ಮಂಗಳವಾರ, ಮೇ 24, 2022
21 °C

ವಿದ್ಯುತ್ ಕ್ಷಾಮ ನೀಗಲು ಪ್ರಯತ್ನ: ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಕ್ಷಾಮ ನೀಗಲು ಸರ್ಕಾರ ಶತ ಪ್ರಯತ್ನ ನಡೆಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.ಶುಕ್ರವಾರ ಇಲ್ಲಿಗೆ ಸಮೀಪದ ಚಂದ್ರವನ ಅಶ್ರಮದಲ್ಲಿ ನಡೆದ ನವರಾತ್ರಿ ಪೂಜಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ `ಕಾವೇರಿ ಪ್ರಶಸ್ತಿ~ ಪ್ರದಾನ ಮಾಡಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರು ವಿದ್ಯುತ್ ಕೊರತೆ ನೀಗಲು ಉನ್ನತ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಹೊರ ರಾಜ್ಯದಿಂದ ವಿದ್ಯುತ್ ಖರೀದಿಸಲೂ ಸರ್ಕಾರ ಸಿದ್ಧವಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯದಿಂದ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಭವಿಷ್ಯದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದರು.ಕುಡಿಯುವ ನೀರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಈಚೆಗೆ ಬೆಂಗಳೂರಿನಲ್ಲಿ ನಡೆದ ಜಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕುಡಿಯುವ ನೀರಿಗೆ ತೀರಾ ತೊಂದರೆ ಇರುವ ಹಳ್ಳಿಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವುದು, ಕೊಳವೆ ಬಾವಿ ದುರಸ್ತಿ ಇತರ ಕ್ರಮ ಕೈಗೊಳ್ಳಲು ಹೇಳಿದ್ದೇವೆ ಎಂದರು. ಗ್ರಾ.ಪಂ. ನೌಕರರು ತಮ್ಮ ಬೇಡಿಕೆ ಈಡೇರಿಕೆ ಪ್ರತಿಭಟನೆ ನಡೆಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ 18 ಸಾವಿರಕ್ಕೂ ಹೆಚ್ಚು ನೌಕರರು ಕಾಯಂ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ತಕ್ಷಣದಲ್ಲಿ ನಿರ್ಧಾರ ಕಷ್ಟಸಾಧ್ಯ ಎಂದರು. ಅಧಿಕಾರ ವಿಕೆಂದ್ರೀಕರಣ ಜಾರಿಯಾಗುವಂತೆ ನೋಡಿಕೊಂಡರೆ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಪುಟ್ಟಣ್ಣಯ್ಯ ಸಚಿವರಿಗೆ ಸಲಹೆ ನೀಡಿದರು.ಸಾರಿಗೆ ಸಚಿವ ಆರ್.ಅಶೋಕ್ ಮೂರು ತಾಸು ತಡವಾಗಿ ಆಗಮಿಸಿದರು. ಬೇಬಿ ಮಠದ ಜನೋಪಯೋಗಿ ಕಾರ್ಯಕ್ರಮಗಳಿಗೆ ಸಹಕಾರ ನೀಡುವ ಭರವಸೆ ನೀಡಿದರು. ಮಂಡ್ಯದ ಪಿಇಟಿ ಅಧ್ಯಕ್ಷ ಎಚ್.ಡಿ.ಚೌಡಯ್ಯ, ಚಿತ್ರನಟಿ ಉಮಾಶ್ರೀ, ತುಮಕೂರು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಗುರುರಾಜ್ ಹೊಸಕೋಟೆ, ಡಾ.ಶಿವರಾಜಪ್ಪ, ಪುಟ್ಟಹೊನ್ನಯ್ಯ ಅವರಿಗೆ `ಕಾಯಕ ಸೇವಾ ಧುರೀಣ ಪ್ರಶಸ್ತಿ~ಗೆ ನೀಡಿ ಗೌರವಿಸಲಾಯಿತು. `ಕಾಯಕ ಪ್ರಶಸ್ತಿ~ಯನ್ನು ಸಿ.ಜಿ.ಆನಂದ್, ನಂಜುಂಡೇಶ್ವರ, ಶರತ್, ಪಾಲಹಳ್ಳಿ ರಾಮಕೃಷ್ಣ, ನಾಗಸುಂದರ್, ಚೆನ್ನಬಸಪ್ಪ ಅವರಿಗೆ ಪ್ರದಾನ ಮಾಡಲಾಯಿತು. ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

 

ಬೂದೀಶ್ವರ ಮಹಾಸ್ವಾಮಿ, ಸಿದ್ದಲಿಂಗ ಸ್ವಾಮೀಜಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕಿ ಮೋಟಮ್ಮ, ಶಾಸಕಿ ವಿಮಲಾಗೌಡ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಅಶ್ವತ್ಥನಾರಾಯಣಗೌಡ, ಗೃಹ ಮಂಡಳಿ ಅಧ್ಯಕ್ಷ ಜಿ.ಟಿದೇವೇಗೌಡ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.