ಶುಕ್ರವಾರ, ಮೇ 20, 2022
26 °C

ವಿದ್ಯುತ್ ಅಕ್ರಮ ತರಾತುರಿಯಲ್ಲಿ ಸಕ್ರಮ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಬಿಲ್ ಪಾವತಿಸದ ಬಡವನ ಮನೆಯನ್ನು ಕತ್ತಲೆ ಮಾಡಲು ಹಿಂದೆಮುಂದೆ ನೋಡದ ಜೆಸ್ಕಾ ಸಿಬ್ಬಂದಿ ಪಟ್ಟಭದ್ರರಿಗೆ ಮಾತ್ರ ಅಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸಿ ವಿದ್ಯತ್ ಕೊಳ್ಳೆ ಹೊಡೆಯಲು ಅವಕಾಶ ನೀಡುವ ಮೂಲಕ ಇಲಾಖೆಗೆ ಹಾನಿ ತಂದೊಡ್ಡಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ.ಪಟ್ಟಣದ 4ನೇ ವಾರ್ಡ್‌ನಲ್ಲಿ ಅಡವಿರಾಯ ದೇವಸ್ಥಾನದ ಬಳಿ ಮೂಲಸೌಕರ್ಯಗಳಿಂದ ಅಭಿವೃದ್ಧಿಗೊಳ್ಳದ ಹೊಸ ಬಡಾವಣೆಯಲ್ಲಿ ಇಂಥ ಅಕ್ರಮ ಕಳೆದ ಮೂರ್ನಾಲ್ಕು ತಿಂಗಳಿನಿಂದ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದ ಜೆಸ್ಕಾಂ ಉಪ ವಿಭಾಗದ ಎಂಜಿನಿಯರ್‌ಗಳು ಈ ಬಗ್ಗೆ ಸಾರ್ವಜನಿಕರು ತಕರಾರು ಮಾಡಿ ಮೇಲಧಿಕಾರಿಗಳಿಗೆ ದೂರು ನೀಡುತ್ತಿದ್ದಂತೆ ಅಕ್ರಮ ಸಂರ್ಪಕವನ್ನು ತರಾತುರಿಯಲ್ಲಿ ಸಕ್ರಮಗೊಳಿಸಲು ಯತ್ನಿಸಿದ್ದಾರೆ.ಸದರಿ ಪ್ರದೇಶದಲ್ಲಿ ಮನೆ ನಿರ್ಮಾಣದಲ್ಲಿ ತೊಡಗಿರುವ ಪುರಸಭೆ ಸದಸ್ಯರೊಬ್ಬರು ಕೊಳವೆಬಾವಿಗೆ ಸಬ್‌ಮರ್ಸಿಬಲ್ ಮೋಟರ್ ಅಳವಡಿಸಿದ್ದರು. ಜೆಸ್ಕಾಂ ದಾಖಲೆಗಳ ಯಾವುದೇ ಮಾಹಿತಿ ನೀಡದ ಗುತ್ತಿಗೆದಾರರೊಬ್ಬರು ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಅಲ್ಲಿಗೆ ಅಡವಿರಾಯ ದೇವಸ್ಥಾನದಿಂದ ಐದು ಕಂಬಗಳನ್ನು ಹಾಕಿ ಅಕ್ರಮ ಸಂಪರ್ಕ ನೀಡಿದ್ದು ತಿಳಿದರೂ ಎಂಜಿನಿಯರ್‌ಗಳು ಮೌನಕ್ಕೆ ಶರಣಾಗಿದ್ದರು. ಆದರೆ ಸಾರ್ವಜನಿಕರು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಹೋಗುತ್ತಿದ್ದಂತೆ ಸಂಪರ್ಕ ಕಡಿತಗೊಳಿಸಿದ್ದರು. ನಂತರ ಗ್ರಾಹಕ ತಮ್ಮ ಸ್ವಂತ ಖರ್ಚಿನಲ್ಲಿ ಕಂಬಗಳನ್ನು ಹಾಕಿಕೊಂಡಿದ್ದಾರೆ ಎಂದು ಅವಸರದಲ್ಲಿ ಸ್ವತಃ ಮುತುವರ್ಜಿ ವಹಿಸಿ ಅಂದಾಜು ಪತ್ರಿಕೆ ಸಿದ್ಧಪಡಿಸಿ ತಾತ್ಕಾಲಿಕ ಸಂರ್ಪಕ ನೀಡಿರುವುದು ಸ್ಪಷ್ಟವಾಗಿದೆ.