ಮಂಗಳವಾರ, ಮೇ 24, 2022
23 °C

ವಿದ್ವಾಂಸ ಮತ್ತೂರು ಹಠಾತ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿದ್ದ ವಿದ್ವಾಂಸ ಡಾ.ಮತ್ತೂರು ಕೃಷ್ಣಮೂರ್ತಿ (82) ಅವರು ಉಸಿರಾಟದ ತೊಂದರೆಯಿಂದ ಗುರುವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.ಶಿವಮೊಗ್ಗ ಬಳಿಯ ಮತ್ತೂರು ಗ್ರಾಮದಲ್ಲಿ ಶುಕ್ರವಾರ ಸಕಲ ಸರ್ಕಾರಿ ಗೌರವದೊಂದಿಗೆ ಮೃತರ ಅಂತ್ಯಕ್ರಿಯೆ ನೆರವೇರಲಿದೆ. ಅವರು ಪುತ್ರಿ ಜಾನಕಿ ಹಾಗೂ ಅಳಿಯ ಲಂಡನ್‌ನಲ್ಲಿರುವ ವಿದ್ಯಾಭವನದ ನಿರ್ದೇಶಕ ನಂದಕುಮಾರ್ ಅವರನ್ನು ಅಗಲಿದ್ದಾರೆ. ಮತ್ತೂರರ ಪತ್ನಿ ರಾಜಲಕ್ಷ್ಮಿ ಅವರು ಈ ಹಿಂದೆಯೇ ನಿಧನರಾಗಿದ್ದರು.ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಆರ್. ಅಶೋಕ, ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ, ಹಿರಿಯ ನಟಿ ಬಿ.ಸರೋಜಾದೇವಿ ಇತರೆ ಗಣ್ಯರು ಕಂಬನಿ ಮಿಡಿದಿದ್ದಾರೆ.ಮಲ್ಲೇಶ್ವರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಒಬ್ಬರೇ ನೆಲೆಸಿದ್ದ ಕೃಷ್ಣಮೂರ್ತಿ ಅವರು ಕೆಲ ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಸೋಮವಾರ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದಿದ್ದ ಅವರು ಚೇತರಿಸಿಕೊಳ್ಳುತ್ತಿದ್ದರು.ಗುರುವಾರ ನಸುಕಿನಲ್ಲಿ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ನಸುಕಿನ 3 ಗಂಟೆ ಹೊತ್ತಿನಲ್ಲಿ ತಮ್ಮ ಕಾರಿನ ಚಾಲಕ ಪಾರ್ಥಸಾರಥಿ ಅವರಿಗೆ ದೂರವಾಣಿ ಕರೆ ಮಾಡಿದ ಅವರು ಬೆಳಿಗ್ಗೆ ಬೇಗ ಬರುವಂತೆ ಹೇಳಿದ್ದಾರೆ. 3.30ರ ಸುಮಾರಿಗೆ ಮತ್ತೆ ಕರೆ ಮಾಡಿ ತಕ್ಷಣ ಬರುವಂತೆ ಸೂಚಿಸಿದರು.ಬಳಿಕ ಅವರನ್ನು ವಸಂತನಗರದಲ್ಲಿರುವ ವಿಕ್ರಂ ಆಸ್ಪತ್ರೆಗೆ 5.15ರ ಹೊತ್ತಿನಲ್ಲಿ ದಾಖಲಿಸಲಾಯಿತು. ತೀವ್ರ ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿದ್ದ ಅವರು ನಿಧನರಾದರು ಎಂದು ವೈದ್ಯರು ಬೆಳಿಗ್ಗೆ 7 ಗಂಟೆಗೆ ಪ್ರಕಟಿಸಿದರು ಎಂದು ಭವನದ ಪದಾಧಿಕಾರಿಗಳು ತಿಳಿಸಿದ್ದಾರೆ.ನಂತರ ಪಾರ್ಥಿವ ಶರೀರವನ್ನು ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭವನದ ಸಭಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ರಾತ್ರಿ 11 ಗಂಟೆಯವರೆಗೂ ಸಂಬಂಧಿಗಳು, ಅಭಿಮಾನಿಗಳು, ಅನುಯಾಯಿಗಳು, ವಿದ್ಯಾರ್ಥಿಗಳು, ರಾಜಕೀಯ ಮುಖಂಡರು ಸೇರಿದಂತೆ ಗಣ್ಯರು ನೂರಾರು ಸಂಖ್ಯೆಯಲ್ಲಿ ದರ್ಶನ ಪಡೆದರು.