಲ್ಲ ರೀತಿಯ ಮನರಂಜನೆಯೊಂದಿಗೆ ಜನರನ್ನು ಸೆಳೆಯುವುದು ಹೇಗೆ? ಹೀಗೆ ಹಲವು ಅಭಿಪ್ರಾಯಗಳನ್ನು ಬಿಚ್ಚಿಟ್ಟರು.

ನೇರ ನುಡಿ ಮತ್ತು ಮಾತಿನ ವಿಶೇಷ ಧಾಟಿಯನ್ನು ವರವಾಗಿ ಪಡೆದುಕೊಂಡಿರುವ ಮಹೇಶ್ ಭಟ್ ಚಿತ್ರರಂಗಕ್ಕೆ ವಿನೂತನ ತಿರುವು ಕೊಟ್ಟವರು.ನಿಮಗೆ ಯಾವ ರೀತಿ ಸಿನಿಮಾ ಇಷ್ಟವಾಗುತ್ತದೆ ಎಂಬ ಪ್ರಶ್ನೆಗೆ, ಚಿತ್ರ ಜನರ ಮನ ತಟ್ಟುವಂತಿರಬೇಕು ಮತ್ತು ಪ್ರತಿಯೊಂದು ದೃಶ್ಯವೂ ಮನರಂಜನೆ ನೀಡಬೇಕು ಎಂದರು. ಯುವ ಜನತೆಯ ನಿರೀಕ್ಷೆಗೆ ತಕ್ಕಂತೆ ನಿಮ್ಮ ಯೋಚನಾಕ್ರಮವನ್ನು ಬದಲಾಯಿಸಿಕೊಳ್ಳುವ ಸಂದರ್ಭ ಬಂದಿದೆಯೇ ಎಂದು ಕೇಳಿದಾಗ, ಇಂತಹ ಸನ್ನಿವೇಶಗಳು ನೂರಾರು ಇವೆ.ಉದಾಹರಣೆಗೆ `ಬ್ಲಡ್ ಮನಿ~ ಹೆಸರಿಗೆ ಬದಲಾಗಿ `ಕಲಿಯುಗ್ 2~ ಎಂಬ ಹೆಸರನ್ನು ಸೂಚಿಸಿದ್ದೆ. ಆದರೆ ನಿರ್ದೇಶಕರು ಮತ್ತು ನಟ ಕುನಲ್ ಖೇಮು ಇದನ್ನು ಒಪ್ಪಲು ಹಿಂದೇಟು ಹಾಕಿದರು. ಹಲವು ದಿನಗಳ ಚರ್ಚೆ ಬಳಿಕ ಶೀರ್ಷಿಕೆ ಬದಲಾಯಿಸಿದ್ದಾಯಿತು ಎಂದು ಉತ್ತರಿಸಿದರು.ಮೂಲ ಕತೆ ಹೇಗಿದೆ ಎನ್ನುವುದಕ್ಕಿಂತ ಕತೆಯನ್ನು ಒಬ್ಬ ನಿರ್ದೇಶಕ ಯಾವ ರೀತಿ ಜನರಿಗೆ ಕಟ್ಟಿಕೊಡುತ್ತಾನೆ ಎಂಬುದು ಮುಖ್ಯ. ನಿರ್ದೇಶಕ ತನ್ನನ್ನು ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗಲೇ ಅವನ ಛಾಪು ಮೂಡಿಸುವುದು ಸಾಧ್ಯ ಎಂದರು. ಇಂದು ಜನರಿಗೆ ಹಲವು ಆಯ್ಕೆಗಳಿವೆ. ಅವರ ನಿರೀಕ್ಷೆಗಳನ್ನು ಹುಸಿ ಮಾಡದಿರುವುದರಲ್ಲೇ ನಮ್ಮ ಗೆಲುವು ಅಡಗಿದೆ ಎನ್ನುತ್ತಾರವರು.ಇತ್ತೀಚಿನ ನಟ ನಟಿಯರ ಬಗೆಗಿನ ಅವರ ಅಭಿಪ್ರಾಯವನ್ನು ಕೇಳಿದಾಗ, ಅವರ ಬಾಯಲ್ಲಿ ಮೊದಲು ಬಂದಿದ್ದು ವಿದ್ಯಾಬಾಲನ್ ಹೆಸರು. ವಿದ್ಯಾಬಾಲನ್ ಶಬಾನಾ ಅಜ್ಮಿಯನ್ನು ಹೋಲುತ್ತಾಳೆ. ಆಕೆ ನಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ರೀತಿ ನಿಜಕ್ಕೂ ಮೆಚ್ಚುಗೆಯಾಯಿತು. ಆದರೆ ವಿದ್ಯಾ; ಶಬಾನಾಳಷ್ಟು ಅದೃಷ್ಟವಂತೆಯಲ್ಲ.

 

ಶಬಾನಾಗೆ ಆ ಕಾಲದಲ್ಲಿ ಸಿಗುತ್ತಿದ್ದ ಒಳ್ಳೆಯ ಅವಕಾಶಗಳು ವಿದ್ಯಾಗೆ ಈಗ ಸಿಗುತ್ತಿಲ್ಲ. ತನ್ನ ನಟನಾ ಸಾಮರ್ಥ್ಯ ಸಾಬೀತುಪಡಿಸುವಷ್ಟು ಅವಕಾಶಗಳು ಸಿಗುತ್ತಿಲ್ಲ ಎಂದು ತಮ್ಮ ಅಸಮಾಧಾನವನ್ನೂ ಹೊರಹಾಕಿದರು.`ಅರ್ಥ್~, `ಡ್ಯಾಡಿ~, `ಆಶಿಕ್~ ಮತ್ತು ಇನ್ನಿತರ ಅದ್ಭುತ ಚಿತ್ರಗಳನ್ನು ನೀಡಿದ ಮಹೇಶ್ ಭಟ್ ಅವರು ಮತ್ತೆ ನಿರ್ದೇಶನಕ್ಕೆ ಬರುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ನಿರ್ದೇಶನ ನನ್ನ ಗುರಿಯಲ್ಲ, ಹೊಸ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸುವುದು ನನ್ನ ಉದ್ದೇಶ ಮತ್ತು ಇದೇ ನನಗೆ ತೃಪ್ತಿ ನೀಡುತ್ತಿದೆ ಎಂದು ಮಾತು ಮುಗಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.