ಆದರೆ ಅದೇ ಮಾರ್ಗದಲ್ಲಿನ ಇನ್ನೂ ಕೆಲವರು ವಿದ್ಯುತ್ ಸಂಪರ್ಕಕ್ಕೆ ಅಲೆದಾಡಿದರೂ ಇಲಾಖೆ ಗಮನಕ್ಕೆ ತಾರದೇ ಅಲ್ಲಿ ಕಂಬಗಳನ್ನು ಹಾಕಲಾಗಿದೆ ಹಾಗಾಗಿ ನಿಮಗೆ ಈಗ ಸಂಪರ್ಕ ನೀಡಲು ಸಾಧ್ಯವಿಲ್ಲ ಎಂದೆ ಎಂಜಿನಿಯರ್ ಹೇಳಿದ್ದರು ಎಂದು ಗ್ರಾಹಕರೊಬ್ಬರು ಅಳಲು ತೋಡಿಕೊಂಡರು. ನಂತರ ಈ ವಿಷಯವನ್ನು ಶಾಸಕ ಅಮರೇಗೌಡ ಬಯ್ಯಾಪೂರ ಅವರ ಗಮನಕ್ಕೆ ತಂದಾಗ ಜೆಸ್ಕಾಂ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಈ ರೀತಿ ಜನಸಾಮಾನ್ಯರನ್ನು ಸತಾಯಿಸಿದರೆ ಮೇಲಧಿಕಾರಿಗಳಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದರು.ಜೆಸ್ಕಾಂ ಎಸ್ಟಿಮೇಟ್ ಪ್ರಕಾರ ಯಾರಾದರೂ ತಮ್ಮ ಸ್ವಂತ ಖರ್ಚಿನಲ್ಲಿ ಕಂಬ, ವೈರ್‌ಗಳನ್ನು ಅಳವಡಿಸಿಕೊಂಡು ಸಂಪರ್ಕಕ್ಕೆ ಬೇಡಿಕೆ ಸಲ್ಲಿಸಿದರೆ ಒಟ್ಟು ಅಂದಾಜು ಮೊತ್ತದ ಶೇ 10ರಷ್ಟು ಶುಲ್ಕದ ಹಣ ಪಾವತಿಸಬೇಕಾಗುತ್ತದೆ.ಜೆಸ್ಕಾಂ ಅನುಮೋದಿಸಿದ ಕಂಬ ತಯಾರಕರಲ್ಲಿ ಮಾತ್ರ ಕಂಬಗಳನ್ನು ಖರೀದಿಸಬೇಕು, ನಂತರ ಮನೆಯ ವಿನ್ಯಾಸವನ್ನು ಆಧರಿಸಿ ವಿದ್ಯುತ್ ತಾತ್ಕಾಲಿಕ ಸಂಪರ್ಕ ನೀಡುವುದು ನಿಯಮವಾಗಿದೆ. ಆದರೆ ಇಲ್ಲಿಯ ಉಪ ವಿಭಾಗದಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು ಪ್ರಭಾವಿಗಳು ಎಲ್ಲಿ ಬೇಕಾದರೂ ಸಂಪರ್ಕ ಪಡೆಯಬುದು ಅದಕ್ಕೆ ಎಂಜಿನಿಯರ್‌ಗಳ ಶ್ರೀರಕ್ಷೆ ಇರುತ್ತದೆ. ಅದೆ ಸಾಮನ್ಯ ವ್ಯಕ್ತಿಗೆ ಇಲ್ಲದ ನಿಯಮಗಳನ್ನು ಹೇರಲಾಗುತ್ತಿದೆ ಎಂಬ ದೂರು ಇಲ್ಲಿ ಸಾಮಾನ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.