`ಮತ್ತೂರು ಕೃಷ್ಣಮೂರ್ತಿ ಅವರದು ಪಾದರಸದಂತಹ ವ್ಯಕ್ತಿತ್ವ. ಅವರು ಎಲ್ಲ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಸದಾ ಲವಲವಿಕೆಯಿಂದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ವಿದ್ಯಾಭವನದ ಬೆಳವಣಿಗೆ ಬಗ್ಗೆ ಸದಾ ಚಿಂತಿಸುತ್ತಿದ್ದರು. ಅವರ ಚಿಂತನೆ ಮತ್ತು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸಲಾಗುವುದು~ ಎಂದು ಭಾರತೀಯ ವಿದ್ಯಾಭವನದ ಕರ್ನಾಟಕ ಕೇಂದ್ರದ ಅಧ್ಯಕ್ಷ ಎನ್. ರಾಮಾನುಜ `ಪ್ರಜಾವಾಣಿ~ಗೆ ತಿಳಿಸಿದರು.`ಬುಧವಾರ ಎರಡು ಬಾರಿ ದೂರವಾಣಿಯಲ್ಲಿ ಅವರೊಂದಿಗೆ ಮಾತನಾಡಿದೆ. ಅವರು ರಚಿಸಿರುವ `ಸಾವಿತ್ರಿ~ ಕೃತಿಯನ್ನು ಕಾ.ವೆಂ. ಸ್ಮಾರಕ ಗ್ರಂಥಮಾಲೆಯಡಿ ಪ್ರಕಟಿಸಬೇಕು ಎಂದು ಬಯಸಿದ್ದರು. ಅವರೇ ರಚಿಸಿರುವ ಗಾಂಧಿ ಉಪನಿಷತ್ ಸಂಪುಟಗಳು ಸದ್ಯದಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಅವರ ಅಕಾಲಿಕ ಮರಣದಿಂದಾಗಿ ಬಿಡುಗಡೆ ಸಮಾರಂಭವನ್ನು ಮುಂದೂಡಲಾಗಿದೆ. ಕ್ರಿಯಾಶೀಲ ವ್ಯಕ್ತಿತ್ವದ ಪಂಡಿತರೊಬ್ಬರನ್ನು ಕಳೆದುಕೊಂಡಿರುವುದು ತೀವ್ರ ನೋವಾಗಿದೆ~ ಎಂದು ಗದ್ಗದಿತರಾದರು.ಶುಕ್ರವಾರ ಅಂತ್ಯಕ್ರಿಯೆ: `ಅವರ ಅಳಿಯ ಲಂಡನ್‌ನಿಂದ ಬರಬೇಕಿದೆ. ಹಾಗಾಗಿ ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮದಲ್ಲಿರುವ ಶಾರದಾ ಮಂದಿರದ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ 8ರಿಂದ 11ರವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಬಳಿಕ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ~ ಎಂದು ಹೇಳಿದರು.ಗಣ್ಯರ ಸಂತಾಪ: `ಭಾರತೀಯ ಸಂಸ್ಕೃತಿಯ ಪ್ರತೀಕವೆನಿಸಿರುವ ರಾಮಾಯಣ, ಮಹಾಭಾರತ ಗ್ರಂಥಗಳನ್ನು ತಮ್ಮ ವಿದ್ವತ್‌ಪೂರ್ಣ ಪ್ರವಚನಗಳಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಹೇಳುತ್ತಿದ್ದರು. ಅವರು ರಾಷ್ಟ್ರದ ಸರ್ವಶ್ರೇಷ್ಠ ತತ್ವಜ್ಞಾನಿ ಮಾತ್ರವಲ್ಲ, ಮಹಾಜ್ಞಾನಿಯೂ ಆಗಿದ್ದರು. ಅವರ ನಿಧನದಿಂದ ರಾಜ್ಯಕ್ಕೆ ಮಾತ್ರವಲ್ಲ, ಇಡೀ ವಿಶ್ವದ ಸಾಂಸ್ಕೃತಿಕ ಮತ್ತು ಪಾರಂಪರಿಕ ಲೋಕಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಶೋಕ ವ್ಯಕ್ತಪಡಿಸಿದ್ದಾರೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, ವಾರ್ತಾ ಇಲಾಖೆ ನಿರ್ದೇಶಕ ಡಾ. ಮುದ್ದುಮೋಹನ್ ಇತರರು ಸಂತಾಪ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.